ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಶಾಂತಿ ಕದಡುವ ಮಾತು ಸಲ್ಲದು; ಸೌಹಾರ್ದದ ಮಾದರಿಗಳು ಬೇಕು

Last Updated 22 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಮಾತಿನ ಚಪಲಕ್ಕೆ ರಾಜಕಾರಣಿಗಳು ಸ್ವಯಂ ಕಡಿವಾಣ ಹಾಕಿಕೊಳ್ಳದೇ ಹೋದರೆ, ಕಿವಿ ಹಿಂಡುವ ಕೆಲಸವನ್ನು ಪಕ್ಷಗಳಾದರೂ ಮಾಡಬೇಕು

ಬಜರಂಗ ದಳದ ಕಾರ್ಯಕರ್ತ ಹರ್ಷ ಅವರ ಹತ್ಯೆಯ ಬಳಿಕ ಶಿವಮೊಗ್ಗ ನಗರದಲ್ಲಿ ನಡೆದ ಹಿಂಸಾಚಾರ ಹಾಗೂ ಅದಕ್ಕೆ ಕುಮ್ಮಕ್ಕು ನೀಡುವಂತೆ ವರ್ತಿಸಿದ ರಾಜಕೀಯ ನಾಯಕರ ನಡವಳಿಕೆ ಖಂಡನೀಯ. ಕೋಮು ರಾಜಕಾರಣದಲ್ಲಿ ಯುವಕನೊಬ್ಬ ಜೀವ ಕಳೆದುಕೊಳ್ಳುವುದು ನಾಗರಿಕ ಸಮಾಜ ಪಾಪಪ್ರಜ್ಞೆಯಿಂದ ತಲೆತಗ್ಗಿಸಬೇಕಾದ ಘಟನೆ. ಆ ಅನಾಗರಿಕ ಕ್ರೌರ್ಯವನ್ನು ಮತ್ತೂ ಹೆಚ್ಚಿಸುವಂತೆ ಸಾವಿನ ನಂತರ ವ್ಯಾಪಕ ಹಿಂಸಾಚಾರ ನಡೆದಿದೆ. ಪಾರ್ಥಿವ ಶರೀರದ ಮೆರವಣಿಗೆಯ ಸಂದರ್ಭದಲ್ಲಿ ಉದ್ರಿಕ್ತರ ಗುಂಪು ಮಸೀದಿಗಳ ಮೇಲೆ ಕಲ್ಲು ತೂರಾಟಕ್ಕೆ ಪ್ರಯತ್ನಿಸಿದೆ. ದಾರಿಯುದ್ದಕ್ಕೂ ಪೊಲೀಸರ ಸಮ್ಮುಖದಲ್ಲೇ ಪುಂಡರು ಅಟ್ಟಹಾಸ ಮೆರೆದಿದ್ದಾರೆ. ಗಲಭೆ ದೃಶ್ಯಗಳನ್ನು ಚಿತ್ರೀಕರಿಸಲು ಮುಂದಾದ ಮಾಧ್ಯಮದವರ ಕ್ಯಾಮೆರಾ, ಮೊಬೈಲ್‌ಗಳನ್ನೂ ನಾಶಗೊಳಿಸಲಾಗಿದೆ. ಹಲವರ ಮೇಲೆ ಹಲ್ಲೆಯೂ ನಡೆದಿದೆ. ಪ್ರಚೋದನೆಗೆ ಒಳಗಾದ ಮತ್ತೊಂದು ಕೋಮಿನ ಯುವಕರು ಮೆರವಣಿಗೆಯ ಮೇಲೆ ಕಲ್ಲುತೂರಿದ್ದಾರೆ. ಬೀದಿ ವ್ಯಾಪಾರಿಗಳು, ಹಣ್ಣು– ತರಕಾರಿ ಮಾರುವವರು ಗಲಭೆಯಲ್ಲಿ ಕಷ್ಟ–ನಷ್ಟ ಅನುಭವಿಸಿದ್ದಾರೆ. ಕೆಲವೆಡೆ ಪೊಲೀಸರ ಕಣ್ಣೆದುರೇ ಲೂಟಿ ನಡೆದರೂ ಅವರು ನಿರ್ಲಿಪ್ತರಾಗಿದ್ದರು ಎಂದು ವರದಿಯಾಗಿದೆ. ಇದು ನಿಜವೇ ಆಗಿದ್ದಲ್ಲಿ ಕರ್ತವ್ಯಲೋಪ ಅಷ್ಟೇ ಅಲ್ಲ, ಅಮಾನವೀಯ ಕೂಡ. ಸಿಆರ್‌ಪಿಸಿಯ ಸೆಕ್ಷನ್‌ 144ರ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿ
ದ್ದರೂಸಚಿವ ಕೆ.ಎಸ್‌. ಈಶ್ವರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ಮೆರವಣಿಗೆಯಲ್ಲಿ ಭಾಗವಹಿಸಿದ್ದು ಕಾನೂನಿನ ಸ್ಪಷ್ಟ ಉಲ್ಲಂಘನೆ. ಇವರ ವಿರುದ್ಧ ಪ್ರಕರಣ ದಾಖಲಿಸಬೇಕು. ಸಮುದಾಯಗಳ ನಡುವೆ ಸಂಘರ್ಷ ಉಂಟಾಗಬಹುದಾದ ಸೂಕ್ಷ್ಮ ಸನ್ನಿವೇಶಗಳನ್ನು ರಾಜಕಾರಣಿಗಳು ತಾಳ್ಮೆಯ ಮೂಲಕ ನಿಭಾಯಿಸಬೇಕು. ಆದರೆ, ಬಜರಂಗ ದಳದ ಕಾರ್ಯಕರ್ತನ ಹತ್ಯೆಯ ಸಂದರ್ಭದಲ್ಲಿ ಸಚಿವ ಈಶ್ವರಪ್ಪನವರು ನಡೆದುಕೊಂಡ ರೀತಿ ಹಿರಿಯ ರಾಜಕಾರಣಿಯಿಂದ ನಿರೀಕ್ಷಿಸುವಂತಹದ್ದಲ್ಲ. ‘ಮುಸ್ಲಿಂ ಗೂಂಡಾಗಳಿಂದ ಈ ಕೊಲೆ ನಡೆದಿದೆ’ ಎಂದು ಹತ್ಯೆ ನಡೆದ ಬೆನ್ನಿಗೇ ಈಶ್ವರಪ್ಪನವರು ಹೇಳಿದ್ದು ಯಾವ ರೀತಿಯಿಂದಲೂ ಸಮರ್ಥನೀಯವಲ್ಲ. ಇಂತಹ ಪ್ರಕರಣಗಳನ್ನು ಯಾವುದೇ ಪಕ್ಷವು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಾರದು. ವಿರೋಧ ಪಕ್ಷಗಳ ಮುಖಂಡರು ಕೂಡ ಸಂಯಮ ಕಾಯ್ದುಕೊಳ್ಳಬೇಕು. ಕೊಲೆ ಮಾಡಿದವರನ್ನು ಆರೋಪಿಗಳನ್ನಾಗಿ ಗುರುತಿಸುವುದು, ತನಿಖೆ ನಡೆಸುವುದು ಪೊಲೀಸರ ಕೆಲಸ. ಸಚಿವರೊಬ್ಬರು ತಾವೇ ನ್ಯಾಯಾಧೀಶರಂತೆ ಮಾತನಾಡುವುದು ಜವಾಬ್ದಾರಿಯುತ ನಡವಳಿಕೆ ಅಲ್ಲ. ಸಮಾಜಘಾತುಕ ವ್ಯಕ್ತಿಗಳನ್ನು ಜಾತಿ, ಸಮುದಾಯದ ಹೆಸರಿನಲ್ಲಿ ಗುರುತಿಸುವುದೂ ಸರಿಯಲ್ಲ. ಸೂಕ್ಷ್ಮ ಪರಿಸ್ಥಿತಿಯ ಲಾಭ ಪಡೆಯಲು ವಿಚ್ಛಿದ್ರಕಾರಿ ಶಕ್ತಿಗಳು ಹವಣಿಸುತ್ತಿರುತ್ತವೆ. ಅಂಥ ರಾಕ್ಷಸಿ ಶಕ್ತಿಗಳು ವಿಜೃಂಭಿಸಲು ಒಂದು ಒಡಕು ಮಾತು ಸಾಕಾಗುತ್ತದೆ. ‘ಕೊಲೆಗೀಡಾದ ಯುವಕ ನಮ್ಮ ಸಂಘಟನೆಯ ಕಾರ್ಯಕರ್ತ’ ಎಂದು ಹೇಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾತು ಕೂಡ ಅನಪೇಕ್ಷಿತವಾಗಿದ್ದ ಹೇಳಿಕೆ. ಬಜರಂಗ ದಳವನ್ನು ‘ನಮ್ಮ ಸಂಘಟನೆ’ ಎಂದು ಮುಖ್ಯಮಂತ್ರಿ ಹೇಳುವುದಾದರೆ, ಆ ಸಂಘಟನೆಯ ಮುಖಂಡರ ಮಾತು ಮತ್ತು ಕ್ರಿಯೆಗಳ ಹೊಣೆಗಾರಿಕೆಯನ್ನೂ ಅವರು ಹೊರಬೇಕಾಗುತ್ತದೆ.

ಕೋಮುಸೌಹಾರ್ದ ಕದಡುವಂತಹ ಘಟನೆಗಳು ನಡೆದಾಗ ರಾಜಕೀಯ ಮುಖಂಡರು ಸಮಾಜ ದಲ್ಲಿ ಶಾಂತಿ ಕದಡುವಂತಹ ಸಾಧ್ಯತೆಗಳಿಗೆ ತಮ್ಮ ಮಾತು–ಕೃತಿ ಅವಕಾಶ ಕಲ್ಪಿಸದಂತೆ ಎಚ್ಚರಿಕೆ ವಹಿಸ ಬೇಕು. ಸರ್ಕಾರದ ಭಾಗವಾದ ಪ್ರಜಾಪ್ರತಿನಿಧಿಗಳು ತಮ್ಮನ್ನು ನಿರ್ದಿಷ್ಟ ಸಮುದಾಯದೊಂದಿಗೆ ಗುರುತಿಸಿ ಕೊಳ್ಳುವುದು ಸಲ್ಲದು. ಅವರ ನಿಷ್ಠೆ ಮತ್ತು ಬದ್ಧತೆ ಸಂವಿಧಾನಕ್ಕೇ ಹೊರತು ಸಮುದಾಯಗಳಿಗಲ್ಲ. ಸಂಘರ್ಷದ ಸಂದರ್ಭಗಳಲ್ಲಿ ಯಾವುದೇ ವ್ಯಕ್ತಿ–ಸಂಘಟನೆಯ ಜೊತೆಗೆ ಗುರುತಿಸಿಕೊಳ್ಳದೆ, ಕಾನೂನಿನ ಮೂಲಕವೇ ಬಿಕ್ಕಟ್ಟಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಬೇಕು. ತಪ್ಪು ಯಾರೇ ಮಾಡಿದ್ದರೂ ಅವರ ಮೇಲೆ ಕಾನೂನು ಕ್ರಮ ಜರುಗಿಸುವುದು ಸರ್ಕಾರದ ಕರ್ತವ್ಯ. ಬಜರಂಗ ದಳದ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಅದೇ ರೀತಿ, ಸಾವಿನ ನಂತರದ ಗಲಭೆ–ಹಿಂಸಾಚಾರಕ್ಕೆ ಕಾರಣರಾದವರ ಮೇಲೂ ಮೊಕದ್ದಮೆ ದಾಖಲಿಸಿ ಶಿಕ್ಷೆಗೊಳಪಡಿಸಬೇಕು. ಇತ್ತೀಚಿನ ದಿನಗಳಲ್ಲಿ ಕೋಮುಸಾಮರಸ್ಯ ಕದಡುವಂತಹ ಘಟನೆಗಳು ರಾಜ್ಯದಲ್ಲಿ ಮತ್ತೆ ಮತ್ತೆ ನಡೆಯುತ್ತಿದ್ದು, ಆ ಸಂಘರ್ಷಗಳ ಬೆಂಕಿಗೆ ತುಪ್ಪ ಸುರಿಯುವಂತೆ ರಾಜಕೀಯ ಪಕ್ಷಗಳ ಮುಖಂಡರು ಪ್ರತಿಕ್ರಿಯಿಸುತ್ತಿದ್ದಾರೆ. ತಮ್ಮ ಮಾತುಗಳಿಂದ ಸಾಮಾಜಿಕ ಶಾಂತಿ ಕದಡುವುದರ ಜೊತೆಗೆ, ಸರ್ವಧರ್ಮ ಸಮನ್ವಯಕ್ಕೆ ಹೆಸರಾದ ನಾಡಿನ ವರ್ಚಸ್ಸು ಜಗತ್ತಿನೆದುರು ಮುಕ್ಕಾಗುತ್ತದೆ ಎನ್ನುವುದನ್ನು ಅವರು ಅರಿಯಬೇಕು. ಮಾತಿನ ಚಪಲಕ್ಕೆ ಸ್ವಯಂ ಕಡಿವಾಣ ಹಾಕಿಕೊಳ್ಳುವ ವಿವೇಕವನ್ನು ರಾಜಕಾರಣಿಗಳು ಪ್ರದರ್ಶಿಸದೇ ಹೋದರೆ, ಕಿವಿ ಹಿಂಡುವ ಕೆಲಸವನ್ನು ಪಕ್ಷಗಳಾದರೂ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT