ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಸುರಂಗದಿಂದ ಕಾರ್ಮಿಕರಿಗೆ ಮರುಜೀವ; ಮಾನವೀಯ ಪ್ರಯತ್ನಕ್ಕೆ ಸಂದ ಗೆಲುವು

Published 29 ನವೆಂಬರ್ 2023, 23:02 IST
Last Updated 29 ನವೆಂಬರ್ 2023, 23:02 IST
ಅಕ್ಷರ ಗಾತ್ರ

ಉತ್ತರಾಖಂಡದ ಸಿಲ್ಕ್ಯಾರಾ–ಬಡಕೋಟ್‌ ಸುರಂಗದಲ್ಲಿ ಸಿಲುಕಿದ್ದ ಎಲ್ಲ 41 ಕಾರ್ಮಿಕರನ್ನೂ ಹೊರಗೆ ಕರೆತಂದ ಕ್ಷಣವನ್ನು ಇಡೀ ದೇಶ ಸಂಭ್ರಮಿಸಿದೆ. ಅವರನ್ನು ಸುರಕ್ಷಿತವಾಗಿ ಕರೆತರಲು ಎರಡು ವಾರಗಳಿಂದ ನಡೆಯುತ್ತಿದ್ದ ಪರ್ವತಸದೃಶ ಕಾರ್ಯಾಚರಣೆ ಸಂಪೂರ್ಣ ಯಶ ಕಂಡಿದೆ. ರಕ್ಷಣಾ ಕಾರ್ಯದಲ್ಲಿ ಪದೇಪದೇ ಅಡ್ಡಿಗಳು ಎದುರಾಗಿದ್ದವು. ಸುರಂಗ ಕುಸಿದ ಭಾಗದಲ್ಲಿ ರಕ್ಷಣೆಗೆ ಕೊಳವೆ ಮಾರ್ಗ ನಿರ್ಮಿಸುವ ಕಾರ್ಯಕ್ಕೆ ಬಳಸಲಾದ ಅಮೆರಿಕದ ಅತ್ಯಾಧುನಿಕ ಯಂತ್ರ ಮುನ್ನುಗ್ಗಿದಂತೆಲ್ಲ ಭರವಸೆ ಚಿಗುರುತ್ತಿದ್ದರೆ, ಅವಶೇಷದ ಮಧ್ಯೆ ಆ ಯಂತ್ರ ಸಿಲುಕಿಕೊಂಡಾಗ ನಿರಾಸೆ ಕವಿಯುತ್ತಿತ್ತು. ಭರವಸೆ ಮತ್ತು ನಿರಾಸೆಯ ಹೊಯ್ದಾಟದಲ್ಲಿ ಕೊನೆಗೂ ಭರವಸೆಯೇ ಗೆದ್ದಿದೆ.

ಪರ್ವತದ ಎದುರಿನ ಮಾನವ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ. ನಮ್ಮ ದೇಶದಲ್ಲಿ ಹಿಂದೆಂದೂ ಇಂತಹ ವಿದ್ಯಮಾನ ನಡೆದಿರಲಿಲ್ಲ. ಹಗಲು–ರಾತ್ರಿ ಎನ್ನದೆ ಸತತವಾಗಿ ಕೆಲಸ ಮಾಡಿ, ಅಪಾಯದಲ್ಲಿ ಸಿಲುಕಿದವರಿಗೆ ಮರುಜೀವ ನೀಡಿ, ಅವರನ್ನು ಹೊರ ಕರೆತಂದಿರುವುದೊಂದು ಅತ್ಯಪೂರ್ವ ಘಟನೆಯಾಗಿದೆ. ಅಂತರರಾಷ್ಟ್ರೀಯ ಸುರಂಗ ತಜ್ಞರಿಂದ ಹಿಡಿದು ಇಲಿ ಬಿಲ ತಂತ್ರದಲ್ಲಿ ಸುರಂಗ ಕೊರೆಯುವ ಸ್ಥಳೀಯ ನಿಪುಣರವರೆಗೆ ಎಲ್ಲರ ಶ್ರಮವೂ ಈ ಯಶಸ್ಸಿನ ಹಿಂದಿದೆ.

ಭಾರತೀಯ ಸೇನೆಯ ಜೊತೆಗೆ ಡಜನ್‌ಗಟ್ಟಲೆ ಏಜೆನ್ಸಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಎಲ್ಲ ಏಜೆನ್ಸಿಗಳ ಪರಿಣತಿಯೂ ಇಲ್ಲಿ ಕೆಲಸ ಮಾಡಿದೆ. ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಎಲ್ಲರ ಜೊತೆಗೂ ಸಮನ್ವಯ ಸಾಧಿಸಿ, ಕಾರ್ಯಾಚರಣೆಗೆ ಬೇಕಾದ ಸಕಲ ವ್ಯವಸ್ಥೆಯನ್ನೂ ಮಾಡಿದ ಉತ್ತರಾಖಂಡ ರಾಜ್ಯ ಸರ್ಕಾರದ ಕೆಲಸ ಸ್ತುತ್ಯರ್ಹ. ಕೇಂದ್ರ ಸರ್ಕಾರ ಕೂಡ ಈ ಕಾರ್ಯಾಚರಣೆಗೆ ಬೆಂಬಲವಾಗಿ ನಿಂತಿತ್ತು ಎನ್ನುವುದನ್ನು ಮರೆಯುವಂತಿಲ್ಲ. ಸುರಂಗ ಕುಸಿತದ ಆರಂಭದಿಂದಲೂ ಈ ಘಟನೆಯನ್ನು ತಾಳ್ಮೆಯಿಂದ, ಅಷ್ಟೇ ಜಾಣ್ಮೆಯಿಂದ ನಿರ್ವಹಿಸುತ್ತಾ ಬರಲಾಗಿತ್ತು. ಸುರಂಗದೊಳಗೆ ಕಾರ್ಮಿಕರು ಸಿಲುಕಿರುವುದು ಗೊತ್ತಾಗುತ್ತಿದ್ದಂತೆ ಆಮ್ಲಜನಕ ಪೂರೈಕೆಗೆ ಮೊದಲು ಪುಟ್ಟದೊಂದು ಕೊಳವೆಮಾರ್ಗ ಅಳವಡಿಸಲಾಯಿತು. ಆ ಮಾರ್ಗದ ಮೂಲಕವೇ ಜೀವರಕ್ಷಕ ಔಷಧಿಗಳನ್ನೂ ಪೂರೈಸಲಾಯಿತು.

‘ನಿಮ್ಮನ್ನು ಸಂರಕ್ಷಿಸುವ ಕಾರ್ಯ ನಡೆದಿದೆ, ತಾಳ್ಮೆಯಿಂದಿರಿ’ ಎಂಬ ಸಂದೇಶವನ್ನು ಕಾರ್ಮಿಕರಿಗೆ ತಲುಪಿಸಲಾಯಿತು. ಆಹಾರ ಪೂರೈಕೆಗೆ ಮತ್ತೊಂದು ತುಸು ದೊಡ್ಡ ಮಾರ್ಗವನ್ನೂ ಅಳವಡಿಸಲಾಯಿತು. ಸುರಂಗದ ಒಳಗಡೆ ಪುಟ್ಟ ಕ್ಯಾಮೆರಾ ಕಳುಹಿಸಿ, ಕಾರ್ಮಿಕರೆಲ್ಲ ಸುರಕ್ಷಿತವಾಗಿ ಇರುವುದನ್ನು ಹೊರಜಗತ್ತಿಗೆ ಖಚಿತಪಡಿಸಲಾಯಿತು. ಒಂದು ರಕ್ಷಣಾ ಕಾರ್ಯಾಚರಣೆ ಹೇಗೆ ನಡೆಯಬೇಕು ಎನ್ನುವುದಕ್ಕೆ ಇಲ್ಲಿನ ಚಟುವಟಿಕೆಗಳು ಮಾದರಿಯಾಗಿದ್ದವು. ಪರ್ವತವು ಮೇಲಿಂದ ಮೇಲೆ ಒಡ್ಡುತ್ತಾ ಬಂದ ಸವಾಲುಗಳನ್ನು ಸಾವಧಾನದಿಂದ ಎದುರಿಸುತ್ತಾ, ಪರಿಹಾರ ಕಂಡುಕೊಳ್ಳುತ್ತಾ ಮುನ್ನುಗ್ಗಲಾಯಿತು. ಈಗ ಕುಟುಂಬದವರ ಜೊತೆ ಕುಳಿತು ಕಾರ್ಮಿಕರು ಬೀರುತ್ತಿರುವ ಮಂದಹಾಸದಲ್ಲಿ ಇಡೀ ಕಾರ್ಯಾಚರಣೆಯ ಸಾರ್ಥಕ್ಯ ಎದ್ದು ಕಾಣುತ್ತಿದೆ.

ಉತ್ತರಾಖಂಡದ ಚಾರ್‌ಧಾಮ್‌ ಧಾರ್ಮಿಕ ಕ್ಷೇತ್ರಗಳನ್ನು ಸಂಪರ್ಕಿಸುವ 890 ಕಿ.ಮೀ. ಉದ್ದದ ಹೆದ್ದಾರಿ ಜಾಲ ನಿರ್ಮಿಸುವ ಭಾಗವಾಗಿ ಸಿಲ್ಕ್ಯಾರಾ–ಬಡಕೋಟ್‌ ಸುರಂಗದ ನಿರ್ಮಾಣ ಕಾರ್ಯ ನಡೆದಿತ್ತು. ಹೇಳಿಕೇಳಿ, ಉತ್ತರಾಖಂಡವು ಹಿಮಾಲಯದ ಬೀಡು. ಜಗತ್ತಿನ ಇತರ ಪರ್ವತ ಪ್ರದೇಶಗಳಿಗೆ ಹೋಲಿಸಿದರೆ ಹಿಮಾಲಯ ಪರ್ವತ ಶ್ರೇಣಿ ಇನ್ನೂ ತರುಣವಾಗಿದೆ, ಅದು ಈಗಲೂ ಗಟ್ಟಿಯಾಗಿ ನೆಲೆಗೊಳ್ಳುವ ಪ್ರಕ್ರಿಯೆಯಲ್ಲಿದೆ ಎನ್ನುವುದು ತಜ್ಞರ ಅಭಿಮತ.

ಹೀಗಾಗಿಯೇ ಅದರ ಮಣ್ಣು ಸಡಿಲವಾಗಿದೆ. ಅಲ್ಲದೆ, ಆಗಾಗ ಇಲ್ಲಿ ಸಣ್ಣ ಭೂಕಂಪನಗಳೂ ಸಂಭವಿಸುತ್ತವೆ. ಹಿಮಾಲಯದ ಭೂಗುಣವನ್ನು ಸರಿಯಾಗಿ ಗ್ರಹಿಸದೆ ಆ ಪ್ರದೇಶದಲ್ಲಿ ಇಷ್ಟೊಂದು ಬೃಹತ್‌ ಪ್ರಮಾಣದ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುವುದು ತರವೇ ಎನ್ನುವ ಪ್ರಶ್ನೆ ಬಲವಾಗಿ ಕೇಳಿಬರುತ್ತಿದೆ. ಇದೇ ವರ್ಷ, ನೂರಾರು ಕಡೆಗಳಲ್ಲಿ ಭೂಕುಸಿತಕ್ಕೂ ಉತ್ತರಾಖಂಡ ಸಾಕ್ಷಿಯಾಗಿದೆ. ಅಲ್ಲಿ, ಜಲವಿದ್ಯುತ್‌ ಯೋಜನೆಗಳಿಗೆ, ರೈಲು ಮಾರ್ಗಗಳಿಗೆ ಎಗ್ಗಿಲ್ಲದೆ ಪರ್ವತಗಳ ಒಡಲು ಬಗೆಯಲಾಗಿದೆ. ಇಂತಹ ಅಭಿವೃದ್ಧಿ ಯೋಜನೆಗಳು ನಮ್ಮನ್ನು ಎಲ್ಲಿಗೆ ಹೋಗಿ ಮುಟ್ಟಿಸಲಿವೆ? ಸರ್ಕಾರಗಳು ಗಂಭೀರವಾಗಿ ಯೋಚಿಸಬೇಕಾದ ಪ್ರಶ್ನೆ ಇದು.

‘ಪರ್ವತಗಳು ನಮ್ಮನ್ನು ವಿನೀತರನ್ನಾಗಿ ಯೋಚಿಸುವಂತೆ ಮಾಡಿವೆ’ ಎಂಬ ಅಂತರರಾಷ್ಟ್ರೀಯ ಸುರಂಗತಜ್ಞ ಅರ್ನಾಲ್ಡ್‌ ಡಿಕ್ಸ್‌ ಅವರ ಮಾತು ತುಂಬಾ ಅರ್ಥಪೂರ್ಣ. ನಾವು ಇಂತಹ ಪ್ರದೇಶಗಳಲ್ಲಿ ಯೋಜನೆ ರೂಪಿಸುವಾಗ ಇನ್ನಷ್ಟು ವಿನೀತರಾಗಿ ಆಲೋಚಿಸಬೇಕು. ಘಟನೆಯಲ್ಲಿ ಕಾರ್ಮಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿರುವುದು ನಿಜವಾದರೂ ಯಾವುದೇ ಕಾಮಗಾರಿ ಕೈಗೊಳ್ಳುವಾಗ ಅವರ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಬೇಕು. ಪ್ರತಿಕೂಲ ಸನ್ನಿವೇಶಗಳು ಎದುರಾದಾಗ ಪರ್ಯಾಯ ಮಾರ್ಗಗಳ ಕುರಿತು ಮುಂಚಿತವಾಗಿಯೇ ಮಾಹಿತಿ ಹೊಂದಿರಬೇಕು. ಇದು, ಸುರಂಗ ಕುಸಿತ ಪ್ರಕರಣ ನಮಗೆ ಕಲಿಸಿರುವ ಪಾಠ. ಯಂತ್ರವೂ ಸೋತು ನಿಂತಾಗ ಕಡೆಯ ಕ್ಷಣದ ಅಡೆತಡೆ ನಿವಾರಿಸಿದ ಇಲಿ ಬಿಲ ತಂತ್ರದಲ್ಲಿ ಸುರಂಗ ಕೊರೆಯುವ ನಿಪುಣರು ಮಾನವೀಯ ಪ್ರಯತ್ನದ ಹಿರಿಮೆಯನ್ನು ಹೊಸದೊಂದು ಎತ್ತರಕ್ಕೆ ಒಯ್ದಿದ್ದಾರೆ. ಮಾಡಿದ ಕೆಲಸಕ್ಕಾಗಿ ಸರ್ಕಾರ ಸಂಭಾವನೆ ಕೊಡಲು ಹೋದರೆ, ‘ಕಾರ್ಮಿಕರು ಸುರಕ್ಷಿತವಾಗಿ ಬಂದಿದ್ದೇ ನಮಗೆ ಸಿಕ್ಕ ಸಂಭಾವನೆ’ ಎಂದಿದ್ದಾರೆ.

17 ದಿನಗಳ ಕತ್ತಲವಾಸ ಕೊನೆಗೊಳಿಸುವಲ್ಲಿ ಮಾತ್ರವಲ್ಲ, ಮಾನವೀಯತೆಯನ್ನು ಗೆಲ್ಲಿಸುವಲ್ಲಿಯೂ ಈ ಕಾರ್ಯಾಚರಣೆ ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT