ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ದ್ವೇಷ ಭಾಷಣವೆಂಬುದು ಅಸ್ತ್ರ: ‘ಸುಪ್ರೀಂ’ ಸೂಚನೆ ಸ್ವಾಗತಾರ್ಹ

Published 3 ಮೇ 2023, 18:37 IST
Last Updated 3 ಮೇ 2023, 18:37 IST
ಅಕ್ಷರ ಗಾತ್ರ

ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ದೂರು ಸಲ್ಲಿಕೆ ಆಗದಿದ್ದರೂ, ಪೊಲೀಸರು ತಾವೇ ಮುಂದಾಗಿ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ದಾಖಲು ಮಾಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ತಾಕೀತು ಮಾಡಿರುವುದು ಸ್ವಾಗತಾರ್ಹ. ಗಂಭೀರ ಸ್ವರೂಪವನ್ನು ಪಡೆದುಕೊಂಡಿರುವ ಸಾಮಾಜಿಕ ಹಾಗೂ ರಾಜಕೀಯ ಸಮಸ್ಯೆಯೊಂದರ ನಿವಾರಣೆಗೆ ಇದು ಒಂದು ಹೆಜ್ಜೆ ಮುಂದಿರಿಸಿದಂತೆ. ಸುಪ್ರೀಂ ಕೋರ್ಟ್‌ ಈ ನಿರ್ದೇಶನವನ್ನು ಎಲ್ಲ ಸರ್ಕಾರಗಳಿಗೂ ನೀಡಿದೆ. ಇದು 2022ರ ಅಕ್ಟೋಬರ್ 21ರಂದು ದೆಹಲಿ, ಉತ್ತರಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳಿಗೆ ನೀಡಿದ್ದ ನಿರ್ದೇಶನದ ವಿಸ್ತರಣೆಯಂತೆ ಇದೆ. ‘ಈ ನಿರ್ದೇಶನಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳುವುದಕ್ಕೆ ಹಿಂದೇಟು ಹಾಕುವುದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುತ್ತದೆ. ತಪ್ಪು ಮಾಡುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ’ ಎಂದು ಕೋರ್ಟ್ ಎಚ್ಚರಿಸಿದೆ. ದ್ವೇಷ ಭಾಷಣದ ಸಮಸ್ಯೆಯನ್ನು ನಿವಾರಿಸಲು ಸುಪ್ರೀಂ ಕೋರ್ಟ್‌ ಬಹಳ ಸಮಯದಿಂದ ಕಾರ್ಯನಿರತವಾಗಿದೆ. ಅಲ್ಲದೆ, ಈ ಸಮಸ್ಯೆಯು ದೇಶದ ಧರ್ಮನಿರಪೇಕ್ಷ ವ್ಯವಸ್ಥೆಯನ್ನು ಹಾಳುಮಾಡುತ್ತಿರುವ ‘ಅಪಾಯ’ ಎಂದು ಅದು ಗುರುತಿಸಿದೆ. ದ್ವೇಷ ಭಾಷಣಗಳು ಮತಧರ್ಮವನ್ನು ಗುರಿಯಾಗಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ಮನುಷ್ಯನ ಜಾತಿ, ಪ್ರದೇಶ, ಲಿಂಗ ಅಥವಾ ಲೈಂಗಿಕ ಅಭಿರುಚಿಯನ್ನು ಗುರಿಯಾಗಿಸಿಯೂ ಇಂತಹ ಭಾಷಣಗಳು ಆಗಿವೆ. ಸಮಾಜದಲ್ಲಿ ಹುಳಿ ಹಿಂಡುವ, ಯಾವುದೇ ರೀತಿಯಲ್ಲಿ ವಿಭಜನೆಗೆ ಇಂಬು ಕೊಡುವ ಮಾತುಗಳು ದ್ವೇಷ ಭಾಷಣ ಆಗಬಲ್ಲವು.

ದ್ವೇಷ ಭಾಷಣಗಳು ವಿಷವರ್ತುಲವೊಂದರ ಭಾಗ ಎಂದು ಕೋರ್ಟ್‌ ಈ ಹಿಂದೆ ಟೀಕಿಸಿತ್ತು. ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಮಾಡುವ ದ್ವೇಷ ಭಾಷಣಗಳು ಹೆಚ್ಚಾಗುತ್ತಿದ್ದರೂ, ‘ವ್ಯವಸ್ಥೆಯ ಮೌನ’ವನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಆದರೆ, ದ್ವೇಷ ಭಾಷಣಗಳನ್ನು ನಿಭಾಯಿಸುವಲ್ಲಿನ ಸಮಸ್ಯೆಯು ಹೇಗಿದೆ ಎಂಬುದು ಕೋರ್ಟ್‌ಗೆ ಕೇಂದ್ರ ಸರ್ಕಾರ ನೀಡಿದ ಪ್ರತಿಕ್ರಿಯೆಯನ್ನು ಗಮನಿಸಿದರೆ ಗೊತ್ತಾಗುತ್ತದೆ. ಬಹುಸಂಖ್ಯಾತ ಸಮುದಾಯಗಳನ್ನು ಉದ್ದೇಶಿಸಿ ಮಾಡಿದ ದ್ವೇಷ ಭಾಷಣಗಳ ವಿಚಾರದಲ್ಲಿ ಕೋರ್ಟ್‌ ಏಕೆ ಕಳವಳ ಹೊಂದಿಲ್ಲ ಎಂದು ಕೇಂದ್ರ ಕೇಳಿದೆ. ಈ ಪ್ರತಿಕ್ರಿಯೆಯು, ದ್ವೇಷ ಭಾಷಣಕ್ಕೆ ಇರುವ ರಾಜಕೀಯ ಆಯಾಮವನ್ನು ತೋರಿಸುತ್ತಿದೆ, ದ್ವೇಷ ಭಾಷಣಗಳ ವಿರುದ್ಧ ಯಾವುದೇ ಪರಿಣಾಮಕಾರಿ ಕ್ರಮವನ್ನು ತೆಗೆದುಕೊಂಡಿಲ್ಲದಿರುವುದು ಏಕೆಂಬುದನ್ನು ತೋರಿಸುತ್ತದೆ. ದ್ವೇಷ ಭಾಷಣಗಳು ಈಗ ಪ್ರಮುಖ ರಾಜಕೀಯ ಅಸ್ತ್ರವೂ ಹೌದು. ಸಮಾಜದ ಧ್ರುವೀಕರಣಕ್ಕೆ ಇದನ್ನು ಬಳಸಲಾಗುತ್ತಿದೆ. ಇದಕ್ಕೆ ಸರ್ಕಾರಗಳ ಬೆಂಬಲವೂ ಇರುತ್ತದೆ. ದ್ವೇಷದ ಮಾತುಗಳನ್ನು ಹಿಂದೆ ಪಕ್ಷ ಅಥವಾ ಸಂಘಟನೆಗಳಲ್ಲಿನ ಕೆಲವು ಗುಂಪುಗಳು ಆಡುವ ಬೇಜವಾಬ್ದಾರಿಯ ಮಾತುಗಳು ಎಂದು ಉಪೇಕ್ಷೆ ಮಾಡಲಾಗುತ್ತಿತ್ತು. ಆದರೆ ಈಗ ಜವಾಬ್ದಾರಿಯುತ ಸ್ಥಾನ ಹೊಂದಿರುವವರು, ಕೇಂದ್ರ ಸರ್ಕಾರದ ಕೆಲವು ಸಚಿವರು ಕೂಡ ಇಂತಹ ಮಾತುಗಳನ್ನು ಆಡುತ್ತಿದ್ದಾರೆ. ದ್ವೇಷ ಭಾಷಣಗಳನ್ನು ಈಗ ಬಹಿರಂಗವಾಗಿ ಸಮರ್ಥಿಸಲಾಗುತ್ತಿದೆ. ದ್ವೇಷ ಭಾಷಣಗಳು ಸರಿ ಎಂದು ಹೇಳುವುದಕ್ಕೆ ವಿಷಯಾಂತರ ಮಾಡುವುದು, ಆರೋಪಗಳಿಗೆ ಉತ್ತರಿಸುವ ಬದಲು, ಆರೋಪ ಹೊರಿಸಿದವರ ವಿರುದ್ಧ ಇನ್ನೊಂದು ಆರೋಪ ಹೊರಿಸುವ ತಂತ್ರಗಳ ಮೊರೆ ಹೋಗಲಾಗುತ್ತಿದೆ. ದ್ವೇಷ ಭಾಷಣಗಳನ್ನು ಸಮರ್ಥಿಸಲು ಕೆಲವು ಸಂದರ್ಭಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಆಶ್ರಯ ಪಡೆಯಲಾಗುತ್ತಿದೆ. ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಸಕಾರಣ ನಿರ್ಬಂಧವು, ದ್ವೇಷ ಭಾಷಣಗಳನ್ನು ತಡೆಯುವ ಉದ್ದೇಶ ಹೊಂದಿವೆ ಎಂಬುದು ಸ್ಪಷ್ಟ.

ದ್ವೇಷ ಭಾಷಣಗಳನ್ನು ತಡೆಯಲು ಕಾನೂನು ಕ್ರಮವೊಂದೇ ಎಲ್ಲ ಸಂದರ್ಭಗಳಲ್ಲಿ ಪರಿಣಾಮಕಾರಿ ಆಗಲಿಕ್ಕಿಲ್ಲ. ಆದರೆ, ಈ ಸಮಸ್ಯೆಯನ್ನು ನಿಭಾಯಿಸಲು ಕಾನೂನನ್ನು ಕೂಡ ಬಳಸಿಕೊಳ್ಳಬೇಕು ಎಂಬುದು ನಿಜ. ದ್ವೇಷ ಭಾಷಣ ಅಂದರೆ ಏನು ಎಂಬುದಕ್ಕೆ ಕಾನೂನಿನ ಅಡಿ ನಿರ್ದಿಷ್ಟ ವ್ಯಾಖ್ಯಾನ ಇಲ್ಲ. ದ್ವೇಷ ಭಾಷಣಗಳನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ) ಅಡಿಯಲ್ಲಿ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಬೇಕು ಎಂಬ ಸಲಹೆಯನ್ನು ಕಾನೂನು ಆಯೋಗ ನೀಡಿದೆ. ಈಗಿನ ಸಂದರ್ಭದಲ್ಲಿ ದ್ವೇಷ ಭಾಷಣಗಳ ವಿರುದ್ಧ ಐಪಿಸಿಯ ಸೆಕ್ಷನ್‌ 295(ಎ), 153(ಎ) ಮತ್ತು 153(ಬಿ), 505ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಈ ಸೆಕ್ಷನ್‌ಗಳು ವಾಸ್ತವದಲ್ಲಿ ದ್ವೇಷ ಭಾಷಣಗಳನ್ನು ನಿಯಂತ್ರಿಸುವ ಉದ್ದೇಶದಿಂದ ರೂಪುಗೊಂಡವಲ್ಲ. ಈ ಮಿತಿಗಳು ಏನೇ ಇದ್ದರೂ, ಕೋರ್ಟ್ ನೀಡಿರುವ ಸೂಚನೆಯು ಬಹಳ ಮಹತ್ವದ್ದು. ಇದು ಸಮಾಜದಲ್ಲಿ ಒಳ್ಳೆಯ ಪರಿಣಾಮವನ್ನು ಬೀರುವ ನಿರೀಕ್ಷೆ ಹೊಂದಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT