ಶುಕ್ರವಾರ, ಜೂನ್ 5, 2020
27 °C

ಟೆಲಿಮೆಡಿಸಿನ್‌: ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸ್ವಾಗತಾರ್ಹ ಕ್ರಮ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಟೆಲಿಮೆಡಿಸಿನ್ ವ್ಯವಸ್ಥೆಯನ್ನು ವ್ಯಾಪಕವಾಗಿ ಬಳಕೆ ಮಾಡಿಕೊಂಡು ಗ್ರಾಮೀಣ ಪ್ರದೇಶಗಳ ಜನರಿಗೆ ತಜ್ಞವೈದ್ಯರ ಸೇವೆ ಲಭ್ಯವಾಗುವಂತೆ ಮಾಡಲು ರಾಜ್ಯ ಸರ್ಕಾರಗಳು ಈಗ ಕ್ರಮ ಕೈಗೊಳ್ಳಬಹುದು

ಸಂವಹನ ತಂತ್ರಜ್ಞಾನದ ಸಾಧ್ಯತೆಗಳನ್ನು ಬಳಸಿಕೊಂಡು ರೋಗಿಗೆ ವೈದ್ಯರು ಔಷಧಿಗಳನ್ನು, ಚಿಕಿತ್ಸಾ ಕ್ರಮಗಳನ್ನು ಸೂಚಿಸುವ ಟೆಲಿಮೆಡಿಸಿನ್‌ ವ್ಯವಸ್ಥೆಗೆ ಅಗತ್ಯವಿರುವ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರವು ಕಳೆದ ವಾರ ಹೊರಡಿಸಿದೆ. ಕೋವಿಡ್– 19 ಸಾಂಕ್ರಾಮಿಕದ ಪರಿಣಾಮವಾಗಿ ಇಡೀ ದೇಶ ದಿಗ್ಬಂಧನದ ಸ್ಥಿತಿಯಲ್ಲಿ ಇರುವಾಗ ಇವು ಬಂದಿವೆ.

ರೋಗಿಗೆ ಅಗತ್ಯ ಔಷಧಗಳು ಹಾಗೂ ಚಿಕಿತ್ಸಾ ಕ್ರಮಗಳನ್ನು ತಿಳಿಸುವ ವಿಚಾರದಲ್ಲಿ ಇದರಿಂದಾಗಿ ಒಂದು ಹೆಜ್ಜೆ ಮುಂದಕ್ಕೆ ಇರಿಸಿದಂತೆ ಆಗಿದೆ. ವೈದ್ಯರನ್ನು ಆನ್‌ಲೈನ್‌ ಮೂಲಕವೇ (ವಾಟ್ಸ್‌ಆ್ಯಪ್‌ ವಿಡಿಯೊ ಕರೆ, ಸ್ಕೈಪ್‌ ಮೂಲಕ ಕರೆ ಅಥವಾ ದೂರವಾಣಿ ಕರೆ) ಸಂಪರ್ಕಿಸಿ, ಕಾಯಿಲೆಗೆ ಯಾವ ಔಷಧ ಪಡೆಯಬೇಕು ಎಂಬ ಸಲಹೆ ಪಡೆದುಕೊಳ್ಳಲು ರೋಗಿಗಳಿಗೆ ಇನ್ನು ಮುಂದೆ ಅವಕಾಶ ದೊರೆಯಲಿದೆ. ವೈದ್ಯರು ರೋಗಿಗೆ ಇ–ಮೇಲ್ ಅಥವಾ ವಾಟ್ಸ್‌ಆ್ಯಪ್‌ ಮೂಲಕ ಕಳುಹಿಸುವ ಔಷಧ ಚೀಟಿಯನ್ನು ಔಷಧ ಅಂಗಡಿಗಳಲ್ಲಿ ತಿರಸ್ಕರಿಸುವಂತಿಲ್ಲ. ಕೃತಕ ಬುದ್ಧಿಮತ್ತೆಯನ್ನು ಸೀಮಿತ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುವುದಕ್ಕೂ ಈ ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಕೊರೊನಾ ವೈರಾಣುವಿನ ಕಾರಣದಿಂದಾಗಿ ಸೃಷ್ಟಿಯಾಗಿರುವ ಆರೋಗ್ಯ ಬಿಕ್ಕಟ್ಟನ್ನು ಗಮನದಲ್ಲಿ ಇರಿಸಿಕೊಂಡು ಈ ಸಂದರ್ಭದಲ್ಲಿ ಈ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ ಎಂದು ಭಾವಿಸಬಹುದು. ಟೆಲಿಮೆಡಿಸಿನ್‌ ವ್ಯವಸ್ಥೆಗೆ ಅವಕಾಶ ಕಲ್ಪಿಸಿಕೊಡುವ ನಿಯಮಾವಳಿ ಜಾರಿಗೆ ತರಬೇಕು ಎಂಬ ಬೇಡಿಕೆ ಬಹಳ ದಿನಗಳಿಂದ ಇತ್ತು. ಆದರೆ, ಈ ವಿಚಾರದಲ್ಲಿ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಈ ವಿಷಯದಲ್ಲಿ ಕಾನೂನಿನ ದೃಷ್ಟಿಯಿಂದ ಖಚಿತತೆ ಕೂಡ ಇರಲಿಲ್ಲ. ಆದರೆ, ಈಗ ಸರ್ಕಾರ ಒಂದು ಗಟ್ಟಿ ನಿಲುವು ತೆಗೆದುಕೊಂಡಿದೆ. ಈ ನಿಲುವು ಸ್ವಾಗತಾರ್ಹ ಕೂಡ. ಈ ಕ್ರಮದಿಂದಾಗಿ ವೈದ್ಯಕೀಯ ಸೇವೆಗಳನ್ನು ಒದಗಿಸುವ ವಿಚಾರದಲ್ಲಿ ಒಂದಿಷ್ಟು ಸಕಾರಾತ್ಮಕ ಬದಲಾವಣೆಗಳು ಆಗಲಿವೆ ಎಂದು ನಿರೀಕ್ಷಿಸಬಹುದು. ತಮಗೆ ಬೇಕಾದ ವೈದ್ಯರನ್ನು ನೇರವಾಗಿ ಸಂಪರ್ಕಿಸಿ, ಅವರಿಂದ ವೈದ್ಯಕೀಯ ಸಲಹೆ ಪಡೆದುಕೊಳ್ಳಲು ಸಾಧ್ಯವಾಗದಿದ್ದ ಹಲವರು, ಸಂವಹನ ಮಾಧ್ಯಮಗಳನ್ನು ಬಳಕೆ ಮಾಡಿಕೊಂಡು ಸೇವೆಗಳನ್ನು ಪಡೆಯುವ ಸಾಧ್ಯತೆಗಳತ್ತ ಗಮನ ನೀಡಬಹುದು. ಹಾಗೆಯೇ, ತಜ್ಞವೈದ್ಯರು ಇನ್ನಷ್ಟು ಹೆಚ್ಚಿನ ಜನರಿಗೆ ಒಳಿತುಮಾಡಲು ತಮ್ಮ ಕೌಶಲವನ್ನು ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆಯೂ ಆಲೋಚಿಸಬಹುದು.

ಪ್ರತೀ ಒಂದು ಸಾವಿರ ವ್ಯಕ್ತಿಗಳಿಗೆ ಒಬ್ಬ ವೈದ್ಯನ ಸೇವೆ ಅಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ, ಭಾರತದಲ್ಲಿ 1,445 ಜನರಿಗೆ ಒಬ್ಬ ವೈದ್ಯನ ಲಭ್ಯತೆ ಇದೆ. ಗ್ರಾಮಾಂತರ ಪ್ರದೇಶಗಳಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಲಭ್ಯತೆ ಸರಿಯಾಗಿ ಇಲ್ಲ. ಆರೋಗ್ಯ ಕೇಂದ್ರಗಳು ಇದ್ದರೂ, ಹಲವೆಡೆ ತಜ್ಞವೈದ್ಯರು ಇರುವುದಿಲ್ಲ. ಟೆಲಿಮೆಡಿಸಿನ್ ವ್ಯವಸ್ಥೆಯ ಬಳಕೆ ವ್ಯಾಪಕವಾದ ನಂತರ, ತಜ್ಞವೈದ್ಯರ ಸೇವೆಯನ್ನು ಪಡೆಯುವ ವಿಚಾರದಲ್ಲಿ ಪರಿಸ್ಥಿತಿ ಒಂದಿಷ್ಟಾದರೂ ಸುಧಾರಿಸಬಹುದು ಎಂಬ ಆಶಾಭಾವ ಹೊಂದಬಹುದು. ಕೆಲವು ತಜ್ಞವೈದ್ಯರು, ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿರುವುದಿಲ್ಲ. ಇದು ವೈದ್ಯ ವೃತ್ತಿಗೆ ಶೋಭೆ ತರುವ ನಿಲುವು ಅಲ್ಲ. ಇದು, ಗ್ರಾಮೀಣ ಪ್ರದೇಶಗಳ ಜನರಿಗೆ ವೈದ್ಯಕೀಯ ಸೇವೆಗಳನ್ನು ನಿರಾಕರಿಸುವುದಕ್ಕೆ ಸಮ. ಟೆಲಿಮೆಡಿಸಿನ್ ವ್ಯವಸ್ಥೆಯನ್ನು ವ್ಯಾಪಕವಾಗಿ ಬಳಕೆ ಮಾಡಿಕೊಂಡು, ಗ್ರಾಮೀಣ ಪ್ರದೇಶಗಳ ಜನರಿಗೆ ತಜ್ಞವೈದ್ಯರ ಸೇವೆ ಲಭ್ಯವಾಗುವಂತೆ ಮಾಡಲು ರಾಜ್ಯ ಸರ್ಕಾರಗಳು ಈಗ ಕ್ರಮ ಕೈಗೊಳ್ಳಬಹುದು. ಹೊಸ ವ್ಯವಸ್ಥೆಯು ಸಾರ್ವಜನಿಕರ ಬಳಕೆಗೆ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಿ, ಜನ ಅದಕ್ಕೆ ಹೊಂದಿಕೊಳ್ಳಲು ತುಸು ಸಮಯ ಬೇಕಾಗುತ್ತದೆ. ಎಲ್ಲ ಬಗೆಯ ವೈದ್ಯಕೀಯ ಸೇವೆಗಳನ್ನು ಈ ವ್ಯವಸ್ಥೆಯ ಮೂಲಕ ನೀಡಲು ಆಗುವುದಿಲ್ಲ ಎಂಬುದು ನಿಜ. ಆದರೆ, ತಂತ್ರಜ್ಞಾನ ಮುಂದುವರಿದಂತೆಲ್ಲ, ಈ ವ್ಯವಸ್ಥೆಯಡಿ ಲಭ್ಯವಾಗುವ ಸೇವೆಗಳು ಹೆಚ್ಚಬಹುದು. ಟೆಲಿಮೆಡಿಸಿನ್ ವ್ಯವಸ್ಥೆಯು ಎಷ್ಟೇ ಆಧುನಿಕವಾಗಿದ್ದರೂ, ಅದು ಎಷ್ಟೇ ಸುಧಾರಿತ ಆಗಿದ್ದರೂ, ವೈದ್ಯ–ರೋಗಿಯ ನಡುವಿನ ಸಂಬಂಧ, ಆ ಸಂಬಂಧದ ಮೂಲಕ ರೋಗಿಯ ಆರೋಗ್ಯಸ್ಥಿತಿಯನ್ನು ವೈದ್ಯರು ಅರ್ಥಮಾಡಿಕೊಳ್ಳುವುದಕ್ಕೆ ಪರ್ಯಾಯ ಅಲ್ಲ ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು. ಜಗತ್ತಿನ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್– 19 ಕಾಯಿಲೆಯು ನಮ್ಮ ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ತೀವ್ರಗತಿಯ ಹಾಗೂ ವಿಸ್ತೃತವಾದ ಬದಲಾವಣೆಗಳು ಆಗಬೇಕು ಎಂಬ ಪಾಠ ಹೇಳುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು