ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಪಠ್ಯ ‍ಪರಿಷ್ಕರಣೆ ರಗಳೆ; ನಾಡಿನ ಘನತೆಗೆ ಮುಕ್ಕು

Last Updated 24 ಮೇ 2022, 19:11 IST
ಅಕ್ಷರ ಗಾತ್ರ

ಪಠ್ಯಪುಸ್ತಕ ಪರಿಷ್ಕರಣೆಯ ಹೆಸರಿನಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ವಿದ್ಯಾರ್ಥಿಗಳಲ್ಲಿ ಅನಗತ್ಯ ಗೊಂದಲ ಉಂಟುಮಾಡಿರುವುದರ ಜೊತೆಗೆ, ಶಿಕ್ಷಣ ಕ್ಷೇತ್ರದ ವರ್ಚಸ್ಸಿಗೆ ಧಕ್ಕೆ ತರುವಂತಿವೆ. ಕೊರೊನಾ ಅವಧಿಯಲ್ಲಿ ಕುಂಠಿತಗೊಂಡ ಕಲಿಕೆಯ ಅವಧಿಯನ್ನು ಸ್ವಲ್ಪವಾದರೂ ಸರಿದೂಗಿಸುವ ದೃಷ್ಟಿಯಿಂದ ಬೇಸಿಗೆ ರಜೆಯನ್ನು ಕಡಿಮೆ ಮಾಡಿದ್ದ ರಾಜ್ಯ ಸರ್ಕಾರವು ಎರಡು ವಾರ ಮೊದಲೇ ಶಾಲೆಗಳನ್ನು ಆರಂಭಿಸಿದೆ. ಆದರೆ, ಶಾಲೆಗಳನ್ನು ಆರಂಭಿಸುವಲ್ಲಿ ತೋರಿಸಿದ ಉತ್ಸಾಹವನ್ನುಪಠ್ಯಪುಸ್ತಕಗಳನ್ನು ಒದಗಿಸುವ ದಿಸೆಯಲ್ಲಿ ತೋರಿಸಿಲ್ಲ. ಶಾಲೆಗಳು ಆರಂಭವಾದ ತಕ್ಷಣ ವಿದ್ಯಾರ್ಥಿಗಳ ಕೈಗೆ ಪುಸ್ತಕಗಳನ್ನು ಕೊಡಬೇಕಿದ್ದ ಸರ್ಕಾರ, ಪಠ್ಯ ಪರಿಷ್ಕರಣೆಯ ಹಗ್ಗಜಗ್ಗಾಟದಲ್ಲಿ ಕಾಲಹರಣ ಮಾಡುತ್ತಿದೆ.

ಪಠ್ಯಪುಸ್ತಕ ‍ಪರಿಷ್ಕರಣೆ ಪ್ರಕ್ರಿಯೆ ಈಗ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಂಗತಿಯಾಗಿಯಷ್ಟೇ ಉಳಿದಿಲ್ಲ. ರಾಜಕೀಯ ಕೆಸರೆರಚಾಟದ ಕಾರಣದಿಂದಾಗಿ, ಪಠ್ಯಪುಸ್ತಕದ ಹೆಸರಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳು ದೇಶದೆದುರು ರಾಜ್ಯದ ಘನತೆಯನ್ನು ಕುಗ್ಗಿಸುವಂತಿವೆ. ಪಠ್ಯ ‍ಪರಿಷ್ಕರಣೆ ಚಟುವಟಿಕೆಗಳು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಡೆಯಬೇಕು. ಪಠ್ಯಗಳು ಸಮಾಜದ ಬಹುತ್ವವನ್ನು, ನಾಡಿನ ಅನನ್ಯತೆಯನ್ನು ಹಾಗೂ ಪ್ರಾದೇಶಿಕ ವೈವಿಧ್ಯವನ್ನು ಒಳಗೊಳ್ಳಬೇಕು. ಸಾರ್ವಜನಿಕ ಅಭಿಪ್ರಾಯವನ್ನು ಗೌರವಿಸಿ ಪಠ್ಯಗಳನ್ನು ಪರಿಷ್ಕರಿಸುತ್ತಿರುವುದಾಗಿ ಹೇಳುತ್ತಿರುವವರು, ಪರಿಷ್ಕರಣೆಯ ಬಗೆಗಿನ ವಿಮರ್ಶಾತ್ಮಕ ಅಭಿಪ್ರಾಯಗಳಿಗೆ ಒರಟಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ನಡವಳಿಕೆ‌ ಪ್ರಜಾಸತ್ತಾತ್ಮಕವಾದುದಲ್ಲ, ಶೈಕ್ಷಣಿಕ ಶಿಸ್ತು–ಸೌಂದರ್ಯವನ್ನೂ ಒಳಗೊಂಡಿಲ್ಲ. ಪ್ರಸ್ತುತ ಕೈಬಿಟ್ಟಿರುವ ಹಾಗೂ ಸೇರ್ಪಡೆಗೊಂಡಿರುವ ಪಠ್ಯಗಳ ಲೇಖಕರ ಪಟ್ಟಿಯನ್ನು ಗಮನಿಸಿದರೆ, ‘ಬಹುತ್ವದ ಪಠ್ಯ’ ಏಕಮುಖ ಆಗುವತ್ತ ಸಾಗುತ್ತಿರುವಂತಿದೆ. ವಿದ್ಯಾರ್ಥಿಗಳ ಮೇಲೆ ಯಾವುದೇ ಒಂದು ಪಕ್ಷದ ರಾಜಕೀಯ ಸಿದ್ಧಾಂತಗಳನ್ನು ಹೇರುವುದು ತರವಲ್ಲ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಮೊದಲು ಅನುಷ್ಠಾನಕ್ಕೆ ತಂದ ರಾಜ್ಯ ಎನ್ನುವ ಹೆಗ್ಗಳಿಕೆ ಕರ್ನಾಟಕದ್ದು ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. ಅದರ ಹೊಸ ಶಿಕ್ಷಣ ಕ್ರಮವನ್ನು ಪ್ರಾಥಮಿಕ ಹಂತದಿಂದ ಜಾರಿಗೊಳಿಸಲು ಬೇಕಾದ ಅಗತ್ಯ ಸಿದ್ಧತೆಯನ್ನೇ ಸರ್ಕಾರ ಈವರೆಗೆ ನಡೆಸಿದಂತಿಲ್ಲ. ಹೊಸ ಶಿಕ್ಷಣ ನೀತಿಗೆ ಅನುಗುಣವಾಗಿ ಪಠ್ಯವನ್ನು ಪುನರ್‌ ರಚಿಸುವ ಅವಕಾಶ ಸರ್ಕಾರಕ್ಕಿತ್ತು. ಆಗ ಈಗಿನ ಪಠ್ಯಗಳಲ್ಲಿ ಇದ್ದಿರಬಹುದಾದ ಓರೆಕೋರೆಗಳನ್ನು ಸರಿಪಡಿಸಬಹುದಿತ್ತು. ಆ ಸಾಧ್ಯತೆಗಳನ್ನು ಬಿಟ್ಟುಕೊಟ್ಟಿರುವ ಸರ್ಕಾರ, ಆತುರದಲ್ಲಿ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡುತ್ತಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಪರಿಷ್ಕೃತ ಪಠ್ಯಗಳನ್ನು ಮುದ್ರಿಸುವುದನ್ನು ಸಾರ್ವಜನಿಕರ ತೆರಿಗೆ ಹಣದ ಅಪಬಳಕೆಯೆಂದೇ ಹೇಳಬೇಕಾಗುತ್ತದೆ. ವೈಯಕ್ತಿಕ ಪ್ರತಿಷ್ಠೆ ಹಾಗೂ ಹಟ ಸಾಧನೆಗಾಗಿ ಸಾರ್ವಜನಿಕರ ಹಣವನ್ನು ಪೋಲು ಮಾಡುವುದು ಸಲ್ಲದು. ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಈ ಮೊದಲು ನಡೆದ ಪಠ್ಯಪುಸ್ತಕ ಪರಿಷ್ಕರಣೆಯಲ್ಲಾದ ತಪ್ಪುಗಳನ್ನು ಈಗ ಸರಿಪಡಿಸುತ್ತಿರುವುದಾಗಿ ಸರ್ಕಾರ ಹೇಳುತ್ತಿದೆ. ತಪ್ಪುಗಳನ್ನು ಸರಿಪಡಿಸುವುದು ಸ್ವಾಗತಾರ್ಹ.

ಬದಲಾವಣೆ ನಿರಂತರ ಪ್ರಕ್ರಿಯೆಯೂ ಹೌದು. ಆದರೆ, ಯಾವುದೇ ಬದಲಾವಣೆಯ ಪ್ರಕ್ರಿಯೆ ಪ್ರಜಾಸತ್ತಾತ್ಮಕವಾಗಿರಬೇಕು. ಬರಗೂರರ ನೇತೃತ್ವದಲ್ಲಿ ಪಠ್ಯ ಪರಿಷ್ಕರಣೆ ನಡೆದಾಗ, ಪ್ರತ್ಯೇಕ ಅಧ್ಯಕ್ಷರನ್ನೊಳಗೊಂಡ 27 ತಜ್ಞರ ಸಮಿತಿಗಳು ಕಾರ್ಯ ನಿರ್ವಹಿಸಿದ್ದವು. ಪರಿಷ್ಕರಣೆಗೆ ಸಂಬಂಧಿಸಿದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿತ್ತು. ವಿಷಯ ತಜ್ಞರು ಹಾಗೂ ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಾಗಿತ್ತು. ಈ ಪ್ರಜಾಸತ್ತಾತ್ಮಕ ನಡವಳಿಕೆ ಹಾಗೂ ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನ ಪ್ರಸ್ತುತ ಪರಿಷ್ಕರಣೆಯ ಸಂದರ್ಭದಲ್ಲಿ ಕಾಣಿಸುತ್ತಿಲ್ಲ.

ಪರಿಷ್ಕೃತ ಪಠ್ಯದ ಬಗ್ಗೆ ಸಾರ್ವಜನಿಕರು ಎತ್ತುತ್ತಿರುವ ಆಕ್ಷೇಪಗಳಿಗೆ ಸರ್ಕಾರ ನೀಡುತ್ತಿರುವ ಉತ್ತರಗಳು ಗೊಂದಲ ಹುಟ್ಟಿಸುವಂತಿವೆ. ಕೈಬಿಟ್ಟಿದ್ದ ಕೆಲವು ಪಠ್ಯಗಳನ್ನು ಸಾರ್ವಜನಿಕರ ವಿರೋಧದ ನಂತರ ಮತ್ತೆ ಸೇರಿಸಲಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಎದುರಾಗಿರುವ ತಾತ್ವಿಕ ವಿರೋಧವನ್ನು ಸಾವಧಾನದಿಂದ ಪರಿಶೀಲಿಸುವ ಪ್ರಯತ್ನವನ್ನೂ ಸರ್ಕಾರ ಮಾಡುತ್ತಿಲ್ಲ. ವಿವಾದಕ್ಕೆ ಗುರಿಯಾಗಿರುವ ಸಮಿತಿಗೆ ದ್ವಿತೀಯ ಪಿಯುಸಿಯ ಇತಿಹಾಸ ಪಠ್ಯವನ್ನು ಪರಿಷ್ಕರಿಸುವ ಹೊಣೆಯನ್ನು ಸರ್ಕಾರ ವಹಿಸಿದೆ. 2022–23ರ ಸಾಲಿನಲ್ಲೇ ಇತಿಹಾಸದ ಪರಿಷ್ಕೃತ ಪಠ್ಯಪುಸ್ತಕ ಪ್ರಕಟಿಸಲು ಉದ್ದೇಶಿಸಿದೆ. ಈ ‍ಪರಿಷ್ಕರಣೆ ಕಾರ್ಯ ಮುಗಿದು, ಪಠ್ಯಪುಸ್ತಕಗಳು ಮುದ್ರಣಗೊಂಡು, ಅವು ವಿದ್ಯಾರ್ಥಿಗಳ ಕೈಗೆ ಬರುವುದು ಯಾವಾಗ? ಪಠ್ಯಪುಸ್ತಕಗಳು ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿರಬೇಕು. ಆದರೆ, ಪಠ್ಯಪುಸ್ತಕ ‍ಪರಿಷ್ಕರಣೆಯ ಹೆಸರಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಮಕ್ಕಳಲ್ಲಿ ಪಠ್ಯಪುಸ್ತಕಗಳ ಬಗ್ಗೆಯೇ ಹೇಸಿಗೆ ಹುಟ್ಟಿಸುವಂತಿವೆ. ಇದರ ಹೊಣೆಯನ್ನು ಸರ್ಕಾರವೇ ಹೊರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT