ಮಂಗಳವಾರ, ಆಗಸ್ಟ್ 3, 2021
20 °C

ಸಂಪಾದಕೀಯ | ಕೋವಿಡ್‌ ಸೇನಾನಿಗಳ ಸುರಕ್ಷತೆ ಸರ್ಕಾರದ ಮೈಮರೆವು ಸರಿಯಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರಿನಲ್ಲಿ ಕೋವಿಡ್‌ ಪ್ರಕರಣಗಳು ಪ್ರತಿದಿನವೂ ನೂರಾರು ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಸೋಂಕಿತರ ಪ್ರಮಾಣ ಕೆಲವು ದಿನಗಳಿಂದ ಒಂದೇ ಸಮನೆ ಏರಿಕೆಯಾಗುತ್ತಿದ್ದು, ದೇಶದ ಸದ್ಯದ ‘ಹಾಟ್‌ಸ್ಪಾಟ್‌’ಗಳಲ್ಲಿ ಒಂದೆನಿಸಿದೆ. ರಾಜಧಾನಿಯಲ್ಲಿ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ತೊಡಗಿದ ಮುಂಚೂಣಿ ಸೇನಾನಿಗಳೂ ದೊಡ್ಡ ಸಂಖ್ಯೆಯಲ್ಲಿ ಸೋಂಕಿನ ಬಾಧೆಗೆ ಒಳಗಾಗುತ್ತಿರುವುದು ಕಳವಳಕಾರಿ.

ವೈಯಕ್ತಿಕ ಸುರಕ್ಷಾ ಸಾಧನಗಳ (ಪಿಪಿಇ) ಕೊರತೆಯ ಕುರಿತು ವೈದ್ಯಕೀಯ ಸಿಬ್ಬಂದಿ ವರ್ಗದವರು ದೂರುತ್ತಲೇ ಬಂದಿದ್ದಾರೆ. ಅವರೊಂದಿಗೆ ಪೌರಕಾರ್ಮಿಕರು ಹಾಗೂ ಪೊಲೀಸರಿಗೂ ಸುರಕ್ಷಾ ಸಾಧನಗಳ ವ್ಯವಸ್ಥೆ ಮಾಡದಿರುವುದು ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಅಗತ್ಯ ಸಂಖ್ಯೆಯಲ್ಲಿ ಪಿಪಿಇಗಳು ಇಲ್ಲದ ಕಾರಣದಿಂದ ಬೆಂಗಳೂರಿನಲ್ಲಿ ಇದುವರೆಗೆ 500 ಪೊಲೀಸರು ಹಾಗೂ 25 ಪೌರಕಾರ್ಮಿಕರು ಸೋಂಕಿತರಾಗಿದ್ದಾರೆ. ಸರ್ಕಾರದ ಮೈಮರೆವಿನಿಂದ ಕೋವಿಡ್‌ ಸೇನಾನಿಗಳು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವಂತಾಗಿದೆ.

ಎಲ್ಲ ಪೊಲೀಸ್‌ ಸಿಬ್ಬಂದಿಗೂ ಫೇಸ್‌ ಶೀಲ್ಡ್‌, ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ಗಳನ್ನು ಪೂರೈಕೆ ಮಾಡಲಾಗಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಅವರೇ ಹೇಳಿದ್ದರು. ಸೋಜಿಗವೆಂದರೆ, ಕೆಲವು ಪೊಲೀಸ್‌ ಠಾಣೆಗಳಿಗೆ ಅವರು ದಿಢೀರ್‌ ಭೇಟಿ ನೀಡಿದಾಗ ಸಿಬ್ಬಂದಿಯು ಮಾಸ್ಕ್‌ ಹೊರತುಪಡಿಸಿ ಬೇರೆ ಯಾವ ಸುರಕ್ಷಾ ಸಾಧನವನ್ನೂ ಧರಿಸಿರಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರಾದ ಕಾರಣ ಹಲವು ಠಾಣೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಪೊಲೀಸರು ಬೀದಿಯಲ್ಲಿ ನಿತ್ಯ ನೂರಾರು ಜನರೊಂದಿಗೆ ವ್ಯವಹರಿಸಬೇಕಾಗುತ್ತದೆ. ಯಾರು ಸೋಂಕಿತರು, ಯಾರು ಆರೋಗ್ಯವಂತರು ಎನ್ನುವುದನ್ನು ಬೇರ್ಪಡಿಸಿ ನೋಡುವುದು ಕಷ್ಟಸಾಧ್ಯ.

ಇಂತಹ ಸನ್ನಿವೇಶದಲ್ಲಿ ಗರಿಷ್ಠ ಪ್ರಮಾಣದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಿರುವುದು ಅತ್ಯಗತ್ಯ. ಹಾಗೆಯೇ ಅಪಾಯಕಾರಿ ತ್ಯಾಜ್ಯವನ್ನು ವಿಲೇವಾರಿ ಮಾಡುವ ಪೌರಕಾರ್ಮಿಕರಿಗೆ ಒಂದು ಸಲ ಬಳಸಿ ಬಿಸಾಡುವಂತಹ ಮಾಸ್ಕ್‌ ಅಷ್ಟೇ ನೀಡಲಾಗಿದೆ ಎಂದು ಪೌರಕಾರ್ಮಿಕರ ಸಂಘ ದೂರಿದೆ. ತ್ಯಾಜ್ಯ ನಿರ್ವಹಣೆ ಮಾಡುವ ಪೌರಕಾರ್ಮಿಕರಿಗೆ ಸಾಮಾನ್ಯ ದಿನಗಳಲ್ಲೂ ಗಮ್‌ಬೂಟ್‌, ಕೈಗವಸು, ಮಾಸ್ಕ್‌ ಸೇರಿದಂತೆ ಎಲ್ಲ ಸುರಕ್ಷಾ ಸಾಧನಗಳನ್ನು ಕಡ್ಡಾಯವಾಗಿ ನೀಡಬೇಕೆಂಬ ನಿಯಮವಿದೆ. ಈಗ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಸನ್ನಿವೇಶದಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದ್ದ ಬಿಬಿಎಂಪಿ, ತನ್ನ ಆರೋಗ್ಯ ಕಾರ್ಯಕರ್ತರನ್ನು ಅಪಾಯದ ದವಡೆಗೆ ನೂಕಿರುವುದು ದೊಡ್ಡ ಪ್ರಮಾದ.

ಕೋವಿಡ್‌ ಸೇನಾನಿಗಳ ಜರೂರು ಅಗತ್ಯಗಳ ಕಡೆಗೆ ರಾಜ್ಯ ಸರ್ಕಾರವು ಆರಂಭದಿಂದಲೇ ಗಮನ ಹರಿಸಬೇಕಿತ್ತು. ಆದರೆ, ಕೋವಿಡ್‌ ನಿರ್ವಹಣೆ ವಿಚಾರದಲ್ಲಿ ಸರ್ಕಾರವು ಗೊಂದಲಕ್ಕೆ ಒಳಗಾದಂತೆ ಕಾಣಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರ ಕೈಗೊಂಡಿರುವ ಕೆಲವು ನಿರ್ಧಾರಗಳಿಗೆ ಯೋಜನೆ, ಯೋಚನೆಯ ಗಟ್ಟಿ ನೆಲೆ ಇದ್ದಂತೆ ಕಾಣಿಸುತ್ತಿಲ್ಲ. ಬೆಂಗಳೂರಿನಲ್ಲಿ ಕೋವಿಡ್‌ ನಿಯಂತ್ರಣಕ್ಕಾಗಿ ಏಳು ಸಚಿವರು ಹಾಗೂ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಒಬ್ಬ ಶಾಸಕರನ್ನು ನಿಯೋಜಿಸಲಾಗಿದೆ. ಇವರಲ್ಲದೆ, ಮುಖ್ಯಮಂತ್ರಿ, ಆರೋಗ್ಯ ಸಚಿವ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೂಡ ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದ ಕೆಲಸಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಹಲವು ಮಂದಿಯ ಉಸ್ತುವಾರಿಯಿಂದಾಗಿ ಕೋವಿಡ್‌ ತಡೆ ಕೆಲಸಗಳಲ್ಲಿ ಗೊಂದಲ ಉಂಟಾಗಬಾರದು. ಈ ಎಲ್ಲರ ಮಧ್ಯೆ ಸಮನ್ವಯ ಇರುವಂತೆ ಮುಖ್ಯಮಂತ್ರಿ ನೋಡಿಕೊಳ್ಳಬೇಕು. ಪರಿಸ್ಥಿತಿ ಕೈಮೀರುವ ಹಂತಕ್ಕೆ ಬಂದಿರುವ ಈ ಸಂದರ್ಭದಲ್ಲಿ ಗೊಂದಲ ಸೃಷ್ಟಿಯಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಹೆಚ್ಚಿನ ಪ್ರಮಾಣದ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ಸಿಬ್ಬಂದಿ ಸಂಖ್ಯೆಯನ್ನು ಏರಿಕೆ ಮಾಡಲು, ಅವರಿಗೆ ಸುರಕ್ಷಾ ಸೌಲಭ್ಯಗಳನ್ನು ಒದಗಿಸಲು, ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಿಸಲು ಸರ್ಕಾರವು ಈ ಹೊತ್ತಿಗಾಗಲೇ ಗಮನ ನೀಡಬೇಕಿತ್ತು.

ಈ ವಿಷಯದಲ್ಲಿ ಇದುವರೆಗೆ ಆಗಿರುವ ವಿಳಂಬವೇ ಸಾಕು, ಯಾವುದೇ ನೆಪಕ್ಕೆ ಆಸ್ಪದ ನೀಡದೆ ಪೊಲೀಸರು, ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು ಹಾಗೂ ಕೋವಿಡ್‌ ಹೋರಾಟದಲ್ಲಿ ತೊಡಗಿರುವ ಇತರ ಸೇನಾನಿಗಳಿಗೆ ತಕ್ಷಣ ಅಗತ್ಯ ಪ್ರಮಾಣದಲ್ಲಿ ಸುರಕ್ಷಾ ಸಾಧನಗಳನ್ನು ಒದಗಿಸಬೇಕು. ಅವರು ಆರೋಗ್ಯದಿಂದ ಇದ್ದರಷ್ಟೇ ಎಲ್ಲ ಕೆಲಸಗಳು ಸಲೀಸಾಗಿ ನಡೆಯುತ್ತವೆ ಎಂಬುದನ್ನು ನೆನಪಿಡಬೇಕು. ಈ ಮುಂಚೂಣಿ ಸೇನಾನಿಗಳೇ ಅನಾರೋಗ್ಯ ಪೀಡಿತರಾದರೆ ಕೋವಿಡ್‌ ವಿರುದ್ಧ ಹೋರಾಟಕ್ಕೆ ನಿಲ್ಲುವವರು ಯಾರು? ಸರ್ಕಾರ ಅವರ ಬೆನ್ನಿಗೆ ನಿಂತು ನೈತಿಕ ಸ್ಥೈರ್ಯ ತುಂಬುವಂತಹ ಕೆಲಸವನ್ನು ಮಾಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು