ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಐಎಎಸ್ ಅಧಿಕಾರಿಗಳ ಕಿತ್ತಾಟ ಪ್ರಕರಣ: ಸಮಗ್ರ ತನಿಖೆ ಆಗಲಿ

Last Updated 11 ಜೂನ್ 2021, 19:30 IST
ಅಕ್ಷರ ಗಾತ್ರ

ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುವ ಅಕ್ರಮಗಳಿದ್ದರೆ ತಡೆಯುವುದು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವುದು ಸರ್ಕಾರದ ಆದ್ಯ ಕರ್ತವ್ಯ. ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ಇದಕ್ಕೆ ಪರಿಹಾರವಲ್ಲ.

ಮೈಸೂರಿನಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಐಎಎಸ್ ಅಧಿಕಾರಿಗಳ ನಡುವಣ ಬಹಿರಂಗ ಆರೋಪ- ಪ್ರತ್ಯಾರೋಪಗಳ ಪ್ರಕರಣ ಮೇಲ್ನೋಟಕ್ಕೆ ಕಂಡಷ್ಟು ಸರಳವಾಗಿಲ್ಲ. ಈ ಇಬ್ಬರೂ ಅಧಿಕಾರಿಗಳನ್ನು ಮೈಸೂರಿನಿಂದ ಎತ್ತಂಗಡಿ ಮಾಡುವ ಮೂಲಕ ಸಮಸ್ಯೆ ಬಗೆಹರಿಸಲಾಗಿದೆ ಎಂದು ಸರ್ಕಾರ ತಿಳಿದುಕೊಂಡಿದ್ದರೆ ಅದು ಖಂಡಿತವಾಗಿಯೂ ತಪ್ಪು ತಿಳಿವಳಿಕೆ. ವರ್ಗಾವಣೆಯು ಸಮಸ್ಯೆ ಯನ್ನು ಪರಿಹರಿಸುವ ಬದಲು ಇನ್ನಷ್ಟು ಪ್ರಶ್ನೆಗಳು ಮತ್ತು ಅನುಮಾನಗಳನ್ನು ಹುಟ್ಟುಹಾಕಿದೆ. ‘ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರ ಕಿರುಕುಳದಿಂದ ರೋಸಿಹೋಗಿ ಪಾಲಿಕೆಯ ಹುದ್ದೆಗೆ ಮತ್ತು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ’ ಎಂದುಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಶಿಲ್ಪಾ ನಾಗ್ ಮಾಧ್ಯಮಗೋಷ್ಠಿಯಲ್ಲಿ ಪ್ರಕಟಿಸುವ ಮೂಲಕ ಅಧಿಕಾರಿಗಳ ತಿಕ್ಕಾಟ ಬಹಿರಂಗಕ್ಕೆ ಬಂದಿತ್ತು. ‘ಶಿಲ್ಪಾ ನಾಗ್ ಅವರು ಕೋವಿಡ್ ಪರಿಹಾರ ಕ್ರಮಗಳಿಗೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‍ಆರ್) ನಿಧಿಯಿಂದ ಬಳಸಿರುವ ₹ 12 ಕೋಟಿ ಮೊತ್ತದ ಲೆಕ್ಕ ಕೊಟ್ಟಿಲ್ಲ. ಅದನ್ನು ಪ್ರಶ್ನಿಸಿದ್ದಕ್ಕೆ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಸಿಂಧೂರಿ ಪ್ರತಿಕ್ರಿಯೆ ನೀಡಿದ್ದರು. ‘ಸಿಎಸ್‍ಆರ್ ನಿಧಿಗೆ ನಗದಿನ ಬದಲು ವಸ್ತುಗಳನ್ನು ಸ್ವೀಕರಿಸಲಾಗಿದೆ. ಎಲ್ಲ ಲೆಕ್ಕ ಸರಿಯಾಗಿದೆ’ ಎಂದು ಶಿಲ್ಪಾ ನಾಗ್ ಬಳಿಕ ಲೆಕ್ಕವೊಂದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಇದಕ್ಕೂ ಮುನ್ನ ಸಿಂಧೂರಿಯವರ ವಿರುದ್ಧ ಜಿಲ್ಲೆಯ ಕೆಲವು ಶಾಸಕರು ಮತ್ತು ಸಂಸದರು ಟೀಕಾ ಪ್ರಹಾರ ಮಾಡಿದ್ದೂ ಸುದ್ದಿಯಾಗಿತ್ತು. ಶಿಲ್ಪಾ ನಾಗ್ ಅವರು ಜಿಲ್ಲಾಧಿಕಾರಿ ವಿರುದ್ಧ ಸಾರ್ವಜನಿಕ ವಾಗಿ ನಡೆಸಿದ ಟೀಕಾಪ್ರಹಾರಕ್ಕೆ ಹಲವು ರಾಜಕೀಯ ಮುಖಂಡರು ಬೆಂಬಲ ನೀಡಿದ್ದರು. ಇಬ್ಬರು ಅಧಿಕಾರಿಗಳ ನಡುವಣ ಬಹಿರಂಗ ತಿಕ್ಕಾಟವನ್ನು ಬಗೆಹರಿಸಲು ಮೈಸೂರಿಗೆ ಬಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ‘ವಿವಾದ ನನ್ನ ಕೈಮೀರಿದೆ. ತಾಯಿ ಚಾಮುಂಡೇಶ್ವರಿಯೇ ನೋಡಿಕೊಳ್ಳುತ್ತಾಳೆ’ ಎಂದು ದೇವರ ಮೇಲೆ ಭಾರ ಹಾಕಿದ್ದೂ ನಡೆಯಿತು. ಇಬ್ಬರೂ ಅಧಿಕಾರಿ ಗಳನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿದ ಬಳಿಕವೂ ಮಾತಿನ ಜಗಳ ಮುಂದುವರಿದಿದೆ. ‘ನನ್ನ ವರ್ಗಾವಣೆಯ ಹಿಂದೆ ಸ್ಥಳೀಯ ರಾಜಕಾರಣಿಗಳ ಬೆಂಬಲವುಳ್ಳ ಭೂಮಾಫಿಯಾದ ಕೈವಾಡ ಇದೆ. ಶಾಸಕರೊಬ್ಬರಿಂದ ಲಿಂಗಾಂಬುಧಿ ಕೆರೆಯ ಬಳಿ ಅಕ್ರಮ ಭೂ ಒತ್ತುವರಿ ನಡೆದಿದ್ದು, ಅದರ ತನಿಖೆಗೆ ನಾನು ಕೈಗೊಂಡ ಕ್ರಮ ಕೆಲವರಿಗೆ ಸಹಿಸಲು ಆಗಿಲ್ಲ. ಮೈಸೂರಿನ ಭೂಹಗರಣಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು’ ಎಂದು ಸರ್ಕಾರವನ್ನುಸಿಂಧೂರಿ ಒತ್ತಾಯಿಸಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಒತ್ತುವರಿಯಾಗಿದೆ ಎನ್ನಲಾದ ಭಾರಿ ಬೆಲೆ ಬಾಳುವ ಜಮೀನನ್ನು ಸರ್ಕಾರದ ಹಿಡಿತಕ್ಕೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟಿನಲ್ಲಿ ಹೂಡಿರುವ ಮೊಕದ್ದಮೆಯಲ್ಲಿ ಹಿರಿಯ ವಕೀಲ ಹರೀಶ್ ಸಾಳ್ವೆ ಅವರ ಸೇವೆ ಪಡೆಯಲಾಗಿದೆ ಎಂಬುದು ಪ್ರಕರಣದ ಗಂಭೀರತೆಯನ್ನು ಸೂಚಿಸು ವಂತಿದೆ.

ವಿವಾದಗಳು ಸಿಂಧೂರಿ ಅವರ ಬೆನ್ನು ಹತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ, ಹಾಸನದಲ್ಲಿ ಜಿಲ್ಲಾಧಿಕಾರಿ ಆಗಿದ್ದಾಗ ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕದಲ್ಲಿ ದುಂದುವೆಚ್ಚದ ಕುರಿತು ಸಿಂಧೂರಿ ಅವರು ತಳೆದ ಕಠಿಣ ನಿಲುವು ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ತಿಕ್ಕಾಟಕ್ಕೆ ಕಾರಣವಾಗಿತ್ತು. ಮಂಡ್ಯದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದಾಗ ಬಯಲು ಬಹಿರ್ದೆಸೆ ಮುಕ್ತ ಯೋಜನೆ ಜಾರಿಯಲ್ಲಿ ಸಿಂಧೂರಿ ಅತ್ಯುತ್ತಮ ಸಾಧನೆ ಮಾಡಿದ್ದರು. ಈ ಯೋಜನೆಯ ಹಣಕಾಸು ನಿರ್ವಹಣೆಗೆ ಸಂಬಂಧಿಸಿ ಸಿಂಧೂರಿಯವರು ಪಾರದರ್ಶಕ ಕ್ರಮಗಳನ್ನು ಕೈಗೊಂಡಾಗ ಸ್ಥಳೀಯ ರಾಜಕಾರಣಿಗಳ ಒತ್ತಡದ ಕಾರಣದಿಂದ ಮಂಡ್ಯದಿಂದ ವರ್ಗಾವಣೆ ಮಾಡಲಾಗಿತ್ತು. ಮೈಸೂರಿನ ಭೂಕಬಳಿಕೆಯ ಕುರಿತು ಸಿಂಧೂರಿ ಮಾಡಿದ ಆರೋಪಗಳನ್ನು ಅವರೊಬ್ಬ ವಿವಾದಾಸ್ಪದ ಅಧಿಕಾರಿ ಎಂಬ ಕಾರಣಕ್ಕೆ ತಳ್ಳಿಹಾಕುವುದು ಖಂಡಿತಾ ಸರಿಯಲ್ಲ. ರಾಜ್ಯ ಸರ್ಕಾರವು ಮೈಸೂರಿನ ಎಲ್ಲ ಭೂಕಬಳಿಕೆ ಆರೋಪಗಳ ಕುರಿತು ಸಮಗ್ರ ತನಿಖೆ ಕೈಗೊಳ್ಳ ಬೇಕಾದ ಅಗತ್ಯವಿದೆ. ಹಾಗೆಯೇ ಪಾರಂಪರಿಕ ಕಟ್ಟಡವಾದ ಜಿಲ್ಲಾಧಿಕಾರಿ ನಿವಾಸದ ಆವರಣದಲ್ಲಿ ಸಿಂಧೂರಿಯವರು ಅಕ್ರಮವಾಗಿ ಈಜುಕೊಳವನ್ನು ನಿರ್ಮಿಸಿದ್ದರೆ ಅದರ ಬಗ್ಗೆಯೂ ತನಿಖೆ ನಡೆಯಬೇಕು. ಈ ಹಿಂದೆ ‘ಬೆಂಗಳೂರು ಸೇಫ್ ಸಿಟಿ’ ಯೋಜನೆಯಲ್ಲಿ ಹಣದ ಅವ್ಯವಹಾರ ನಡೆದಿದೆ ಎಂದು ಇಬ್ಬರು ಉನ್ನತ ಪೊಲೀಸ್ ಅಧಿಕಾರಿಗಳ ಮಧ್ಯೆ ಆರೋಪ- ಪ್ರತ್ಯಾರೋಪಗಳು
ನಡೆದಾಗಲೂ ಸರ್ಕಾರ ಇಬ್ಬರನ್ನೂ ವರ್ಗಾವಣೆ ಮಾಡಿ ಕೈತೊಳೆದುಕೊಂಡಿತ್ತು. ಮೈಸೂರಿನಲ್ಲಿಯೂ ಹಾಗಾಗುವುದು ಬೇಡ. ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುವ ಯಾವುದೇ ಅಕ್ರಮಗಳಿದ್ದರೂ ಅವುಗಳನ್ನು ತಡೆಯುವುದು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವುದು ಸರ್ಕಾರದ ಆದ್ಯ ಕರ್ತವ್ಯ. ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ಇದಕ್ಕೆ ಪರಿಹಾರವಲ್ಲ. ರಾಜ್ಯ ಸರ್ಕಾರವು ಈ ಹಿನ್ನೆಲೆಯಲ್ಲಿ ಮೈಸೂರು ಭೂ ಒತ್ತುವರಿ ಆರೋಪ ಕುರಿತು ಸಮಗ್ರ ಮತ್ತು ಪಾರದರ್ಶಕ ತನಿಖೆ ಯನ್ನು ಕೈಗೊಳ್ಳದಿದ್ದಲ್ಲಿ, ಪೂರ್ಣ ಸತ್ಯ ಹೊರಗೆ ಬರುವುದು ಸರ್ಕಾರಕ್ಕೆ ಬೇಕಿಲ್ಲ ಎಂದೇ ಜನರು ಭಾವಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT