ಶನಿವಾರ, ಏಪ್ರಿಲ್ 10, 2021
29 °C

ಸಿಹಿಬೆಲ್ಲದ ಹಿಂದಿನ ಕಹಿಸತ್ಯ ಬಹಿರಂಗ; ಆಗಬೇಕಿದೆ ಆಲೆಮನೆಗಳ ಮಾನರಕ್ಷಣೆ

ಸಂಪಾದಕೀಯ Updated:

ಅಕ್ಷರ ಗಾತ್ರ : | |

ಆಲೆಮನೆಯಲ್ಲಿ ಬೆಲ್ಲ ತಯಾರಿ–ಸಾಂದರ್ಭಿಕ ಚಿತ್ರ

ರಾಜ್ಯದಾದ್ಯಂತ ಆಲೆಮನೆಗಳ ತಪಾಸಣೆ, ಅಂಗಡಿಗಳಲ್ಲಿ ಬೆಲ್ಲದ ಗುಣಮಟ್ಟ ಪರೀಕ್ಷೆ ನಡೆಸುವ, ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕ್ರಮ ಶೀಘ್ರ ಜರುಗಬೇಕಿದೆ

ಆಲೆಮನೆ ಎಂದಾಕ್ಷಣ ಮೋಹಕ ಪರಿಮಳ ಮತ್ತು ಚೇತೋಹಾರಿ ಪರಿಸರವೇ ನೆನಪಿಗೆ ಬರುತ್ತದೆ. ಸಕ್ಕರೆಗೆ ಹೋಲಿಸಿದರೆ ಆಲೆಮನೆಯ ಬೆಲ್ಲ ಎಂದರೆ ಮಾಲಿನ್ಯರಹಿತ, ಖನಿಜಯುಕ್ತ, ಸಾವಯವ ಸಿಹಿಯೆಂದೇ ನಂಬಿಕೆಯಿತ್ತು. ಹಬ್ಬ ಹರಿದಿನಗಳಲ್ಲಿ ಶುದ್ಧ ಪಳಪಳ ಹೊಳೆಯುವ ಸಕ್ಕರೆಗಿಂತ ಗ್ರಾಮ್ಯ ಬೆಲ್ಲಕ್ಕೇ ಹೆಚ್ಚು ಸಾಂಪ್ರದಾಯಿಕ ಮೌಲ್ಯವಿತ್ತು. ಆದರೆ ಅದಕ್ಕೂ ರಾಸಾಯನಿಕ‌ ಸೇರಿಸಿ ಹೆಸರು ಕೆಡಿಸಿ ಲಾಭಕೋರರು ಜನರ ಆರೋಗ್ಯಕ್ಕೂ ಧಕ್ಕೆ ತರುತ್ತಿದ್ದಾರೆ. ‘ಮಂಡ್ಯ ಬೆಲ್ಲ’ ಎಂತಲೇ ಖ್ಯಾತಿ ಪಡೆದಿದ್ದ ಅಚ್ಚುಬೆಲ್ಲ ಬಹುದೊಡ್ಡ ಪ್ರಮಾಣದಲ್ಲಿ ದೂರದ ರಾಜ್ಯಗಳಿಗೂ ರವಾನೆಯಾಗುತ್ತಿತ್ತು. ಆದರೆ, ಅತೀವ ಕಲಬೆರಕೆಯಿಂದಾಗಿ ಈಗ ಗುಜರಾತ್‌, ಕೇರಳ ರಾಜ್ಯಗಳು ಮಂಡ್ಯ ಬೆಲ್ಲವನ್ನು ತಿರಸ್ಕರಿಸು ತ್ತಿದ್ದು, ರಾಜಸ್ಥಾನ, ಮಧ್ಯಪ್ರದೇಶಗಳೂ ಬದಲೀ ಬೆಲ್ಲಕ್ಕಾಗಿ ಶೋಧಿಸುತ್ತಿರುವುದಾಗಿ ವರದಿಗಳು ಬಂದಿವೆ. ಬಂಗಾರದ ಬಣ್ಣದ ಬೆಲ್ಲಕ್ಕೆ ಬೇಡಿಕೆ ಹೆಚ್ಚಿರುವುದರಿಂದಾಗಿ ಆಲೆಮನೆಗಳಲ್ಲಿ ಈ ಕರಾಳ ದಂಧೆ ವ್ಯಾಪಕವಾಗುತ್ತಿದ್ದು ಉತ್ತರದ ರಾಜ್ಯಗಳಿಂದ ಬಂದವರು ನಡೆಸುವ ಬೆಲ್ಲದ ಬಟ್ಟಿಗಳಲ್ಲಿ ಯದ್ವಾತದ್ವಾ ರಾಸಾಯನಿಕ‌ ಮಿಶ್ರಣ ಆಗುತ್ತಿದೆಯೆಂದು ವಿಜ್ಞಾನಿಗಳು ಹೇಳಿದ್ದಾರೆ. ಬೆಲ್ಲದಲ್ಲಿ ಸಿಹಿಯ ಸಾಂದ್ರತೆಯನ್ನು ಹೆಚ್ಚಿಸಲೆಂದು ಕೊಳಕು ಸಕ್ಕರೆಯನ್ನೂ ಕಾರ್ಖಾನೆಗಳ ಕಾಕಂಬಿಯನ್ನೂ ಸೇರಿಸುತ್ತಿರುವುದನ್ನು ಆಹಾರ ಗುಣಮಟ್ಟ ತಪಾಸಣಾ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆಯೇ ತಮಿಳುನಾಡಿನ ಮದುರೆಯಲ್ಲಿ ಬೆಲ್ಲದ ವ್ಯಾಪಾರಿಗಳೇ ಆಲೆಮನೆಗೆ ಕೆಮಿಕಲ್‌ ಸರಬರಾಜು ಮಾಡಿ ಹಳದಿ ಬೆಲ್ಲದಚ್ಚನ್ನು ತರಿಸಿಕೊಳ್ಳುವುದು ಬೆಳಕಿಗೆ ಬಂದಿತ್ತು. ನಮ್ಮ ಆಹಾರ ಗುಣಮಟ್ಟ ತಪಾಸಣೆ ಮಾಡುವ ಅಧಿಕಾರಿಗಳು ಆ ಹಂತದಲ್ಲೇ ಎಚ್ಚರ ವಹಿಸಿದ್ದಿದ್ದರೆ ಮಂಡ್ಯದ ಬೆಲ್ಲ ಹೀಗೆ ಪರ ರಾಜ್ಯಗಳಿಂದ ತಿರಸ್ಕೃತವಾಗುವ ಮಟ್ಟಿಗೆ ತನ್ನ ಹೆಸರನ್ನು ಕೆಡಿಸಿಕೊಳ್ಳುತ್ತಿರಲಿಲ್ಲ.

ಆಹಾರ ಗುಣಮಟ್ಟ ತಪಾಸಣೆ ಕಟ್ಟುನಿಟ್ಟಾಗಿ ನಡೆಯದಿದ್ದರೆ ಏನೇನೋ ಅನರ್ಥಗಳಾಗುತ್ತವೆ. ಭಾರತದ ಚಹಾಪುಡಿ, ಮೆಣಸಿನಕಾಯಿ, ಬಾಸ್ಮತಿ ಅಕ್ಕಿ, ಉಪ್ಪು, ಶಾವಿಗೆ, ವಿವಿಧ ಬಗೆಯ ತೈಲ, ಪೇಯ ಹೀಗೆ 202 ಖಾದ್ಯ ದ್ರವ್ಯಗಳು ವಿದೇಶಗಳಿಂದ ಪದೇ ಪದೇ ತಿರಸ್ಕೃತವಾಗಿ ಬರುತ್ತಿದ್ದು, ಜಗತ್ತಿನ ಮೂರು ಅತಿ ಕಳಪೆ ರಫ್ತುದೇಶಗಳ ಪೈಕಿ ಭಾರತವೂ ಒಂದೆಂಬ ಅಪಖ್ಯಾತಿ ನಮ್ಮದಾಗಿದೆ. ವಿದೇಶಗಳಲ್ಲೇನೋ ಕಟ್ಟುನಿಟ್ಟಿನ ತಪಾಸಣೆ ಇರುತ್ತದೆ. ನಮ್ಮಲ್ಲೇ ಬಳಕೆಯಾಗುವ ಸಾಮಗ್ರಿಗಳ ಗುಣಮಟ್ಟದ ಗತಿಯೇನು? ಕೆಲವು ಹಾಲಿನ ಉತ್ಪನ್ನಗಳಲ್ಲಿ ಯೂರಿಯಾ ಮತ್ತು ಸುಣ್ಣದ ಕಲಬೆರಕೆ ಆಗುತ್ತಿದ್ದ ಬಗ್ಗೆ ವರದಿಗಳಿವೆ. ಹಸುಗಳ ದೇಹಕ್ಕೆ ಆ್ಯಂಟಿ ಬಯಾಟಿಕ್‌ ಮತ್ತು ಆಕ್ಸಿಟೋಸಿನ್‌ ತೂರಿಸಿ ಅಕ್ಷರಶಃ ಹಣವನ್ನು ಹಿಂಡುವ ದಂಧೆಕೋರರಿಗೂ ನಮ್ಮಲ್ಲಿ ಕೊರತೆ ಇಲ್ಲ. ದೇಶದ ಸುಪ್ರಸಿದ್ಧ ಕಂಪನಿಗಳೂ ಜೇನಿಗೆ ಸಕ್ಕರೆ ಪಾಕವನ್ನು ಸೇರಿಸಿ ಮಾರುತ್ತಿದ್ದುದು ಈಚೆಗೆ ಪತ್ತೆಯಾಗಿದೆ. ಬೆಲ್ಲದ ಕಲಬೆರಕೆಯ ವಿಷಯ ಇವೆಲ್ಲಕ್ಕಿಂತ ಗಂಭೀರ. ಸಕ್ಕರೆಯನ್ನು ಬಿಳಿವಿಷ ಎಂದು ಪರಿಗಣಿಸುವವರು ಸಕ್ಕರೆಯ ಬದಲಿಗೆ ಬೆಲ್ಲವನ್ನು ಬಳಸುತ್ತಾರೆ. ಪೋಷಕಾಂಶಗಳೇ ಇಲ್ಲದ ಸಕ್ಕರೆಗೆ ಹೋಲಿಸಿದರೆ ಬೆಲ್ಲದಲ್ಲಿ ಕಬ್ಬಿಣದ ಜೊತೆ ಅಷ್ಟಿಷ್ಟು ಕ್ಯಾಲ್ಸಿಯಂ, ಮೆಗ್ನೀಸಿಯಂ ಮುಂತಾದ ಲವಣಗಳು ಇವೆ. ಈಗ ಬೆಲ್ಲದಲ್ಲೂ ಫಾಸ್ಫಾರಿಕ್‌ ಆ್ಯಸಿಡ್‌, ಸ್ಯಾಫೊನೇಟ್‌ ಮುಂತಾದ ಕೆಮಿಕಲ್‌ ಇದೆಯೆಂಬ ಕಹಿ ಸತ್ಯ ಗೊತ್ತಾದಾಗ ಸಿಹಿಗೆ ಏನು ಮಾಡಬೇಕು? ಸುಶಿಕ್ಷಿತ ಅನುಕೂಲಸ್ಥರೇನೊ ಹೆಚ್ಚು ಬೆಲೆ ತೆತ್ತು ಮಾಲ್‌ಗಳಲ್ಲಿ ಆಕರ್ಷಕ ಲೇಬಲ್‌ ಹಚ್ಚಿಕೊಂಡಿರುವ ‘ಅಪ್ಪಟ’ ಸಾವಯವ ಬೆಲ್ಲವನ್ನು ಖರೀದಿಸಬಹುದು (ಅಂಥ ದುಬಾರಿ ಬೆಲ್ಲಕ್ಕೂ ಆಹಾರ ಗುಣಮಟ್ಟ ಖಾತರಿಯ ಅಧಿಕೃತ ಲಾಂಛನ ಇರುವುದಿಲ್ಲ, ಆ ಮಾತು ಬೇರೆ). ಇನ್ನು, ಬೆಳಗಾದರೆ ಬೇಕರಿಗಳಿಗೆ ಮುಗಿಬೀಳುವ ಗ್ರಾಹಕರು, ಲೇಬಲ್‌ ಇಲ್ಲದ ಅಗ್ಗದ ಬೆಲ್ಲವನ್ನೇ ಖರೀದಿಸಬೇಕಾದ ಸಾಮಾನ್ಯ ಜನರು, ಕಪ್ಪು ಬೆಲ್ಲವೇ ಸಾವಯವ ಬೆಲ್ಲವೆಂದು ನಂಬಿದವರು- ಹೀಗೆ ಎಲ್ಲರಿಗೂ ಸಿಹಿವಿಷದ ಸೇವನೆಯೇ? ಇದಕ್ಕಿಂತ ಮಹತ್ವದ್ದೆಂದರೆ ಬೆಲ್ಲದಿಂದಾಗಿಯೇ ಮಂಡ್ಯ ಮತ್ತು ಬೆಳಗಾವಿ ಜಿಲ್ಲೆಗಳು ‘ಒಂದು ಜಿಲ್ಲೆ ಒಂದು ಉತ್ಪನ್ನ’ ಎಂಬ ವಿಶೇಷ ಅಭಿಧಾನಕ್ಕೆ ಆಯ್ಕೆಯಾಗಿದ್ದು, ಈ ಸಂದರ್ಭದಲ್ಲೇ ಮಂಡ್ಯ ಬೆಲ್ಲಕ್ಕೆ ಕೆಟ್ಟ ಹೆಸರು ಬಂದಿದೆ. ರಾಜ್ಯದಾದ್ಯಂತ ಆಲೆಮನೆಗಳ ತಪಾಸಣೆ, ಅಂಗಡಿಗಳಲ್ಲಿ ಬೆಲ್ಲದ ಗುಣಮಟ್ಟ ಪರೀಕ್ಷೆ ನಡೆಸುವ, ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕ್ರಮ ಶೀಘ್ರ ಜರುಗಬೇಕಿದೆ. ಚಿನ್ನದ ಬಣ್ಣದ್ದೆಲ್ಲ ಚೆನ್ನೆಂಬ ಭ್ರಮೆಯಿಂದ ಮೊದಲು ನಾವು ಪಾರಾಗಬೇಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು