ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಹುಲಿ ಸಂರಕ್ಷಣೆ: ಕಾರಿಡಾರ್‌ ಸೃಷ್ಟಿಗೆ ಸಿಗಲಿ ಆದ್ಯತೆ

Last Updated 1 ಆಗಸ್ಟ್ 2020, 5:00 IST
ಅಕ್ಷರ ಗಾತ್ರ

ಹುಲಿಗಳ ಸಂಖ್ಯೆ ಹೆಚ್ಚಾಗುವುದು, ಕಾಡು ಮತ್ತು ವನ್ಯಜೀವಿ ಸಂರಕ್ಷಣೆಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆ. ದೇಶದಲ್ಲಿ 2018ರಲ್ಲಿ ನಡೆಸಿದ ಗಣತಿಯ ಪ್ರಕಾರ, ಅದರ ಹಿಂದಿನ ನಾಲ್ಕು ವರ್ಷಗಳಿಗೆ ಹೋಲಿಸಿದರೆ 741 ಹುಲಿಗಳು ಹೆಚ್ಚಾಗಿರುವುದು ಕಂಡುಬಂದಿದೆ. ಅಂದರೆಶೇ 33ರಷ್ಟು ಏರಿಕೆಯಾಗಿದೆ. ಇದರಿಂದ ಕಾಡಿನ ಸಂರಕ್ಷಣೆ ಸಮರ್ಪಕವಾಗಿದೆ, ಹುಲಿಗೆ ಬೇಕಾದ ಬಲಿಪ್ರಾಣಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ ಎಂದು ಅರ್ಥ. ಆದರೆ, ಗಣತಿಯ ವಿಧಾನದ ಕುರಿತೇ ಆಕ್ಷೇಪ ವ್ಯಕ್ತವಾಗಿದೆ.

ಗಣತಿಗೆ ಒಂದು ವರ್ಷದ ಮರಿಗಳನ್ನೂ ಪರಿಗಣಿಸಿರುವುದು ಇದಕ್ಕೆ ಕಾರಣ. ಈ ಎಲ್ಲ ಮರಿಗಳು ಬದುಕುಳಿಯಬಹುದು ಎಂಬ ಖಾತರಿ ಇರುವುದಿಲ್ಲ. ಹೀಗಾಗಿ, ಇದು ವಿವಾದಕ್ಕೆ ಎಡೆಮಾಡಿದೆ.ಕೇಂದ್ರ ಸರ್ಕಾರವು ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿ ನಡೆಸುತ್ತದೆ. 2018ರಲ್ಲಿ ನಡೆಸಿದ ಗಣತಿಯಲ್ಲಿ ಪ್ರದೇಶವಾರು ಅಂಕಿಅಂಶಗಳನ್ನು ಒಳಗೊಂಡ 650 ಪುಟಗಳ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಅದರ ಪ್ರಕಾರ, ಭಾರತದ ಕಾಡುಗಳಲ್ಲಿ 2,967 ವ್ಯಾಘ್ರಗಳಿವೆ ಎಂದು ಅಂದಾಜಿಸಲಾಗಿದೆ. 2022ರ ಒಳಗೆ ಹುಲಿಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಬೇಕು ಎಂದು ಹತ್ತು ವರ್ಷಗಳ ಹಿಂದೆ ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಸಂಕಲ್ಪ ಮಾಡಲಾಗಿತ್ತು. ಈಗಿನ ಅಂಕಿಅಂಶದ ಪ್ರಕಾರ, ಭಾರತವು ಈ ಗುರಿಯನ್ನು ನಾಲ್ಕು ವರ್ಷಗಳಿಗೆ ಮೊದಲೇ ಮುಟ್ಟಿದೆ. ಇದೊಂದು ಸಾರ್ವಕಾಲಿಕ ದಾಖಲೆ. ಹುಲಿಗಳ ಸಂಖ್ಯೆ ಏರಿಕೆಯಲ್ಲಿ ಪ್ರದೇಶವಾರು ವ್ಯತ್ಯಾಸಗಳಾಗಿರುವುದು ಗಮನಾರ್ಹ. ಇದಕ್ಕೆ ನಾನಾ ಕಾರಣಗಳಿವೆ. ಛತ್ತೀಸಗಡ ಮತ್ತು ಮಿಜೊರಾಂನಲ್ಲಿ ಹುಲಿಗಳ ಸಂಖ್ಯೆ ಕುಸಿದಿದೆ. ಉಳಿದಂತೆ ಶಿವಾಲಿಕ್‌ ಬೆಟ್ಟಗಳು ಮತ್ತು ಗಂಗಾ ಬಯಲು, ಪಶ್ಚಿಮಘಟ್ಟ, ಈಶಾನ್ಯ ಬೆಟ್ಟಗಳು, ಮಧ್ಯಭಾರತ ಮತ್ತು ಪೂರ್ವಘಟ್ಟದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕರ್ನಾಟಕದಲ್ಲಿ ಏರಿಕೆಯಾಗಿದ್ದರೂ ರಾಜ್ಯಗಳ ಪೈಕಿ ಅಗ್ರಸ್ಥಾನವು ಸಣ್ಣ ಅಂತರದಿಂದ ಕೈತಪ್ಪಿದೆ. 2014ರಲ್ಲಿ ರಾಜ್ಯದಲ್ಲಿ 406 ಹುಲಿಗಳಿದ್ದವು.ಈ ಸಂಖ್ಯೆ ಇದೀಗ 524ಕ್ಕೆ ಏರಿದೆ. ಮಧ್ಯಪ್ರದೇಶವು 526 ವ್ಯಾಘ್ರಗಳಿಗೆ ನೆಲೆ ಕಲ್ಪಿಸುವ ಮೂಲಕ ಮೊದಲ ಸ್ಥಾನಕ್ಕೆ ಏರಿದೆ. ಕಳೆದ ಗಣತಿಯ ವೇಳೆ ಅಲ್ಲಿ 308ರಷ್ಟಿದ್ದ ಸಂಖ್ಯೆಯಲ್ಲಿ ಈಗ ಭಾರಿ ಏರಿಕೆಯಾಗಿದೆ.

ಭಾರತದ ಹುಲಿ ಅಭಯಾರಣ್ಯದ ವಿಸ್ತೀರ್ಣ, ಸುತ್ತಲಿನ ಜನವಸತಿ ಪ್ರದೇಶ, ಕುಗ್ಗುತ್ತಿರುವ ಬಫರ್‌ ವಲಯ, ಕಾಡುಗಳ ನಡುವೆ ಸಂಪರ್ಕ ಕಲ್ಪಿಸುವ ಕಾರಿಡಾರ್‌ಗಳ‌ ನಾಶವನ್ನು ಗಮನಿಸಿದರೆ, ಮುಂದಿನ ಗಣತಿಯ ವೇಳೆಗೆ ಇದೇ ಪ್ರಮಾಣದಲ್ಲಿ ಹುಲಿಗಳ ಸಂಖ್ಯೆ ಏರುತ್ತದೆ ಎನ್ನುವ ಖಾತರಿಯಿಲ್ಲ. ಅಸ್ಸಾಂನ ಕಾಜಿರಂಗ ಅಭಯಾರಣ್ಯ ಪ್ರತಿವರ್ಷ ಬ್ರಹ್ಮಪುತ್ರಾ ನದಿಯ ಅಬ್ಬರದ ನೆರೆಗೆ ತುತ್ತಾಗುತ್ತಲೇ ಇದೆ. ಈ ವಲಯದಲ್ಲಿ 135 ಹುಲಿಗಳಿವೆ. ಅಪಾರ ಪ್ರಮಾಣದಲ್ಲಿ ಆನೆ ಮತ್ತು ಘೇಂಡಾಮೃಗಗಳಿವೆ. ಈ ಪ್ರಾಣಿಗಳು ಜವಳು ಪ್ರದೇಶವನ್ನೇ ವಾಸಸ್ಥಾನ ಮಾಡಿಕೊಂಡಿವೆ. ಇಲ್ಲಿ ಒಂದು ಕಡೆ ರಾಷ್ಟ್ರೀಯ ಹೆದ್ದಾರಿಯಿದೆ. ಅದರ ಪಕ್ಕದಲ್ಲೇ ಜನವಸತಿಯಿದೆ. ಇಲ್ಲಿ ವಲಸೆ ಅತಿಕಷ್ಟ. ಇದೇ ರೀತಿ ಅತಿ ಹೆಚ್ಚು ಹುಲಿ ಸಾಂದ್ರತೆಯಿರುವ ನಾಗರಹೊಳೆ ಮತ್ತು ಬಂಡೀಪುರದ ಪಕ್ಕದಲ್ಲೇ ಜನವಸತಿ ಪ್ರದೇಶಗಳಿವೆ. ಅದೆಷ್ಟೇ ದಟ್ಟ ಅರಣ್ಯವಿದ್ದರೂ ಕಾಳಿ ಅಭಯಾರಣ್ಯದಲ್ಲಿನ ವ್ಯಾಘ್ರಗಳ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ. ಸಂರಕ್ಷಿತ ಪ್ರದೇಶದಲ್ಲೇ 52 ಗ್ರಾಮಗಳಿರುವುದು ಇದಕ್ಕೆ ಕಾರಣ ಎಂದು ವರದಿಯಲ್ಲಿ ಗುರುತಿಸಲಾಗಿದೆ.ಕರ್ನಾಟಕ, ಕೇರಳ ಮತ್ತು ತಮಿಳುನಾಡನ್ನು ಸಂಪರ್ಕಿಸುವ ನೀಲಗಿರಿ ಕಾಡುಗಳ ನಡುವೆ ಸಂಪರ್ಕ ರಸ್ತೆಗಳಿವೆ. ಇಲ್ಲಿ ವಾಣಿಜ್ಯ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಕಾವೇರಿ ಅಭಯಾರಣ್ಯ ಮತ್ತು ಮಹದೇಶ್ವರ ಬೆಟ್ಟ ಅರಣ್ಯದಲ್ಲಿ ಹುಲಿ ಸಂತತಿ ವೃದ್ಧಿಗೆ ಅವಕಾಶವಿದ್ದರೂ ಕಾಡುಗಳ ನಡುವಿನ ಸಂಪರ್ಕ ಕಾರಿಡಾರ್‌ ತುಂಡರಿಸಿದೆ. ಕೊಡಗು, ಚಿಕ್ಕಮಗಳೂರಿನ ಕಾಡುಗಳ ನಡುವೆಯೂ ರಸ್ತೆಗಳಿವೆ. ಕಾಡುಗಳ ನಡುವೆ ಸಂಪರ್ಕ ಸೇತುವಿದ್ದರೆ ಮಾತ್ರ ಕಾಡುಪ್ರಾಣಿಗಳ ವಲಸೆ ಸಾಧ್ಯ. ಸಂಪರ್ಕ ಕಾಡುಗಳ ಹೆಚ್ಚಳಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆ ರೂಪಿಸಬೇಕು. ಇಲ್ಲವಾದರೆ ವನ್ಯಜೀವಿಗಳ ಸಂಖ್ಯೆ ಅಧಿಕಗೊಂಡು ಮಾನವ– ಪ್ರಾಣಿ ಸಂಘರ್ಷ ಹೆಚ್ಚಾಗುವ ಅಪಾಯ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT