ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ಶಿಸ್ತು ಮೂಡಿಸಲುಕಠಿಣ ಕ್ರಮ ಅನಿವಾರ್ಯ

Last Updated 2 ಜುಲೈ 2019, 20:00 IST
ಅಕ್ಷರ ಗಾತ್ರ

ಸುಲಲಿತ ಸಂಚಾರಕ್ಕೆ ಮತ್ತು ಅಪಘಾತಗಳ ನಿಯಂತ್ರಣಕ್ಕೆ ಸಂಚಾರ ನಿಯಮಗಳನ್ನು ಪಾಲಿಸುವುದು ಅತ್ಯಂತ ಅಗತ್ಯ. ದುರದೃಷ್ಟದ ಸಂಗತಿಯೆಂದರೆ, ಈ ಬಗ್ಗೆ ನಮ್ಮಲ್ಲಿ ಉದಾಸೀನ ಮನೋಭಾವ ಹೆಚ್ಚುತ್ತಲೇ ಇದೆ. ಸಂಚಾರ ವ್ಯವಸ್ಥೆಯನ್ನು ಶಿಸ್ತಿಗೆ ಒಳಪಡಿಸುವುದು ತುರ್ತಾಗಿ ಆಗಬೇಕಿರುವ ಕೆಲಸ. ನಿಯಮಗಳ ಉಲ್ಲಂಘನೆಗೆ ವಿಧಿಸುವ ದಂಡದ ಮೊತ್ತವನ್ನು ರಾಜ್ಯ ಸರ್ಕಾರ ಈಗ ಭಾರಿ ಪ್ರಮಾಣದಲ್ಲಿ ಏರಿಸಿದೆ. ದಂಡದ ಮೊತ್ತ ಹೆಚ್ಚಾಯಿತು ಎಂದು ವಾಹನ ಸವಾರರಿಗೆ ಮೇಲ್ನೋಟಕ್ಕೆ ಅನ್ನಿಸಿದರೂ ವಾಹನ ದಟ್ಟಣೆ ಹೆಚ್ಚುತ್ತಿರುವ ನಮ್ಮ ಮಹಾನಗರ, ನಗರ ಹಾಗೂ ಪಟ್ಟಣಗಳಲ್ಲಿ ಸಂಚಾರ ಶಿಸ್ತು ಮೂಡಿಸಿ, ಚಾಲಕರು ಮತ್ತು ಪಾದಚಾರಿಗಳಿಗೆ ರಸ್ತೆಗಳು ಸುರಕ್ಷಿತ ಎನ್ನುವ ವಿಶ್ವಾಸ ಮೂಡಿಸುವ ದೃಷ್ಟಿಯಿಂದ ಇಂತಹದ್ದೊಂದು ಉಪಕ್ರಮ ಅಗತ್ಯವಾಗಿತ್ತು. ಇಂಟರ್‌ನ್ಯಾಷನಲ್‌ ರೋಡ್‌ ಫೆಡರೇಷನ್‌ ಪ್ರಕಾರ, ವಿಶ್ವದ ಒಟ್ಟು ರಸ್ತೆ ಅವಘಡಗಳಲ್ಲಿ ಭಾರತದ ಪಾಲು ಶೇ 11ರಷ್ಟು. ರಸ್ತೆ ಅಪಘಾತಗಳಲ್ಲಿ ಪ್ರತಿವರ್ಷ ಭಾರತದಲ್ಲಿ ಸುಮಾರು 1.5 ಲಕ್ಷ ಮಂದಿ ಸಾವಿಗೀಡಾಗುತ್ತಿದ್ದಾರೆ. ರಸ್ತೆ ಅವಘಡಗಳು ಹೆಚ್ಚು ಸಂಭವಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಪ್ರತಿವರ್ಷ ರಾಜ್ಯದಲ್ಲಿ ಸುಮಾರು 10 ಸಾವಿರ ಅಪಘಾತಗಳಾಗುತ್ತಿವೆ. ಕಳೆದ ವರ್ಷ ಬೆಂಗಳೂರು ನಗರ ಒಂದರಲ್ಲೇ 684 ಮಂದಿ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದರು. ಅವರಲ್ಲಿ ಪಾದಚಾರಿಗಳ ಪ್ರಮಾಣ ಶೇ 40ರಷ್ಟು. ಬಹುಪಾಲು ಮಂದಿ ರಸ್ತೆ ದಾಟುವಾಗ ದುರ್ಮರಣಕ್ಕೆ ಈಡಾದವರು. ಈ ಎಲ್ಲ ಅಂಕಿ ಅಂಶಗಳು ಆತಂಕ ಮೂಡಿಸುವುದರ ಜೊತೆಗೆ ದಂಡದ ಮೊತ್ತ ಹೆಚ್ಚಿಸಬೇಕಾದ ಅಗತ್ಯವನ್ನು ಸಾರಿ ಹೇಳುತ್ತವೆ. ದಂಡ ಹೆಚ್ಚಿಸುವ ಒಂದೇ ಕ್ರಮದಿಂದ ನಿಯಮ ಉಲ್ಲಂಘನೆಯನ್ನು ತಡೆಯಲಾಗದು. ಆದರೆ ಅದೂ ಒಂದು ಅಗತ್ಯ ಕ್ರಮ. ಸಂಚಾರ ನಿಯಮಗಳ ಅನುಷ್ಠಾನಕ್ಕೆ ಪೊಲೀಸರು ಎಂತಹ ಬಿಗಿ ಮತ್ತು ‍ಪ್ರಾಮಾಣಿಕ ಕ್ರಮ ಜರುಗಿಸುತ್ತಾರೆ ಎಂಬುದರ ಮೇಲೆ ಇದರ ಯಶಸ್ಸು ಅಡಗಿದೆ. ಸಂಚಾರ ನಿಯಮಗಳ ಬಗ್ಗೆ ಚಾಲಕರು ಸ್ವತಃ ಶಿಸ್ತು ಮತ್ತು ಪ್ರಜ್ಞೆ ಬೆಳೆಸಿಕೊಳ್ಳದೇ ಇದ್ದರೆ ಅಪಘಾತಗಳ ಪ್ರಮಾಣದಲ್ಲಿ ಇಳಿಕೆ ಆಗದು. ಆದರೆ ಸದ್ಯಕ್ಕೆ ಇವುಗಳ ಕೊರತೆಯಂತೂ ಎದ್ದು ಕಾಣುತ್ತಿದೆ.ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದಾಗ, ಭಾರಿ ಮೊತ್ತದ ದಂಡ ತೆರುವ ಬದಲು ಪೊಲೀಸರ ಜೊತೆ ಒಳವ್ಯವಹಾರ ಕುದುರಿಸಲು ಚಾಲಕರು ಯತ್ನಿಸಬಹುದು. ಇದರಿಂದಾಗಿ ಭ್ರಷ್ಟಾಚಾರ ಇನ್ನಷ್ಟು ಹೆಚ್ಚಬಹುದು ಎಂಬ ಕಳವಳ ಇದೆ. ಇಂತಹ ಕಳವಳಕ್ಕೆ ಅವಕಾಶ ಇಲ್ಲ ಎಂಬುದನ್ನು ಸಂಚಾರ ಪೊಲೀಸರು ತಮ್ಮ ನಡವಳಿಕೆ ಮೂಲಕ ತೋರಿಸಬೇಕಿದೆ.

ವಾಹನ ನಿಲುಗಡೆಗೆ ಅವಕಾಶ ಇಲ್ಲದ ಕಡೆ ವಾಹನ ನಿಲ್ಲಿಸಿದರೆ ವಿಧಿಸುವ ದಂಡದ ಪ್ರಮಾಣವನ್ನು ಹತ್ತು ಪಟ್ಟು ಹೆಚ್ಚಿಸಿರುವುದು ಹಲವು ವಾಹನ ಚಾಲಕರ ಆಕ್ರೋಶಕ್ಕೆ ಕಾರಣವಾಗಿ ರುವುದು ಸಹಜ. ಬೆಂಗಳೂರಿನಂತಹ ನಗರದಲ್ಲಿ ವಾಹನ ನಿಲುಗಡೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ.ಬಹುತೇಕ ರಸ್ತೆಗಳಲ್ಲಿ ಪೊಲೀಸರು ‘ನೋ ಪಾರ್ಕಿಂಗ್‌’ ಫಲಕ ಅಳವಡಿಸಿದ್ದಾರೆ. ವಾಹನಗಳ ಸಂಖ್ಯೆಗೂ ನಿಲುಗಡೆಗೆ ಸೂಚಿತವಾಗಿರುವ ಸ್ಥಳಾವಕಾಶಕ್ಕೂ ತಾಳಮೇಳ ಎಂಬುದೇ ಇಲ್ಲ.ವಾಹನ ನಿಲುಗಡೆಗೆ ಸಮರ್ಪಕ ವ್ಯವಸ್ಥೆ ಮಾಡದೇ ದುಬಾರಿ ದಂಡ ವಿಧಿಸುವ ನಿಲುವು ನ್ಯಾಯಸಮ್ಮತವಲ್ಲ ಎಂಬ ವಾದದಲ್ಲಿ ಹುರುಳಿಲ್ಲದೇ ಇಲ್ಲ. ವಾಹನ ನಿಲುಗಡೆಗೆ ಸ್ಥಳಾವಕಾಶ ಬೇಕು ಎಂಬ ಪರಿಜ್ಞಾನವೇ ನಮ್ಮ ಸ್ಥಳೀಯ ನಗರಾಡಳಿತಗಳಿಗೆ ಇದ್ದಂತೆ ತೋರುತ್ತಿಲ್ಲ. ಖಾಲಿ ಬಿದ್ದಿರುವ ಸರ್ಕಾರಿ ಜಾಗಗಳನ್ನು ಪಾರ್ಕಿಂಗ್‌ ವಲಯಗಳನ್ನಾಗಿ ರೂಪಿಸುವಂತೆ ಪೊಲೀಸ್‌ ಇಲಾಖೆ ಕಳುಹಿಸಿರುವ ಪ್ರಸ್ತಾವಕ್ಕೆ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ ಇನ್ನೂ ಸ್ಪಂದಿಸದೇ ಇರುವುದು ಇದಕ್ಕೊಂದು ನಿದರ್ಶನ. ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ಏರುತ್ತಲೇ ಇವೆ. ಇವುಗಳನ್ನು ದಂಡದ ಮೂಲಕವೇ ನಿಯಂತ್ರಿಸಬಹುದು ಎನ್ನುವುದು ಕಷ್ಟಸಾಧ್ಯದ ಮಾತು. ಇಂತಿಷ್ಟು ಗಂಟೆಗಳ ಕಾಲ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವಂಥ ಶ್ರಮದಾನದ ಶಿಕ್ಷೆ ಮತ್ತು ಕೆಲವು ಗಂಭೀರ ತಪ್ಪುಗಳಿಗೆ ಮತ್ತಷ್ಟು ಕಠಿಣವಾದ ನಿರ್ದಿಷ್ಟ ಶಿಕ್ಷೆ ವಿಧಿಸುವಂತಾಗಲು ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಬೇಕಾಗಿದೆ. ಕೆಲವು ರಾಷ್ಟ್ರಗಳಲ್ಲಿ ಇಂಥ ಕ್ರಮಗಳು ಈಗಾಗಲೇ ಜಾರಿಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT