ಭಾನುವಾರ, ಜನವರಿ 26, 2020
31 °C

ನುಡಿಜಾತ್ರೆಗೆ ರಕ್ಷಣೆ ಕೊಡದಸರ್ಕಾರದ ನಡೆ ಸರಿಯಲ್ಲ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನವು ಆಡಳಿತಾರೂಢರ ಅಸಹಕಾರ ಮತ್ತು ಅಸಹನೆಯ ಕಾರಣಕ್ಕೆ ಮೊದಲ ದಿನವೇ ಮೊಟಕುಗೊಳ್ಳುವಂತಾಗಿದ್ದು ದುರದೃಷ್ಟಕರ. ಎರಡು ದಿನಗಳಿಗೆ ನಿಗದಿಯಾಗಿದ್ದ ಸಮ್ಮೇಳನವು ಶೃಂಗೇರಿಯಲ್ಲಿ ಶುಕ್ರವಾರ ಉದ್ಘಾಟನೆಗೊಂಡು, ಪ್ರತಿರೋಧದ ಮಧ್ಯೆಯೇ ಮೊದಲ ದಿನ ಉತ್ಸಾಹದಿಂದ ಜರುಗಿತು. ಆದರೆ, ಎರಡನೇ ದಿನ ಕಾರ್ಯಕ್ರಮ ಮುಂದುವರಿಸಿದರೆ ವಿರೋಧಿಗಳಿಂದ ಹಿಂಸಾತ್ಮಕ ಪ್ರತಿರೋಧ ಎದುರಾಗುವ ಸಾಧ್ಯತೆ ಇದ್ದು, ಆ ರೀತಿಯ ಅಹಿತಕರ ಘಟನೆ ನಡೆದರೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಸಂಘಟಕರಿಗೆ ಪೊಲೀಸರು ಸೂಚನೆ ನೀಡಿದ್ದಾರೆ. ಇದರಿಂದಾಗಿ ಎರಡನೇ ದಿನದ ಕಾರ್ಯಕ್ರಮವನ್ನು ಸ್ವಾಗತ ಸಮಿತಿಯು ಮುಂದೂಡಿದೆ.

ರಕ್ಷಣೆ ಕೊಡಬೇಕಾದ ಪೊಲೀಸರೇ ಕೈಚೆಲ್ಲಿರುವುದು ಮತ್ತು ಅದರಿಂದಾಗಿ ನಾಡು–ನುಡಿಯ ಸಂಭ್ರಮಕ್ಕೆ ಬಲವಂತದ ತೆರೆ ಬಿದ್ದಿರುವುದು ರಾಜ್ಯದ ಕಾನೂನು–ಸುವ್ಯವಸ್ಥೆಯ ಬಗ್ಗೆಯೇ ಸಂಶಯ ಮೂಡುವಂತೆ ಮಾಡಿದೆ. ಈ ಜಿಲ್ಲಾ ಸಮ್ಮೇಳನಕ್ಕೆ ನಾನಾ ಅಡೆತಡೆಗಳನ್ನು ಒಡ್ಡುವ ಯತ್ನಗಳು ಆಳುವ ಪಕ್ಷದ ಬೆಂಬಲಿಗರಿಂದ ಆರಂಭದಿಂದಲೂ ನಡೆದವು. ಪ್ರತಿಭಟನೆ, ಬಂದ್‌ ಕರೆ ಹಾಗೂ ಸಮ್ಮೇಳನ ಮುಂದೂಡುವಂತೆ ಪೊಲೀಸರಿಂದಲೇ ಸೂಚನೆ ಕೊಡಿಸುವ ಮೂಲಕ ಸಮ್ಮೇಳನಕ್ಕೆ ತಡೆಯೊಡ್ಡಲು ಯತ್ನಿಸಿದ್ದೂ ನಡೆಯಿತು.

ಕಲ್ಕುಳಿ ವಿಠಲ ಹೆಗ್ಡೆ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿಯೇ ಆಯ್ಕೆ ಮಾಡಿತ್ತು. ‘ನಕ್ಸಲ್‌ ಚಳವಳಿಯನ್ನು ವಿಠಲ ಹೆಗ್ಡೆ ಬೆಂಬಲಿಸಿದ್ದಾರೆ, ಅವರನ್ನು ಬದಲಾಯಿಸದಿದ್ದರೆ ಸಮ್ಮೇಳನ ನಡೆಯಗೊಡುವುದಿಲ್ಲ’ ಎಂಬ ವಿರೋಧಿಗಳ ಎಚ್ಚರಿಕೆಗೆ ಸಾಹಿತ್ಯಾಸಕ್ತರು ಸೊಪ್ಪು ಹಾಕದೆ ಮೊದಲ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಚಿಕ್ಕಮಗಳೂರಿನವರೇ ಆದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಮುತ್ಸದ್ದಿತನ ತೋರಿದ್ದರೆ ಆರಂಭದಲ್ಲೇ ಈ ವಿವಾದ ಬಗೆಹರಿಯುತ್ತಿತ್ತು. ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವರಾಗಿ ಅದು ಅವರ ಹೊಣೆಗಾರಿಕೆಯೂ ಆಗಿತ್ತು. ಆದರೆ ಅವರೇ ಖುದ್ದಾಗಿ ಅಧ್ಯಕ್ಷರ ಆಯ್ಕೆಯನ್ನು ವಿರೋಧಿಸಿ, ತಮ್ಮ ಬೆಂಬಲಿಗರ ಪ್ರತಿಭಟನೆಗೆ ಕುಮ್ಮಕ್ಕು ನೀಡಿದ್ದು ಒಪ್ಪತಕ್ಕ ನಡೆಯಲ್ಲ.

ಸಾಹಿತಿಯೊಬ್ಬರ ಸೈದ್ಧಾಂತಿಕ ನಿಲುವಿನ ಬಗ್ಗೆ ಭಿನ್ನಮತ ಇದ್ದರೆ ಅದರ ಬಗ್ಗೆ ಸಾಹಿತ್ಯದ ವೇದಿಕೆಯ ಮೇಲೆಯೇ ಸಂಯಮದಿಂದ ಚರ್ಚೆ ನಡೆಸಬಹುದಿತ್ತು. ಅದನ್ನು ಬಿಟ್ಟು ಸಮ್ಮೇಳನ ನಡೆಯಲೇಬಾರದು ಎಂಬಂತೆ ವರ್ತಿಸಿದ್ದು ಖಂಡನೀಯ. ಸಮ್ಮೇಳನಕ್ಕೆ ನೀಡಬೇಕಾಗಿದ್ದ ಅನುದಾನವನ್ನು ಸಚಿವರ ಸೂಚನೆಯ ಮೇರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ತಡೆಹಿಡಿದಿತ್ತು. ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಕೊಡುವ ಒಒಡಿ ಸೌಲಭ್ಯವನ್ನೂ ಶಿಕ್ಷಣ ಇಲಾಖೆ ರದ್ದು ಮಾಡಿತ್ತು. ಸರ್ಕಾರವೇ ಮುಂದೆ ನಿಂತು ಇಷ್ಟೆಲ್ಲ ಬಗೆಯಲ್ಲಿ ತಡೆಯೊಡ್ಡಿದರೂ ಕನ್ನಡ ಸಾಹಿತ್ಯಾಸಕ್ತರು ಸಮ್ಮೇಳನದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದು ಗಮನಾರ್ಹ. ಅನುದಾನ ತಡೆಹಿಡಿದ ಹಿನ್ನೆಲೆಯಲ್ಲಿ ಜನರಿಂದಲೇ ಹಣ ಸಂಗ್ರಹಿಸಿ ಸಮ್ಮೇಳನವನ್ನು ಸಂಘಟಿಸಲಾಗಿತ್ತು.

ಸಾಹಿತ್ಯ ಮತ್ತು ಸಂಸ್ಕೃತಿಯ ಮೇಳಗಳಲ್ಲಿ ಸರ್ಕಾರವಾಗಲೀ ಯಾವುದೇ ರಾಜಕೀಯ ಪಕ್ಷವಾಗಲೀ ಹಸ್ತಕ್ಷೇಪ ನಡೆಸುವುದು ಎಳ್ಳಷ್ಟೂ ಸರಿಯಲ್ಲ. ಭಾಷೆ– ಸಾಹಿತ್ಯದ ಬೆಳವಣಿಗೆಗೆ ಹಾಗೂ ಕಲೆ– ಸಂಸ್ಕೃತಿಯ ಪೋಷಣೆಗೆ ಪೂರಕವಾದ ಸೌಲಭ್ಯಗಳನ್ನು ಒದಗಿಸಿಕೊಡುವುದಷ್ಟೇ ಸರ್ಕಾರದ ಕೆಲಸ. ಅದನ್ನು ಬಿಟ್ಟು ಇಂಥವರನ್ನೇ ಅಧ್ಯಕ್ಷರನ್ನಾಗಿ ಮಾಡಿ, ಇಂತಹವರಿಗೇ ಪ್ರಶಸ್ತಿ ಕೊಡಿ ಎಂದು ಫರ್ಮಾನು ಹೊರಡಿಸುವುದು ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನಷ್ಟೇ ತೋರುತ್ತದೆ. ಈ ಮಧ್ಯೆ, ರಾಮನಗರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವಿಚಾರವಾದಿ ಪ್ರೊ. ಶಿವನಂಜಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಈ ಆಯ್ಕೆ ಸರಿ ಇಲ್ಲ ಎಂದು ಹಿಂದೂ ಜಾಗರಣ ವೇದಿಕೆಯ ಸದಸ್ಯರು ಸಚಿವರಿಗೆ ಮೊರೆ ಇಟ್ಟಿರುವುದು ವರದಿಯಾಗಿದೆ.

ಶೃಂಗೇರಿ ಸಮ್ಮೇಳನದ ವಿಚಾರದಲ್ಲಿ ಎಡವಿದಂತೆ ರಾಮನಗರ ಸಮ್ಮೇಳನದ ವಿಚಾರದಲ್ಲಿ ಸರ್ಕಾರ ಮತ್ತೆ ಎಡವಿಬೀಳುವುದು ಬೇಡ. ಸ್ವಾಯತ್ತ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯಿಕ ಸ್ವರೂಪಕ್ಕೆ ಧಕ್ಕೆ ತರುವ ಕೆಲಸವನ್ನು ಯಾರೇ ಮಾಡಿದರೂ ಅದು ಅಕ್ಷಮ್ಯ. ಅಧಿಕಾರಸ್ಥರ ಒತ್ತಡಕ್ಕೆ ತಲೆಬಾಗದೆ ಕಾರ್ಯನಿರ್ವಹಿಸುವುದನ್ನು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಕೂಡ ರೂಢಿಸಿಕೊಳ್ಳಬೇಕು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು