ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐ ಗವರ್ನರ್ ಪದತ್ಯಾಗ ಎಚ್ಚರಿಕೆಯ ಪಾಠವಾಗಲಿ

Last Updated 12 ಡಿಸೆಂಬರ್ 2018, 19:38 IST
ಅಕ್ಷರ ಗಾತ್ರ

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಹುದ್ದೆಯಿಂದ ಉರ್ಜಿತ್‌ ಪಟೇಲ್‌ ಅವರ ಹಠಾತ್‌ ನಿರ್ಗಮನವು ಆಘಾತಕಾರಿಯಷ್ಟೇ ಅಲ್ಲ, ಕೇಂದ್ರ ಸರ್ಕಾರದ ಪಾಲಿಗೆ ತೀವ್ರ ಮುಜುಗರ ಉಂಟುಮಾಡುವ ವಿದ್ಯಮಾನವೂ ಆಗಿದೆ. ತಮ್ಮ ಈ ನಿರ್ಧಾರಕ್ಕೆ ಉರ್ಜಿತ್‌ ಅವರು ವೈಯಕ್ತಿಕ ಕಾರಣಗಳನ್ನು ನೀಡಿದ್ದರೂ ಇತ್ತೀಚಿನ ಬೆಳವಣಿಗೆಗಳನ್ನು ಪರಿಗಣಿಸಿದರೆ ಇದಕ್ಕೆ ಬೇರೆ ಆಯಾಮಗಳೂ ಇರುವುದು ಸ್ಪಷ್ಟ.

ಪ್ರತಿಭಟನಾ ಸ್ವರೂಪದ ರಾಜೀನಾಮೆ ಎಂದೇ ಇದನ್ನು ಅರ್ಥೈಸಬೇಕಾಗುತ್ತದೆ. ದೇಶದ ಅತ್ಯುನ್ನತ ಸಂಸ್ಥೆಯ ವಿಶ್ವಾಸಾರ್ಹತೆ, ಘನತೆ ಮತ್ತು ಸ್ವಾಯತ್ತತೆಗೆ ಧಕ್ಕೆ ತರುವ ಕೇಂದ್ರ ಸರ್ಕಾರದ ಪ್ರಯತ್ನಗಳು ಅಸಹನೆಯ ಮಟ್ಟಕ್ಕೆ ತಲುಪಿರುವುದೂ ಇದರಿಂದ ಸಾಬೀತಾಗುತ್ತದೆ. ಪಟೇಲ್‌ ಅವರ ಕಾರ್ಯದಕ್ಷತೆ ಬಗ್ಗೆ ಶ್ಲಾಘನೆಯ ಮಾತುಗಳನ್ನಾಡಿರುವ ಸರ್ಕಾರದ ನೇತಾರರು, ಈ ಮುಜುಗರದಿಂದ ಮುಖ ಉಳಿಸಿಕೊಳ್ಳಲು ಯತ್ನಿಸಿದ್ದಾರೆ.

ಸ್ವಾಯತ್ತ ಸಂಸ್ಥೆಯ ಪ್ರತಿಷ್ಠೆಗೆ ಕುಂದು ಉಂಟಾಗಿರುವುದನ್ನು ಇದರಿಂದಷ್ಟೇ ಅಳಿಸಲು ಸಾಧ್ಯವಾಗಲಾರದು. ಆರ್‌ಬಿಐನ ಮಾಜಿ ಗವರ್ನರ್‌ ರಘುರಾಂ ರಾಜನ್‌, ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್‌ ಪನಗರಿಯಾ, ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಅವರು ಕ್ರಮಿಸಿದ ಹಾದಿಯನ್ನೇ ಉರ್ಜಿತ್‌ ತುಳಿದಿದ್ದಾರೆ. ಪ್ರತಿಭಾನ್ವಿತ ಸಮರ್ಥ ಆರ್ಥಿಕ ಕಾವಲುಗಾರರನ್ನು ಸರ್ಕಾರ ಗೌರವದಿಂದ ನಡೆಸಿಕೊಳ್ಳುತ್ತಿಲ್ಲ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತದೆ. ಅಂಥವರನ್ನು ಉಳಿಸಿಕೊಳ್ಳಲು ಯಾವುದೇ ಪ್ರಯತ್ನವನ್ನೂ ಮಾಡುತ್ತಿಲ್ಲ. ಇದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ.

ಪಟೇಲ್‌ ಮಿತಭಾಷಿ, ಎಲ್ಲರನ್ನೂ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ ಎನ್ನುವ ಟೀಕೆಗಳಿದ್ದರೂ ದೇಶಿ ಆರ್ಥಿಕತೆ ಬಗೆಗಿನ ಅವರ ಅಪಾರ ಜ್ಞಾನ, ಹಣಕಾಸು ಮತ್ತು ಬ್ಯಾಂಕಿಂಗ್‌ ಕ್ಷೇತ್ರದಲ್ಲಿನ ಹುಳುಕುಗಳನ್ನು ಸರಿಪಡಿಸುವ ಕಾಳಜಿ ಕುರಿತು ಎರಡು ಮಾತಿಲ್ಲ. ಆರ್‌ಬಿಐ ಅನ್ನು ತನ್ನ ಆಣತಿಯಂತೆ ಕುಣಿಸಲು ಹೊರಟಿದ್ದ ಕೇಂದ್ರದ ಯಜಮಾನಿಕೆ ಧೋರಣೆಗೆ ಸೊಪ್ಪು ಹಾಕದ ಸ್ವಾಭಿಮಾನಿ ಪಟೇಲ್‌, ಘನತೆಯಿಂದಲೇ ಹೊರನಡೆದಿದ್ದಾರೆ.

ಲೋಕಸಭಾ ಚುನಾವಣೆ ಮುನ್ನ ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೆ ತರುವ ಸರ್ಕಾರದ ಒತ್ತಡವನ್ನು ಪಟೇಲ್‌ ಸಮರ್ಥವಾಗಿ ನಿಭಾಯಿಸಿದ್ದರು. ಆದರೆ, ಅದಕ್ಕಾಗಿ ಬೆಲೆ ತೆರಬೇಕಾಗಿ ಬಂದದ್ದು ದೊಡ್ಡ ವಿಪರ್ಯಾಸವೇ ಸೈ. ಇದನ್ನು ತಪ್ಪಿಸಬಹುದಾಗಿತ್ತು. ಸರ್ಕಾರ ಮತ್ತು ಗವರ್ನರ್‌ ಮಧ್ಯೆ ಕಾರ್ಯಸಾಧ್ಯವಾದ ಸಂಬಂಧ ಇರಬೇಕಾಗಿತ್ತು. ಪಟೇಲ್‌ ಅವರ ಪದತ್ಯಾಗವು ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತಕ್ಕೆ ದೊಡ್ಡ ಸಂಗತಿಯೇನೂ ಅಲ್ಲ ಎಂದು ಈ ಬೆಳವಣಿಗೆಯನ್ನು ನಿರ್ಲಕ್ಷಿಸುವುದೂ ಸರಿಯಲ್ಲ. ಇದು ವ್ಯಕ್ತಿಯೊಬ್ಬರ ನಿರ್ಗಮನ ಮಾತ್ರವಲ್ಲ, ಸಾಂಸ್ಥಿಕ ಅಸಮತೋಲನದ ಫಲಶ್ರುತಿ ಎಂದು ಪರಿಗಣಿಸಿದರೆ ಇದರ ಗಂಭೀರತೆ ಅರಿವಾಗುತ್ತದೆ. ಈ ಸೂಕ್ಷ್ಮಸಂಗತಿಯನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಬೇಕಾಗಿದೆ.

ಹಣಕಾಸಿನ ವಿಷಯಗಳು ಮತ್ತು ಬ್ಯಾಂಕ್‌ಗಳ ನಿಯಂತ್ರಣಕ್ಕೆ ಅದರದ್ದೇ ವೈಶಿಷ್ಟ್ಯ ಇರುತ್ತದೆ. ಈ ಕಾರಣಕ್ಕೆ ಸರ್ಕಾರ ಮತ್ತು ಆರ್‌ಬಿಐ ನಡುವಣ ಸಂಬಂಧದಲ್ಲಿ ಬಿರುಕುಗಳಿರುವುದು ಸಮರ್ಥನೀಯವಲ್ಲ. ಆರ್‌ಬಿಐನ ಸ್ವಾಯತ್ತತೆಯಲ್ಲಿ ಮೂಗು ತೂರಿಸುವುದು ಸದ್ಯದ ಜಾಗತೀಕರಣದ ಸಂದರ್ಭದಲ್ಲಿ ಅಪೇಕ್ಷಣೀಯವೂ ಅಲ್ಲ. ನಿವೃತ್ತ ಸರ್ಕಾರಿ ಅಧಿಕಾರಿ ಶಕ್ತಿಕಾಂತ್‌ ದಾಸ್ ಅವರನ್ನು, ಪಟೇಲ್‌ ಉತ್ತರಾಧಿಕಾರಿಯನ್ನಾಗಿ ನೇಮಿಸಿರುವುದೂ ಚರ್ಚಾಸ್ಪದ.

ಆರ್ಥಿಕ ತಜ್ಞರು ಇರಬೇಕಾದ ಕಡೆ ಅಧಿಕಾರಶಾಹಿಯ ಮನಸ್ಥಿತಿಯವರನ್ನು ನೇಮಿಸಿದರೆ ಅವರು ‘ಹೌದಪ್ಪ’ಗಳಾಗಿ ತಮ್ಮ ಹುದ್ದೆಗೆ ನ್ಯಾಯ ಒದಗಿಸುವುದಿಲ್ಲ. ಸಂಸ್ಥೆಯ ಪ್ರತಿಷ್ಠೆ ಕಾಪಾಡಲು ಗಮನ ಕೊಡುವುದೂ ಇಲ್ಲ ಎನ್ನುವುದು ಕಟು ವಾಸ್ತವ. ಆರ್‌ಬಿಐನ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ ಕುರಿತು ಶಕ್ತಿಕಾಂತ್‌ ದಾಸ್‌ ಅವರ ಗ್ರಹಿಕೆ ಆಧರಿಸಿ ಅವರ ಮುಂದಿನ ನಡೆ ಇರಲಿದೆ. ಆರ್‌ಬಿಐ ಕೂಡ ತನ್ನ ಇನ್ನೊಂದು ಇಲಾಖೆ ಎಂದು ಸರ್ಕಾರ ಪರಿಗಣಿಸಬಾರದಷ್ಟೆ. ಆರ್‌ಬಿಐನ ಸ್ವಾಯತ್ತತೆಗೆ ಧಕ್ಕೆ ತರುವ ಪ್ರಯತ್ನವನ್ನು ಸರ್ಕಾರ ಮಾಡದಿರಲಿ. ಸ್ವಯಂಕೃತಾಪರಾಧದ ಈ ಬಿಕ್ಕಟ್ಟನ್ನು ಕೇಂದ್ರ ಸರ್ಕಾರವು ಹೇಗೆ ನಿಭಾಯಿಸಲಿದೆ ಎನ್ನುವುದನ್ನು ಜಾಗತಿಕ ಹೂಡಿಕೆದಾರರು, ಮಾನದಂಡ ನಿಗದಿ ಮಾಡುವ ಸಂಸ್ಥೆಗಳು ಕುತೂಹಲದಿಂದ ಗಮನಿಸುತ್ತಿವೆ ಎನ್ನುವುದನ್ನು ಸರ್ಕಾರ ಮರೆಯದಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT