ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ವಿಶೇಷ ಸ್ಥಾನ ರದ್ದತಿ ಕ್ರಮ ಎತ್ತಿಹಿಡಿದ ಸುಪ್ರೀಂ– ಕೇಂದ್ರದ ಮೇಲುಗೈ

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ವಿಚಾರ
Published 12 ಡಿಸೆಂಬರ್ 2023, 19:26 IST
Last Updated 12 ಡಿಸೆಂಬರ್ 2023, 19:26 IST
ಅಕ್ಷರ ಗಾತ್ರ

ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಿ 2019ರ ಆಗಸ್ಟ್‌ 5ರಂದು ಕೈಗೊಂಡಿದ್ದ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಎತ್ತಿಹಿಡಿದಿದೆ. ಇದರೊಂದಿಗೆ, ಈ ವಿಚಾರಕ್ಕೆ ಸಂಬಂಧಿಸಿದ ಕಾನೂನು ಮತ್ತು ಸಾಂವಿಧಾನಿಕ ವಾಗ್ವಾದವು ಕೊನೆಗೊಂಡಂತಾಗಿದೆ.

ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರವು ಸರಿಯಾಗಿದೆ ಮಾತ್ರವಲ್ಲ, ಅದಕ್ಕೆ ಅನುಸರಿಸಿದ್ದ ಪ್ರಕ್ರಿಯೆ ಮತ್ತು ವಿಧಾನ ಕೂಡ ಸರಿಯಾಗಿಯೇ ಇದೆ ಎಂದು, ಐವರು ನ್ಯಾಯಮೂರ್ತಿಗಳಿದ್ದ ಸಂವಿಧಾನ ಪೀಠ ಹೇಳಿದೆ. ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರದ ಬಗ್ಗೆ ಒಂದು ಪ್ರಮುಖ ಟೀಕೆ ಇತ್ತು. ಅದೆಂದರೆ, ಈ ನಿರ್ಧಾರ ಕೈಗೊಳ್ಳಲು ಅನುಸರಿಸಿದ ಪ್ರಕ್ರಿಯೆಯು ತಪ್ಪು ಮತ್ತು ಲೋಪದಿಂದ ಕೂಡಿತ್ತು ಎಂಬುದು. ಸರ್ಕಾರದ ನಿರ್ಧಾರದೊಂದಿಗೆ ಸಹಮತ ಇದ್ದವರು ಕೂಡ ಈ ಅಂಶವನ್ನು ಎತ್ತಿದ್ದರು.

ರಾಜ್ಯ ವಿಧಾನಸಭೆಯ ಅನುಪಸ್ಥಿತಿಯಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರವು ರಾಷ್ಟ್ರಪತಿ ಮತ್ತು ಸಂಸತ್ತಿಗೆ ಇದೆ ಎಂದು ಕೋರ್ಟ್‌ ಹೇಳುವ ಮೂಲಕ ಈ ಟೀಕೆಯನ್ನು ತಿರಸ್ಕರಿಸಿದೆ. ಈ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಮುನ್ನವೇ 356ನೇ ವಿಧಿಯ ಅಡಿಯಲ್ಲಿ ಜಮ್ಮು–ಕಾಶ್ಮೀರ ವಿಧಾನ ಸಭೆಯನ್ನು ವಿಸರ್ಜನೆ ಮಾಡಲಾಗಿತ್ತು. 

ಜಮ್ಮು ಮತ್ತು ಕಾಶ್ಮೀರವನ್ನು ಭಾರತದಲ್ಲಿ ವಿಲೀನಗೊಳಿಸಿದ ಸಂದರ್ಭದಲ್ಲಿ ಇತರ ರಾಜ್ಯಗಳಿಗೆ ಇಲ್ಲದ ಯಾವುದೇ ಸಾರ್ವಭೌಮತ್ವ ಆ ರಾಜ್ಯಕ್ಕೆ ಇರಲಿಲ್ಲ ಎಂಬುದು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಇರುವ ಮಹತ್ವದ ಅಂಶವಾಗಿದೆ. ಈ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ಕೊಟ್ಟ 370ನೇ ವಿಧಿಯು ಶಾಶ್ವತವಲ್ಲ ಎಂದೂ ಸಂವಿಧಾನ ಪೀಠ ಹೇಳಿದೆ.

ಇದು ತಾತ್ಕಾಲಿಕ ಮತ್ತು ಅಲ್ಪಕಾಲಕ್ಕೆ ಮಾತ್ರ ಅನ್ವಯವಾಗುವ ಅವಕಾಶವಾಗಿದೆ. ರಾಷ್ಟ್ರಪತಿ ಆಳ್ವಿಕೆಯು ಘೋಷಣೆಯಾದ ಬಳಿಕ ರಾಷ್ಟ್ರಪತಿ ಅವರ ಅಧಿಕಾರಗಳು ಮತ್ತು ಅವರು ಕೈಗೊಳ್ಳಬಹುದಾದ ಕ್ರಮಗಳಿಗೆ ಮಿತಿ ಇಲ್ಲ ಎಂದೂ ನ್ಯಾಯಾಲಯ ಹೇಳಿದೆ. ಜಮ್ಮು–ಕಾಶ್ಮೀರ ಸಂವಿಧಾನ ರಚನಾ ಸಭೆಯು 1957ರಲ್ಲಿಯೇ ರದ್ದಾಗಿದ್ದರೂ 370ನೇ ವಿಧಿಯ ಅಡಿಯಲ್ಲಿ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಅಧಿಕಾರವು ರಾಷ್ಟ್ರಪತಿಯವರಿಗೆ ಇದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಸಂವಿಧಾನ ರಚನಾ ಸಭೆಯ ಅನುಪಸ್ಥಿತಿಯಲ್ಲಿ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಲು ಅವಕಾಶ ಇಲ್ಲ ಎಂಬುದು ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿದವರ ವಾದದ ಮುಖ್ಯ ಭಾಗವಾಗಿತ್ತು. ರಾಜ್ಯದ ಸಂವಿಧಾನ ರಚನಾ ಸಭೆಯು ಬರ್ಖಾಸ್ತುಗೊಂಡ ಬಳಿಕ ರಾಷ್ಟ್ರಪತಿಯವರಿಗೆ ಈ ಅಧಿಕಾರ ಇಲ್ಲ ಎಂದರೆ ಅದು ವಿಲೀನ ಪ್ರಕ್ರಿಯೆಯೇ ಸ್ಥಗಿತಗೊಳ್ಳುವುದಕ್ಕೆ ಕಾರಣವಾಗಬಹುದು, ಇದು ವಿಲೀನದ ಮೂಲ ಉದ್ದೇಶಕ್ಕೆ ವಿರುದ್ಧವಾಗುತ್ತದೆ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

ಜಮ್ಮು–ಕಾಶ್ಮೀರವನ್ನು ಕೇಂದ್ರ ಆಡಳಿತದ ಎರಡು ಪ್ರದೇಶಗಳಾಗಿ ವಿಭಜನೆ ಮಾಡಿರುವುದು ಸಿಂಧು. ಆದರೆ, ಜಮ್ಮು–ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಸಾಧ್ಯವಾದಷ್ಟು ಬೇಗ ಮರುಸ್ಥಾಪಿಸಬೇಕು ಎಂದು ಕೋರ್ಟ್‌ ಹೇಳಿದೆ. ಈ ಕೆಲಸ ತ್ವರಿತವಾಗಿ ಆಗಬೇಕು.

ಶಾಂತಿ–ಸುವ್ಯವಸ್ಥೆಯಂತಹ ಕಾರಣವನ್ನು ಕೊಟ್ಟು ಮುಂದೂಡಬಾರದು. 2024ರ ಸೆಪ್ಟೆಂಬರ್‌ 30ರೊಳಗೆ ಅಲ್ಲಿ ಚುನಾವಣೆ ನಡೆಸಬೇಕು ಎಂದೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲಾಗಿದೆ. ರಾಜ್ಯವೊಂದರ ಸ್ಥಾನಮಾನ ಬದಲಾವಣೆಯ ಅಧಿಕಾರವು ಕೇಂದ್ರ ಸರ್ಕಾರಕ್ಕೆ ಇದೆ ಎಂಬುದನ್ನು ನ್ಯಾಯಾಲಯವು ಒಪ್ಪಿಕೊಂಡಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.

ಜಮ್ಮು–ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಲಾಗುವುದು ಎಂದು ಕೇಂದ್ರ ಸರ್ಕಾರವು ಭರವಸೆ ನೀಡಿರುವುದರಿಂದ ಜಮ್ಮು–ಕಾಶ್ಮೀರ ಪುನರ್‌ರಚನೆ ಕಾಯ್ದೆಯನ್ನು ಪರಿಶೀಲನೆಗೆ ಒಳಪಡಿಸುವ ಅಗತ್ಯ ಇಲ್ಲ ಎಂದು ಕೋರ್ಟ್‌ ಹೇಳಿದೆ. 356ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಯವರು ಹೊಂದಿರುವ ಅಧಿಕಾರಗಳ ಕುರಿತು ಹೊಸ ಹೊಳಹುಗಳನ್ನು ಈ ತೀರ್ಪು ಕೊಡಬಹುದು.

ಸತ್ಯಶೋಧನೆ ಮತ್ತು ಸಾಮರಸ್ಯ ಆಯೋಗವೊಂದನ್ನು ರಚಿಸಬೇಕು ಎಂದು ತೀರ್ಪು ಶಿಫಾರಸು ಮಾಡಿದೆ. ಇದು ಅಗತ್ಯವಾಗಿ ಆಗಬೇಕಾದ ಕೆಲಸ ಮತ್ತು ಆಯೋಗವನ್ನು ಆದಷ್ಟು ಬೇಗ ರಚಿಸಬೇಕು. ಜಮ್ಮು–ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ಬಿಜೆಪಿ ಹಿಂದಿನಿಂದಲೂ ವಿರೋಧಿಸಿಕೊಂಡು ಬಂದಿದೆ. ಈ ವಿರೋಧವು ಬಿಜೆಪಿಯ ಸೈದ್ಧಾಂತಿಕ ನೆಲೆಯ ಪ್ರಮುಖ ಅಂಶಗಳಲ್ಲಿ ಒಂದಾಗಿತ್ತು.

ಹಾಗಾಗಿ, ಈಗಿನ ತೀರ್ಪಿನಿಂದ ಕೇಂದ್ರ ಸರ್ಕಾರದ ಕೈ ಮೇಲಾದಂತಾಗಿದೆ. ಬಿಜೆಪಿ ವಿರೋಧಿ ಪಕ್ಷಗಳು ಈ ವಿಚಾರದಲ್ಲಿ ಭಿನ್ನ ನಿಲುವುಗಳನ್ನು ಹೊಂದಿವೆ. ಒಗ್ಗಟ್ಟಿನ ಮತ್ತು ಸುಸಂಬದ್ಧವಾದ ಪ್ರತಿಕ್ರಿಯೆ ನೀಡುವುದು ಈ ಪಕ್ಷಗಳಿಗೆ ದೊಡ್ಡ ಸವಾಲಾಗಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT