ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ವಿವೇಕಾನಂದರ ಹೆಸರು, ಕೇಸರಿ ಬಣ್ಣರಾಜಕೀಯ ಕಾರಣಗಳಿಗೆ ಬಳಕೆ ಸಲ್ಲ

Last Updated 15 ನವೆಂಬರ್ 2022, 20:15 IST
ಅಕ್ಷರ ಗಾತ್ರ

‘ವಿವೇಕ’ ಹೆಸರಿನಲ್ಲಿ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಕೊಠಡಿಗಳನ್ನು ನಿರ್ಮಿಸುವ ರಾಜ್ಯ ಸರ್ಕಾರದ ಕಾರ್ಯಕ್ರಮ ರಾಜಕೀಯ ವಿವಾದದ ಸ್ವರೂಪ ‍ಪಡೆದುಕೊಂಡಿದೆ. ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ 7,601 ಕೊಠಡಿಗಳಿಗೆ ಸ್ವಾಮಿ ವಿವೇಕಾನಂದರ ಸ್ಮರಣಾರ್ಥ ‘ವಿವೇಕ’ ಎಂದು ಹೆಸರಿಡುವುದಾಗಿ ಸರ್ಕಾರ ಹೇಳಿದೆ. ಕೊಠಡಿಗಳಿಗೆಕೇಸರಿ ಬಣ್ಣ ಬಳಿಯುವ ಚಿಂತನೆ ನಡೆದಿದೆ. ‘ವಿವೇಕ’ ಹೆಸರಿನ ಕೊಠಡಿಗಳ ಜೊತೆಗೆ, 2023ರ ಆಗಸ್ಟ್‌ ವೇಳೆಗೆ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಶೌಚಾಲಯ ನಿರ್ಮಿಸಿಕೊಡುವುದಾಗಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಕಲಿತ ಶಾಲೆಗಳೊಂದಿಗೆ, ಶತಮಾನ ಪೂರೈಸಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವುದಾಗಿ ಸರ್ಕಾರ ಹೇಳಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ 750 ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೂ ಸರ್ಕಾರ ಮುಂದಾಗಿದೆ. ಕೊಠಡಿಗಳ ನಿರ್ಮಾಣ ಸೇರಿದಂತೆ ಮೂಲಸೌಕರ್ಯ ವೃದ್ಧಿಗೆ ಕೈಗೊಂಡ ಕ್ರಮಗಳು ಸ್ವಾಗತಾರ್ಹ. ಆದರೆ, ಹೊಸದಾಗಿ ನಿರ್ಮಿಸುವ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಸಲು ಸರ್ಕಾರದ ಮಟ್ಟದಲ್ಲಿ ನಡೆದಿರುವ ಪ್ರಯತ್ನದ ಹಿಂದೆ ಮಕ್ಕಳ ಹಿತಾಸಕ್ತಿಗಿಂತಲೂ ರಾಜಕೀಯ ಉದ್ದೇಶಗಳೇ ಸ್ಪಷ್ಟವಾಗಿ ಕಾಣಿಸುತ್ತಿವೆ. ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಸುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ನೀಡಿರುವ ಕಾರಣಗಳಲ್ಲಿ ಶೈಕ್ಷಣಿಕ ಕಾಳಜಿ ಕಾಣಿಸುತ್ತಿಲ್ಲ. ಜಗತ್ತಿಗೆ ವಿವೇಕವನ್ನು ನೀಡಿದ ಸ್ವಾಮಿ ವಿವೇಕಾನಂದರನ್ನು ಪ್ರೇರಣೆಯಾಗಿ ಇರಿಸಿಕೊಂಡು ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಲು ‘ವಿವೇಕ’ ಕೊಠಡಿಗಳ ಪರಿಕಲ್ಪನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ‘ಕೇಸರಿ ಕಂಡರೆ ಏಕೆ ಸಿಟ್ಟು’ ಎಂದು ವಿರೋಧಪಕ್ಷಗಳ ನಾಯಕರನ್ನು ಪ್ರಶ್ನಿಸಿರುವ ಮುಖ್ಯಮಂತ್ರಿ, ರಾಷ್ಟ್ರಧ್ವಜದಲ್ಲೂ ಕೇಸರಿ ಬಣ್ಣ ಇರುವುದನ್ನು ನೆನಪಿಸಿದ್ದಾರೆ. ಮುಖ್ಯಮಂತ್ರಿ ಹೇಳಿರುವ ಮಾತುಗಳಲ್ಲಿ ಸತ್ಯಾಂಶವಿದೆ. ಕೇಸರಿ ಬಣ್ಣವನ್ನು ಯಾರೂ ಅಸಹನೆ ಅಥವಾ ಅನುಮಾನದಿಂದ ನೋಡಬಾರದು. ಹಾಗೆಯೇ, ರಾಷ್ಟ್ರಧ್ವಜದಲ್ಲಿ ಇರುವ ಬಣ್ಣವನ್ನು ಸಿಕ್ಕಸಿಕ್ಕಲ್ಲೆಲ್ಲ ಬಳಸುವ ಮೂಲಕ ಅದರ ಘನತೆಯನ್ನು ಕಡಿಮೆ ಮಾಡುವ ಪ್ರಯತ್ನಗಳನ್ನೂ ಯಾರೂ ಮಾಡಬಾರದು. ಕೇಸರಿ ಮಾತ್ರವಲ್ಲ, ಯಾವುದೇ ಬಣ್ಣಕ್ಕೆ ಅನಗತ್ಯ ಮಹತ್ವ ನೀಡುವುದು ಇಲ್ಲವೇ ಅನುಮಾನದಿಂದ ನೋಡುವುದು ಸರಿಯಲ್ಲ. ಮಕ್ಕಳು ಶಾಲೆಯಲ್ಲಿ ಕಲಿಯಬೇಕಾದುದು ಎಲ್ಲ ಬಣ್ಣಗಳ ಅಗತ್ಯ ಮತ್ತು ಮಹತ್ವವನ್ನೇ ಹೊರತು, ಯಾವುದೋ ಒಂದು ಬಣ್ಣವನ್ನು ವಿಶೇಷವಾಗಿ ನೋಡುವುದನ್ನಲ್ಲ. ವಿವೇಕಾನಂದರ ಹೆಸರನ್ನು ಕೂಡ ರಾಜಕೀಯ ಕಾರಣಗಳಿಗಾಗಿ ಬಳಸುವುದು ಸರಿಯಲ್ಲ.

‘ಗೋಡೆಗಳಿಗೆ ಬಳಿಯುವ ಬಣ್ಣದ ಆಯ್ಕೆ ಕುರಿತು ಇನ್ನೂ ಚರ್ಚಿಸಿಲ್ಲ’ ಎಂದು ಈ ಮೊದಲು ಹೇಳಿದ್ದ ಶಿಕ್ಷಣ ಸಚಿವರು, ಈಗ ಕೇಸರಿ ಬಣ್ಣದ ಮಹತ್ವದ ಕುರಿತು ಮಾತನಾಡುತ್ತಿದ್ದಾರೆ; ಕೊಠಡಿಯೊಂದಕ್ಕೆ ‘ವಿವೇಕ’ ಎನ್ನುವ ಹೆಸರಿಡುವ ಮೂಲಕ ವಿವೇಕಾನಂದರ ಆದರ್ಶವನ್ನು ಮಕ್ಕಳಲ್ಲಿ ರೂಢಿಸುತ್ತೇವೆ ಎಂದು ಹೇಳುತ್ತಿದ್ದಾರೆ. ವಿವೇಕಾನಂದರ ಜೀವನ ಮತ್ತು ಸಾಧನೆಯನ್ನು ಪರಿಚಯಿಸುವ ಪಠ್ಯಗಳನ್ನು ವಿದ್ಯಾರ್ಥಿಗಳು ಈಗಾಗಲೇ ಕಲಿಯುತ್ತಿದ್ದಾರೆ. ಆ ಪಠ್ಯಗಳಿಂದ ಮೈಗೂಡದ ಆದರ್ಶ, ಕೊಠಡಿಯೊಂದರ ಹೆಸರು ಹಾಗೂ ಬಣ್ಣದಿಂದ ಸಾಧ್ಯವಾಗುತ್ತದೆಂದು ನಿರೀಕ್ಷಿಸಲಾಗದು. ಕೊಠಡಿಯೊಂದಕ್ಕೆ ಯಾವುದೋ ಒಂದು ಬಣ್ಣವನ್ನು ಬಳಿಯುವುದರಿಂದಾಗಿ ಶಿಕ್ಷಣದ ಗುಣಮಟ್ಟ ಸುಧಾರಣೆಯಾಗುತ್ತದೆಂದೂ ಹೇಳಲಾಗದು. ಮೂಲಸೌಕರ್ಯಗಳ ಅಭಿವೃದ್ಧಿ, ವೈಜ್ಞಾನಿಕ ನೆಲೆಗಟ್ಟಿನ ಪಠ್ಯಕ್ರಮ ಹಾಗೂ ಪರಿಣಾಮಕಾರಿ ಬೋಧನೆಯಿಂದಷ್ಟೇ ಕಲಿಕೆಯ ಗುಣಮಟ್ಟದಲ್ಲಿ ಸುಧಾರಣೆ ಕಾಣಬಹುದು. ಇಂಥ ಯಾವ ಸುಧಾರಣಾ ಕ್ರಮವನ್ನೂ ಗಂಭೀರವಾಗಿ ಚಿಂತಿಸದೆ, ‘ವಿವೇಕ’ ಹೆಸರು ಮತ್ತು ಕೇಸರಿ ಬಣ್ಣದ ಮೂಲಕ ವಿದ್ಯಾರ್ಥಿಗಳ ಜ್ಞಾನಾರ್ಜನೆಯ ಮಾತುಗಳನ್ನಾಡುವುದು ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವವರಿಗೆ ಶೋಭಿಸುವುದಿಲ್ಲ.

ಮಕ್ಕಳ ಕಲಿಕೆಗೆ ಇಡೀ ಶಾಲಾ ಪರಿಸರ ಉತ್ಸಾಹ ತುಂಬುವಂತೆ ರೂಪುಗೊಳ್ಳಬೇಕೇ ವಿನಾ ಯಾವುದೋ ಒಂದು ಕೊಠಡಿಯಲ್ಲ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರ ತೆಗೆದುಕೊಳ್ಳುವ ತೀರ್ಮಾನಗಳಲ್ಲಿ ಮಕ್ಕಳ ಹಿತಾಸಕ್ತಿಯೇ ಮುಖ್ಯವಾಗಿರಬೇಕು ಹಾಗೂ ಆ ತೀರ್ಮಾನಗಳು ಎಲ್ಲರನ್ನೂ ಒಳಗೊಳ್ಳುವಂತಿರಬೇಕು. ದುರದೃಷ್ಟವಶಾತ್‌, ರಾಜ್ಯ ಸರ್ಕಾರದ ಇತ್ತೀಚಿನ ಕೆಲವು ನಿರ್ಧಾರಗಳಲ್ಲಿ ಶೈಕ್ಷಣಿಕ ಕಾಳಜಿ ಮತ್ತು ಮಕ್ಕಳ ಹಿತಾಸಕ್ತಿಗಿಂತಲೂ ರಾಜಕೀಯ ಸಂಗತಿಗಳೇ ಹೆಚ್ಚಾಗಿರುವಂತೆ ಕಾಣಿಸುತ್ತದೆ. ಇದೇ ಸರ್ಕಾರ, ಇಪ್ಪತ್ತೈದಕ್ಕೂ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಮುಚ್ಚುವ ಚಿಂತನೆ ನಡೆಸಿತ್ತು. ಮದರಸಾಗಳಲ್ಲಿನ ಪಠ್ಯಕ್ರಮವನ್ನು ಪರಿಷ್ಕರಿಸಬೇಕೆಂದು ಮುಸ್ಲಿಂ ಸಮುದಾಯದ ಕೆಲವರು ಮನವಿ ಮಾಡಿಕೊಂಡಿದ್ದು, ಆ ಬೇಡಿಕೆಯನ್ನು ಸರ್ಕಾರ ಪರಿಗಣಿಸಲಿದೆ ಎಂದು ಶಿಕ್ಷಣ ಸಚಿವರು ನೀಡಿದ ಹೇಳಿಕೆ ಕೂಡ ತಪ್ಪುಗ್ರಹಿಕೆ ಹಾಗೂ ಅನಗತ್ಯ ಗೊಂದಲಗಳಿಗೆ ಅವಕಾಶ ಕಲ್ಪಿಸಿತ್ತು. ಈಗ ವಿವೇಕಾನಂದರು ಮತ್ತು ಕೇಸರಿ ಬಣ್ಣವನ್ನು ಶಾಲಾ ಅಂಗಳಕ್ಕೆ ಎಳೆತರುವ ಮೂಲಕ, ಶಿಕ್ಷಣದ ಹೆಸರಿನಲ್ಲಿ ಮತ್ತೊಂದು ರಾಜಕೀಯ ಗದ್ದಲವನ್ನು ಸರ್ಕಾರ ಸೃಷ್ಟಿಸಿದೆ. ಈ ಗದ್ದಲದಿಂದ ಮಕ್ಕಳ ಶಿಕ್ಷಣಕ್ಕೆ ಯಾವ ಉಪಯೋಗವೂ ಇಲ್ಲ, ವಿವೇಕಾನಂದರು ಮತ್ತು ಕೇಸರಿ ಬಣ್ಣದ ಘನತೆಯೂ ಹೆಚ್ಚುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT