ಸಾಂಸ್ಕೃತಿಕ ವಾತಾವರಣವನ್ನು ರೂಪಿಸುವ ಸಂಘ– ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಮುಂದುವರಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ಧಾರ ಸ್ವಾಗತಾರ್ಹ. ಅನುದಾನದ ಕೊರತೆಯಿಂದಾಗಿ 2024–25ನೇ ಸಾಲಿನಲ್ಲಿ ಸಂಘ– ಸಂಸ್ಥೆಗಳಿಗೆ ಇಲಾಖೆಯ ನೆರವು ದೊರೆತಿರಲಿಲ್ಲ. 2023–24ನೇ ಸಾಲಿನಲ್ಲಿ ಕೂಡ ಧನಸಹಾಯ ಯೋಜನೆ ನಿಯಮಿತವಾಗಿರದೆ, ಆರ್ಥಿಕ ನೆರವನ್ನು ನಾಲ್ಕು ಕಂತುಗಳಲ್ಲಿ ನೀಡಲಾಗಿತ್ತು. ಕಳೆದ ವರ್ಷ ಯೋಜನೆ ಸಂಪೂರ್ಣ ಸ್ಥಗಿತಗೊಂಡು, ಸಂಘ– ಸಂಸ್ಥೆಗಳ ಚಟುವಟಿಕೆಗಳು ಕುಂಠಿತಗೊಂಡಿದ್ದವು. ಸ್ವಂತ ಆದಾಯ ಮೂಲಗಳಿಲ್ಲದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೆರವನ್ನೇ ನೆಚ್ಚಿಕೊಂಡ ಸಂಘ– ಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸುವ ಪರಿಸ್ಥಿತಿ ರೂಪುಗೊಂಡಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸುವ ಯೋಜನೆಗೆ ₹5 ಕೋಟಿ ಅನುದಾನ ಮೀಸಲಿಡಲಾಗಿದೆ. ಸಂಘ– ಸಂಸ್ಥೆಗಳ ಅರ್ಜಿ ಸಲ್ಲಿಕೆಯ ನಂತರ ಅಗತ್ಯವಿದ್ದಲ್ಲಿ ಹೆಚ್ಚುವರಿ ಅನುದಾನ ನೀಡುವಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲು ಇಲಾಖೆಯು ಉದ್ದೇಶಿಸಿದೆ. ರಾಜ್ಯದಲ್ಲಿ ಸುಮಾರು ಏಳು ಸಾವಿರಕ್ಕೂ ಹೆಚ್ಚಿನ ಸಂಘ–ಸಂಸ್ಥೆಗಳಿದ್ದು, ಅವುಗಳಲ್ಲಿ ಸುಮಾರು ಒಂದೂವರೆ ಸಾವಿರ ಸಂಘಟನೆಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯ ಯೋಜನೆಯ ಫಲಾನುಭವಿಗಳಾಗಿವೆ. ಅಸಂಘಟಿತ ಕಲಾವಿದರ ಪಾಲಿಗಂತೂ ಇಲಾಖೆಯ ಯೋಜನೆ ಜೀವಜಲ ಇದ್ದಂತೆ. ವೇಷಭೂಷಣ ಹಾಗೂ ವಾದ್ಯಗಳ ಖರೀದಿಗೆ ಇಲಾಖೆಯ ಆರ್ಥಿಕ ಸಹಾಯ ಸಹಕಾರಿಯಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಹೇರಲಾಗಿದ್ದ ಲಾಕ್ಡೌನ್ ಸಂದರ್ಭದಲ್ಲಿ ಸಾಂಸ್ಕೃತಿಕ ಸಂಸ್ಥೆಗಳ ಸಾರ್ವಜನಿಕ ಕಾರ್ಯಕ್ರಮಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಕೊರೊನಾ ನಂತರದಲ್ಲಿ ಕೂಡ ಸರ್ಕಾರದ ನೆರವು ದೊರೆಯದೆ ಬಹುತೇಕ ಸಾಂಸ್ಕೃತಿಕ ಸಂಘ– ಸಂಸ್ಥೆಗಳು ನಿಷ್ಕ್ರಿಯವಾಗಿದ್ದವು. ನಾಡು– ನುಡಿಗೆ ಸಂಬಂಧಿಸಿದ ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ನೇಮಕಗೊಳ್ಳದೆ ಹೋದುದು ಕೂಡ ಸಾಂಸ್ಕೃತಿಕ ಕ್ಷೇತ್ರ ಬಸವಳಿಯಲಿಕ್ಕೆ ಕಾರಣವಾಗಿತ್ತು. 2024ರ ಮಾರ್ಚ್ನಲ್ಲಿ ಅಧ್ಯಕ್ಷರು ಹಾಗೂ ಸದಸ್ಯರ ನೇಮಕದ ಮೂಲಕ ಅಕಾಡೆಮಿ, ಪ್ರಾಧಿಕಾರಗಳು ಪುನಶ್ಚೇತನಗೊಂಡಿವೆ. ಆದರೆ, ಸಂಘ– ಸಂಸ್ಥೆಗಳ ಚಟುವಟಿಕೆಗೆ ದೊರೆಯುತ್ತಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆರ್ಥಿಕ ನೆರವು ಮತ್ತೆ ಆರಂಭಗೊಂಡಿರಲಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹೆಚ್ಚು ಸಂಪನ್ಮೂಲಗಳನ್ನು ಒದಗಿಸಬೇಕಾದ ಸವಾಲು ಸರ್ಕಾರದ ಮುಂದಿರುವುದರಿಂದ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಇನ್ನು ಮುಂದೆ ಹಣ ದೊರೆಯುವುದು ಕಷ್ಟ ಎಂದು ಹೇಳಲಾಗುತ್ತಿತ್ತು. ಆ ಊಹಾಪೋಹಗಳನ್ನು ಸುಳ್ಳು ಮಾಡುವಂತೆ, ಸಂಸ್ಕೃತಿ ಇಲಾಖೆಗೆ ಅನುದಾನ ದೊರೆತಿದ್ದು, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಸಂಘ– ಸಂಸ್ಥೆಗಳಿಗೆ ಆಶಾಭಾವ ಮರಳುವಂತಾಗಿದೆ.

ನಾಡು–ನುಡಿಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೆರವು ನೀಡುವುದು ಸರ್ಕಾರದ ಹೊಣೆಗಾರಿಕೆ. ಸಾರ್ವಜನಿಕರ ತೆರಿಗೆ ಹಣ ಪೋಲಾಗದಂತೆ ಎಚ್ಚರಿಕೆ ವಹಿಸುವುದು ಹಾಗೂ ಅರ್ಹರಿಗಷ್ಟೇ ನೆರವು ದೊರೆಯುವಂತೆ ನೋಡಿಕೊಳ್ಳುವುದೂ ಅಗತ್ಯ. ಕಾರ್ಯಕ್ರಮ ಮಾಡದೆಯೇ ಹಣ ಪಡೆಯುವ ‘ಲೆಟರ್ಹೆಡ್’ ಸಂಸ್ಥೆಗಳೂ ಇವೆ. ಇಲಾಖೆಯ ಆರ್ಥಿಕ ನೆರವು ದೊರಕಿಸಿಕೊಡುವ ಮಧ್ಯವರ್ತಿಗಳೂ ಇದ್ದಾರೆ. ನಾಡು– ನುಡಿ ಹೆಸರಿನಲ್ಲಿ ನಡೆಯುವ ಅವ್ಯವಹಾರಗಳಿಗೆ ಕಡಿವಾಣ ಹಾಕುವುದು ಹಾಗೂ ಸಾಂಸ್ಕೃತಿಕ ದಲ್ಲಾಳಿಗಳಿಂದ ದೂರವಿರುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆರೋಗ್ಯಕ್ಕೆ ಅಗತ್ಯ. ಜನರ ತೆರಿಗೆ ಹಣ ಅರ್ಹ ಸಂಸ್ಥೆಗಳಿಗೆ ಹಾಗೂ ಕಲಾವಿದರಿಗೆ ತಲಪುವಂತೆ ಮಾಡುವುದು ಇಲಾಖೆಯ ಹೊಣೆಗಾರಿಕೆ. ಇಲಾಖೆಯ ನೆರವಿನಿಂದ ಸಂಘ– ಸಂಸ್ಥೆಗಳು ನಡೆಸಿದ ಕಾರ್ಯಕ್ರಮಗಳ ಪರಿಣಾಮದ ಬಗ್ಗೆಯೂ ಪರಾಮರ್ಶೆ ನಡೆಯುವಂತಾಗಬೇಕು. ಹಣ ಖರ್ಚು ಮಾಡುವುದೇ ಮುಖ್ಯವಾಗಿ, ಸೃಜನಶೀಲ ಸಾಧ್ಯತೆಗಳು ಗೌಣವಾಗಿರುವ ಕಾರ್ಯಕ್ರಮಗಳಿಂದ ಸಾರ್ವಜನಿಕರ ಹಣ ಪೋಲಾಗುತ್ತದೆ. ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕನ್ನಡ ನಾಡಿನ ಸಾಂಸ್ಕೃತಿಕ ಪರಿಸರವನ್ನು ಜೀವಂತವಾಗಿಡುವ ಸಂಘ– ಸಂಸ್ಥೆಗಳಿಗೆ ಸಂಸ್ಕೃತಿ ಇಲಾಖೆಯ ನೆರವು ಸುಲಭವಾಗಿ ದೊರಕುವಂತೆ ಆಗುವುದೂ ಅಗತ್ಯ. ಆರ್ಥಿಕ ನೆರವು ಪಡೆಯುವ ಸಂಘ– ಸಂಸ್ಥೆಗಳ ಆಯ್ಕೆಯಲ್ಲಿ ಪಾರದರ್ಶಕತೆ ತರುವುದಕ್ಕಾಗಿ, ಯೋಜನೆಯ ಮಾರ್ಗಸೂಚಿಯನ್ನು ಪರಿಷ್ಕರಿಸಲಾಗುತ್ತಿದೆ ಎಂದು ಸಂಸ್ಕೃತಿ ಇಲಾಖೆ ಹೇಳಿದೆ. ಈ ಪರಿಷ್ಕಾರ ಆದಷ್ಟು ಬೇಗ ಪೂರ್ಣಗೊಂಡು, ಸಂಘ–ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸುವ ಪ್ರಕ್ರಿಯೆ ಆರಂಭಗೊಳ್ಳಬೇಕು. ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕ ಮುಗಿಯುತ್ತಾ ಬಂದಿರುವುದರಿಂದ, ಸಂಘ–ಸಂಸ್ಥೆಗಳಿಗೆ ನೆರವು ಒದಗಿಸುವ ಯೋಜನೆಯ ಅನುಷ್ಠಾನ ಮತ್ತಷ್ಟು ವಿಳಂಬ ಆಗಬಾರದು. ಸಾಂಸ್ಕೃತಿಕ ಚಟುವಟಿಕೆಗಳ ಪುನಶ್ಚೇತನಕ್ಕೆ ಮುಂದಾಗಿರುವ ಸರ್ಕಾರ, ಕಳೆದ ಆರೇಳು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪ್ರದಾನವನ್ನೂ ಆದ್ಯತೆಯಾಗಿ ಪರಿಗಣಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.