ಬುಧವಾರ, ಆಗಸ್ಟ್ 10, 2022
24 °C

ಸಂಪಾದಕೀಯ – ವಾಟ್ಸ್‌ಆ್ಯಪ್‌ನ ಪಾರಮ್ಯದ ಧೋರಣೆ: ಕಲಿಯಬಹುದಾದ ಪಾಠಗಳು ಹಲವು

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಭಾರತದಲ್ಲಿ ಸ್ಮಾರ್ಟ್‌ಫೋನ್‌ ಯುಗ ಆರಂಭವಾದಾಗ ಆ್ಯಂಡ್ರಾಯ್ಡ್‌ ಮಾರ್ಕೆಟ್‌ (ಇಂದಿನ ಗೂಗಲ್‌ ಪ್ಲೇಸ್ಟೋರ್‌ನ ಹಿಂದಿನ ಹೆಸರು) ಮೂಲಕ ಜನರ ಕಿಸೆಯಲ್ಲಿ ಬಂದು ಕುಳಿತಿದ್ದು ವಾಟ್ಸ್‌ಆ್ಯಪ್‌ ಎಂಬ ಸಂದೇಶ ವಾಹಕ. ಪಠ್ಯ ರೂಪದ ಸಂದೇಶಗಳನ್ನು ಕಳುಹಿಸಲು ಎಸ್‌ಎಂಎಸ್‌ಗಳನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದ ಸಂದರ್ಭ ಅದು. ಆಗ ವಾಟ್ಸ್‌ಆ್ಯಪ್‌ ಕೂಡ ಇದೇ ಬಗೆಯ ಸಂದೇಶಗಳನ್ನು ರವಾನಿಸಲು ಬಳಕೆಯಾಯಿತು. ಜಾಗತಿಕ ಮಟ್ಟದಲ್ಲಿ ‘ವಾಟ್ಸ್‌ಆ್ಯಪ್‌ ಹಾಗೂ ಖಾಸಗಿತನ’ ವಿಚಾರವು ಆರಂಭದಿಂದಲೂ ಚರ್ಚೆಯಲ್ಲಿದ್ದರೂ, ಭಾರತದಲ್ಲಿ ಅದರ ಬಗ್ಗೆ ವಿಸ್ತೃತ ಚರ್ಚೆಗಳು ದೊಡ್ಡ ಮಟ್ಟದಲ್ಲಿ ನಡೆದಂತಿಲ್ಲ. 2010–20ರ ನಡುವಿನ ಅವಧಿಯಲ್ಲಿ ಭಾರತದಲ್ಲಿ ಕೂಡ ‘ಖಾಸಗಿತನ’ದ ಸುತ್ತ ಸಾರ್ವಜನಿಕ ಚರ್ಚೆಗಳು ನಡೆದವು. 2018ರಲ್ಲಿ ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ‘ಖಾಸಗಿತನ ಮೂಲಭೂತ ಹಕ್ಕು’ ಎಂದು ಸ್ಪಷ್ಟಪಡಿಸಿತು. ತನ್ನ ಮೂಲಕ ರವಾನೆ ಆಗುವ ಸಂದೇಶಗಳು, ಸಂದೇಶ ಹುಟ್ಟುವ ಸ್ಮಾರ್ಟ್‌ಫೋನ್‌ನಿಂದ ಸಂದೇಶ ತಲುಪುವ ಸ್ಮಾರ್ಟ್‌ಫೋನ್‌ವರೆಗೂ ಭದ್ರವಾಗಿ, ಎನ್‌ಕ್ರಿಪ್ಟೆಡ್‌ ಆಗಿ (ಅಂದರೆ, ಸಂದೇಶ ಕಳುಹಿಸಿದವ ಹಾಗೂ ಸಂದೇಶ ಸ್ವೀಕರಿಸುವವ ಹೊರತುಪಡಿಸಿ ಬೇರೆ ಯಾರೂ ಆ ಸಂದೇಶ ಓದಲು ಆಗದು) ಇರಲಿದೆ ಎಂದು ವಾಟ್ಸ್‌ಆ್ಯಪ್‌ 2016ರ ಸುಮಾರಿಗೆ ಪ್ರಕಟಿಸಿತು. ಇದು ವಾಟ್ಸ್‌ಆ್ಯಪ್‌ನ ಜನಪ್ರಿಯತೆಯನ್ನು ಇನ್ನಷ್ಟು ಎತ್ತರಕ್ಕೆ ಒಯ್ದಿತು. ನಂತರದ ವರ್ಷಗಳಲ್ಲಿ ವಾಟ್ಸ್‌ಆ್ಯಪ್‌ ಎಂಬುದು ಎಸ್‌ಎಂಎಸ್‌ ರವಾನಿಸುವ ಮಾಧ್ಯಮವಾಗಿ ಮಾತ್ರವೇ ಉಳಿಯಲಿಲ್ಲ – ಅದರ ಮೂಲಕ ದೃಶ್ಯ, ಧ್ವನಿ, ಪಠ್ಯ, ವೆಬ್‌ ಕೊಂಡಿಗಳನ್ನು ಹಂಚಿಕೊಳ್ಳಬಹುದು, ಹಣ ಪಾವತಿಸಬಹುದು, ಕಡತ ರವಾನಿಸಬಹುದು. ಹೀಗೆ ಬಹುಉಪಯೋಗಿಯಾಗಿ, ಜನರ ಬದುಕಿನ ಅವಿಭಾಜ್ಯ ಅಂಗವಾಗಿ ಬೆಳೆದ ವಾಟ್ಸ್‌ಆ್ಯಪ್‌ ಈಗ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ತನಿಖೆಗೆ ಗುರಿಯಾಗಬೇಕಾದ ಸ್ಥಿತಿಗೆ ಬಂದುನಿಂತಿದೆ.

ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದ ವಾಟ್ಸ್‌ಆ್ಯಪ್‌, ತನ್ನ ಬಳಕೆದಾರರಿಗೆ ಸಂಬಂಧಿಸಿದ ಕೆಲವು ಮಾಹಿತಿಗಳನ್ನು ಫೇಸ್‌ಬುಕ್‌ ಹಾಗೂ ಅದರ ಮಾಲೀಕತ್ವದ ಇತರ ಕೆಲವು ಕಂಪನಿಗಳ ಜೊತೆ ಹಂಚಿಕೊಳ್ಳಲಾಗುತ್ತದೆ ಎಂದು ತನ್ನ ಖಾಸಗಿತನದ ನೀತಿಯಲ್ಲಿ ಬದಲಾವಣೆ ತಂದಿತು. ಈ ನೀತಿಯನ್ನು ಬಳಕೆದಾರರು ಒಪ್ಪಿಕೊಳ್ಳಲೇಬೇಕು. ಇಲ್ಲವಾದರೆ ಅವರ ವಾಟ್ಸ್‌ಆ್ಯಪ್‌ ಖಾತೆ ನಿಷ್ಕ್ರಿಯಗೊಳ್ಳುತ್ತದೆ. ಉಚಿತವಾಗಿ ಸೇವೆ ನೀಡಲು ಆರಂಭಿಸಿ, ಮಾರುಕಟ್ಟೆಯ ಮೇಲೆ ಪ್ರಾಬಲ್ಯ ಸಾಧಿಸಿ, ಜನ ತನ್ನ ಸೇವೆಗಳಿಗೆ ಒಗ್ಗಿಕೊಳ್ಳುವಂತೆ ಮಾಡಿ, ನಂತರ ಒಂದು ದಿನ ‘ನಾವು ರೂಪಿಸಿದ ಹೊಸ ನಿಯಮ ಒಪ್ಪಿಕೊಳ್ಳಿ, ಇಲ್ಲವಾದರೆ ನಿಮ್ಮನ್ನು ಹೊರಹಾಕಲಾಗುತ್ತದೆ’ ಎಂಬ ಧಾಟಿಯಲ್ಲಿ ವಾಟ್ಸ್‌ಆ್ಯಪ್‌ ಮಾತನಾಡುತ್ತಿರುವಂತೆ ಕಾಣುತ್ತಿದೆ. ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಿಸಿದ ಹೊಸ ನೀತಿಯನ್ನು ತಿರಸ್ಕರಿಸಲು ಬಳಕೆದಾರರಿಗೆ ಅವಕಾಶವೇ ಇಲ್ಲ. ವಾಟ್ಸ್‌ಆ್ಯಪ್‌ನ ಈ ಕ್ರಮವು ನ್ಯಾಯಸಮ್ಮತವಾಗಿಲ್ಲ ಎಂದು ಸಿಸಿಐಗೆ ಅನಿಸಿದೆ. ಆ ಕಾರಣಕ್ಕೆ ಅದು, ವಾಟ್ಸ್‌ಆ್ಯಪ್‌ನ ಧೋರಣೆ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಆಧರಿಸಿ ತನಿಖೆಗೆ ಸ್ವಯಂಪ್ರೇರಿತವಾಗಿ ಆದೇಶಿಸಿದೆ. ಖಾಸಗಿ ಸಂದೇಶಗಳ ಮೇಲೆ ತಾನು ಕಳ್ಳಗಣ್ಣು ಇರಿಸುವುದಿಲ್ಲ ಎಂದು ವಾಟ್ಸ್‌ಆ್ಯಪ್‌ ಹೇಳಿದೆ. ವಾಣಿಜ್ಯ ವಹಿವಾಟುಗಳಿಗೆ ಸಂಬಂಧಿಸಿದಂತೆ ಇತರ ಕಂಪನಿಗಳ ಜೊತೆ ಹಂಚಿಕೊಳ್ಳುವುದಾಗಿ ವಾಟ್ಸ್‌ಆ್ಯಪ್‌ ಹೇಳಿರುವ ಕೆಲವು ಮಾಹಿತಿಗಳಲ್ಲಿ, ‘ಖಾಸಗಿ’ ಯಾವುವು, ಖಾಸಗಿ ಅಲ್ಲದ್ದು ಯಾವುವು ಎಂಬ ಬಗ್ಗೆ ಪ್ರಶ್ನೆಗಳು ಇವೆ. ಭಾರತದ ಬಳಕೆದಾರರಿಗೆ ತಂದಂತಹ ಪರಿಷ್ಕರಣೆಯನ್ನು ವಾಟ್ಸ್‌ಆ್ಯಪ್‌ ಯುರೋಪಿನ ತನ್ನ ಬಳಕೆದಾರರಿಗೆ ತಂದಿಲ್ಲ ಎಂದು ಕೇಂದ್ರ ಸರ್ಕಾರವು ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್‌ಗೆ ವಿವರಿಸಿದೆ. ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಐರೋಪ್ಯ ಒಕ್ಕೂಟದಲ್ಲಿ ಇರುವ ಕಠಿಣ ಕಾನೂನುಗಳಿಗೆ ಅಂಜಿ ವಾಟ್ಸ್‌ಆ್ಯಪ್‌ ಹೀಗೆ ಮಾಡಿರಬಹುದು. ಭಾರತದಲ್ಲಿ ಕೂಡ ಇಂತಹ ಕಠಿಣ ಕಾನೂನುಗಳು ಈಗಾಗಲೇ ಇದ್ದಿದ್ದರೆ ವಾಟ್ಸ್‌ಆ್ಯಪ್‌ನ ನಡೆ ಬಹುಶಃ ಈಗಿನಂತೆ ಇರುತ್ತಿರಲಿಲ್ಲ. ಹಾಗೆಯೇ, ಮಾರುಕಟ್ಟೆಯಲ್ಲಿ ಈ ಪರಿಯ ಪಾರಮ್ಯವನ್ನು ವಾಟ್ಸ್‌ಆ್ಯಪ್‌ ಹೊಂದಿರದೆ ಇದ್ದಿದ್ದರೆ, ಆಗ ಅದು ಇನ್ನಷ್ಟು ಮೃದುವಾಗಿ ವರ್ತಿಸುತ್ತಿತ್ತೇನೋ... ಮಾಹಿತಿಯ ರಕ್ಷಣೆ ಹಾಗೂ ಒಂದು ಕಂಪನಿಗೆ ಮಾರುಕಟ್ಟೆಯಲ್ಲಿ ಪಾರಮ್ಯ ಸಾಧಿಸಲು ಬಿಡುವುದರ ವಿಚಾರವಾಗಿ ವಾಟ್ಸ್‌ಆ್ಯಪ್‌ ಪ್ರಸಂಗದಿಂದ ಕಲಿಯಬಹುದಾಗಿದ್ದು ಬಹಳಷ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು