ಬುಧವಾರ, ಜನವರಿ 20, 2021
16 °C

ಸಂಪಾದಕೀಯ: ಮಠಾಧೀಶರಿಗೆ ರಾಜಕಾರಣದ ಉಸಾಬರಿ ಏಕೆ?

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ರಾಜ್ಯದಲ್ಲಿನ ಸ್ವಾಮೀಜಿಗಳ ಪೈಕಿ ಕೆಲವರು ರಾಜಕೀಯ ನಾಯಕರಂತೆ ವರ್ತಿಸುತ್ತಿರುವುದು ಅವರು ಪ್ರತಿನಿಧಿಸುವ ಸ್ಥಾನಗಳಿಗೆ ಶೋಭೆ ತರುವಂತಹದ್ದಲ್ಲ. ಸಮಾಜಕ್ಕೆ ಧಾರ್ಮಿಕ ಹಾಗೂ ನೈತಿಕ ಮಾರ್ಗದರ್ಶನ ಮಾಡುವ ಸ್ಥಾನದಲ್ಲಿರುವ ಸ್ವಾಮೀಜಿಗಳು, ಬೇರೆಯವರಿಂದ ಹೇಳಿಸಿಕೊಳ್ಳುವಂತಹ ಪರಿಸ್ಥಿತಿಯನ್ನು ತಾವೇ ತಂದುಕೊಳ್ಳುತ್ತಿರುವಂತಿದೆ. ಸಮಾಜದಲ್ಲಿನ ಒಡಕುಗಳ ನಿವಾರಣೆಗೆ ಪೂರಕವಾಗಿ ಕೆಲಸ ಮಾಡಬೇಕಾದವರು, ಜಾತಿಗಳ ಹೆಸರಿನಲ್ಲಿ ಸಮಾಜದಲ್ಲಿರುವ ಒಡಕುಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಯತ್ನಗಳಲ್ಲಿ ತೊಡಗಿದ್ದಾರೆ. ರಾಜ್ಯ ಸರ್ಕಾರ ರೂಪಿಸಿರುವ ಮರಾಠಾ ಅಭಿವೃದ್ಧಿ ನಿಗಮ ಮತ್ತು ವೀರಶೈವ–ಲಿಂಗಾಯತ ಅಭಿವೃದ್ಧಿ ನಿಗಮದ ಮಾದರಿಯಲ್ಲಿ ತಾವು ಪ್ರತಿನಿಧಿಸುವ ಜಾತಿಯ ಅಭಿವೃದ್ಧಿಗೂ ನಿಗಮ ಸ್ಥಾಪಿಸಬೇಕು ಎಂದು ಸರ್ಕಾರದ ಮುಂದೆ ಕೆಲವರು ಬೇಡಿಕೆ ಇರಿಸಿದ್ದಾರೆ. ಈ ಪ್ರಯತ್ನದಲ್ಲಿ ಮುಖ್ಯಮಂತ್ರಿ ಮೇಲೆ ಬಹಿರಂಗವಾಗಿ ಒತ್ತಡ ಹೇರುವ ಹಾಗೂ ಸಮುದಾಯಗಳನ್ನು ಸಂಘಟಿಸಿ ಶಕ್ತಿ ಪ್ರದರ್ಶನ ಮಾಡುವ ತಂತ್ರಗಳಲ್ಲಿ ತೊಡಗಿದ್ದಾರೆ. ‘ನಿಮಗೇನೂ ಆಗದು, ಧೈರ್ಯದಿಂದ ಇರಿ’ ಎಂದು ಮುಖ್ಯಮಂತ್ರಿಯವರಿಗೆ ಅಭಯ ನೀಡಿರುವ ಸ್ವಾಮೀಜಿಯೊಬ್ಬರು, ನಿರ್ದಿಷ್ಟ ಸಮುದಾಯವೊಂದನ್ನು ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ (ಒಬಿಸಿ) ಸೇರ್ಪಡೆ ಮಾಡುವುದಕ್ಕಾಗಿ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಅಭಿಪ್ರಾಯವನ್ನು ಮತ್ತಿಬ್ಬರು ಸ್ವಾಮೀಜಿಗಳು ಅನುಮೋದಿಸಿದ್ದಾರೆ. ಮೀಸಲಾತಿಗೆ ಸಂಬಂಧಿಸಿದಂತೆ ನೀಡಿದ್ದ ಗಡುವು ಮುಗಿದಿರುವುದರಿಂದ ಲಕ್ಷಾಂತರ ಜನರೊಂದಿಗೆ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳುವುದಾಗಿ ಮತ್ತೊಬ್ಬ ಸ್ವಾಮೀಜಿ ಹೇಳಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ತಮ್ಮ ಜಾತಿಯ ಬಾಂಧವರನ್ನು ಸೇರಿಸುವಂತೆ ಒತ್ತಾಯಿಸಿ ಮತ್ತೊಬ್ಬ ಸ್ವಾಮೀಜಿಯೂ ಪಾದಯಾತ್ರೆಯ ಸಿದ್ಧತೆ ನಡೆಸಿದ್ದಾರೆ. ಜಾತಿಗಳ ಹೆಸರಿನಲ್ಲಿ ನಿಗಮಗಳನ್ನು ರಚಿಸುವುದು ಸರಿಯಲ್ಲ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಬೇಕಿದ್ದ ಸ್ವಾಮೀಜಿಗಳು, ತಾವೇ ಮುಂದೆ ನಿಂತು ಜಾತಿ ಹೆಸರಿನಲ್ಲಿ ನಿಗಮಗಳ ರಚನೆಗೆ ಕುಮ್ಮಕ್ಕು ನೀಡುತ್ತಿದ್ದಾರೆ.

ಸಂಪಾದಕೀಯ Podcast ಕೇಳಿ: ಮಠಾಧೀಶರಿಗೆ ರಾಜಕಾರಣದ ಉಸಾಬರಿ ಏಕೆ?

ತಮ್ಮ ಸಮುದಾಯದವರಿಗೆ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸುವಂತೆ ಇಲ್ಲವೇ ಮಠಗಳಿಗೆ ಅನುದಾನ ನೀಡುವಂತೆ ಸರ್ಕಾರದ ಮೇಲೆ ಮಠಾಧೀಶರು ಒತ್ತಡ ಹೇರುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಈಗ ಜಾತಿಗಳ ಹೆಸರಿನಲ್ಲಿ ನಿಗಮಗಳ ರಚನೆಗೆ ಸರ್ಕಾರ ಚಾಲನೆ ನೀಡಿದೆ. ಹಾಗಾಗಿ, ತಮ್ಮ ಸಮುದಾಯಕ್ಕೂ ನಿಗಮದ ಭಾಗ್ಯ ದೊರಕಿಸಿಕೊಡುವ ಕಾರ್ಯದಲ್ಲಿ ಸ್ವಾಮೀಜಿಗಳು ತೊಡಗಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ, ತಮ್ಮ ಸಮುದಾಯದ ಹಿತ ರಕ್ಷಿಸಿದ್ದಾರೆ ಎಂದು ಭಾವಿಸಿ ಅವರ ತಲೆಕಾಯುವ, ನಿರ್ಲಕ್ಷಿಸಿದ್ದಾರೆ ಎಂದು ಭಾವಿಸಿ ಅವರ ತಲೆದಂಡ ಕೇಳುವ ಮಾತನಾಡುತ್ತಿದ್ದಾರೆ. ಅಧಿಕಾರ ಸ್ಥಾನದ ಲಾಭಕ್ಕಾಗಿ ಬೆದರಿಕೆ ತಂತ್ರ ಬಳಸುವ ಹಾಗೂ ಚೌಕಾಸಿಯ ಮಾತುಗಳನ್ನು ಆಡುವ ಭಿನ್ನಮತೀಯ ಶಾಸಕರಿಗೂ ಸಮುದಾಯದ ಹಿತಾಸಕ್ತಿ ಹೆಸರಿನಲ್ಲಿ ಸರ್ಕಾರವನ್ನು ರಕ್ಷಿಸುವ ಇಲ್ಲವೇ ಬೆದರಿಕೆ ಒಡ್ಡುವಂತಹ ಸ್ವಾಮೀಜಿಗಳ ನಡವಳಿಕೆಗೂ ಹೆಚ್ಚಿನ ವ್ಯತ್ಯಾಸ ಇರುವಂತೆ ಕಾಣಿಸುವುದಿಲ್ಲ. ಲೌಕಿಕ ವ್ಯವಹಾರಗಳಿಂದ ದೂರವಿರುವ ಸಂಕಲ್ಪದಿಂದ ಕಾಷಾಯವಸ್ತ್ರ ತೊಟ್ಟಿರುವವರು ತಮ್ಮ ಸ್ಥಾನದ ಉದ್ದೇಶವನ್ನೇ ಮರೆತಿರುವಂತೆ ವರ್ತಿಸುತ್ತಿದ್ದಾರೆ. ಸಮುದಾಯದ ಮುಖಂಡರು ತಮ್ಮ ಸಮುದಾಯದ ಅಭಿವೃದ್ಧಿಗೆ ಸವಲತ್ತುಗಳನ್ನು ಕೇಳುವುದರಲ್ಲಿ ಅರ್ಥವಿದೆ. ಆದರೆ ಮಠಾಧೀಶರು, ಧರ್ಮಗುರುಗಳೆಂದು ಗುರುತಿಸಿಕೊಂಡವರು ಒಟ್ಟಾರೆ ಸಮಾಜದ ಹಿತದ ಬಗ್ಗೆ ಯೋಚಿಸಬೇಕೇ ವಿನಾ ನಿರ್ದಿಷ್ಟ ಸಮುದಾಯಗಳ ರಕ್ಷಣೆಗೆ ನಿಲ್ಲಬಾರದು. ಯಾವುದೋ ಒಂದು ಜಾತಿಯ ಬಗ್ಗೆ ಮಾತ್ರ ಯೋಚಿಸುವವರು ಮಠದ ಗುರುಪೀಠ ಬಿಟ್ಟು ನೇರವಾಗಿ ರಾಜಕಾರಣಕ್ಕೆ ಬರಬಹುದು. ಕಾವಿ ಮತ್ತು ಖಾದಿಯ ನಡುವೆ ಬಹಳಷ್ಟು ವ್ಯತ್ಯಾಸವಿದೆ. ಇವೆರಡರಲ್ಲಿ ತಮ್ಮ ಆಯ್ಕೆ ಯಾವುದೆನ್ನುವುದನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಅವರಿಗಿದ್ದೇ ಇದೆ. ಕಾವಿ ಧರಿಸಿ, ಖಾದಿ ತೊಟ್ಟವರಂತೆ ವರ್ತಿಸುವ ಅನುಕೂಲಸಿಂಧು ಮನೋಧರ್ಮ ಸಮರ್ಥನೀಯವಲ್ಲ. ಈ ದ್ವಿಪಾತ್ರ ಅಭಿನಯದಿಂದ ಯಾವ ಕ್ಷೇತ್ರಕ್ಕೂ ನ್ಯಾಯ ಸಲ್ಲಿಸಿದಂತಾಗುವುದಿಲ್ಲ. ಧಾರ್ಮಿಕ ವಿಚಾರಗಳಲ್ಲಿ ಸರ್ಕಾರವು ಮತ್ತು ಆಡಳಿತದ ವಿಚಾರದಲ್ಲಿ ಧಾರ್ಮಿಕ ಸಂಸ್ಥೆಗಳು ಪರಸ್ಪರ ಹಸ್ತಕ್ಷೇಪ ಮಾಡದೆ, ಅಂತರ ಉಳಿಸಿಕೊಳ್ಳುವುದು ಉಭಯತ್ರರಿಗೂ ನಾಡಿಗೂ ಒಳ್ಳೆಯದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು