ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಪಿಎ: ಹಲವು ಅಲಗುಗಳ ಕತ್ತಿ ನಿಯಂತ್ರಣಕ್ಕೆ ನೆರವಾದೀತೇ ಬಜೆಟ್?

Last Updated 18 ಜನವರಿ 2021, 19:56 IST
ಅಕ್ಷರ ಗಾತ್ರ

ದೇಶದಲ್ಲಿ ಲಾಕ್‌ಡೌನ್‌ ಜಾರಿಗೆ ಬಂದಾಗ ಕುಸಿದಿದ್ದ ಷೇರು ಮಾರುಕಟ್ಟೆಗಳು, ನಂತರದ ದಿನಗಳಲ್ಲಿ ಭರ್ಜರಿ ಚೇತರಿಕೆ ದಾಖಲಿಸಿವೆ. ಲಾಕ್‌ಡೌನ್‌ ದಿನಗಳ ಆರಂಭದಲ್ಲಿ ಹೂಡಿಕೆ ಮಾಡಿದ್ದವರ ಲಾಭದ ಪ್ರಮಾಣವು ಎರಡಂಕಿಗಳಲ್ಲಿ ಇದೆ. ಹೂಡಿಕೆದಾರರಿಗೆ ಇದು ಜೀವಮಾನದಲ್ಲಿ ಒಮ್ಮೆ ಮಾತ್ರ ಸಿಗುವಂತಹ ಅವಕಾಶ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ವಾಸ್ತವದಲ್ಲಿ, ದೇಶದ ಷೇರು ಮಾರುಕಟ್ಟೆಗಳು ವರ್ತಿಸುತ್ತಿರುವ ರೀತಿಯನ್ನು ಗಮನಿಸಿದರೆ, ಈ ದೇಶದಲ್ಲಿ ಆರ್ಥಿಕ ಬಿಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಿತ್ತು ಎನ್ನಲು ಸಾಧ್ಯವೇ ಇಲ್ಲ! ಆದರೆ, ದೇಶದ ಅರ್ಥವ್ಯವಸ್ಥೆಯಲ್ಲಿನ ವಾಸ್ತವವು ಷೇರು ಮಾರುಕಟ್ಟೆಯಲ್ಲಿನ ಗೂಳಿಯ ಓಟದಂತೆ ಇಲ್ಲ ಎಂಬುದು ಜನಸಾಮಾನ್ಯರ ಅನುಭವಕ್ಕೂ ಬಂದಿರುವ ಸತ್ಯ. ಈ ಅನುಭವವನ್ನೇ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರು 2020ರಲ್ಲಿ, ‘ಅರ್ಥ ವ್ಯವಸ್ಥೆಗೂ ಷೇರು ಮಾರುಕಟ್ಟೆಗೂ ಸಂಬಂಧ ಕಡಿದು ಹೋಗಿರುವಂತೆ ಕಾಣುತ್ತಿದೆ’ ಎಂದು ವಿವರಿಸಿದ್ದರು. ಈಚೆಗೆ ಬಿಡುಗಡೆ ಆಗಿರುವ ಆರ್‌ಬಿಐನ ಹಣಕಾಸು ಸ್ಥಿರತೆ ವರದಿಯಲ್ಲಿಯೂ ಅವರು ಇದೇ ನೆಲೆಯ ಮಾತುಗಳನ್ನು ಆಡಿದ್ದಾರೆ. ‘ಹಣಕಾಸು ಮಾರುಕಟ್ಟೆಗಳ ಕೆಲವು ವಲಯಗಳು ಹಾಗೂ ನಿಜ ಆರ್ಥಿಕತೆ ನಡುವಿನ ಸಂಬಂಧದಲ್ಲಿ ಉಂಟಾಗಿರುವ ಕಂದಕವು ಈಚೆಗೆ ಹೆಚ್ಚಾಗುತ್ತಿದೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಅವರ ಎಚ್ಚರಿಕೆಯ ಮಾತುಗಳಿಗೆ ಆಧಾರವನ್ನು ಒದಗಿಸುವ ಹಲವು ಸಂಗತಿಗಳು ಹಣಕಾಸು ಸ್ಥಿರತೆ ವರದಿಯಲ್ಲಿಯೇ ಇವೆ. ಬ್ಯಾಂಕ್‌ಗಳಲ್ಲಿನ ವಸೂಲಾಗದ ಸಾಲದ (ಎನ್‌ಪಿಎ) ಸರಾಸರಿ ಪ್ರಮಾಣವು 2021ರ ಸೆಪ್ಟೆಂಬರ್‌ ವೇಳೆಗೆ ಶೇಕಡ 13.5ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. 2020ರ ಸೆಪ್ಟೆಂಬರ್‌ನಲ್ಲಿ ಸರಾಸರಿ ಎನ್‌ಪಿಎ ಪ್ರಮಾಣ ಶೇ 7.5ರಷ್ಟು ಇತ್ತು. ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಲ್ಲಿ ಸರಾಸರಿ ಎನ್‌ಪಿಎ ಶೇ 14.8ಕ್ಕೂ ಏರಿಕೆಯಾಗಬಹುದು ಎಂದೂ ವರದಿಯಲ್ಲಿ ಹೇಳಲಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಎನ್‌ಪಿಎ ಪ್ರಮಾಣವು ಶೇ 16.2ರವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಖಾಸಗಿ ಬ್ಯಾಂಕ್‌ಗಳ ಎನ್‌ಪಿಎ ಪ್ರಮಾಣ ಶೇ 7.9ಕ್ಕೆ ಹೆಚ್ಚಳ ಆಗಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅರ್ಥವ್ಯವಸ್ಥೆಯಲ್ಲಿನ ವಾಸ್ತವ ಏನು ಎಂಬುದನ್ನು ಈ ಅಂಕಿ–ಅಂಶಗಳು ವಿವರಿಸುತ್ತಿವೆ. ಸಾಲದ ರೂಪದಲ್ಲಿ ಹಣ ಪಡೆದುಕೊಂಡ ಉದ್ದಿಮೆಗಳಿಗೆ, ವ್ಯಕ್ತಿಗಳಿಗೆ ಅದನ್ನು ಹಿಂದಿರುಗಿಸುವ ಶಕ್ತಿ ಮೊದಲಿನ ಮಟ್ಟದಲ್ಲಿ ಇಲ್ಲ. ಸಾಲ ಪಡೆದ ಕೆಲವರು, ಆ ಸಾಲವನ್ನು ಹಿಂದಿರುಗಿಸದೆ ಇರುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಉದ್ಯಮಗಳ ಸೇವೆಗಳಿಗೆ, ಉತ್ಪನ್ನಗಳಿಗೆ ಬೇಡಿಕೆ ತಗ್ಗಿರಬಹುದು, ಸೇವೆ ಮತ್ತು ಉತ್ಪನ್ನಗಳ ಬಳಕೆದಾರನಾಗಿರುವ ಗ್ರಾಹಕನ ಆರ್ಥಿಕ ಶಕ್ತಿ ಕುಗ್ಗಿರಬಹುದು. ಇದು ಸಾಲ ತೀರಿಸುವ ಶಕ್ತಿ ಕುಂದುತ್ತಿರುವುದಕ್ಕೆ ಒಂದು ಕಾರಣವಾಗಿರಬಹುದು. ಭಾರತದ ಅರ್ಥವ್ಯವಸ್ಥೆಯು ನಿರೀಕ್ಷೆಗಿಂತ ಹೆಚ್ಚಿನ ವೇಗದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ಎಷ್ಟೇ ಗಟ್ಟಿ ದನಿಯಲ್ಲಿ ಹೇಳಿದರೂ ಆರ್‌ಬಿಐ ವರದಿಯನ್ನು ಅಧಿಕಾರಸ್ಥರು ಗಂಭೀರವಾಗಿ ಪರಿಗಣಿಸಲೇಬೇಕು. ಇನ್ನು ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಲಿದೆ. ಉದ್ಯಮದ ಯಾವ ವಲಯ ಹೆಚ್ಚು ಏಟು ತಿಂದಿದೆ ಎಂಬುದನ್ನು ಗುರುತಿಸಿ, ಆ ವಲಯಕ್ಕೆ ಅಗತ್ಯವಾದ ಪುನಶ್ಚೇತನ ಕ್ರಮಗಳನ್ನು ಬಜೆಟ್‌ನಲ್ಲಿ ಪ್ರಕಟಿಸಬಹುದು. ಆ ಮೂಲಕ, ಉದ್ದಿಮೆಗಳಲ್ಲಿ ನಗದು ಚಲಾವಣೆ ಹೆಚ್ಚಿಸುವ, ಅವು ತಾವು ಪಡೆದ ಸಾಲವನ್ನು ಮರಳಿಸುವ ಸ್ಥಿತಿಗೆ ಬರುವಂತೆ ಮಾಡುವ ಸಾಧ್ಯತೆಯನ್ನು ಬಜೆಟ್‌ ಒಳಗೊಂಡಿದೆ. ಬ್ಯಾಂಕ್‌ಗಳಲ್ಲಿ ಎನ್‌ಪಿಎ ಪ್ರಮಾಣವು ವರದಿಯಲ್ಲಿ ಹೇಳಿರುವ ಪ್ರಮಾಣಕ್ಕೆ ಏರಿಕೆ ಆದರೆ, ಅವುಗಳ ಸಾಲ ನೀಡುವ ಸಾಮರ್ಥ್ಯಕ್ಕೆ ಭಾರಿ ಏಟು ಬೀಳುತ್ತದೆ – ಅಂದರೆ, ಚಟುವಟಿಕೆಗಳನ್ನು ವಿಸ್ತರಿಸಲು ಬಯಸುವ ಉದ್ದಿಮೆಗಳಿಗೆ ಬಂಡವಾಳದ ಕೊರತೆ ಎದುರಾಗಬಹುದು. ಬ್ಯಾಂಕ್‌ಗಳು ಮಾರುಕಟ್ಟೆಯಿಂದ ಹಣ ಸಂಗ್ರಹಿಸುವುದಕ್ಕೂ ಹಿನ್ನಡೆ ಆಗಬಹುದು. ಎನ್‌ಪಿಎ ಎಂಬುದು ಹಲವು ಅಲಗುಗಳು ಇರುವ ಕತ್ತಿಯಿದ್ದಂತೆ. ಇದು ಅರ್ಥವ್ಯವಸ್ಥೆಯ ಮೇಲೆ ಒಂದೇ ಬಾರಿಗೆ ಹಲವು ಗಾಯಗಳನ್ನು ಮಾಡಬಲ್ಲದು. ಎನ್‌ಪಿಎ ಹೆಚ್ಚಳ ಆಗದಂತೆ ನೋಡಿಕೊಳ್ಳುವಲ್ಲಿ ಬಹುಜನರ ಹಿತ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT