ಶನಿವಾರ, ಫೆಬ್ರವರಿ 22, 2020
19 °C

ಗರ್ಭಪಾತ: ತಿದ್ದುಪಡಿಯ ಜೊತೆ ಅರಿವು ಮೂಡಿಸುವ ಕೆಲಸವೂ ಆಗಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ವೈದ್ಯಕೀಯ ಗರ್ಭಪಾತ ಕಾಯ್ದೆ– 1971ಕ್ಕೆ ಬದಲಾವಣೆ ತರಲು ಅವಕಾಶ ಕಲ್ಪಿಸುವ ‘ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ಮಸೂದೆ– 2020’ಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ. ಅತ್ಯಾಚಾರಕ್ಕೆ ಒಳಗಾದವರು, ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು ಸೇರಿದಂತೆ ‘ವಿಶೇಷ ವರ್ಗ’ದ ಅಡಿಯಲ್ಲಿ ಬರುವ ಮಹಿಳೆಯರು ಗರ್ಭ ಧರಿಸಿದ 24ನೇ ವಾರದವರೆಗೂ ಗರ್ಭಪಾತಕ್ಕೆ ಅವಕಾಶ ಕೊಡುವ ಈ ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಬಜೆಟ್ ಅಧಿವೇಶನದಲ್ಲೇ ಮಂಡಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ತಿದ್ದುಪಡಿಯಲ್ಲಿನ ‘ವಿಶೇಷ ವರ್ಗ’ದ ಮಹಿಳೆಯರು ಎನ್ನುವ ವ್ಯಾಖ್ಯಾನದ ಅಡಿಯಲ್ಲಿ ‘ಅತ್ಯಾಚಾರಕ್ಕೆ ಒಳಗಾದವರು, ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು’ ಮಾತ್ರವಲ್ಲದೆ ಬೇರೆ ಯಾರಿರುತ್ತಾರೆ ಎಂಬುದನ್ನು ನಿಯಮಗಳಲ್ಲಿ ಸ್ಪಷ್ಟಪಡಿಸಲಾಗುತ್ತದೆ. ಗರ್ಭ ಧರಿಸಿ 20 ವಾರಗಳಿಗಿಂತ ಕಡಿಮೆ ಅವಧಿಯಾಗಿದ್ದರೆ, ಗರ್ಭಪಾತಕ್ಕೂ ಮುನ್ನ ಒಬ್ಬ ವೈದ್ಯರಿಂದ ಸಲಹೆ ಪಡೆಯಬೇಕು. ಗರ್ಭಧಾರಣೆ ಆಗಿ 20 ವಾರಗಳಿಗಿಂತ ಹೆಚ್ಚು ಅವಧಿ ಆಗಿದ್ದರೆ ಇಬ್ಬರು ವೈದ್ಯರಿಂದ ಸಲಹೆ ಪಡೆಯಬೇಕು ಎನ್ನುವ ತಿದ್ದುಪಡಿ ತರುವ ಉದ್ದೇಶ ಕೇಂದ್ರ ಸರ್ಕಾರದ್ದು. ಈ ರೀತಿ ವೈದ್ಯಕೀಯ ಗರ್ಭ‍ಪಾತ ಮಾಡಿಸಿಕೊಳ್ಳುವ ಹೆಣ್ಣಿನ ಹೆಸರನ್ನು ಬಹಿರಂಗಪಡಿಸುವಂತೆ ಇಲ್ಲ ಎಂಬುದೂ ತಿದ್ದುಪಡಿ ಮಸೂದೆಯ ಭಾಗವಾಗಿ ಇರಲಿದೆ. ಈ ಉಪಕ್ರಮಗಳಿಂದಾಗಿ, ಮಹಿಳೆಯರ ಸುರಕ್ಷತೆ ಹಾಗೂ ಕ್ಷೇಮದ ದೃಷ್ಟಿಯಿಂದ ಒಂದು ಹೆಜ್ಜೆ
ಮುಂದಿರಿಸಿದಂತಾಗಿದೆ.

ಈಗಿರುವ 20 ವಾರಗಳ ಮಿತಿಯನ್ನು ದಾಟಿದ ನಂತರವೂ ಗರ್ಭಪಾತಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೋರಿ ನ್ಯಾಯಾಲಯಗಳಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಭ್ರೂಣದ ಬೆಳವಣಿಗೆಯು ತೀರಾ ಅಸಹಜವಾಗಿದೆ ಎಂಬ ಕಾರಣಕ್ಕೆ ಅಥವಾ ಮಹಿಳೆಯರು ಲೈಂಗಿಕ ಹಿಂಸಾಚಾರಕ್ಕೆ ಗುರಿಯಾಗಿ ಗರ್ಭ ಧರಿಸಿದ್ದರೆ 20 ವಾರಗಳ ನಂತರವೂ ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂದು ಈ ಅರ್ಜಿಗಳಲ್ಲಿ ಕೋರಲಾಗಿತ್ತು. ಈಗ ಪ್ರಸ್ತಾಪಿಸಿರುವ ಬದಲಾವಣೆಗಳು ಮಹಿಳೆಯರ ಘನತೆ ಕಾಯಲು ನೆರವಾಗುತ್ತವೆ ಎನ್ನುವ ಆಶಾಭಾವವನ್ನು ಕೇಂದ್ರ ವ್ಯಕ್ತಪಡಿಸಿದೆ. ವೈದ್ಯಕೀಯ ಗರ್ಭಪಾತಕ್ಕೆ ಇರುವ ಕಾಲಮಿತಿಯನ್ನು ಹೆಚ್ಚಿಸಬೇಕು ಎಂಬ ಶಿಫಾರಸನ್ನು ಸಂಸತ್ತಿನ ಸಮಿತಿಯೊಂದು ಎರಡು ವರ್ಷಗಳ ಹಿಂದೆ ಮಾಡಿತ್ತು.

ಕೆಲವು ಸಂದರ್ಭಗಳಲ್ಲಿ ಮಹಿಳೆಗೆ ತಾನು ಗರ್ಭವತಿ ಆಗಿದ್ದೇನೆ ಎಂಬುದು ತಡವಾಗಿ ಗೊತ್ತಾಗುತ್ತದೆ. ಬಹುತೇಕ ತೀರ್ಮಾನಗಳನ್ನು ಸ್ವಯಂಸ್ಫೂರ್ತಿಯಿಂದ ಕೈಗೊಳ್ಳಲಾಗದ ಸ್ಥಿತಿಯಲ್ಲಿ ಮಹಿಳೆ ಇರುತ್ತಾಳೆ. ಏಕೆಂದರೆ ನಮ್ಮ ಸಾಮಾಜಿಕ ವ್ಯವಸ್ಥೆ ಹಾಗಿದೆ. ಇಂಥದ್ದರಲ್ಲಿ, ವೈದ್ಯಕೀಯ ಗರ್ಭಪಾತ ಮಾಡಿಸಿಕೊಳ್ಳುವ ತೀರ್ಮಾನಕ್ಕೆ ಬರುವ ವೇಳೆಗೆ ಗರ್ಭಧಾರಣೆ ಆಗಿ 20 ವಾರಗಳು ಕಳೆದು ಹೋಗಿದ್ದರೆ, ಗರ್ಭಪಾತಕ್ಕೆ ಅನುಮತಿ ಕೋರಿ ಮಹಿಳೆಯು ನ್ಯಾಯಾಲಯದ ಮೆಟ್ಟಿಲೇರಬೇಕಾದ ಸ್ಥಿತಿ ಎದುರಾಗುತ್ತದೆ. ಕಾಲಮಿತಿಯನ್ನು 24 ವಾರಗಳಿಗೆ ವಿಸ್ತರಿಸುವುದರಿಂದ ಆಗುವ ಅನುಕೂಲ ಏನೆಂಬುದು ಇಂಥ ಸಂದಿಗ್ಧ ಪರಿಸ್ಥಿತಿ ಎದುರಿಸಿದ ಮಹಿಳೆಗೆ ಸ್ವಯಂವೇದ್ಯ. ಅಷ್ಟೇ ಅಲ್ಲ, ಗರ್ಭಪಾತ ಮಾಡಿಸಿಕೊಳ್ಳುವ ಅವಧಿಯನ್ನು ಕಾನೂನಿನ ಚೌಕಟ್ಟಿನಲ್ಲಿಯೇ ವಿಸ್ತರಿಸುವುದರಿಂದ, ಅಕ್ರಮವಾಗಿ ಗರ್ಭಪಾತ ಮಾಡಿಸುವ ಕೇಂದ್ರಗಳ ಚಟುವಟಿಕೆಗಳ ಮೇಲೆ ಕಡಿವಾಣ ಬೀಳುವ ಸಾಧ್ಯತೆ ಇದೆ.

2015ನೇ ಇಸವಿಯಲ್ಲಿ ದೇಶದಲ್ಲಿ ಒಟ್ಟು 1.56 ಕೋಟಿ ಪ್ರಕರಣಗಳಲ್ಲಿ ಗರ್ಭಪಾತ ಆಗಿದೆ. ಈ ಪೈಕಿ 1.15 ಕೋಟಿ ಪ್ರಕರಣಗಳಲ್ಲಿ ಗರ್ಭಪಾತ ನಡೆದಿರುವುದು ವ್ಯವಸ್ಥಿತ ಆರೋಗ್ಯ ಕೇಂದ್ರಗಳಿಂದಾಚೆಗೆ ಎಂದು ಸಂಶೋಧನಾ ಪ್ರಬಂಧವೊಂದು ಹೇಳಿತ್ತು. ಗರ್ಭಪಾತದ ಸಂದರ್ಭದಲ್ಲಿ ತಾಯಂದಿರು ಮರಣಹೊಂದುವ ಪ್ರಕರಣಗಳು ಕೂಡ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿವೆ ಎಂಬುದನ್ನು ಮರೆಯುವಂತೆ ಇಲ್ಲ. ಈ ದೃಷ್ಟಿಯಿಂದ ಕೂಡ, ಕೇಂದ್ರ ಸಂಪುಟ ಅನುಮೋದನೆ ನೀಡಿರುವ ತಿದ್ದುಪಡಿ ಮಸೂದೆಯಿಂದಾಗಿ ಒಂದಿಷ್ಟು ಒಳಿತಾಗಬಹುದು ಎಂಬ ನಿರೀಕ್ಷೆ ಹೊಂದಬಹುದು. ಆದರೆ, ಗರ್ಭಪಾತ ಮಾಡಿಸಿಕೊಳ್ಳಲು ನಿರ್ದಿಷ್ಟ ಕಾನೂನು ಇದೆ ಎಂಬ ಅರಿವು ಸಮಾಜದಲ್ಲಿ ಎಷ್ಟರಮಟ್ಟಿಗೆ ಇದೆ ಎಂಬುದು ಮುಖ್ಯ. ಗರ್ಭಪಾತಕ್ಕೆ ತನಗೆ ಕಾನೂನಿನ ಅಡಿಯಲ್ಲೇ ಅವಕಾಶ ಇದೆ ಎಂಬ ಮಾಹಿತಿ ಅತ್ಯಾಚಾರ ಸಂತ್ರಸ್ತೆಗೆ ಗೊತ್ತಿಲ್ಲದಿದ್ದರೆ, ಆಕೆ ಅಕ್ರಮವಾಗಿ ಗರ್ಭಪಾತ ಮಾಡಿಸುವ ಕೇಂದ್ರಗಳತ್ತ ಮುಖಮಾಡುವ ಸಾಧ್ಯತೆಯೇ ಹೆಚ್ಚಿರುತ್ತದೆ. ಅಕ್ರಮ ಕೇಂದ್ರಗಳು ಮಹಿಳೆಯ ಜೀವಕ್ಕೇ ಕುತ್ತು ತರುತ್ತವೆ ಎಂಬುದನ್ನು ಅಂಕಿ–ಅಂಶಗಳು ಹೇಳುತ್ತವೆ. ತಿದ್ದುಪಡಿ ಮಸೂದೆಯನ್ನು ಮಂಡಿಸಿ, ಅದನ್ನು ಕಾನೂನಾಗಿ ಜಾರಿಗೊಳಿಸುವುದರ ಜೊತೆಯಲ್ಲೇ, ಅದರ ಬಗ್ಗೆ ಸಮಾಜದಲ್ಲಿ ವ್ಯಾಪಕ ಅರಿವು ಮೂಡಿಸುವ ಕೆಲಸವೂ ಆಗಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು