ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ಹಣದ ಆಸೆಗೆ ಭೂಮಿ ಮಾರಲ್ಲ ಎಂದ ಕೃಷಿ ಸಚಿವ ಬಿ.ಸಿ.ಪಾಟೀಲ

Last Updated 19 ಜೂನ್ 2020, 19:45 IST
ಅಕ್ಷರ ಗಾತ್ರ

ಪ್ರತಿ ವರ್ಷ 4 ಸಾವಿರ ವಿದ್ಯಾರ್ಥಿಗಳು ‘ಕೃಷಿ ಪದವಿ’ ಪಡೆದು ಹೊರಬರುತ್ತಾರೆ. ಎಲ್ಲರಿಗೂ ನೌಕರಿ ಕೊಡಲು ಸರ್ಕಾರದಿಂದ ಸಾಧ್ಯವಿಲ್ಲ. ಕೃಷಿಯಲ್ಲಿ ಬದಲಾವಣೆ ಮಾಡಲು ಯುವಕರು ಬಂದರೆ ಸ್ವಾಗತಿಸಬೇಕಿದೆ. ಕರ್ನಾಟಕ ಭೂ ಸುಧಾರಣೆ ಕಾಯ್ದೆಯ ತಿದ್ದುಪಡಿ ‘ಕೃಷಿ ಉತ್ತೇಜನ’ಕ್ಕೆ ದೊಡ್ಡ ಅವಕಾಶ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿದ್ದುಪಡಿಯನ್ನು ಸಮರ್ಥಿಸಿಕೊಳ್ಳುತ್ತಾರೆ

* ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ‘ಉಳುವವನೇ ಭೂ ಒಡೆಯ’ ಎಂಬುದು ‘ಉಳ್ಳವನೇ ಭೂ ಒಡೆಯ’ ಎಂಬಂತಾಗುವುದಿಲ್ಲವೇ?

ಇದು ಸಿದ್ದರಾಮಯ್ಯನವರ ವ್ಯಾಖ್ಯಾನ. ಅವರೇಕೆ ಕೃಷಿಯೇತರ ಆದಾಯದ ಮಿತಿಯನ್ನು ₹2 ಲಕ್ಷದಿಂದ ₹25 ಲಕ್ಷಕ್ಕೆ ಏರಿಸಿದರು? ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಈ ಭೂ ಸುಧಾರಣಾ ಕಾಯ್ದೆ ಇಲ್ಲ. ಮಹಾರಾಷ್ಟ್ರದಲ್ಲಿ ಕೃಷಿ ಅತ್ಯುನ್ನತ ಸ್ಥಾನದಲ್ಲಿದೆ. ಭೂಮಿ ತಾಯಿಯನ್ನು ಪ್ರೀತಿಸುವವರು ಜಮೀನು ಮಾರುವುದಿಲ್ಲ. ಸೋಮಾರಿಗಳು, ಜೂಜಾಡುವವರು ಭೂಮಿ ಮಾರುತ್ತಾರಷ್ಟೆ. ಅವನೂ ದುಡಿಯುವುದಿಲ್ಲ, ಬೇರೆಯವರಿಗೂ ಬಿಡುವುದಿಲ್ಲ ಎಂದರೆ ಹೇಗೆ?

* ‘ರೈತಸ್ನೇಹಿ’ ಎನ್ನುವ ತಿದ್ದುಪಡಿಗಳನ್ನು ರೈತರೇ ವಿರೋಧಿಸುವುದೇಕೆ?

ಇದು ಪ್ರಚೋದನೆ. ರಾಜಕೀಯ ಪಿತೂರಿ. ಕೃಷಿಕನಾದ್ದರಿಂದ ನನ್ನ ಅಭಿಪ್ರಾಯವನ್ನೂತಿದ್ದುಪಡಿಗೆ ಮುನ್ನ ಕೇಳಿದ್ದರು. ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿ ಮತ್ತು ಬೀಳುಬಿದ್ದ ಭೂಮಿಗಳಲ್ಲಿಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳನ್ನು ಕೈಗೊಳ್ಳಲು ಖರೀದಿದಾರರಿಗೆ ಅನುಮತಿ ನೀಡಬಹುದು ಎಂದು ತಿಳಿಸಿದ್ದೇನೆ.

* ಬಂಡವಾಳಶಾಹಿ, ಕಾರ್ಪೊರೇಟ್‌ ಕಂಪನಿಗಳು ಇಲ್ಲಿಯೂ ದಾಂಗುಡಿ ಇಟ್ಟರೆ?

ಕೃಷಿ ಮತ್ತು ಕೃಷಿಗೆ ಪೂರಕವಾದ ಚಟುವಟಿಕೆಗಳನ್ನೇ ಮಾಡಬೇಕು ಎಂಬುದು ನಮ್ಮ ಇಲಾಖೆಯ ಸಲಹೆ. ಈ ಅಂಶಗಳನ್ನು ಕಂದಾಯ ಇಲಾಖೆ ನಿಯಮಗಳನ್ನು ಮಾಡಬೇಕಾದ ಸಂದರ್ಭದಲ್ಲಿ ಸೇರಿಸಬೇಕು.11.79 ಲಕ್ಷ ಹೆಕ್ಟೇರ್‌ ಬೀಳುಬಿದ್ದ ಜಮೀನಿನಲ್ಲಿ ಯಾರಾದರೂ ಬೆಳೆ ಬೆಳೆಯಬೇಕಲ್ಲವೇ? ಕಡಿಮೆ ದರದಲ್ಲಿ ಸಿಗುವ ಭೂಮಿಗಳಲ್ಲಿ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸಿದರೆ ಗ್ರಾಮೀಣ ಪ್ರದೇಶಗಳಿಗೂ ಉದ್ದಿಮೆ ವಿಸ್ತರಿಸಿದಂತೆ ಆಗುತ್ತದೆ.

* ಈ ತಿದ್ದುಪಡಿಯಿಂದ ಭೂಮಾಫಿಯಾ, ರಿಯಲ್‌ ಎಸ್ಟೇಟ್‌ ದಂಧೆಗೆ ‘ರೆಡ್‌ ಕಾರ್ಪೆಟ್‌’ ಹಾಸಿದಂತಾಗುವುದಿಲ್ಲವೇ?

ಹಿರೇಕೆರೂರಿನಂಥ ಗ್ರಾಮೀಣ ಪ್ರದೇಶದಲ್ಲಿ ರೈತನ ಭೂಮಿಯನ್ನು ಖರೀದಿಸಿ, ‘ರಿಯಲ್‌ ಎಸ್ಟೇಟ್’‌ ಮಾಡಲು ಸಾಧ್ಯವೆ? ವಿರೋಧ ಪಕ್ಷದವರು ಹೇಳುವುದು ಬೆಂಗಳೂರಿನ ಬಗ್ಗೆ ಮಾತ್ರ! ದೇವನಹಳ್ಳಿ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರಸುತ್ತಮುತ್ತ ಈಗಾಗಲೇ ಭೂಮಿ ಮಾರಾಟ ಆಗಿದೆ.

* ಶ್ರೀಮಂತರು ‘ಭೂ ಬ್ಯಾಂಕ್‌’ ಮಾಡಿಕೊಂಡರೆ, ಸಣ್ಣ ಹಿಡುವಳಿದಾರರು ಬೀದಿ ಪಾಲಾಗುವುದಿಲ್ಲವೇ?

ಹಣದ ಆಸೆಗೆ ಯಾರೂ ಭೂಮಿ ಮಾರುವುದಿಲ್ಲ. ಮಕ್ಕಳಿಗೆ ಭೂಮಿ ಬೇಕು ಎಂದು ಬಯಸುವ ರೈತ ಎಂದಿಗೂ ಜಮೀನು ಮಾರುವುದಿಲ್ಲ.

* ‘ಭೂ ಸುಧಾರಣೆಯ ಆತ್ಮ’ ಎಂದು ಕರೆಯಲಾಗುವ 79 ಎ ಮತ್ತು ಬಿ ಸೆಕ್ಷನ್‌ಗಳನ್ನ ರದ್ದುಪಡಿಸಿದರೆ ಕಾಯ್ದೆಯನ್ನೇ ರದ್ದು ಪಡಿಸಿದಂತಲ್ಲವೇ?

ಇಂದು ಜಗತ್ತಿನಲ್ಲಿ ‘ಕೃಷಿ ಉದ್ದಿಮೆ’ ಮಾತ್ರ ಉಳಿದಿದೆ. ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕ ಪರಿಸ್ಥಿತಿ ಕೃಷಿಯ ಮೇಲೆ ಅವಲಂಬಿತವಾಗಲಿದೆ. ಈ ತಿದ್ದುಪಡಿಯಿಂದ ಯಾವುದೇ ಸಮಸ್ಯೆ ತಲೆದೋರುವುದಿಲ್ಲ.

* ರಾಜ್ಯ ಸರ್ಕಾರದ ಇಬ್ಬರು ಸಚಿವರೇ ಈ ತಿದ್ದುಪಡಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರಲ್ಲ?

ಅದು ಅವರ ವೈಯಕ್ತಿಕ ಅಭಿಪ್ರಾಯ. ವಿರೋಧ ಪಕ್ಷದವರಿಗೆ ಮಾಡುವುದಕ್ಕೆ ಕೆಲಸ ಇಲ್ಲ, ಅವರು ಹೇಳುತ್ತಾರಷ್ಟೆ.

* ಈ ತಿದ್ದುಪಡಿ ಬಗ್ಗೆ ನಿಮ್ಮ ವೈಯಕ್ತಿಕ ನಿಲುವೇನು?

ನನಗೆ 24 ಎಕರೆ ಜಮೀನು ಇದೆ. ಇನ್ನೂ ಜಮೀನು ಕೊಳ್ಳುವ ಆಸೆ ಇದೆ. ಹೊಸ ಫಾರ್ಮ್‌, ಹೊಸ ಯೋಜನೆ ಮಾಡಬೇಕು ಅಂತ ಕನಸಿದೆ. ನನಗೆ ಜಮೀನು ಕೊಳ್ಳಲು ನಿರ್ಬಂಧ ಇತ್ತು. ಈಗ ಇನ್ನೂ 75 ಎಕರೆ ಕೊಳ್ಳಬಹುದು. ದೊಡ್ಡ ಪ್ರಮಾಣದಲ್ಲಿ ಮಾದರಿ ಕೃಷಿ ಮಾಡಿ, ನಾನೇ ರೈತರಿಗೆ ಮಾದರಿಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT