ಶನಿವಾರ, ಮೇ 21, 2022
23 °C

‘ಭಾಷಾವಿಜ್ಞಾನ ನಮ್ಮಲ್ಲಿ 50 ವರ್ಷ ಹಿಂದುಳಿದಿದೆ’

ರಘುನಾಥ ಚ.ಹ. Updated:

ಅಕ್ಷರ ಗಾತ್ರ : | |

Deccan Herald

ಅಮೆರಿಕದ ನ್ಯೂಯಾರ್ಕ್‌ನಲ್ಲಿರುನ ‘ಸ್ಟೋನಿ ಬ್ರೂಕ್‌ ಯೂನಿವರ್ಸಿಟಿ’ಯ ‘ಸೆಂಟರ್‌ ಫಾರ್‌ ಇಂಡಿಯಾ ಸ್ಟಡೀಸ್‌’ ನಿರ್ದೇಶಕರಾಗಿರುವ ಪ್ರೊ. ಎಸ್‌. ಎನ್. ಶ್ರೀಧರ್ ಭಾಷಾವಿಜ್ಞಾನಿಯಾಗಿ ಪ್ರಸಿದ್ಧರು. ಇಂಗ್ಲಿಷ್‌ ಜೊತೆಗೆ ಭಾರತೀಯ ಸಮಾಜ– ಸಂಸ್ಕೃತಿ ಕುರಿತು ಬೋಧಿಸುವ ಅವರು, ಕನ್ನಡದ ನುಡಿವ್ಯಾಪಾರಕ್ಕೆ ಸಂಬಂಧಿಸಿದಂತೆ ಅಧ್ಯಯನ ನಿರತರು. ಅವರ ‘ಆಧುನಿಕ ಕನ್ನಡದ ಸಮಗ್ರ ವ್ಯಾಕರಣ’ದ ಇಂಗ್ಲಿಷ್‌ ಆವೃತ್ತಿಯನ್ನು ಭಾಷಾ ಕ್ಷೇತ್ರಕಾರ್ಯಕ್ಕೆ ಸಂಬಂಧಿಸಿದಂತೆ ವಿಶ್ವದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಮಾದರಿಯಾಗಿ ಬಳಸುತ್ತಾರೆ. ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಸ್ಟೋನಿ ಬ್ರೂಕ್‌ ಯೂನಿವರ್ಸಿಟಿಯಲ್ಲಿನ ‘ಭಾರತ ಅಧ್ಯಯನ ಕೇಂದ್ರ’ದ ಚಟುವಟಿಕೆಗಳ ಸ್ವರೂಪ ಯಾವ ಬಗೆಯದು?

‘ಭಾರತ ಅಧ್ಯಯನ ಕೇಂದ್ರ’ದಲ್ಲಿ ಭಾರತೀಯ ಸಾಹಿತ್ಯ, ನಾಗರಿಕತೆ, ಬುದ್ಧಿಸಂ, ಅದ್ವೈತ, ವೇದಾಂತ, ಭರತನಾಟ್ಯ ಸೇರಿದಂತೆ ವಿವಿಧ ವಿಷಯಗಳ 30 ಕೋರ್ಸ್‌ಗಳಿವೆ. ಅನಿವಾಸಿ ಭಾರತೀಯರ ನೆರವಿನೊಂದಿಗೆ 1997ರಲ್ಲಿ ಆರಂಭವಾದ ಸಂಸ್ಥೆಯಲ್ಲಿ ಈವರೆಗೆ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿತಿದ್ದಾರೆ. ಇವರಲ್ಲಿ ಅರ್ಧದಷ್ಟು ವಿದ್ಯಾರ್ಥಿಗಳು ಭಾರತೀಯರಾದರೆ, ಉಳಿದವರು ವಿವಿಧ ದೇಶಗಳಿಗೆ ಸೇರಿದವರು. ಕನ್ನಡದ ಸಂಶೋಧನೆಯೂ ಕೇಂದ್ರದಲ್ಲಿ ನಡೆಯುತ್ತದೆ. ಇಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿರುವ ನಾರಾಯಣ ಹೆಗಡೆಯವರು, ಅನಂತಮೂರ್ತಿ ಮತ್ತು ರಾಮಾನುಜನ್ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ನಾನು ಎಲಿಯಟ್‌ನ ‘ವೇಸ್ಟ್‌ಲ್ಯಾಂಡ್‌’ ಕಾವ್ಯವನ್ನು ಕನ್ನಡಕ್ಕೆ ತಂದಿರುವೆ. ಪ್ರಸ್ತುತ, ‘ಕುಮಾರವ್ಯಾಸ ಭಾರತ’ದ ಇಂಗ್ಲಿಷ್‌ ಅನುವಾದದ ಯೋಜನೆಯ ಭಾಗವಾಗಿರುವೆ.

‘ಕುಮಾರವ್ಯಾಸ ಭಾರತ’ವನ್ನು ಇಂಗ್ಲಿಷ್‌ಗೆ ಅನುವಾದಿಸಬೇಕು ಎನ್ನಿಸಿದ್ದು ಏಕೆ?

‘ಕುಮಾರವ್ಯಾಸ ಭಾರತ’ ಭಾಷಾವಿಜ್ಞಾನಿಗಳ ಪಾಲಿಗೆ ಹಬ್ಬವಿದ್ದಂತೆ. ವಿಶ್ವದ ಯಾವ ಮಹಾಕಾವ್ಯಕ್ಕೂ ಕುಮಾರವ್ಯಾಸನ ಕೃತಿ ಕಡಿಮೆಯಾದುದಲ್ಲ. ಷೇಕ್ಸ್‌ಪಿಯರ್‌ ಕೃತಿಗಳಷ್ಟೇ ಸ್ವೋಪಜ್ಞತೆ ಹಾಗೂ ಜೀವನದರ್ಶನವನ್ನು ಕುಮಾರವ್ಯಾಸ ಭಾರತದಲ್ಲೂ ಕಾಣಬಹುದು. 2011ರಲ್ಲಿ ದೆಹಲಿಯಲ್ಲಿ ನಡೆದ ಸಮ್ಮೇಳನವೊಂದರಲ್ಲಿ ‘ಕುಮಾರವ್ಯಾಸ ಭಾರತ’ದ ಬಗ್ಗೆ ಮಾತನಾಡಿದ್ದೆ. ಆ ಸಂದರ್ಭದಲ್ಲಿ ವಿಶ್ವದ ವಿವಿಧ ಭಾಗಗಳ ವಿದ್ವಾಂಸರಲ್ಲಿ ಕುಮಾರವ್ಯಾಸನ ಹೆಸರು ಒಬ್ಬರಿಗೂ ಗೊತ್ತಿರಲಿಲ್ಲ. ಕನ್ನಡದ ಮೇರು ಕವಿಯ ಹೆಸರು ವಿಶ್ವಕ್ಕೆ ಅಪರಿಚಿತವಾಗಿದ್ದುದು ಬೇಸರವನ್ನುಂಟು ಮಾಡಿತು. ಈ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸುವುದು ನನ್ನ ಕರ್ತವ್ಯ ಎನ್ನಿಸಿತು.

ಅನುವಾದ ಪ್ರಕ್ರಿಯೆ ಶುರುವಾದುದು ಹೇಗೆ? ತೊಡಕುಗಳೇನಾದರೂ ಇದ್ದವೇ?

ನಮ್ಮಲ್ಲಿ ಕನ್ನಡ ಚೆನ್ನಾಗಿ ಬಲ್ಲ ಅನೇಕರಿಗೆ ಇಂಗ್ಲಿಷ್‌ ಮೇಲೆ ಪ್ರಭುತ್ವ ಕಡಿಮೆ. ಇಂಗ್ಲಿಷ್‌ ಗೊತ್ತಿರುವವರಿಗೆ ಕನ್ನಡದ ಹಿಡಿತ ಕಡಿಮೆ. ಈ ಕಂದಕವನ್ನು ತುಂಬುವುದು ದೊಡ್ಡ ಸವಾಲು. ಎರಡೂ ಭಾಷೆಗಳನ್ನು ಚೆನ್ನಾಗಿ ಬಲ್ಲ ಸಿ.ಎನ್‌. ರಾಮಚಂದ್ರನ್‌, ಎಚ್‌.ಎಸ್‌. ರಾಘವೇಂದ್ರ ರಾವ್, ಎಚ್‌.ಎಸ್‌. ಶಿವಪ್ರಕಾಶ್‌ ಹಾಗೂ ನಾರಾಯಣ ಹೆಗಡೆ ‘ಕುಮಾರವ್ಯಾಸ ಭಾರತ’ವನ್ನು ಅನುವಾದಿಸುತ್ತಿದ್ದಾರೆ. ನಾನು ಈ ಯೋಜನೆಯ ಮುಖ್ಯ ಸಂಪಾದಕ.

ನಾವು ಅನುವಾದದ ರೂಪುರೇಷೆಯನ್ನು ಸಿದ್ಧಪಡಿಸುತ್ತಿರುವಾಗಲೇ ರೋಹನ್‌ ಮೂರ್ತಿಯವರ ‘ಮೂರ್ತಿ ಕ್ಲಾಸಿಕಲ್‌ ಲೈಬ್ರರಿ ಆಫ್‌ ಇಂಡಿಯಾ’ ಯೋಜನೆ ಆರಂಭವಾದುದು ಒಂದು ಸುವರ್ಣಾವಕಾಶದಂತೆ ಕಾಣಿಸಿತು. ನಾನು ಕಳಿಸಿದ ಪ್ರಸ್ತಾವನೆಯನ್ನು ಷೆಲ್ಡನ್‌ ಪೊಲ್ಲಾಕ್‌ ಅವರು ಒಪ್ಪಿಕೊಂಡಿದ್ದರಿಂದಾಗಿ, ಅನುವಾದ ಪ್ರಕ್ರಿಯೆಗೆ ನಿಶ್ಚಿತ ರೂಪ ದೊರೆಯಿತು. ‘ಕುಮಾರವ್ಯಾಸ ಭಾರತ’ದಲ್ಲಿನ 8 ಸಾವಿರ ಷಟ್ಪದಿಗಳಲ್ಲಿ
ನಾವು 2500 ಷಟ್ಪದಿಗಳನ್ನು ಅನುವಾದಿಸುತ್ತಿದ್ದೇವೆ. ಈಗಾಗಲೇ ಮೊದಲ ಹಂತದ ಅನುವಾದ ಕಾರ್ಯ ಮುಗಿದಿದೆ. ಈ ಅನುವಾದ ಇನ್ನೆರಡು ವರ್ಷಗಳಲ್ಲಿ, ಮೂರು ಸಂಪುಟಗಳಲ್ಲಿ ಪ್ರಕಟವಾಗಲಿದೆ.

ಕನ್ನಡದಲ್ಲಿ ಅಡಿಗ, ಕಾರಂತ ಸೇರಿದಂತೆ ಕೆಲವು ಲೇಖಕರ ಕೃತಿಗಳನ್ನು ಇಂಗ್ಲಿಷ್‌ಗೆ ತರಲಾಗಿದೆ. ಆದರೆ, ‘ಸಂಸ್ಕಾರ’ ಹೊರತುಪಡಿಸಿದರೆ ಜಾಗತಿಕ ಮನ್ನಣೆ ಪಡೆದಿರುವ ಅನುವಾದಗಳು ವಿರಳ. ಕೃತಿಗಳ ವಿತರಣೆಯೂ ಸರಿಯಾಗಿಲ್ಲ. ನಮ್ಮ ಕೃತಿಯನ್ನು ‘ಹಾರ್ವರ್ಡ್‌ ಯೂನಿವರ್ಸಿಟಿ ಪ್ರೆಸ್‌’ ಪ್ರಕಟಿಸುವುದರಿಂದ ವಿಶ್ವದ ಎಲ್ಲ ಪ್ರಮುಖ ಗ್ರಂಥಾಲಯಗಳನ್ನು‘ಕುಮಾರವ್ಯಾಸ ಭಾರತ’ ತಲುಪಲಿದೆ.

ಕುಮಾರವ್ಯಾಸ ಅಥವಾ ಪಂಪನನ್ನು ಅನುವಾದಿಸಲು ಸಾಧ್ಯವೇ?

ಎಲ್ಲ ಅನುವಾದಗಳೂ ವಿಫಲಯತ್ನಗಳೇ. ನಾವು ಅನುವಾದಿಸುತ್ತಿರುವುದು ಕೃತಿಯ ಮೂಲ ಗೊತ್ತಿರುವವರಿಗೆ ಅಲ್ಲ, ಕನ್ನಡ ಗೊತ್ತಿಲ್ಲದಿರುವವರಿಗೆ. ಟಾಲ್‌ಸ್ಟಾಯ್‌ ಸೇರಿದಂತೆ ರಷ್ಯನ್‌ ಸಾಹಿತ್ಯವನ್ನು ನಾವು ಓದುತ್ತಿರುವುದು ಅನುವಾದಗಳ ಮೂಲಕವೇ. ಅನುವಾದಗಳಲ್ಲಿ ನಷ್ಟವಾಗಿದ್ದರೂ ರಷ್ಯನ್‌ ಸಾಹಿತ್ಯದ ಮಹತ್ವವನ್ನು ಗುರ್ತಿಸಿದ್ದೇವೆ. ಈ ನಿಟ್ಟಿನಲ್ಲೇ ಕನ್ನಡದ ಕೃತಿಗಳ ಅನುವಾದವನ್ನೂ ನೋಡಬೇಕು.

‘ಸ್ಟೋನಿ ಬ್ರೂಕ್ ಯೂನಿವರ್ಸಿಟಿ’ಯ ಭಾರತ ಅಧ್ಯಯನ ಕೇಂದ್ರದಲ್ಲಿ ಕನ್ನಡಕ್ಕೆ ಸಂಬಂಧಿಸಿದ ಕೋರ್ಸ್‌ಗಳು ಇಲ್ಲವೇ?

ಕನ್ನಡ ಭಾಷಾ ರಚನೆ ಬಗ್ಗೆ ಒಂದು ಕೋರ್ಸ್‌ ಮಾಡಿರುವೆ. ಮುಂದಿನ ವರ್ಷಗಳಲ್ಲಿ ಕನ್ನಡದ ಕೋರ್ಸ್‌ಗಳು ವ್ಯವಸ್ಥಿತವಾಗಿ
ಆಗಬಹುದು. ಸಂಶೋಧನೆಗಳೂ ಹೆಚ್ಚಿನ ಪ್ರಮಾಣದಲ್ಲಿ ನಡೆಯಬಹುದು. ಈ ಬಗ್ಗೆ ಕರ್ನಾಟಕ ಸರ್ಕಾರದ ನೆರವು ಬಯಸುತ್ತಿದ್ದೇವೆ. ಅಮೆರಿಕದಲ್ಲಿ ನಾವು ನೆಲ ತಯಾರು ಮಾಡಿದ್ದೇವೆ. ಕನ್ನಡದ ಬೀಜ ಊರಲು ಸರ್ಕಾರ ಮನಸ್ಸು ಮಾಡಬೇಕು.

ಕನ್ನಡಕ್ಕೆ ಅಥವಾ ಕನ್ನಡದಂಥ ಭಾಷೆಗೆ ಜಾಗತಿಕ ಮನ್ನಣೆ ದೊರೆಯಲು ಏನು ಮಾಡಬೇಕು?

ವಿಶ್ವದ ಅನೇಕ ಜನರಿಗೆ ಕನ್ನಡದ ಹೆಸರೇ ಗೊತ್ತಿಲ್ಲ. ಕನ್ನಡದ ಬಗ್ಗೆ ಅರಿವು ಮೂಡಿಸುವುದು ಮೊದಲು ಆಗಬೇಕಾದ ಕೆಲಸ. ಕನ್ನಡ ಕೃತಿಗಳ ಭಾಷಾಂತರ ಆಗಬೇಕಿರುವ ಎರಡನೇ ಕೆಲಸ. ಪುಸ್ತಕ ಪ್ರಸರಣವೂ ವ್ಯವಸ್ಥಿತವಾಗಿ ಆಗಬೇಕು. ಈ ನಿಟ್ಟಿನಲ್ಲಿ ಹೊಸಕಾಲದ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು. ಎರಡನೇ ಭಾಷೆಯಾಗಿ ಕನ್ನಡ ಕಲಿಸುವ ಕುರಿತು ಪ್ರಾಯೋಗಿಕ, ಸಂಶೋಧನಾತ್ಮಕ ಕೆಲಸಗಳು ವ್ಯವಸ್ಥಿತವಾಗಿ ನಡೆಯುವುದು ಆಗಬೇಕಾದ ಮೂರನೇ ಹಾಗೂ ಬಹುಮುಖ್ಯವಾದ ಕೆಲಸ. ಎಷ್ಟೆಲ್ಲ ಮಾತು, ಕೋಟಿಗಟ್ಟಲೆ ಹಣದ ಖರ್ಚಿನ ನಂತರವೂ ಕನ್ನಡೇತರರಿಗೆ ಕನ್ನಡ ಬೋಧಿಸುವ ಒಳ್ಳೆಯ ಪಠ್ಯವನ್ನು ರೂಪಿಸುವುದು ಸಾಧ್ಯವಾಗಿಲ್ಲ. ಆಧುನಿಕ ರೀತಿಯಲ್ಲಿ, ಆಡು ಕನ್ನಡವನ್ನೂ ಶಿಷ್ಟ ಕನ್ನಡವನ್ನೂ ವ್ಯಾವಹಾರಿಕವಾಗಿ ಪರಿಚಯಿಸುವ ಪಠ್ಯ ಸಿದ್ಧಪಡಿಸಬೇಕಿದೆ.

ಭಾಷಾವಿಜ್ಞಾನಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಆಗಿರುವ ಕೆಲಸಗಳು ತೃಪ್ತಿಕರವಾಗಿವೆಯೇ?

ಭಾಷಾವಿಜ್ಞಾನ ನಮ್ಮಲ್ಲಿ 50 ವರ್ಷಗಳಷ್ಟು ಹಿಂದುಳಿದಿದೆ. ಭಾಷಾವಿಜ್ಞಾನಕ್ಕೆ ಸಂಬಂಧಿಸಿದ ಸಂಸ್ಥೆಗಳು (ವಿಶ್ವವಿದ್ಯಾಲಯಗಳು) ತುಂಬಾ ಹಿಂದುಳಿದಿವೆ, ತಮ್ಮ ಕೆಲಸದಲ್ಲಿ ವಿಫಲವಾಗಿವೆ. ಕನ್ನಡಕ್ಕೆ ಸಂಬಂಧಿಸಿದಂತೆ ಆಧುನಿಕ ಚಿಂತನೆ ಮಾಡುತ್ತಿರುವ ಕೆ.ವಿ. ನಾರಾಯಣ್‌, ಶಂಕರ ಭಟ್ಟರಂಥವರು ಯೂನಿವರ್ಸಿಟಿಗಳಿಂದ ಹೊರಗೇ ಇದ್ದಾರೆ. ಹಾಗಾಗಿ, ಭಾಷಾವಿಜ್ಞಾನಕ್ಕೆ ಸಂಬಂಧಿಸಿದ ಯೋಜನೆಗಳನ್ನು ಸರ್ಕಾರ ತಜ್ಞ ವ್ಯಕ್ತಿಗಳಿಗೆ ವಹಿಸಬೇಕು,
ಸಂಸ್ಥೆಗಳಿಗಲ್ಲ.

ಆಧುನಿಕತೆಯ ಭರಾಟೆಯಲ್ಲಿ ಗ್ರಾಮಗಳ ಹಾಗೂ ಸಮುದಾಯಗಳ ಜ್ಞಾನವನ್ನು ಕಳೆದುಕೊಳ್ಳುತ್ತಿದ್ದರೂ ಕನ್ನಡದ ಭವಿಷ್ಯಕ್ಕೆ ಆತಂಕವಿಲ್ಲ ಎಂದು ನಂಬುತ್ತಿದ್ದೇವೆ. ನಮಗೆ ಉಳಿದಿರುವುದು ಅಥವಾ ನಾವು ಉಳಿಸಿಕೊಳ್ಳುತ್ತಿರುವುದು ಭಾಷೆಯ ಅಸ್ಥಿಪಂಜರವಷ್ಟೇ ಎನ್ನಿಸುವುದಿಲ್ಲವಾ?

ಭಾವುಕತೆಯಿಂದ ಪ್ರಯೋಜನವಿಲ್ಲ. ಸಾಂಸ್ಕೃತಿಕ ಕಾರಣದಿಂದಾಗಿ ಯಾವುದೇ ಭಾಷಿಕ ಸಂಗತಿಗಳು ಪುನರುಜ್ಜೀವನಗೊಂಡಿರುವ ಉದಾಹರಣೆಗಳು ಕಡಿಮೆ. ಸಮುದಾಯಗಳ ಜ್ಞಾನ ಉಳಿಯಬೇಕೆಂದರೆ ಅದು ಉಪಯೋಗಕ್ಕೆ ಬರುವಂತಾಗಬೇಕು. ಕನ್ನಡಕ್ಕೆ ಒಂದು ಮೌಲ್ಯವಿದೆ ಎಂದು ಜನರಿಗನ್ನಿಸಿದರೆ ಅದು ಉಳಿಯುತ್ತದೆ. ಸಾವಯವ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ ವ್ಯಾಪಾರತಂತ್ರ ಇದೆಯಲ್ಲ, ಮೈಸೂರ್‌ ಸಿಲ್ಕ್‌ ಅನ್ನು ಆಧುನೀಕರಣ ಮಾಡಿದ್ದೇವಲ್ಲ – ಅಂಥ ಕೆಲಸಗಳು ಭಾಷೆಗೆ ಸಂಬಂಧಿಸಿದಂತೆಯೂ ಆಗಬೇಕು. ಸಮುದಾಯಗಳ ಜ್ಞಾನವನ್ನು ಆಧುನೀಕರಣಗೊಳಿಸಬೇಕು.

ಚಿತ್ರ: ಮಂಜುನಾಥ್ ಎಂ.ಎಸ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು