ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ ಹುಟ್ಟಿದ್ದು ಹೇಗೆ?
ಅದು ರೈತ ಚಳವಳಿ ಮತ್ತು ಪರಿಸರ ಚಳವಳಿಗಳು ಆರಂಭಿಕ ಸ್ಥಿತಿಯಲ್ಲಿದ್ದ ಕಾಲಘಟ್ಟ. ಅವೆರಡರಲ್ಲೂ ನಾನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ. ಆಗಷ್ಟೇ ಕನ್ನಡ ಎಂಎ ಮುಗಿಸಿದ್ದೆ. ಮೇಲ್ನೋಟಕ್ಕೆ ಪುಸ್ತಕ ಪ್ರಕಟಣೆಗೆ ಒಂದು ವೇದಿಕೆ ಬೇಕಿತ್ತು. ಆದರೆ ಅದರಾಚೆಯ ನೂರಾರು ಕನಸುಗಳಿದ್ದವು. ವೇದಿಕೆಯನ್ನು ಮೈಸೂರಿನಲ್ಲಿ ಆಗಸ್ಟ್ 15,1985ರಂದು ಕೆ.ರಾಮದಾಸ್, ಪೋಲಂಕಿ ರಾಮಮೂರ್ತಿ, ಬಿ.ವಿ.ವೈಕುಂಠರಾಜು ಉದ್ಘಾಟಿಸಿದರು. ನಲವತ್ತು ವಸಂತಗಳು ಹೇಗೆ ಕಳೆದವು ಎಂದು ಈಗ ಅಚ್ಚರಿಯಾಗುತ್ತಿದೆ.
ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ‘ಅಭಿವ್ಯಕ್ತಿ’- ವಿವರಿಸುವಿರಾ?
ಮೊದಲ ಇಪ್ಪತ್ತು ವರ್ಷ ಪುಸ್ತಕ ಪ್ರಕಟಣೆಯಿಂದಾಚೆ ಜಿಗಿದು ವೈಚಾರಿಕ ತಳಹದಿಯ ಮೇಲೆ ಸರಳ, ಅಂತರ ಜಾತಿ ಮತ್ತು ಅಂತರ ಧರ್ಮೀಯ ಮದುವೆಗಳನ್ನು ಏರ್ಪಡಿಸಿದೆ. ಎಲ್ಲಕ್ಕೂ ಮೊದಲು ಆಗಸ್ಟ್ 15, 1986 ರಂದು ಪುಸ್ತಕ ಬಿಡುಗಡೆಯ ಮೂಲಕ ನಾನೇ ಸರಳ ಅಂತರ ಜಾತಿ ವಿವಾಹ ಮಾಡಿಕೊಂಡೆ. ಮಾಡಿಸಿದವರು ದಲಿತ ಕವಿ ಸಿದ್ದಲಿಂಗಯ್ಯ, ಇಂದೂಧರ ಹೊನ್ನಾಪುರ ಮುಂತಾದವರು. ನನ್ನ ಅಭಿವ್ಯಕ್ತಿ ಕ್ರಮೇಣ ಎಲ್ಲರ ಅಭಿವ್ಯಕ್ತಿಯಾಗತೊಡಗಿತು. ವೈಚಾರಿಕ ವೇದಿಕೆಯಾಯಿತು.
ಅಭಿವ್ಯಕ್ತಿಗೆ ನಲವತ್ತರ ಪ್ರಾಯ. ಹಿಂದಿರುಗಿ ನೋಡಿದರೆ ಅದು ಒಂದು ಚಳವಳಿ ಎನಿಸುತ್ತಿದೆಯೆ?
ಇಲ್ಲ. ಅದರ ಬದಲು ಎಲ್ಲರೂ ಮಾಡಬಹುದಾದ ಒಂದು ‘ಪ್ರಯೋಗ’ ಅನ್ನಿಸುತ್ತೆ. ಕಾರಣ ಚಳವಳಿ ಪದದ ಅರ್ಥ, ಅಪಾರ್ಥವಾಗಿದೆ. ಅನೇಕ ನಾಯಕರು-ಬರಹಗಾರರೂ ಕೂಡಾ-ಪ್ರಭುತ್ವವನ್ನು ಟೀಕಿಸುತ್ತಲೇ ಹಿಂಬಾಗಿಲಿನಿಂದ ವಿಧಾನಸೌಧವನ್ನು ಪ್ರವೇಶಿಸಿ ಸ್ಥಾನಮಾನಗಳ ಸ್ವಲಾಭಕ್ಕೆ ಚಳವಳಿಯನ್ನು ಖಾಯಂ ಅಡವಿಟ್ಟು ತಾವು ಫಲಾನುಭವಿಗಳಾಗಿದ್ದಾರೆ. ಇಂಥ ‘ಚಳವಳಿ’ಗಳು ಮತ್ತು ನಾಯಕರು ನಿರುಪಯುಕ್ತ ಮತ್ತು ಅಪಾಯಕರ. ಇದರಿಂದ ನಾನು ಚಳವಳಿಗಳಿಂದ ದೂರ ಸರಿದೆ. ಅಭಿವ್ಯಕ್ತಿ ಚಳವಳಿ ಅಲ್ಲ. ಅದು ಪ್ರಯೋಗಾಲಯ. ನಮ್ಮ ಪ್ರಯೋಗಕ್ಕೆ ನಮ್ಮ ಹಳ್ಳಿಯೇ ನಮಗೆ ಪ್ರಯೋಗಾಲಯವಾಯಿತು. ನನ್ನ ಚಳವಳಿಯ ಪಯಣದ ಕೊನೆಯ ಬಿಂದು ನಾಗತಿಹಳ್ಳಿ. ನಮ್ಮ ಅಭಿವ್ಯಕ್ತಿಯಲ್ಲಿ ಇದುವರೆಗೂ ಅಧ್ಯಕ್ಷ , ಕಾರ್ಯದರ್ಶಿ, ಖಜಾಂಚಿ ಎಂದಿಲ್ಲ. ಎಲ್ಲ ಕೂಡಿ ಎಲ್ಲ ಕೆಲಸ ಮಾಡುವುದು ನಮ್ಮ ಕ್ರಮ. ಪಕ್ಷಾತೀತವಾಗಿದ್ದೇವೆ. ಇದುವರೆಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಧನಸಹಾಯವನ್ನು ನಾವು ಪಡೆದಿಲ್ಲ ಮತ್ತು ಪಡೆಯುವುದಿಲ್ಲ. ಕಳೆದ ಇಪ್ಪತ್ತು ವರ್ಷಗಳಿಂದ ಅದು ಈಗ ನಿಚ್ಚಳವಾಗಿ ಗ್ರಾಮಮುಖಿಯಾಗಿದೆ. ರಂಗಭೂಮಿ, ಶಿಕ್ಷಣ, ವೈದ್ಯಕೀಯ, ಕೃಷಿ, ಕೌಶಲ್ಯ ಮುಂತಾದ ನಿಯತಕಾಲಿಕ ಚಟುವಟಿಕೆಗಳೊಂದಿಗೆ ಪ್ರತಿ ಯುಗಾದಿಯಲ್ಲಿ ‘ನಾಗತಿಹಳ್ಳಿ ಸಂಸ್ಕೃತಿ ಹಬ್ಬ’ ನಡೆಸುತ್ತೇವೆ. ಎಲ್ಲ ಕ್ಷೇತ್ರದ ಎಲ್ಲ ಗಣ್ಯರು ಈ ಹಬ್ಬಕ್ಕೆ ಸಾಕ್ಷಿಯಾಗಿದ್ದಾರೆ.
ಹಳ್ಳಿಯತ್ತ ಮುಖ ಮಾಡಿದ್ದೀರಿ...
ವ್ಯಕ್ತಿ ತನ್ನ ಹೆಸರಿನ ಜತೆ ಊರಿನ ಹೆಸರಿಟ್ಟುಕೊಳ್ಳುವುದು ಅಭಿಮಾನದ ಸಂಕೇತ. ಆದರೆ ಅದಷ್ಟರಿಂದಲೇ ಹಳ್ಳಿಗಳ ಉದ್ಧಾರ ಆಗದು. ನಾನು ಪ್ರಜ್ಞಾಪೂರ್ವಕವಾಗಿ ನನ್ನ ಹಳ್ಳಿಗೆ ಅಂಟಿಕೊಂಡೆ. ಇದು ಬರಿಯ ಭಾವನಾತ್ಮಕ ನಂಟು ಅಲ್ಲ. ಭಾವನಾತ್ಮಕವಾದರೆ ಅದು ಅಲ್ಪಕಾಲೀನವಾಗುತ್ತದೆ. ನನ್ನದು ದೀರ್ಘಕಾಲೀನ ನಂಟು ಮಾತ್ರವಲ್ಲ; ಕೊನೆ ಇರದ, ದಣಿವಿರದ ಪಯಣ. ಅಭಿವ್ಯಕ್ತಿ ಟಿಸಿಲೊಡೆದು ಯುವಕರ, ಯುವತಿಯರ ಸಂಘಟನೆಯಾಗಿ ಬೆಳೆದಿದೆ.
ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಯಶಸ್ಸಿನ ಬಗ್ಗೆ ಹೇಳಿ.
ಇದು ನನಗೆ ಅಪಾರ ನೆಮ್ಮದಿ ಕೊಟ್ಟಿರುವ ಸಂಗತಿ. ಮೊದಲು ರಂಗಮಂದಿರ ಆಯಿತು. ಗ್ರಂಥಾಲಯ ಆಯಿತು. ಕಂಪ್ಯೂಟರ್ ಸೆಂಟರ್ ಆಯಿತು. ಈ ಮೂರು ಕೇಂದ್ರಗಳ ಉದ್ದೇಶ ಕಲೆ, ಶಿಕ್ಷಣ, ವಿಜ್ಞಾನಗಳ ಅರಿವು ಮೂಡಿಸುವುದು. ಆದರೆ ಇವು ತತ್‌ಕ್ಷಣದ ಹಸಿವು ನೀಗಿಸಲಾರವು. ಹಳ್ಳಿಯ ಹೆಣ್ಣು ಮಕ್ಕಳ ಆರ್ಥಿಕ ಸಬಲೀಕರಣ ಮಾತ್ರ ಇದಕ್ಕೆ ಮದ್ದು. ಆಗ ಹೊಳೆದದ್ದು ‘ಅಭಿವ್ಯಕ್ತಿ ಹಾಲು ಉತ್ಪಾದಕರ ಮಹಿಳಾ ಸಂಘ’. ಮೈಸೂರು ಡೇರಿಯ ನನ್ನ ದಿನಗೂಲಿಯ ಪೂರ್ವಾಶ್ರಮದ ಅನುಭವ ಇತ್ತಲ್ಲ? ಬಯಲು ಸೀಮೆ ಮತ್ತು ಬರಪೀಡಿತ ಪ್ರದೇಶಗಳಲ್ಲಿ ಇದು ಯಶಸ್ವಿ ಆಗಲಾರದು ಎಂದು ಕೆಲವರು ಊಹಿಸಿದ್ದರು. ಆದರೆ ನನಗೆ ನಂಬಿಕೆ ಇತ್ತು. ವಿವಿಧ ರಾಜ್ಯಗಳಿಗೆ ಕರೆದುಕೊಂಡು ಹೋಗಿ ಅಲ್ಲಿನ ಯಶಸ್ವೀ ಡೇರಿ ಉದ್ಯಮ ತೋರಿಸಿದೆ. ದೈನಂದಿನ ನಲವತ್ತು ಲೀಟರಿನಿಂದ ಆರಂಭವಾದದ್ದು ಈಗ ಸಾವಿರ ಲೀಟರ್ ದಾಟಿದೆ. ವಾರಕ್ಕೊಮ್ಮೆ ಮನೆ ಬಾಗಿಲಿಗೆ ಹಣ ಬರುತ್ತಿದೆ. ಹಣ ಉಳಿತಾಯಕ್ಕೆ ನಮ್ಮ ಗ್ರಾಮದಲ್ಲೇ ಬ್ಯಾಂಕ್ ಆರಂಭಿಸಿದೆ. ಗ್ರಾಮ ಸ್ವರಾಜ್ಯ ಮತ್ತು ವಿಕೇಂದ್ರೀಕರಣದತ್ತ ಒಂದು ಪುಟ್ಟ ಹೆಜ್ಜೆ. ಇದನ್ನು ಚಳವಳಿ ಎನ್ನುವುದಕ್ಕಿಂತ ಎಲ್ಲರೂ ಮಾಡಬಹುದಾದ ಪ್ರಯೋಗ ಅನ್ನಬಹುದು.
ಅಭಿವ್ಯಕ್ತಿಯ ಮುಂದಿನ ಹೆಜ್ಜೆಗಳು...
ಹಾಲಿನ ಉತ್ಪಾದನೆ ಹೆಚ್ಚು ಮಾಡಿ ನಮ್ಮ ಗ್ರಾಮದಲ್ಲೇ ಶೀತಲೀಕರಣ ಕೇಂದ್ರ ತೆರೆಯಬೇಕು. ಹೊಳೆ, ಕೆರೆ ಇಲ್ಲದ ನಮ್ಮ ಊರಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಿದೆ. ಮತ್ತು ಇಡೀ ಹಳ್ಳಿಗೆ ಸೌರಶಕ್ತಿ ವ್ಯಾಪಿಸಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಸರ್ಕಾರೀ ಶಾಲೆಗೆ ಈಗಷ್ಟೇ ಶತಮಾನೋತ್ಸವ ತುಂಬಿದೆ. ಅಲ್ಲಿ ಕೊಠಡಿಗಳ ಕೊರತೆ ಇದೆ. ಮಕ್ಕಳ ಓದಿನತ್ತ ಹೆಚ್ಚಿನ ಗಮನ ಕೊಡಲು ನಿರ್ಧರಿಸಿದ್ದೇನೆ. ಪ್ರತಿ ತಿಂಗಳು ಅವರ ಪಠ್ಯಕ್ಕೆ ಪೂರಕವಾದ ವಿಶೇಷ ತರಗತಿಗಳನ್ನು ಐದು, ಆರು ಮತ್ತು ಏಳನೆ ತರಗತಿಯ ಮಕ್ಕಳಿಗೆ ಪಿಪಿಟಿ ಬಳಸಿ ತೆಗೆದುಕೊಳ್ಳುತ್ತಿದ್ದೇನೆ. ಇವೆಲ್ಲ ತತ್‌ಕ್ಷಣಕ್ಕೇ ಫಲಕೊಡದಿದ್ದರೂ ನಿಧಾನವಾಗಿ ನಾಳೆಗಳಲ್ಲಿ ಫಲ ಕೊಡಲಿವೆ. ಕೃಷಿ ಅಧ್ಯಯನ ಪ್ರವಾಸವನ್ನು ವಿದೇಶಗಳಿಗೂ ವಿಸ್ತರಿಸಬೇಕಿದೆ. ಬಹಳ ಮುಖ್ಯವಾದ ಸಮಾಧಾನಕರ ಸಂಗತಿ ಎಂದರೆ ಹಳ್ಳಿಯ ನನ್ನ ಸೋದರ ಸೋದರಿಯರು ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಾರೆ. ನಾನು ಸಾವಕಾಶವಾಗಿ ಬ್ಯಾಕ್ ಸೀಟ್ ಪ್ರೇಕ್ಷಕನಾಗುತ್ತಿದ್ದೇನೆ. ಇದೆಲ್ಲವೂ ವ್ಯಕ್ತಿ ಕೇಂದ್ರಿತವಾಗದೆ ತತ್ತ್ವ ಕೇಂದ್ರಿತವಾಗಬೇಕು ಎಂಬುದು ನನ್ನ ಆಶಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.