ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ: ಮಕ್ಕಳ ಬಾಧಿಸುವ 3ನೇ ಅಲೆಗೆ ಈಗಿನಿಂದಲೇ ಸಿದ್ಧತೆ ಬೇಕು – ಡಾ.ವಿ.ರವಿ

Last Updated 20 ಮೇ 2021, 19:31 IST
ಅಕ್ಷರ ಗಾತ್ರ

ಲಸಿಕೆ ಅಭಿಯಾನದ ವೇಗ ತಗ್ಗಿದೆ ಮತ್ತು ಕೋವಿಡ್‌–19ರ ಎರಡನೇ ಅಲೆ ಜೋರಾಗಿದೆ. ಅಕ್ಟೋಬರ್‌–ಡಿಸೆಂಬರ್‌ ಹೊತ್ತಿಗೆ ಮೂರನೇ ಅಲೆಯ ಆತಂಕವೂ ಎದುರಾಗಿದೆ. ಈ ಅಲೆಯು ಮಕ್ಕಳನ್ನು ತೀವ್ರವಾಗಿ ಬಾಧಿಸಬಹುದು ಎಂಬುದಕ್ಕೆ ಬಲವಾದ ಪುರಾವೆಗಳಿವೆ ಎಂದು ಸೋಂಕುಶಾಸ್ತ್ರಜ್ಞ ಡಾ. ವಿ. ರವಿ ಹೇಳಿದ್ದಾರೆ. ಶಿಶು ಆರೋಗ್ಯ ಮೂಲಸೌಕರ್ಯವನ್ನು ದೇಶ ಮತ್ತು ಕರ್ನಾಟಕವು ಉತ್ತಮಪಡಿಸಿಕೊಳ್ಳದಿದ್ದರೆ ಘೋರ ದೃಶ್ಯಗಳನ್ನು ಕಾಣಬೇಕಾದೀತು ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

lಮೂರನೇ ಅಲೆಯು ಮಕ್ಕಳನ್ನು ಬಾಧಿಸಲಿದೆ ಎಂದಿರಿ. ಮೂರನೇ ಅಲೆ ಬರುವುದು ಖಚಿತವೇ?

ಯುರೋಪ್‌ನಲ್ಲಿ ಈಗ ಮೂರನೇ ಅಲೆ ಇದೆ. ಅಮೆರಿಕದಲ್ಲಿ ನಾಲ್ಕನೇ ಅಲೆ. ಸಾಂಕ್ರಾಮಿಕದಲ್ಲಿ ಅಲೆಗಳಿಂದ ತಪ್ಪಿಸಿಕೊಳ್ಳಲಾಗದು. ಜನರಿಗೆ ಎಷ್ಟು ಬೇಗ ಲಸಿಕೆ ಹಾಕಿಸಲಾಗುವುದು ಎಂಬುದರ ಮೇಲೆ ಸೋಂಕು ತಡೆಯು ಅವಲಂಬಿತ. ನಮ್ಮ ದೇಶದಲ್ಲಿ ವಯಸ್ಕರ ಒಂದು ವರ್ಗಕ್ಕೆ ಮಾತ್ರ ಲಸಿಕೆ ಹಾಕಲಾಗಿದೆ. ಈಗಿನ ಲಸಿಕೆ ಅಭಿಯಾನವು ಪೂರ್ಣಗೊಳ್ಳಲು ಮೂರರಿಂದ ಆರು ತಿಂಗಳು ಬೇಕು. ಆ ಹೊತ್ತಿಗೆ ಶೇಕಡ 50ರಷ್ಟು ಜನರಿಗೆ ಮಾತ್ರ ಲಸಿಕೆ ಹಾಕಲಾಗಿರುತ್ತದೆ. ಇವರಲ್ಲಿ ಯಾರೂ ಮಕ್ಕಳಲ್ಲ. ಏಕೆಂದರೆ ಮಕ್ಕಳ ಲಸಿಕೆ ಇನ್ನೂ ಸಿದ್ಧವೇ ಆಗಿಲ್ಲ.

lಮುಂದಿನ ಕೆಲವು ತಿಂಗಳಲ್ಲಿ ಏನನ್ನು ನಿರೀಕ್ಷಿಸಬಹುದು?

ಎರಡನೇ ಅಲೆಯ ನಿಯಂತ್ರಣ ಜೂನ್‌ ಕೊನೆಯ ಹೊತ್ತಿಗಷ್ಟೇ ಸಾಧ್ಯವಾಗಬಹುದು. ಬಳಿಕ ಎರಡರಿಂದ ಮೂರು ತಿಂಗಳು ಏನೂ ಇರಲಿಕ್ಕಿಲ್ಲ. ನಂತರ ಮೂರನೇ ಅಲೆ ಆರಂಭವಾಗಬಹುದು. ಆ ಹೊತ್ತಿಗೆ ಲಸಿಕೆ ಹಾಕಿಸಿಕೊಂಡಿಲ್ಲದ ವಯಸ್ಕರಿಗೂ ಅಪಾಯ ಇದೆ. ಮಕ್ಕಳಲ್ಲಿ ಗಣನೀಯ ಪ್ರಮಾಣದಲ್ಲಿ ಸೋಂಕು ಹರಡಬಹುದು.

lಮಕ್ಕಳಿಗೆ ಹಿಂದೆಯೂ ಸೋಂಕು ಆಗಿತ್ತು. ಈ ಬಾರಿ ಸೋಂಕಿನ ಪ್ರಮಾಣ ಹೇಗಿರಬಹುದು?

ಸೋಂಕಿಗೆ ಒಳಗಾಗುವ ಅಪಾಯ ಇರುವ ಮಕ್ಕಳ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಸೆರೊ ಸಮೀಕ್ಷೆಗಳ ಪ್ರಕಾರ ದೇಶದಲ್ಲಿರುವ ಮಕ್ಕಳ ಪೈಕಿ ಶೇ 25ರಷ್ಟು ಮಕ್ಕಳು ಕಳೆದ 17 ತಿಂಗಳಲ್ಲಿ ಸೋಂಕಿಗೆ ತೆರೆದುಕೊಂಡಿದ್ದಾರೆ. ಸುಮಾರು ಶೇ 60ರಷ್ಟು ಮಕ್ಕಳು ಸೋಂಕಿಗೆ ಒಳಗಾಗುವ ಅಪಾಯ ಹೊಂದಿದ್ದಾರೆ. ಸಂಖ್ಯೆಯಲ್ಲಿ ಹೇಳುವುದಾದರೆ ಇದು 18 ಕೋಟಿ. ಶೇ 20ರಷ್ಟು ಮಕ್ಕಳು ಸೋಂಕಿಗೆ ಒಳಗಾಗಬಹುದು ಎಂದಿಟ್ಟುಕೊಂಡರೂ ಆ ಸಂಖ್ಯೆಯು 3.6 ಕೋಟಿ. ಹೆಚ್ಚಿನ ಮಕ್ಕಳಲ್ಲಿ ಲಕ್ಷಣಗಳು ಸೌಮ್ಯವಾಗಿಯೇ ಇರಬಹುದು. ಆದರೆ, ಶೇ ಒಂದರಷ್ಟು ಮಕ್ಕಳಲ್ಲಿ ಗಂಭೀರ ಸಮಸ್ಯೆ ಉಂಟಾದರೂ 3.6 ಲಕ್ಷ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ.

lಈ ಪರಿಸ್ಥಿತಿ ನಿಭಾಯಿಸಲು ಶಿಶು ತೀವ್ರ ನಿಗಾ ಸೌಲಭ್ಯಗಳು ನಮ್ಮಲ್ಲಿ ಇವೆಯೇ?

ಇಲ್ಲ. ಹಾಗಾಗಿಯೇ ನಮ್ಮ ಸಿದ್ಧತೆಗಳು ಈಗಲೇ ಆರಂಭಗೊಳ್ಳಬೇಕು. ಶಾಲೆ ಆರಂಭಿಸುವ ಬಗ್ಗೆಯೂ ನಮ್ಮ ಚರ್ಚೆಗಳು ಶುರುವಾಗಬೇಕು. ಶಿಶು ಒಳರೋಗಿ ಮೂಲಸೌಕರ್ಯ ಹೆಚ್ಚಿಸಬೇಕು.

lಲಸಿಕೆ ಹಾಕಿಸಿಕೊಂಡರೂ ಸೋಂಕು ತಡೆ ಸಾಧ್ಯವಾಗಿಲ್ಲ ಎಂಬ ನಿರಾಶೆ ಇದೆ. ಇದನ್ನು ಹೇಗೆ ನಿಭಾಯಿಸುವುದು?

ಯಾವುದೇ ಲಸಿಕೆಗೆ ಸಂಬಂಧಿಸಿದಂತೆಯೂ ಮಾಹಿತಿ ಅತ್ಯಂತ ಸ್ಪಷ್ಟ. ಲಸಿಕೆಯು ಸಾವು ತಡೆಯುತ್ತದೆ ಮತ್ತು ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಲಸಿಕೆಯು ಸೋಂಕನ್ನು ತಡೆಯುತ್ತದೆ ಎಂಬ ಅತಿಯಾದ ನಿರೀಕ್ಷೆ ಜನರಲ್ಲಿ ಇದೆ. ಪೋಲಿಯೊ ಲಸಿಕೆ ಹಾಕಿಸಿಕೊಂಡ ಬಳಿಕವೂ ಸೋಂಕು ತಗಲುತ್ತದೆ, ಆದರೆ ರೋಗ ಬರುವುದಿಲ್ಲ.

lಕೊರೊನಾ ವೈರಾಣುವು ರೂಪಾಂತರಗೊಳ್ಳುತ್ತಿರುವುದರಿಂದ ಮುಂದಿನ ವರ್ಷಗಳಲ್ಲಿಯೂ ನಾವು ಲಸಿಕೆ ಹಾಕಿಸಿಕೊಳ್ಳಬೇಕಾಗುತ್ತದೆಯೇ?

ಇಲ್ಲ ಎಂದು ಈಗಲೇ ಹೇಳಲಾಗದು. ಈಗ ಅನುಮೋದನೆ ದೊರೆತಿರುವ ಎಲ್ಲ ಲಸಿಕೆಗಳೂ ಈಗ ಇರುವ ವೈರಾಣು ತಳಿಗಳಿಗೆ ಪರಿಣಾಮಕಾರಿ. ಗಣನೀಯವಾಗಿ ರೂಪಾಂತರಗೊಂಡ ವೈರಾಣು ಮುಂದಿನ ದಿನಗಳಲ್ಲಿ ಕಾಣಿಸಿಕೊಂಡರೆ ಲಸಿಕೆ ಬೇಕಾಗಬಹುದು.

lಮುಂದಿನ ದಿನಗಳಲ್ಲಿ ಕಳವಳಕಾರಿಯಾದ ರೂಪಾಂತರ ವೈರಾಣು ಕಾಣಿಸಿಕೊಳ್ಳಬಹುದೇ?

ಒಳ್ಳೆ ಪ್ರಶ್ನೆ, ಇಂತಹ ವೈರಾಣು ಯಾವಾಗ ಕಾಣಿಸಿಕೊಳ್ಳಬಹುದು ಎಂದು ಹೇಳುವುದು ಕಷ್ಟ. ಸೋಂಕಿಗೆ ಒಳಗಾದ ಒಬ್ಬನೇ ವ್ಯಕ್ತಿಯಲ್ಲಿ ಲಕ್ಷಾಂತರ ವೈರಾಣುಗಳು ಹುಟ್ಟುತ್ತವೆ. ಅವುಗಳಲ್ಲಿ ಅತ್ಯಂತ ಶಕ್ತವಾದವುಗಳಷ್ಟೇ ಬದುಕಿಕೊಳ್ಳುತ್ತವೆ. ಇವೇ ಇತರರಿಗೆ ತಗಲುತ್ತವೆ ಮತ್ತು ರೂಪಾಂತರಕ್ಕೂ ಕಾರಣವಾಗುತ್ತವೆ.

lಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಸೃಷ್ಟಿಯಾಗುವ ನೈಸರ್ಗಿಕ ರೋಗ ನಿರೋಧಕ ಶಕ್ತಿಯು ಎಷ್ಟು ಕಾಲ ಇರುತ್ತದೆ?

ಆರು ತಿಂಗಳು ಗರಿಷ್ಠ ಅವಧಿ. ಆದರೆ, ಲಸಿಕೆಯ ಮೂಲಕ ದೇಹಕ್ಕೆ ಸೇರಿಸಲಾಗುವ ರೋಗ ನಿರೋಧಕ ಶಕ್ತಿಯು ನೈಸರ್ಗಿಕ ರೋಗ ನಿರೋಧಕ ಶಕ್ತಿಗಿಂತ ಹೆಚ್ಚು ಕಾಲ ಇರುತ್ತದೆ.

lಮರು ಸೋಂಕಿನ ವಿಚಾರವು ಸಾಮಾನ್ಯವಾಗಿ ಗಣನೆಗೆ ಬರುವುದೇ ಇಲ್ಲ. ಇದರಿಂದಾಗಿ ಸೋಂಕಿನ ಅಪಾಯಕ್ಕೆ ಒಳಗಾಗುವ ಜನರ ಸಂಖ್ಯೆ ಹೆಚ್ಚುವುದಿಲ್ಲವೇ?

ಮೊದಲ ಅಲೆಯಲ್ಲಿ ಮರು ಸೋಂಕು ಪ್ರಮಾಣ ಶೇ 1 ಅಷ್ಟೇ ಇತ್ತು. ಈಗ ಅದು ಶೇ 5ರಿಂದ ಶೇ 10ರ ನಡುವೆ ಇದೆ. ನನ್ನ ಬಲವಾದ ಅನಿಸಿಕೆ ಏನೆಂದರೆ, ಮರು ಸೋಂಕಿಗೆ ಒಳಗಾದವರಲ್ಲಿ ಬೇರೊಂದು ರೂಪಾಂತರ ತಳಿ ಇದೆ. ಮುಂದಿನ ಕೆಲವು ತಿಂಗಳಲ್ಲಿ ಕಳವಳಕಾರಿಯಾದ ರೂಪಾಂತರ ತಳಿಯು ಅಭಿವೃದ್ಧಿಯಾದರೆ ಮೂರನೇ ಅಲೆಯಲ್ಲಿ ಸೋಂಕು ಪ್ರಮಾಣ ಹೆಚ್ಚಬಹುದು.

ಸೋಂಕುಶಾಸ್ತ್ರಜ್ಞ ಡಾ. ವಿ. ರವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT