ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Interview| ಲಾಕ್‌ಡೌನ್‌ನಿಂದ ಆರ್ಥಿಕತೆಗೆ ಹಾನಿಯಲ್ಲದೆ ಬೇರೆ ಲಾಭವಿಲ್ಲ: ಕೇಜ್ರಿ

Last Updated 7 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ಸಾಧನೆಯನ್ನು ಹೇಗೆ ನೋಡುವಿರಿ?

ಎಎಪಿ ಸರ್ಕಾರದ ಸಾಧನೆಗಳ ನಿಜವಾದ ಮೌಲ್ಯಮಾಪಕರು ದೆಹಲಿ ನಾಗರಿಕರು. ಜನಸಾಮಾನ್ಯರಿಗೂ ಘನತೆಯ ಬದುಕು ಕಟ್ಟಿಕೊಟ್ಟಿದ್ದೇವೆ. ಎಲ್ಲರಿಗೂ ಗುಣಮಟ್ಟದ ಶಿಕ್ಷಣ, ಆರೋಗ್ಯ, ನೀರು, ವಿದ್ಯುತ್‌ ನೀಡಿದ ಸಾರ್ಥಕತೆ ಇದೆ. ದೆಹಲಿಯ ಸರ್ಕಾರಿ ಶಾಲೆ ಮತ್ತು ಮೊಹಲ್ಲಾ ಕ್ಲಿನಿಕ್‌ಗಳ ಬಗ್ಗೆ ದೇಶದಾದ್ಯಂತ ಚರ್ಚೆಯಾಗುತ್ತಿದೆ. ‘ಕಾಮ್‌ ಕೀ ರಾಜನೀತಿ’ಗೆ ಮನ್ನಣೆ ದೊರೆತಿದೆ. ‘ದೆಹಲಿ ಮಾದರಿ’ ಎಲ್ಲರ ಗಮನ ಸೆಳೆದಿದೆ.

ಕೋವಿಡ್‌–19 ನಿಯಂತ್ರಣದಲ್ಲಿ ದೆಹಲಿ ಸರ್ಕಾರಕ್ಕೆ ಎದುರಾದ ಸವಾಲುಗಳೇನು ಮತ್ತು ಕಲಿತ ಪಾಠವೇನು?

ಮೇ ಕೊನೆಯವರೆಗೂ ಕೋವಿಡ್‌–19 ನಿಯಂತ್ರಣದಲ್ಲಿತ್ತು. ಲಾಕ್‌ಡೌನ್‌ ತೆರವಿನ ನಂತರ ಸೋಂಕು ಹೆಚ್ಚಾಗಬಹುದು ಎಂಬ ಅಂದಾಜಿತ್ತು. ನಮ್ಮ ನಿರೀಕ್ಷೆ ಮೀರಿ ಸೋಂಕು ಪಸರಿಸಿತ್ತು.ಜನರ ಸಹಭಾಗಿತ್ವದಲ್ಲಿ ಸರ್ಕಾರ ತಂಡವಾಗಿ ಕೆಲಸ ಮಾಡಿತು. ನಮ್ಮ ಯೋಜನೆ ಫಲ ನೀಡಿತು.

ಕೋವಿಡ್‌–19 ನಿಯಂತ್ರಣಕ್ಕೆ ಸರ್ಕಾರ ರೂಪಿಸಿದ ಕ್ರಿಯಾ ಯೋಜನೆಗೆ ಪ್ಲಾಸ್ಮಾ ಥೆರಪಿ ಎಷ್ಟು ಮತ್ತು ಹೇಗೆ ನೆರವಾಯಿತು?

ಕೊರೊನಾ ಲಸಿಕೆ ಬರಲು ಹಲವು ತಿಂಗಳು ಬೇಕು. ಜನರ ಜೀವ ಉಳಿಸುವುದು ತಕ್ಷಣದ ಆದ್ಯತೆಯಾಗಿತ್ತು. ಆಗ ನಮಗೆ ಕಂಡದ್ದೇ ಪ್ಲಾಸ್ಮಾ ಥೆರಪಿ. ಸಂಜೀವಿನಿಯಂತೆ ಅದು ಕೆಲಸ ಮಾಡುತ್ತಿದೆ. ಅಮೆರಿಕ ಕೂಡ ಈ ಥೆರಪಿ ಅಳವಡಿಸಿಕೊಂಡಿದೆ. ಇದು ಹೆಮ್ಮೆ ಪಡುವ ವಿಷಯವಲ್ಲವೇ?

ಸೋಂಕಿತರು ಮನೆಯಲ್ಲಿಯೇ ಐಸೊಲೇಷನ್ ಅಥವಾ ಕ್ವಾರಂಟೈನ್‌ ಆಗುವಂತೆ ಹೇಳಿದ್ದೀರಲ್ಲ?

ಶೆ 90ರಷ್ಟು ಸೋಂಕಿತರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಗತ್ಯವಿಲ್ಲ. ಮನೆಯಲ್ಲಿಯೇ ಐಸೊಲೇಷನ್, ಕ್ವಾರಂಟೈನ್ ಸಾಕು. ಎಲ್ಲರೂ ಆಸ್ಪತ್ರೆಗೆ ದಾಖಲಾದರೆ ಹಾಸಿಗೆ ಮತ್ತು ವೆಂಟಿಲೇಟರ್‌ ಕೊರತೆಯಾಗುತ್ತದೆ. ಹಾಗಾಗಿ ಎಲ್ಲರಿಗೂ ಉಚಿತ ಆಕ್ಸಿಮೀಟರ್ ಒದಗಿಸಿ, ವೈದ್ಯರ ತಂಡ ದೂರವಾಣಿಯಲ್ಲಿ ಆರೋಗ್ಯ ವಿಚಾರಿಸುತ್ತಿದೆ.

ಕೊರೊನಾ ನಿಯಂತ್ರಣದಲ್ಲಿ ಕೇಂದ್ರದೊಂದಿಗೆ ತಿಕ್ಕಾಟ ನಡೆಯಿತೇ?

ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಇರುವುದು ನಿಜ. ಕೋವಿಡ್‌–19 ನಿಯಂತ್ರಣದ ಎಲ್ಲ ಶ್ರೇಯವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿ. ಜನರ ಜೀವಗಳ ಜವಾಬ್ದಾರಿ ಮಾತ್ರ ನಮಗಿರಲಿ.ಯಶಸ್ಸಿನ ಶ್ರೇಯ ಮತ್ತು ಪ್ರಚಾರಕ್ಕಾಗಿ ಗುದ್ದಾಡುವ ಜಾಯಮಾನ ನಮ್ಮದಲ್ಲ. ನಮ್ಮದು ‘ಕಾಮ್ ಕೀ ರಾಜನೀತಿ’.

ಕೊರೊನಾ ಸಂದರ್ಭದಲ್ಲಿ ‘ದೆಹಲಿ ಆಸ್ಪತ್ರೆಗಳು ಸ್ಥಳೀಯರಿಗೆ ಮಾತ್ರ’ ಎಂಬ ಯೋಚನೆಯ ಉದ್ದೇಶ ಸಾಧನೆಯಾಯಿತೇ?

ಜೂನ್‌ನಲ್ಲಿ ದೆಹಲಿಯಲ್ಲಿ 5.5 ಲಕ್ಷ ಕೋವಿಡ್‌ ಪ್ರಕರಣ ವರದಿಯಾಗುವ ಅಂದಾಜಿತ್ತು. ಹಾಗಾಗಿ ಸರ್ಕಾರಿ ಆಸ್ಪತ್ರೆಗಳ 10 ಸಾವಿರ ಮತ್ತು ಖಾಸಗಿ ಆಸ್ಪತ್ರೆಗಳ ಹಾಸಿಗೆಗಳನ್ನು ಸ್ವಲ್ಪ ಕಾಲದ ಮಟ್ಟಿಗೆ ದೆಹಲಿಯವರಿಗೆ ಮೀಸಲಿಡುವ ವಿಚಾರ ಪ್ರಸ್ತಾಪಿಸಿದ್ದೆವು.

ದೆಹಲಿಯ ಆರ್ಥಿಕ ಸ್ಥಿತಿ ಹೇಗಿದೆ? ಆರ್ಥಿಕತೆಯ ಪುನರುಜ್ಜೀವನಕ್ಕೆ ನಿಮ್ಮ ಕಾರ್ಯಯೋಜನೆಗಳೇನು?

ಕೊರೊನಾ ನಿಯಂತ್ರಣದೊಂದಿಗೆ ಆರ್ಥಿಕತೆ ಪುನಶ್ಚೇತನ ನಮ್ಮ ಆದ್ಯತೆಯಾಗಿದೆ. ಜನರ ಮನಸ್ಸಿನಿಂದ ಕೊರೊನಾ ಭೀತಿ ದೂರವಾದರೆ ವಾಣಿಜ್ಯ ಚಟುವಟಿಕೆಗಳು ಚುರುಕುಗೊಳ್ಳುತ್ತವೆ. ದೆಹಲಿಯಲ್ಲಿ ಈ ಕ್ರಿಯೆ ಈಗಾಗಲೇ ಆರಂಭವಾಗಿದೆ. ಲಾಕ್‌ಡೌನ್‌ನಿಂದ ಆರ್ಥಿಕತೆಗೆ ಹಾನಿಯಲ್ಲದೆ ಬೇರೇನೂ ಲಾಭವಿಲ್ಲ.

ರಾಜಸ್ಥಾನದ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಬಿಜೆಪಿಯ ಬದಲು ಕಾಂಗ್ರೆಸ್‌ ಅನ್ನು ಗುರಿಯಾಗಿಸಿದ್ದೇಕೆ?

ಒಬ್ಬರು ಶಾಸಕರನ್ನು ಮಾರಾಟ ಮಾಡುತ್ತಿದ್ದರು, ಇನ್ನೊಬ್ಬರು ಖರೀದಿಸುತ್ತಿದ್ದರು. ಪ್ರಮುಖ ವಿರೋಧಪಕ್ಷ ಸತ್ತಿರುವುದರಿಂದ ಬಿಜೆಪಿಗೆ ಪರ್ಯಾಯ ಇಲ್ಲ ಎಂಬ ಭಾವನೆ ಮೂಡುತ್ತಿದೆ. ದೇಶದಲ್ಲಿ ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿ ಸೃಷ್ಟಿಯಾಗಬೇಕಾಗಿದೆ.

ಕರ್ನಾಟಕ ಸೇರಿದಂತೆ ದೇಶದಾದ್ಯಂತ ಹಮ್ಮಿಕೊಂಡಿರುವ ಎಎಪಿಯ ‘ಆಕ್ಸಿಮಿತ್ರ’ ಅಭಿಯಾನದ ಬಗ್ಗೆ ಹೇಳಿ.

ಸೋಂಕಿತರಿಗೆ ಆಕ್ಸಿಮೀಟರ್ ಒದಗಿಸಲು ‘ಆಕ್ಸಿಮಿತ್ರ’ ಅಭಿಯಾನ ಶುರು ಮಾಡಿದ್ದೇವೆ. ಕರ್ನಾಟಕದ ಹಳ್ಳಿಗಳಲ್ಲಿ ಆಕ್ಸಿಮೀಟರ್‌ ಒದಗಿಸುವಂತೆ ಪಕ್ಷದ ಸ್ವಯಂಸೇವಕರಿಗೆ ಸೂಚಿಸಲಾಗಿದೆ. ಈ ಅಭಿಯಾನದ ಲಾಭವನ್ನು ಕರ್ನಾಟಕದ ಎಲ್ಲರೂ ಪಡೆದುಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ.

2024ರಲ್ಲಿ ಮೋದಿ ನೇತೃತ್ವದ ಸರ್ಕಾರಕ್ಕೆ ರಾಜಕೀಯ ಸವಾಲು ಎದುರಾಗಲಿದೆಯೇ?

ಗೋವಾ, ಕರ್ನಾಟಕ, ಮಧ್ಯಪ್ರದೇಶ, ಮಣಿಪುರದ ಕಾಂಗ್ರೆಸ್ ಸರ್ಕಾರ ಪತನದೊಂದಿಗೆ ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲಿ ಅಂತ್ಯಕಂಡಿದೆ. ತನ್ನ ಮುಖ್ಯಸ್ಥರನ್ನು ಆರಿಸಿಕೊಳ್ಳದ ಪಕ್ಷವು ದೇಶಕ್ಕೆ ಎಂತಹ ನಾಯಕತ್ವ ನೀಡಬಲ್ಲದು? 2024 ತುಂಬಾ ದೂರವಿದೆ. ಆ ವೇಳೆಗೆ ಪರ್ಯಾಯವೊಂದನ್ನು ಜನರು ಆಯ್ದುಕೊಳ್ಳಲಿದ್ದಾರೆ.

ಎಎಪಿ ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬಲ್ಲದೇ?

ಎಎಪಿ ಒಂದು ಸಣ್ಣ ಸಂಘಟನೆ. ರಾಷ್ಟ್ರಮಟ್ಟದಲ್ಲಿ ಉಂಟಾಗಿರುವ ನಿರ್ವಾತ ತುಂಬಲು ಪಕ್ಷಕ್ಕೆ ಸಾಧ್ಯವಿದೆ. ದೇಶದ ಜನರಿಗೆ ಎಎಪಿ ಬಗ್ಗೆ ನಂಬಿಕೆ,ವಿಶ್ವಾಸವಿದೆ. ಎಎಪಿ ಪರ್ಯಾಯ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳುವುದನ್ನು ಕಾಲವೇ ನಿರ್ಧರಿಸಲಿದೆ.

ಅಣ್ಣಾ ಹಜಾರೆ ಅವರನ್ನು ಈಚೆಗೆ ಭೇಟಿಯಾಗಿದ್ದೀರಾ? ಲೋಕಪಾಲ ಚಳವಳಿ ಬಗ್ಗೆ ಯಾರೂ ಏಕೆ ಮಾತನಾಡುತ್ತಿಲ್ಲ?

ಸದ್ಯದಲ್ಲಿ ಭೇಟಿಯಾಗಿಲ್ಲ. ಅವರು ಚೆನ್ನಾಗಿರಲಿ ಎಂದು ಹಾರೈಸುತ್ತೇನೆ. ದೆಹಲಿ ವಿಧಾನಸಭೆಯು ಲೋಕಪಾಲ ಮಸೂದೆಯನ್ನು ಅಂಗೀಕರಿಸಿತು. ಕೇಂದ್ರದಲ್ಲಿ ಲೋಕಪಾಲ ಮಸೂದೆ ಬಾಕಿ ಉಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT