ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

370ನೇ ವಿಧಿ ರದ್ದತಿ: ಭಾರತ ಏಕೀಕರಣದ ದಿಸೆಯಲ್ಲಿ ಮಹತ್ವದ ಹೆಜ್ಜೆ

Last Updated 25 ಆಗಸ್ಟ್ 2019, 7:16 IST
ಅಕ್ಷರ ಗಾತ್ರ

ಸಂವಿಧಾನದ 370ನೇ ವಿಧಿಯ ರದ್ದತಿಯ ಹಿನ್ನೆಲೆ ಮತ್ತು ಅನಿವಾರ್ಯತೆಯನ್ನುಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರುಈ ಲೇಖನದಲ್ಲಿ ವಿವರಿಸಿದ್ದಾರೆ.

---

ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಕೇಂದ್ರ ಸರ್ಕಾರದ ಇತ್ತೀಚಿನ ನಡೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಯಿತು. ಈ ಕ್ರಮವನ್ನು ದೇಶದ ಬಹುಸಂಖ್ಯಾತ ಜನ ಸ್ವಾಗತಿಸಿದ್ದಾರೆ ಎಂಬ ಗ್ರಹಿಕೆ ನಮ್ಮಲ್ಲಿದೆ. ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ಸಂಬಂಧಿಸಿದ್ದಾದ ಕಾರಣ ಈ ವಿಚಾರದಲ್ಲಿ ಸಂಕುಚಿತ ರಾಜಕೀಯ ಮಾಡಬಾರದು ಎಂಬ ಭಾವನೆ ಜನರದ್ದು.

ಇದು ಭಾರತದ ಏಕೀಕರಣವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿಕೈಗೊಂಡ ಮಹತ್ವದ ಹೆಜ್ಜೆ. 370ನೇ ವಿಧಿಯು ಕೇವಲ ತಾತ್ಕಾಲಿಕ, ಪರಿವರ್ತನೆಯ ವ್ಯವಸ್ಥೆಯಾಗಿತ್ತು. ಇದನ್ನು ಶಾಶ್ವತ ನಿಬಂಧನೆಯಾಗಿಸುವ ಉದ್ದೇಶ ಅಂದು (ಅದನ್ನು ಜಾರಿಗೊಳಿಸಿದ ಕಾಲದಲ್ಲಿ)ಇರಲಿಲ್ಲ ಎಂಬುದನ್ನು ನಾವು ಮನಗಾಣಬೇಕು.

1947ರ ಅಕ್ಟೋಬರ್ 27ರಂದು ಮಹಾರಾಜ ಹರಿಸಿಂಗ್ ಅವರು ವಿಲೀನ ಷರತ್ತಿಗೆ ಸಹಿ ಹಾಕಿದ ಬಳಿಕ ‘ತಾತ್ಕಾಲಿಕ, ಪರಿವರ್ತನಾ ಮತ್ತು ವಿಶೇಷ ನಿಬಂಧನೆ’ಗಳಿಗೆ (Temporary, Transitional and Special Provisions)ಸಂಬಂಧಿಸಿದ ಸಂವಿಧಾನದ 21ನೇ ಪರಿಚ್ಚೇದದ ಅನ್ವಯ ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿತ್ತು.

ಆದಾಗ್ಯೂ, ಆರಂಭದಲ್ಲೇ 370ನೇ ವಿಧಿ ಸೇರ್ಪಡೆಯಾಗಿರಲಿಲ್ಲ ಎಂಬುದು ಗಮನಾರ್ಹ. ಇದನ್ನು ಶೇಖ್ ಅಬ್ದುಲ್ಲಾ (ಸಂವಿಧಾನದ ಕರಡು ಸಿದ್ಧಪಡಿಸಿದ ಸಮಿತಿಯ ಸದಸ್ಯ) ಅವರ ಸಲಹೆ ಮೇರೆಗೆ1949ರಲ್ಲಿ ಸಂವಿಧಾನಕ್ಕೆ ಸೇರಿಸಲಾಗಿದ್ದು, 1952ರಿಂದ ಅಸ್ತಿತ್ವಕ್ಕೆ ಬಂದಿತ್ತು.

370ನೇ ವಿಧಿ ಅನ್ವಯ ಜಮ್ಮು–ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ ಮತ್ತು ಧ್ವಜ ಹೊಂದಲು ಅವಕಾಶ ನೀಡಲಾಗಿತ್ತು. ಭಾರತದ ಸಂಸತ್ತು ಅನುಮೋದನೆ ನೀಡಿದ ಕಾನೂನನ್ನು ಅಳವಡಿಸಿಕೊಳ್ಳಬೇಕೇ, ಬೇಡವೇ ಎಂಬ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಆರಂಭದಲ್ಲಿ ಅಲ್ಲಿನ ಸಂವಿಧಾನ ಸಭೆಗೆ ಮತ್ತು ನಂತರ ವಿಧಾನಸಭೆಗೆ ನೀಡಲಾಗಿತ್ತು.

ರಕ್ಷಣೆ, ವಿದೇಶಾಂಗ ವ್ಯವಹಾರ, ಸಂವಹನ ಮತ್ತುವಿಲೀನ ಷರತ್ತಿನಲ್ಲಿ ನೀಡಲಾಗಿರುವ ಇತರ ವಿನಾಯಿತಿಗಳನ್ನು ಹೊರತುಪಡಿಸಿ ಜಮ್ಮು–ಕಾಶ್ಮೀರಕ್ಕೆ ಸಂಬಂಧಿಸಿ ಶಾಸನಗಳನ್ನು ಜಾರಿಗೆ ತರಲು ಭಾರತದ ಸಂಸತ್ತಿಗೆ ಅಧಿಕಾರವಿರಲಿಲ್ಲ. ಈ ವಿಚಾರವನ್ನು ಸಂವಿಧಾನದಲ್ಲಿ ಅಳವಡಿಸಬೇಕೆಂಬ ಪ್ರಸ್ತಾವ ಕೇಳಿಬಂದಾಗ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅದಕ್ಕೆ ಸಹಮತ ವ್ಯಕ್ತಪಡಿಸಿರಲಿಲ್ಲ. ಆಗ ಅಂಬೇಡ್ಕರ್ ಅವರ ಮನವೊಲಿಸುವಂತೆ ಶೇಖ್ ಅಬ್ದುಲ್ಲಾಗೆಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಸಲಹೆ ನೀಡಿದ್ದರು.

ಈ ಕುರಿತು, ಡಾ.ಎಸ್‌.ಎನ್.ಬಸಿ ಅವರು ಬರೆದಿರುವ ‘ಡಾ.ಬಿ.ಆರ್.ಅಂಬೇಡ್ಕರ್ ಫ್ರೇಮಿಂಗ್ ಆಫ್ ಇಂಡಿಯನ್ ಕಾನ್‌ಸ್ಟಿಟ್ಯೂಷನ್’ ಪುಸ್ತಕದಲ್ಲಿ ಅಂಬೇಡ್ಕರ್ ಅವರ ಹೇಳಿಕೆಯೊಂದನ್ನು ಹೀಗೆ ಉಲ್ಲೇಖಿಸಲಾಗಿದೆ: ‘ಮಿಸ್ಟರ್ ಅಬ್ದುಲ್ಲಾ, ಭಾರತವು ಕಾಶ್ಮೀರವನ್ನು ರಕ್ಷಿಸಬೇಕೆಂದು ನೀವು ಬಯಸುತ್ತೀರಿ. ಭಾರತವು ನಿಮ್ಮ ಗಡಿಗಳನ್ನು ರಕ್ಷಿಸಬೇಕು, ನಿಮ್ಮ ಪ್ರದೇಶದಲ್ಲಿ ರಸ್ತೆಗಳನ್ನು ನಿರ್ಮಿಸಬೇಕು, ನಿಮಗೆ ಆಹಾರ ವಿತರಿಸಬೇಕು, ಕಾಶ್ಮೀರಕ್ಕೆ ಭಾರತದ ಎಲ್ಲ ಸ್ಥಾನಮಾನವೂ ದೊರೆಯಬೇಕು ಎಂದು ನೀವು ಆಶಿಸುತ್ತೀರಿ. ಆದರೆ ಭಾರತ ಮತ್ತು ಅದರ ನಾಗರಿಕರಿಗೆ ಕಾಶ್ಮೀರದಲ್ಲಿ ಯಾವುದೇ ಹಕ್ಕುಗಳು ಇರಬಾರದು, ಕಾಶ್ಮೀರದ ಮೇಲೆಭಾರತ ಸರ್ಕಾರಕ್ಕೆ ಸೀಮಿತ ಅಧಿಕಾರವಿರಬೇಕು ಎಂದೂ ಬಯಸುತ್ತೀರಿ. ಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡುವುದೆಂದರೆ, ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾದ ವಿಶ್ವಾಸಘಾತಕತನ ಎಸಗಿದಂತೆ. ಭಾರತದ ಕಾನೂನು ಸಚಿವನಾಗಿ ನಾನಿದನ್ನು ಮಾಡಲಾರೆ. ನನ್ನ ದೇಶದ ಹಿತಾಸಕ್ತಿಗಳಿಗೆ ನಾನು ದ್ರೋಹ ಎಸಗುವುದು ಸಾಧ್ಯವಿಲ್ಲ’.

‘370ನೇ ವಿಧಿಯು ಕೆಲವು ಪರಿವರ್ತನೆಯ, ತಾತ್ಕಾಲಿಕ ಅಂಶಗಳನ್ನೊಳಗೊಂಡಿದೆ. ಇದು ಸಂವಿಧಾನದ ಕಾಯಂ ಭಾಗವಲ್ಲ’ ಎಂದು 1963ರ ನವೆಂಬರ್ 27ರಂದು ನೆಹರು ಕೂಡ ಸಂಸತ್‌ನಲ್ಲಿ ಹೇಳಿದ್ದರು.

370ನೇ ವಿಧಿಯುಕಾಶ್ಮೀರದ ಜನರನ್ನು ಭಾರತದ ಇತರೆಡೆಗಳ ಜನರಿಗೆ ಹತ್ತಿರ ತರುವ ಬದಲಾಗಿ ಮತ್ತಷ್ಟು ದೂರವಾಗುವಂತೆ ಮಾಡಿತು. ಈ ಭಿನ್ನಾಭಿಪ್ರಾಯವನ್ನು ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತವಾಗಿ ವಿಸ್ತರಿಸಿವೆ. ಜನರಿಗೆ ಅರ್ಥಪೂರ್ಣ ನೆರವು ಒದಗಿಸಲು 370ನೇ ವಿಧಿ ವಿಫಲವಾಯಿತು. ಇದನ್ನು ಜಮ್ಮು–ಕಾಶ್ಮೀರ ಮತ್ತು ಭಾರತದ ಇತರ ಭಾಗಗಳಲ್ಲಿ ವಾಸಿಸುವ ಜನರ ನಡುವಣ ಕಂದಕ ಸೃಷ್ಟಿಗೆ ಪ್ರತ್ಯೇಕತಾವಾದಿಗಳು ಬಳಸಿಕೊಂಡರು. ನೆರ ರಾಷ್ಟ್ರವು ಭಯೋತ್ಪಾದನೆ ಹರಡಲು ಉಪಯೋಗಿಸಿಕೊಂಡಿತು.

370ನೇ ವಿಧಿಯ ರದ್ದತಿ ಬೇಡಿಕೆ ಸುದೀರ್ಘ ಅವಧಿಯಿಂದಲೂ ಪರಿಗಣನೆಯಲ್ಲಿತ್ತು. ಈ ನಿಟ್ಟಿನಲ್ಲಿ 1964ರಿಂದಲೇ ಸಂಸತ್‌ನಲ್ಲಿ ಚರ್ಚೆಯಾಗಿತ್ತು. 370ನೇ ವಿಧಿಯ ರದ್ದತಿಗೆ ಸಂಬಂಧಿಸಿ ಸದಸ್ಯರೊಬ್ಬರು ಮಂಡಿಸಿದ್ದ ಖಾಸಗಿ ನಿಲುವಳಿಯು ಬಹುತೇಕ ಸರ್ವಾನುಮತದ ಬೆಂಬಲವನ್ನೂ ಪಡೆದಿತ್ತು. ಪ್ರಕಾಶ್ ವೀರ್‌ಶಾಸ್ತ್ರಿ ಅವರು ಲೋಕಸಭೆಯಲ್ಲಿ ಮಂಡಿಸಿದ್ದ ನಿಲುವಳಿಯನ್ನು ಹಿರಿಯ ನಾಯಕ ರಾಮ್ ಮನೋಹರ್ ಲೋಹಿಯಾ, ಕಾಂಗ್ರೆಸ್‌ನ ಹಿರಿಯ ನಾಯಕ ಕೆ.ಹನುಮಂತಯ್ಯ ಸೇರಿ ಅನೇಕರು ಬೆಂಬಲಿಸಿದ್ದರು.

ಪಕ್ಷಗಳನ್ನು ಮೀರಿ ಸದಸ್ಯರು 370ನೇ ವಿಧಿಯ ರದ್ದತಿ ಬಯಸುತ್ತಿದ್ದಾರೆ ಎಂದೂ ಹನುಮಂತಯ್ಯ ಹೇಳಿದ್ದರು. ಮುಂದುವರಿದು, ‘ಸದನದ ಸರ್ವಾನುಮತದ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸುವುದು ಅಥವಾ ವಿರುದ್ಧವಾಗಿ ಮಾತನಾಡುವುದು ಸಾಂವಿಧಾನಿಕ ಜವಾಬ್ದಾರಿಯನ್ನು ತಮ್ಮ ಅನುಕೂಲಕ್ಕೋಸ್ಕರ ನಿರಾಕರಿಸಿದಂತೆ. 370ನೇ ವಿಧಿಯು ಭಾರತದ ಪೂರ್ಣ ಏಕೀಕರಣದ ಹಾದಿಗೆ ಅಡ್ಡವಾಗಿದೆ’ ಎಂದೂ ಅಭಿಪ್ರಾಯಪಟ್ಟಿದ್ದರು.

ಅಂದು, 370ನೇ ವಿಧಿ ರದ್ದತಿಗೆ ಒಲವು ತೋರಿದ 12 ಸದಸ್ಯರಲ್ಲಿ ಇಂದರ್ ಜೆ. ಮಲ್ಹೋತ್ರ, ಶ್ಯಾಮ್‌ ಲಾಲ್ ಸರಾಫ್ ಸೇರಿದಂತೆ ಕಾಂಗ್ರೆಸ್‌ನ 7 ಮಂದಿ, ಎಚ್‌.ವಿ.ಕಾಮತ್, ಸರಜೂ ಪಾಂಡೆ (ಸಿಪಿಐ), ಬಿಹಾರದ ಮಾಜಿ ಮುಖ್ಯಮಂತ್ರಿ ಭಾಗವತ್ ಝಾ ಆಜಾದ್ ಸಹ ಇದ್ದರು.

ಈ ವಿಧಿಯು ಶೀಘ್ರದಲ್ಲಿ ಅಥವಾ ಮುಂದಿನ ದಿನಗಳಲ್ಲಾದರೂ ರದ್ದಾಗಬಹುದು ಎಂದು ದೇಶ ಭಾವಿಸಿತ್ತು. ‘370ನೇ ವಿಧಿಯು ಖಾಲಿ ಬಾಟಲ್‌ನಂತೆ. ಅದರಲ್ಲಿ ಏನೂ ಉಳಿದಿಲ್ಲ. ನಾವದನ್ನು ಒಂದು ದಿನದಲ್ಲಿ, 10 ದಿನಗಳಲ್ಲಿ ಅಥವಾ 10 ತಿಂಗಳಲ್ಲಿ ತೆರವು ಮಾಡಬಹುದು. ಈ ಬಗ್ಗೆ ನಾವೀಗ ಪರಿಗಣಿಸಬೇಕು’ ಎಂದು ನೆಹರು ಅವರ ಸಹೋದ್ಯೋಗಿ, ಅಂದಿನ ಗೃಹ ಸಚಿವ ಗುಲ್ಜರಿಲಾಲ್ ನಂದಾ ಸಂಸತ್‌ಗೆ ತಿಳಿಸಿದ್ದರು.

ಈಗಿನ ಸಂದರ್ಭ ಮತ್ತು ಸನ್ನಿವೇಶದಲ್ಲಿ ಪ್ರಸ್ತುತವಲ್ಲದ ನಿಷ್ಕ್ರಿಯ ನಿಬಂಧನೆ ಕುರಿತುಸಂಸತ್ ಮತ್ತು ಸರ್ಕಾರ ಕೊನೆಗೂ ಒಂದು ನಿರ್ಧಾರಕ್ಕೆ ಬಂದಿದೆ. ಜಮ್ಮು–ಕಾಶ್ಮೀರವನ್ನು ಪೂರ್ತಿಯಾಗಿ ಭಾರತದ ಜತೆ ವಿಲೀನಗೊಳಿಸಿದೆ. ಯಾವುದೇ ರೀತಿಯಲ್ಲಿಯೂ ಜನರ ಜೀವನವನ್ನು ಸುಧಾರಿಸದ 370ನೇ ವಿಧಿಯು ರಾಜ್ಯದ ಅಭಿವೃದ್ಧಿಗೆ ಅಡ್ಡಿಯಾಗಿತ್ತು.

ಜನರ ಕಲ್ಯಾಣಕ್ಕಾಗಿ ಸರ್ಕಾರ ರೂಪಿಸಿದ ಪ್ರಮುಖ ಕಾನೂನುಗಳನ್ನು 370ನೇ ವಿಧಿಯ ಕಾರಣದಿಂದ ಜಮ್ಮು–ಕಾಶ್ಮೀರದಲ್ಲಿ ಅನುಷ್ಠಾನಗೊಳಿಸುವುದು ಸಾಧ್ಯವಾಗುತ್ತಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ಈಚೆಗೆ ಹೇಳಿರುವುದು ಗಮನಾರ್ಹ. ಇದೀಗ 370ನೇ ವಿಧಿಯ ರದ್ದತಿಯಿಂದಾಗಿ ಕೇಂದ್ರದ 106 ಕಾನೂನುಗಳು ಜಮ್ಮು–ಕಾಶ್ಮೀರಕ್ಕೂ ವಿಸ್ತರಣೆಯಾಗಿವೆ. ಭ್ರಷ್ಟಾಚಾರ ತಡೆ ಕಾಯ್ದೆ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ ಮತ್ತು ಸ್ಥಳೀಯ ಸಂಸ್ಥೆಗಳ ಸಬಲೀಕರಣಕ್ಕೆ ಸಂಬಂಧಿಸಿದ ಕಾಯ್ದೆಗಳೀಗ ಜಮ್ಮು–ಕಾಶ್ಮೀರಕ್ಕೂ ಅನ್ವಯವಾಗುತ್ತವೆ.

ಸಂವಿಧಾನದ 35ಎವಿಧಿಯ ರದ್ದತಿಯೊಂದಿಗೆ ಜಮ್ಮು–ಕಾಶ್ಮೀರದ ಮಹಿಳೆಯರು ದಶಕಗಳಿಂದ ಎದುರಿಸುತ್ತಿದ್ದ ತಾರತಮ್ಯ ನಿವಾರಣೆಯಾಗಿದೆ. ಇದೀಗ ಅವರು ಬೇರೆ ರಾಜ್ಯದವರನ್ನು ವಿವಾಹವಾದರೂ ಜಮ್ಮು–ಕಾಶ್ಮೀರದಲ್ಲಿ ಭೂಮಿ ಖರೀದಿ ಮಾಡಬಹುದು, ಅದನ್ನು ಮಕ್ಕಳಿಗೆ ಹಸ್ತಾಂತರ ಮಾಡಬಹುದು.

ನನ್ನ ದೃಷ್ಟಿಯಲ್ಲಿ, 370ನೇ ವಿಧಿಯ ರದ್ದತಿಯು ಭಾರತದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಇಟ್ಟಿರುವ ಸರಿಯಾದ ಹೆಜ್ಜೆಯಾಗಿದೆ.

ಜಮ್ಮು–ಕಾಶ್ಮೀರ ನಮ್ಮ ದೇಶದ ಅವಿಭಾಜ್ಯ ಅಂಗ. ಅದು ಎಂದೆಂದಿಗೂ ಹಾಗೆಯೇ ಇರಲಿದೆ. ಹೀಗಾಗಿ 370ನೇ ವಿಧಿಯ ರದ್ದತಿ ಸ್ಪಷ್ಟವಾಗಿ ಆಂತರಿಕ ವಿಷಯ. ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಹೊರಗಿನವರಿಗೆ ಭಾರತ ಆಸ್ಪದ ನೀಡುವುದಿಲ್ಲ. ದೇಶದ ಮತ್ತು ವಿದೇಶಗಳ ಕೆಲವು ಮಾಧ್ಯಮಗಳು ಮಾಡುವ ಸುಳ್ಳು ಮತ್ತು ದುರುದ್ದೇಶಪೂರಿತ ಪ್ರಚಾರದ ವಿರುದ್ಧ ಜನತೆ ಎಚ್ಚರಿಕೆ ವಹಿಸಬೇಕು. ಈ ಅಪಪ್ರಚಾರವು ಬಹುಶಃ ‘ಒಡೆದು ಆಳುವ’ವಸಾಹತುಶಾಹಿ ಮನೋಭಾವವನ್ನು ಬಿಂಬಿಸುತ್ತದೆ.

ಜಮ್ಮು–ಕಾಶ್ಮೀರವನ್ನು ಭಾರತದ ಜತೆ ಸಂಪೂರ್ಣವಾಗಿ ಏಕೀಕರಣಗೊಳಿಸುವ ನಿಟ್ಟಿನಲ್ಲಿ ಸಂಸತ್ ಎಚ್ಚರಿಕೆಯ ಮತ್ತು ದೃಢವಾದ ನಿರ್ಧಾರ ಕೈಗೊಂಡಿದೆ. ಈ ಕ್ರಮ ಅಸಾಂವಿಧಾನಿಕ ಎನ್ನುವವರು, ನಿಲುವಳಿಯು ರಾಜ್ಯಸಭೆಯಲ್ಲಿ 2/3 ಬಹುಮತದೊಂದಿಗೆ ಮತ್ತು ಲೋಕಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ 4/5 ಬಹುಮತದೊಂದಿಗೆ ಅನುಮೋದನೆ ಪಡೆದುಕೊಂಡಿದೆ ಎಂಬುದನ್ನು ತಿಳಿದುಕೊಳ್ಳಬೇಕು.

ಈ ಏಕೀಕರಣವು ಲಡಾಕ್ ಸೇರಿದಂತೆ ಜಮ್ಮು–ಕಾಶ್ಮೀರದ ಜನರ ಸುದೀರ್ಘ ಅವಧಿಯ ಬೇಡಿಕೆಗಳನ್ನು ಪೂರೈಸಿದೆ ಎಂಬ ಬಗ್ಗೆ ನನಗೆ ಖಾತ್ರಿಯಿದೆ. ಲಡಾಕ್ ಕೇವಲ ಭೂಮಿಯ ತುಂಡಲ್ಲ, ಅದು ಭಾರತದ ಅಮೂಲ್ಯ ರತ್ನ ಎಂಬುದನ್ನು ಅಲ್ಲಿನ ಸಂಸದಜಮ್‌ಯಾಂಗ್ ಸೆರಿಂಗ್ ನಮ್‌ಗ್ಯಾಲ್ ಈಚೆಗೆ ಲೋಕಸಭೆಯಲ್ಲಿ ಮಾಡಿದ ಭಾಷಣದಲ್ಲಿ ಉಲ್ಲೇಖಿಸಿರುವುದು ಗಮನಾರ್ಹ. ಸ್ಥಿತಿಗತಿ ಸುಧಾರಿಸಿದ ನಂತರ, ರಾಜ್ಯವು ಸಾಮಾನ್ಯ ಸ್ಥಿತಿಗೆ ಮರಳಿದ ಬಳಿಕ ಜಮ್ಮು–ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡುವ ಬಗ್ಗೆ ನನಗೆ ವಿಶ್ವಾಸವಿದೆ.

ಸರ್ಕಾರದ ನಿರ್ಧಾರದಿಂದ ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉತ್ಸಾಹಿ ಯುವ ಉದ್ಯಮಿಗಳು ಮತ್ತು ದೊಡ್ಡದೊಡ್ಡ ಕಂಪನಿಗಳಿಂದಬಂಡವಾಳ ರಾಜ್ಯಕ್ಕೆ ಹರಿದುಬರಲಿದೆ.ಇದು ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೂ ಅನುವು ಮಾಡಿಕೊಡಲಿದೆ.

ಒಟ್ಟಿನಲ್ಲಿ, 370ನೇ ವಿಧಿಯ ರದ್ದತಿಯು ಸಂಪೂರ್ಣವಾಗಿ ದೇಶದ ಭದ್ರತೆ, ಸುರಕ್ಷತೆ, ಏಕತೆ ಮತ್ತು ಸಮಾನ ಸಮೃದ್ಧಿಗೆ ಸಂಬಂಧಿಸಿದ ವಿಷಯ. ಭಾರೀ ಬಹುಮತದೊಂದಿಗೆ ಸಂಸತ್ ಕೈಗೊಂಡ ಸರಿಯಾದ ಕ್ರಮ. ಇದು ತಿರಸ್ಕಾರಕ್ಕೆ ಒಳಗಾದ ರಾಜ್ಯವನ್ನು ಸರ್ವಾಂಗೀಣ ಅಭಿವೃದ್ಧಿಯ ಆಯಾಮಕ್ಕೆ ತೆರೆದುಕೊಳ್ಳುವಂತೆ ಮಾಡಲಿದೆ. ಈ ನಿರ್ಧಾರವು ಜಮ್ಮು–ಕಾಶ್ಮೀರ ಮತ್ತು ಲಡಾಕ್‌ನ ಜನರ ಜೀವನ ಮಟ್ಟ ಸುಧಾರಣೆ ನಿಟ್ಟಿನಲ್ಲಿ ಇಟ್ಟ ಮೊದಲ ಹೆಜ್ಜೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT