ಶುಕ್ರವಾರ, ಜುಲೈ 1, 2022
21 °C
ಸಹ್ಯಾದ್ರಿ ಶ್ರೇಣಿಯ ಸಡಿಲ ಮೇಲ್ಮಣ್ಣನ್ನು ರಕ್ಷಿಸುತ್ತಿರುವುದು ಸಹಜ ಗಿಡಮರಗಳ ಹೊದಿಕೆ ಮಾತ್ರ

ವಿಶ್ಲೇಷಣೆ | ಧರೆ ಬಿರಿದು ಕುಸಿದೊಡೆ...

ಡಾ. ಕೇಶವ ಎಚ್. ಕೊರ್ಸೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರಿನ ಬಳಿ ಗುಡ್ಡ ಕುಸಿದು ಅಮಾಯಕರು ಬಲಿಯಾಗಿದ್ದಾರೆ. ಮುಂಗಾರು ಮಳೆಯ ಸಹಜಲಯಕ್ಕೂ ಬೆದರಿದಂತಿರುವ ಮಲೆನಾಡು ಹಾಗೂ ಕರಾವಳಿಯಲ್ಲಿ ಮತ್ತೆ ಭೂಕುಸಿತವಾಗತೊಡಗಿದೆ. ವರ್ಷಂಪ್ರತಿ ಹೆಚ್ಚುತ್ತಿರುವ ಈ ಅವಘಡಗಳನ್ನು ನಿಯಂತ್ರಿಸುವ ಉಪಾಯಗಳನ್ನು ಸೂಚಿಸಲು, ಸರ್ಕಾರವು ಇತ್ತೀಚೆಗೆ ರಾಜ್ಯ ಜೀವವೈವಿಧ್ಯ ಮಂಡಳಿಯ ಅಧ್ಯಕ್ಷರ ನೇತೃತ್ವದಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಿದೆ. ಪಶ್ಚಿಮಘಟ್ಟದುದ್ದಕ್ಕೂ ಭೂಗರ್ಭಶಾಸ್ತ್ರಜ್ಞರು ಗುರುತಿಸಿರುವ ಭೂಕುಸಿತದ ಸಂಭವನೀಯ ಸ್ಥಳಗಳಲ್ಲಿ, ಜನ-ಜಾನುವಾರುಗಳ ಜೀವರಕ್ಷಣೆಗೆ ಆದ್ಯತೆ ನೀಡಬೇಕೆಂದು ಅದರ ಮಧ್ಯಂತರ ಶಿಫಾರಸಿನಲ್ಲಿ ಹೇಳಲಾಗಿದೆ. ಭೂಕುಸಿತದ ಸಮಸ್ಯೆಗೆ ಶಾಶ್ವತ ತಡೆಯೊಡ್ಡುವ ದಾರಿಗಳ ಶೋಧ ನಡೆದಿರುವ ಈ ಸಂದರ್ಭದಲ್ಲಿ, ಜನಸಮುದಾಯಗಳ ಅನುಭವ ಹಾಗೂ ಅಭಿಪ್ರಾಯಗಳೂ ಮುನ್ನೆಲೆಗೆ ಬರಬೇಕು.

ಭೂಕುಸಿತ ಎನ್ನುವುದು ಜಾಗತಿಕ ವಿದ್ಯಮಾನ ವೇನೋ ಹೌದು. ಹಿಮಾಲಯಶ್ರೇಣಿಯಲ್ಲೂ ಅನಾದಿಯಿಂದ ಈ ನೈಸರ್ಗಿಕ ವಿಪ್ಲವ ಜರುಗುತ್ತಿದೆ. ಅಲ್ಲೆಲ್ಲ ಭೂಕುಸಿತಕ್ಕೆ ಕಾರಣಗಳು ಮೂಲತಃ ಪರ್ವತ ಶ್ರೇಣಿಗಳ ಆಂತರಿಕ ಮತ್ತು ಬಾಹ್ಯ ಸ್ವರೂಪವೇ. ಭೂಕಂಪ, ಜ್ವಾಲಾಮುಖಿ, ಗಗನಚುಂಬಿ ಬೋಳುಶಿಖರಗಳ ಕಡಿದಾದ ಇಳಿಜಾರು, ಹಿಮಪ್ರವಾಹ ಇತ್ಯಾದಿಗಳು ಅಲ್ಲಿ ಪರ್ವತಸಾಲನ್ನು ನಡುಗಿಸಿ, ಬೀಳಿಸುವುದುಂಟು. ಆದರೆ, ಕಳೆದೊಂದು ದಶಕದಿಂದ ನಾಡಿನ ಸಹ್ಯಾದ್ರಿಯ ತಪ್ಪಲಲ್ಲಿ ಹೆಚ್ಚಿರುವ ಭೂಕುಸಿತವೇನೂ ಆ ಬಗೆಯದ್ದಲ್ಲ. ಇಲ್ಲಿನ ಭೂಗರ್ಭವು ಹಿಮಾಲಯಕ್ಕಿಂತ ಹಳೆಯದು ಹಾಗೂ ತಟಸ್ಥ. ಇದನ್ನರಿಯಲು ಇದರ ಹುಟ್ಟನ್ನು ಗಮನಿಸಬೇಕು. 

ಕೋಟ್ಯಂತರ ವರ್ಷಗಳ ಹಿಂದೆ, ಭಾರತ ಉಪಖಂಡವು ಇಂದಿನ ಅಂಟಾರ್ಕ್‌ಟಿಕಾ, ಆಸ್ಟ್ರೇಲಿಯಾ ಭೂಭಾಗಗಳನ್ನೆಲ್ಲ ಒಳಗೊಂಡಿದ್ದ ಗೊಂಡವಾನ ಭೂಖಂಡಕ್ಕೆ ಅಂಟಿಕೊಂಡಿತ್ತು. ನಂತರದ ಕಾಲಘಟ್ಟದಲ್ಲಿ ಅಲ್ಲಿಂದ ಬೇರ್ಪಟ್ಟು ಉತ್ತರಕ್ಕೆ ಸಾಗಿ, ಚೀನಾ ದೇಶವಿರುವ ಯುರೇಶಿಯನ್ ಭೂಭಾಗಕ್ಕೆ ಡಿಕ್ಕಿ ಹೊಡೆದು, ಹಿಮಾಲಯವನ್ನು ಸೃಷ್ಟಿಸಿತಷ್ಟೆ. ಹೀಗೆ ಸಾಗುವಾಗ, ಭೂತಳದಿಂದ ಲಾವಾರಸವು ಹೊರಚಿಮ್ಮಿ ಪಶ್ಚಿಮದ ಸಮುದ್ರದಂಚಿಗೆ ಬಸಿದು ಗಟ್ಟಿಯಾಗಿ ರಚಿತವಾದ ಪರ್ವತಶ್ರೇಣಿಯೇ ಸಹ್ಯಾದ್ರಿ. ಸುಮಾರು ಸಾವಿರದ ಆರುನೂರು ಕಿ.ಮೀ ಉದ್ದಕ್ಕೆ ಆರು ರಾಜ್ಯಗಳಲ್ಲಿ ಹಬ್ಬಿಕೊಂಡಿರುವ ಈ ಶ್ರೇಣಿಯ ಭೂಗರ್ಭದಾಳದ ಶಿಲಾವಲಯಗಳಲ್ಲಿ ಬಿರುಕು, ಖಾಲಿ ಜಾಗಗಳಿವೆ. ಇದರಿಂದಾಗಿಯೇ ಆಗಾಗ ಭೂಮಿ ಕಂಪಿಸುವುದು ಹಾಗೂ ಕುಸಿಯುವುದು. ಮಳೆಗಾಲದಲ್ಲಿ ಕೆಲವೊಮ್ಮೆ ಭೂಮಿಯಾಳದಿಂದ ಸ್ಫೋಟದ ಶಬ್ದವೂ ಕೇಳುವುದಿದೆ.

ಕಲ್ಲುಗಳ ಬಿರುಕು, ಒಣಮಣ್ಣು ಅಥವಾ ಜೀವಜನ್ಯ ಅವಶೇಷಗಳಿಂದಾಗಿ ಭೂಮಿಯಾಳದಲ್ಲಿ ಖಾಲಿ ಪ್ರದೇಶಗಳು ನಿರ್ಮಾಣವಾಗಿರುತ್ತವೆ. ಭಾರಿ ಮಳೆಗೆ ಒದ್ದೆ ಮೇಲ್ಮೈಮಣ್ಣು ಒಮ್ಮೆಲೇ ಆಳ ನೆಲದ ಆ ರಂಧ್ರಗಳ ಮೇಲೆ ಕುಸಿದು, ದೊಡ್ಡ ಶಬ್ದ ಹೊರಹೊಮ್ಮುವುದೂ ಇದೆ. ಆದರೆ, ಇವು ಯಾವುವೂ ಅಪಾಯಕಾರಿ ಅಲ್ಲ ಎಂಬುದು, ದೆಹಲಿಯ ‘ರಾಷ್ಟ್ರೀಯ ಭೂಕಂಪನ ಮಾಹಿತಿ ಕೇಂದ್ರ’ದ (ಎನ್‌ಸಿಎಸ್‌) ತಜ್ಞರ ಖಚಿತ ಅಭಿಪ್ರಾಯ. ಸಮೃದ್ಧ ಜೀವಜಾಲವನ್ನು ಪೋಷಿಸುತ್ತಿರುವ ಈ ಸುರಕ್ಷಿತ ಪರ್ವತಶ್ರೇಣಿಯನ್ನು ‘ಸಹ್ಯಾದ್ರಿ’ ಎಂದು ಹೆಸರಿಸಿರುವುದು ಎಷ್ಟು ಸಾರ್ಥಕ ಎಂದು, ಬಿ.ಪಿ. ರಾಧಾಕೃಷ್ಣರಂಥ ಪ್ರಸಿದ್ಧ ಭೂಗರ್ಭ
ಶಾಸ್ತ್ರಜ್ಞರು ಉದ್ಗರಿಸಿದ್ದು ಅದಕ್ಕಾಗಿ.

ಹಾಗಾದರೆ, ಇಲ್ಲಿ ಭೂಕುಸಿತ ಹೆಚ್ಚಾಗುತ್ತಿರಲು ಕಾರಣಗಳೇನು? ಇದಕ್ಕೆ ಉತ್ತರವು ಪಶ್ಚಿಮಘಟ್ಟದ ಮೇಲ್ಮೈ ರಚನೆ ಹಾಗೂ ನಿರ್ವಹಣೆ ಕ್ರಮದಲ್ಲಿದೆ. ಬಹುಪಾಲು ಮೇಲ್ಪದರದಲ್ಲಿರುವುದು ಬಸಾಲ್ಟ್ ಬಿರಿದು ನಿರ್ಮಾಣವಾದ ಗುಂಡುಕಲ್ಲುಗಳು. ಭೂಮಿಯಾಳದ ಶಿಲಾವಲಯವು ಬಿಸಿಲು-ಮಳೆಯಂಥ ಪ್ರಕೃತಿದತ್ತ ಶಕ್ತಿ ಹಾಗೂ ಅದರಿಂದ ಪ್ರೇರಿತವಾದ ರಾಸಾಯನಿಕ ಪ್ರಕ್ರಿಯೆಯಿಂದಾಗಿ ಒಡೆದು ಚೂರಾಗಿ ಮಣ್ಣಾಗುತ್ತಿರುವ ಜಂಬಿಟ್ಟಿಗೆ, ಸುಣ್ಣದಕಲ್ಲಿನಂಥ ರೂಪಾಂತರ ಕಲ್ಲಿನ ಮಿಶ್ರಣವೂ ಅಲ್ಲಿದೆ. ಆಳದಲ್ಲಿ ಇದನ್ನು ಹೊತ್ತುನಿಂತ ಗ್ರಾನೈಟ್ ಸ್ತರವೇನೋ ಗಟ್ಟಿಯಾಗಿರಬಹುದು. ಆದರೆ, ಮೇಲಿರುವ ಈ ಪದರು ಮಾತ್ರ ಬಹುಸಡಿಲ. ಮೇಲೆ ಆವರಿಸಿರುವ ಗಿಡಮರಗಳ ಬೇರಿನ ಜಾಲ ಮತ್ತು ಜೀವಜನ್ಯ ವಸ್ತುಗಳು ಕೊಳೆತು ನಿರ್ಮಿಸುವ ‘ಹ್ಯೂಮಸ್’- ಇವೆರಡೂ ಜೊತೆಯಾಗಿ ಸೃಷ್ಟಿಸುವ ನೈಸರ್ಗಿಕ ಬಲೆಯಿಂದಾಗಿ ಮಾತ್ರ ಈ ಮಣ್ಣು ಗಟ್ಟಿಯಾಗಿ ಬೆಸೆದು ನಿಂತಿದೆ.

ಕಾಡಿನ ಹಸಿರು ಹೊದಿಕೆಯು ಮಾಯವಾದರೆ, ಈ ಮಣ್ಣು ಸಡಿಲವಾಗುತ್ತದೆ. ಭಾರಿ ಮಳೆ ತರುವ ನೀರು ಜಾರಿ ನದಿ ಸೇರುವ ಬದಲು, ಮಣ್ಣಿನ ಪದರದ ರಂಧ್ರಗಳಲ್ಲಿ ಇಳಿಯತೊಡಗುತ್ತದೆ. ಖನಿಜಾಂಶ ಕರಗತೊಡಗಿದಂತೆ ರಂಧ್ರಗಳ ಗಾತ್ರವು ಹಿಗ್ಗಿ, ಇಳಿಯುವ ನೀರಿನ ಪ್ರಮಾಣವೂ ಹೆಚ್ಚಿ, ಆಂತರಿಕ ಒತ್ತಡ ಏರಿ, ಮಣ್ಣು ತಗ್ಗಿನೆಡೆಗೆ ಜಾರತೊಡಗುತ್ತದೆ. ಮಳೆಯ ರಭಸ ಹಾಗೂ ಇಳಿಜಾರಿಗನುಗುಣವಾಗಿ ನಿರ್ಧರಿತವಾಗುವ ಇದರ ತೀವ್ರತೆಯನ್ನಾಧರಿಸಿ, ಭೂಗರ್ಭಶಾಸ್ತ್ರಜ್ಞರು ಅವನ್ನು ನೆಲ ಜರುಗುವುದು, ಹೊರಳುವುದು, ಕುಸಿಯುವುದು ಇತ್ಯಾದಿಯಾಗಿ ವಿಂಗಡಿಸುತ್ತಾರೆ.


ಡಾ. ಕೇಶವ ಎಚ್. ಕೊರ್ಸೆ

2009ರಲ್ಲಿ ಘಟಿಸಿದ ಕಾರವಾರದ ಶಿರವಾಡ ಭೂಕುಸಿತದಿಂದ ಆರಂಭಿಸಿ, ಬೇಡ್ತಿ ಕಣಿವೆಯ ಅರಬೈಲು, ಕೊಡಚಾದ್ರಿ ಕಣಿವೆಯ ಅಂಬಾರಗುಡ್ಡ, ದಕ್ಷಿಣ ಕನ್ನಡದ ನೆರಿಯ ಹಾಗೂ ಕಳೆದ ಮೂರು ವರ್ಷಗಳಿಂದ ಕೊಡಗು, ಸಕಲೇಶಪುರ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಕೆಲವು ಪ್ರದೇಶ ಸೇರಿದಂತೆ ಪಶ್ಚಿಮಘಟ್ಟದುದ್ದಕ್ಕೂ ಘಟಿಸುತ್ತಿರುವ ಭೂಕುಸಿತಗಳೆಲ್ಲ ಇದೇ ಪ್ರಕ್ರಿಯೆಯ ವಿಭಿನ್ನ ರೂಪಗಳು! ‘ಭೂಗರ್ಭದಾಳದ ಸಮಸ್ಯೆಗಳೇನೂ ಇಲ್ಲಿಲ್ಲ. ಕಾಡು ನಾಶವಾಗಿ, ಮಣ್ಣು ಸಡಿಲವಾಗಿ, ಅಪಾರ ಮಳೆನೀರು ಒಮ್ಮೆಲೇ ಭೂಮಿಯೊಳಗೆ ಇಳಿದಿರುವುದರಿಂದಲೇ ಕುಸಿತವಾಗಿದ್ದು. ಮೂಲಕಾರಣ ಮಾನವನ ಹಸ್ತಕ್ಷೇಪವೇ. ಕೊನೆಕ್ಷಣದ ಪ್ರಚೋದನೆ ಮಾತ್ರ ಭಾರಿ ಮಳೆಯದ್ದು’ ಎನ್ನುತ್ತವೆ ವೈಜ್ಞಾನಿಕ ಅಧ್ಯಯನಗಳು.

ಇವನ್ನೂ ಮೀರಿ, ಬಿಸಿಲೆ, ಕೆಮ್ಮಣ್ಣುಗುಂಡಿ ತರಹದ ಕಡಿದಾದ ಶಿಖರಗಳ ಸಾಲಿನಲ್ಲಿ, ಪ್ರಕೃತಿ ಸಹಜವಾದ ಅರಣ್ಯದ ಏರಿಳಿತದಿಂದಾಗಿ, ಅಪರೂಪಕ್ಕೊಮ್ಮೆ ಭಾರಿ ಮಳೆಯಿಂದ ಭೂಕುಸಿತವಾಗಬಹುದು. ಆದರೆ, ಅಲ್ಲಿ ಜನವಸತಿಯಿಲ್ಲದ ಕಾರಣ ಭಯಪಡಬೇಕಿಲ್ಲ. ಭಾರತೀಯ ಭೂಗರ್ಭಶಾಸ್ತ್ರ ಸರ್ವೇಕ್ಷಣಾ ಸಂಸ್ಥೆಯ (ಜಿಎಸ್‌ಐ) ತಜ್ಞರು ರೂಪಿಸಿರುವ ‘ಭೂಕುಸಿತವಾಗುವ ಸಂಭವನೀಯ ಪ್ರದೇಶಗಳ ರಾಷ್ಟ್ರೀಯ ದಾಖಲೀಕರಣ’ (ಎನ್‌ಎಲ್‌ಎಸ್‌ಎಂ) ಎಂಬ ಕಂಪ್ಯೂಟರ್ ಆಧಾರಿತ ದತ್ತಾಂಶಕೋಶದಲ್ಲಿ, ನೆಲದಾಳದ ಕಲ್ಲಿನ ರಚನೆ, ಮೇಲ್ಪದರದ ಮಣ್ಣು, ಇಳಿಜಾರಿನ ಸ್ವರೂಪ, ಹಸಿರು ಹೊದಿಕೆ, ಮಳೆಯ ಪ್ರಮಾಣ, ಗಾಳಿ ಬೀಸುವ ವೇಗ, ಅಂತರ್ಜಲ ಮತ್ತು ಮೇಲ್ಮೈ ನೀರಿನ ಹರಿವು, ಭೂಬಳಕೆ ರೀತಿ- ಇತ್ಯಾದಿಗಳು ಹಾಗೂ ಭೂಕುಸಿತದ ನಡುವಿನ ಸಂಬಂಧದ ಆಳ ವಿಶ್ಲೇಷಣೆಯಿದೆ.

ಸಹ್ಯಾದ್ರಿ ತಪ್ಪಲಿನುದ್ದಕ್ಕೂ ಅದು ಗುರುತಿಸಿರುವ ಸಾವಿರಕ್ಕೂ ಮಿಕ್ಕಿ ಭೂಕುಸಿತದ ಸಾಧ್ಯತೆಯಿರುವ ಪ್ರದೇಶಗಳಲ್ಲಿ ಶೇ 95ಕ್ಕೂ ಮಿಕ್ಕಿ ಸ್ಥಳಗಳಲ್ಲಿ ಅರಣ್ಯನಾಶ, ಕ್ವಾರಿ, ಮರಳು ಗಣಿಗಾರಿಕೆ, ನದಿಯಂಚಿನ ಅತಿಕ್ರಮಣ, ಕಟ್ಟಡ ನಿರ್ಮಾಣ, ಹೆದ್ದಾರಿ ಅಥವಾ ತೋಟ ವಿಸ್ತರಣೆಗಾಗಿ ಲಂಬಕೋನದಲ್ಲಿ ಗುಡ್ಡ ಕಡಿಯುವುದು ಇತ್ಯಾದಿ ಅತಿರೇಕಗಳೇ ಕಾರಣವೆನ್ನುವುದನ್ನು ಅದು ಗುರುತಿಸಿದೆ!

ಅರಣ್ಯ ಹಾಗೂ ಪರಿಸರ ಸಂರಕ್ಷಣೆ ಕಾನೂನುಗಳನ್ನು ನಿರ್ಲಕ್ಷಿಸಿ ಹೀಗೆ ಅವೈಜ್ಞಾನಿಕವಾಗಿ ಭೂಸ್ವರೂಪವನ್ನೇ ಬದಲಾಯಿಸುತ್ತಿರುವ ನಡವಳಿಕೆಯು ಈಗಲಾದರೂ ನಿಲ್ಲಬೇಕಿದೆ. ಕಂದಾಯಭೂಮಿ, ಗೋಮಾಳ, ಕಾಡು, ನದಿ ತಪ್ಪಲುಗಳಲ್ಲಿ ಜಲಾನಯನ ತತ್ವದಡಿ ಮಣ್ಣಿನಸಾರ ರಕ್ಷಣೆ, ಜಲಮೂಲ ಪೋಷಣೆ, ತೊರೆಗಳ ಹರಿವಿಗೆ ಮನ್ನಣೆ ಮತ್ತು ಜೀವವೈವಿಧ್ಯ ಸಂರಕ್ಷಣೆಗೆ ಆದ್ಯತೆ ದೊರಕಬೇಕಿದೆ. ಸೂಕ್ತ ವಿಧಿ-ನಿಷೇಧಗಳುಳ್ಳ ಅಂಥ ‘ಭೂಬಳಕೆ ನೀತಿ’ಯೊಂದರ ಜಾರಿಯೇ ಇಂದಿನ ಅಗತ್ಯ. ಇದರ ಅನುಷ್ಠಾನದಲ್ಲಿ ಸ್ಥಳೀಯರ ಅಭಿಪ್ರಾಯ ಮತ್ತು ಪಾರಂಪರಿಕ ಕೌಶಲಗಳಿಗೂ ಅವಕಾಶವಿರಬೇಕು. ಭೂಕುಸಿತ ನಿಯಂತ್ರಣದ ದಾರಿಗಳು ಆಗ ಕಂಡಾವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು