ಮಂಗಳವಾರ, ಆಗಸ್ಟ್ 3, 2021
23 °C
ಚೀನಾವನ್ನು ಖುಷಿಪಡಿಸಲು ಹಾಂಗ್‌ಕಾಂಗ್‌ ಆಡಳಿತವು ಇಂಟರ್ನೆಟ್ ಮೇಲೆ ನಿಯಂತ್ರಣ ಹೇರುತ್ತಿದೆ

ವಿಶ್ಲೇಷಣೆ | ಆನ್‌ಲೈನ್‌ ಸ್ವಾತಂತ್ರ್ಯಕ್ಕೆ ಹೋರಾಟ

ಪೌಲ್ ಮೊಜುರ್ Updated:

ಅಕ್ಷರ ಗಾತ್ರ : | |

ಹಾಂಗ್‌ಕಾಂಗ್‌ನ ಜನ ಹೊಸ ಭದ್ರತಾ ಕಾಯ್ದೆಯ ವಿರುದ್ಧ ಹೋರಾಟ ನಡೆಸಿದ್ದಾರೆ. ಈ ನಡುವೆ, ಸೆನ್ಸಾರ್‌ಷಿಪ್‌, ಕಣ್ಗಾವಲು ಹಾಗೂ ಇಂಟರ್ನೆಟ್‌ನ ಭವಿಷ್ಯದ ವಿಚಾರವಾಗಿ ಅಮೆರಿಕ ಮತ್ತು ಚೀನಾ ನಡುವೆ ನಡೆಯುತ್ತಿರುವ ಜಾಗತಿಕ ಸಂಘರ್ಷದ ತಾಣವಾಗಿ ಈ ಪುಟ್ಟ ನಗರ ಪರಿವರ್ತಿತವಾಗಿದೆ.

ಚೀನಾದ ಇಂಟರ್ನೆಟ್‌ ಜಗತ್ತಿನ ಗಡಿಯಲ್ಲಿರುವ ಹಾಂಗ್‌ಕಾಂಗ್‌, ಮೊದಲಿನಿಂದಲೂ ಆನ್‌ಲೈನ್‌ ಸ್ವಾತಂತ್ರ್ಯದ ನೆಲೆಯಾಗಿತ್ತು. ಆದರೆ ಒಂದು ವಾರದ ಅವಧಿಯಲ್ಲಿ ಹಾಂಗ್‌ಕಾಂಗ್‌ನ ಸ್ಥಿತಿ ಬದಲಾಗಿದೆ. ಹೊಸ ಕಾನೂನಿನ ಅನ್ವಯ ಪೊಲೀಸ್‌ ಸೆನ್ಸಾರ್‌ಷಿಪ್‌ ಇರುತ್ತದೆ, ಪರೋಕ್ಷವಾಗಿ ಡಿಜಿಟಲ್ ಕಣ್ಗಾವಲು ಇರುತ್ತದೆ. ಈ ನಿಯಮಗಳನ್ನು ವಿಶ್ವದ ಯಾವುದೇ ಭಾಗದಲ್ಲಿ ಆನ್‌ಲೈನ್‌ ಮೂಲಕ ನಡೆಯುವ ಅಭಿವ್ಯಕ್ತಿಗೆ ಅನ್ವಯಿಸಬಹುದು. ಈಗ, ಸೆನ್ಸಾರ್ ವಿಚಾರದಲ್ಲಿ ವಿಶ್ವದ ಅತಿದೊಡ್ಡ ಶಕ್ತಿಯಂತಿರುವ ಚೀನಾ ಕಮ್ಯುನಿಸ್ಟ್ ಪಕ್ಷವನ್ನು ಖುಷಿಪಡಿಸಲು ಹಾಂಗ್‌ಕಾಂಗ್‌ ಸರ್ಕಾರವು ಇಂಟರ್ನೆಟ್ ಮೇಲೆ ನಿಯಂತ್ರಣಗಳಿಗೆ ಸಂಬಂಧಿಸಿ ನಿಯಮಗಳನ್ನು ರೂಪಿಸುತ್ತಿದೆ.

ಬದಲಾವಣೆಗಳು ಅಮೆರಿಕ ಮತ್ತು ಚೀನಾ ನಡುವಿನ ಉದ್ವಿಗ್ನತೆಗೆ ಇನ್ನಷ್ಟು ತುಪ್ಪ ಸುರಿಯುವ ಅಪಾಯ ಎದುರಾಗಿದೆ. ಈ ದೇಶಗಳ ನಡುವಿನ ಸಂಘರ್ಷದಲ್ಲಿ, ತಂತ್ರಜ್ಞಾನದ ಮೂಲಕವೇ ಪ್ರಭಾವವನ್ನು ವಿಸ್ತರಿಸುವ ಯತ್ನ ನಡೆದಿದೆ. ಹಾಂಗ್‌ಕಾಂಗ್‌ ನಗರದ 70 ಲಕ್ಷ ನಿವಾಸಿಗಳು, ತುರುಸಿನ ರಾಜಕೀಯ ಚರ್ಚೆಗಳಿಗೆ ಸಂಬಂಧಿಸಿದ ಆನ್‌ಲೈನ್‌ ದಾಖಲೆಗಳು, ದತ್ತಾಂಶಗಳನ್ನು ಸಂಗ್ರಹಿಸಿ ಇಡುವ ವಿಶ್ವದ ಅತಿದೊಡ್ಡ ಇಂಟರ್ನೆಟ್ ಕಂಪನಿಗಳು ಈ ಸಂಘರ್ಷದಲ್ಲಿ ಸಿಲುಕಿಕೊಂಡಿವೆ.

ಬಳಕೆದಾರರ ಮಾಹಿತಿ ಕೋರಿ ಹಾಂಗ್‌ಕಾಂಗ್‌ ಅಧಿಕಾರಿಗಳಿಂದ ಬರುವ ಮನವಿಗಳನ್ನು ಪುರಸ್ಕರಿಸುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿಗಳಾದ ಫೇಸ್‌ಬುಕ್‌, ಗೂಗಲ್‌, ಟ್ವಿಟರ್, ಜೂಮ್‌ ಮತ್ತು ಲಿಂಕ್ಡ್‌ಇನ್ ಈಚೆಗೆ‌ ಹೇಳಿವೆ. ಆದರೆ, ಕಾನೂನಿಗೆ ಅನುಗುಣವಾಗಿ ಕೆಲಸ ಮಾಡಿಕೊಡದೇ ಇದ್ದರೆ ಕಂಪನಿಗಳ ಉದ್ಯೋಗಿಗಳಿಗೆ ಜೈಲುಶಿಕ್ಷೆ ಕೂಡ ಎದುರಾಗಬಹುದು ಎಂದು ಹಾಂಗ್‌ಕಾಂಗ್‌ ಸರ್ಕಾರ ಎಚ್ಚರಿಕೆ ನೀಡಿದೆ.

ಹೊಸ ಕಾನೂನಿನ ಅನ್ವಯ, ಈ ನಗರದ ರಾಜಕೀಯದ ಕುರಿತು ವಿಶ್ವದಾದ್ಯಂತ ಇರುವ ಜನ ಏನು ಮಾತನಾಡಬೇಕು, ಮಾತನಾಡಬಾರದು ಎಂಬುದನ್ನು ಆದೇಶಿಸುವ ಅಧಿಕಾರ ಅಲ್ಲಿನ ಅಧಿಕಾರಿಗಳಿಗಿದೆ. ಅಮೆರಿಕದಲ್ಲಿ ಇರುವ ವ್ಯಕ್ತಿಯೊಬ್ಬ ‘ರಾಷ್ಟ್ರದ ಭದ್ರತೆಗೆ’ ಬೆದರಿಕೆ ಎಂದು ಚೀನಾದ ಅಧಿಕಾರಿಗಳು ಭಾವಿಸಿದಲ್ಲಿ, ಅವನ ವಿವರಗಳನ್ನು ನೀಡಲು ಫೇಸ್‌ಬುಕ್‌ ನಿರಾಕರಿಸಿದಲ್ಲಿ, ಫೇಸ್‌ಬುಕ್‌ ನೌಕರನನ್ನು ಹಾಂಗ್‌ಕಾಂಗ್‌ನಲ್ಲಿ ಬಂಧಿಸಬಹುದು. ಈ ನಗರವು ಚೀನಾದ ಡಿಜಿಟಲ್ ನಿರ್ಬಂಧಗಳ ತೆಕ್ಕೆಗೆ ಬರಲಿದೆಯೋ ಅಥವಾ ಆನ್‌ಲೈನ್‌ ಅಭಿವ್ಯಕ್ತಿಯಲ್ಲಿ ಕೆಲವನ್ನು ಮಾತ್ರ ನಿರ್ಬಂಧಿಸಲಾಗುವುದೋ ಎಂಬುದನ್ನು ಮುಂದೆ ಬರುವ ಕಾನೂನು ಸಮರವು ನಿರ್ಧರಿಸಬಹುದು.

ಅಮೆರಿಕ ಮತ್ತು ಚೀನಾ ನಡುವಿನ ತಂತ್ರಜ್ಞಾನ ಆಧಾರಿತ ಶೀತಲ ಸಮರವು ಬಹುನೆಲೆಗಳಲ್ಲಿ ನಡೆಯುತ್ತಿದೆ. ವಾಣಿಜ್ಯ ಸಮರವು ಚೀನಾದ ಹುಆವೆ, ಜೆಡ್‌ಟಿಇಯಂತಹ ಕಂಪನಿಗಳನ್ನು ಕಟ್ಟಿಹಾಕಿದೆ. ಚೀನಾದ ಕೈಗಾರಿಕಾ ನೀತಿಗಳು ಅಲ್ಲಿನ ಉದ್ಯಮಗಳ ಪರವಾಗಿವೆ ಎಂದು ಅಮೆರಿಕದ ಕಂಪನಿಗಳು ದೂರುತ್ತಿವೆ. ಗೂಗಲ್, ಫೇಸ್‌ಬುಕ್‌ನಂತಹ ಕಂಪನಿಗಳು ಚೀನಾದಲ್ಲಿ ಸೇವೆ ನೀಡುವುದಕ್ಕೆ ನಿರ್ಬಂಧವಿದೆ.

ಅಮೆರಿಕದ ಕಂಪನಿಗಳು ಚೀನಾದ ಜಾಹೀರಾತು ಮೂಲದಿಂದ ಈಗಲೂ ಲಕ್ಷಾಂತರ ಡಾಲರ್ ಸಂಪಾದಿಸುತ್ತವೆ. ಆದರೆ, ಹಾಂಗ್‌ಕಾಂಗ್‌ನಲ್ಲಿ ತರಲಾದ ಕಾನೂನು ಸರಿಯೆಂದು ಹೇಳಿದರೆ, ಅಮೆರಿಕ ಸರ್ಕಾರದ ವಿರೋಧ ಎದುರಿಸಬೇಕಾಗುತ್ತದೆ. ಹಾಂಗ್‌ಕಾಂಗ್‌ನಲ್ಲಿ ಜಾರಿಗೆ ಬಂದಿರುವ ಕಾನೂನನ್ನು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೊ ಲಿಜಿಯಾನ್ ಈಚೆಗೆ ಸಮರ್ಥಿಸಿಕೊಂಡಿದ್ದಾರೆ. ಚೀನಾದ ನಾಯಕರಾಗಿದ್ದ ಡೆಂಗ್ ಷಿಯೋಪಿಂಗ್ ಅವರ ಹೇಳಿಕೆಯೊಂದನ್ನು ನೆನಪಿಸಿ, ‘ಕುದುರೆಗಳು ಹೆಚ್ಚು ವೇಗವಾಗಿ, ಹೆಚ್ಚು ಖುಷಿಯಿಂದ ಓಡುತ್ತವೆ. ನೃತ್ಯಗಾರರು ಚೆನ್ನಾಗಿ ನೃತ್ಯ ಮಾಡುತ್ತಾರೆ. ನಮಗೆ ಹಾಂಗ್‌ಕಾಂಗ್‌ ವಿಚಾರದಲ್ಲಿ ಪೂರ್ಣ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಗೂಗಲ್‌ನ ಅನುಭವಕ್ಕೆ ಬಂದ ಸಂಗತಿಗಳು, ಅಮೆರಿಕದ ಅತಿದೊಡ್ಡ ಇಂಟರ್ನೆಟ್ ಕಂಪನಿಗಳು ಎದುರಿಸುತ್ತಿರುವ ಅಪಾಯಕಾರಿ ಸ್ಥಿತಿಯನ್ನು ತೆರೆದಿಡುತ್ತವೆ. 2019ರಲ್ಲಿ ನಗರದಾದ್ಯಂತ ನಡೆದ ಪ್ರತಿಭಟನೆಗಳನ್ನು ನಿಯಂತ್ರಿಸಲು ಹೆಣಗಾಡಿದ ಹಾಂಗ್‌ಕಾಂಗ್‌ ಪೊಲೀಸರು, ನೆರವಿಗಾಗಿ ಇಂಟರ್ನೆಟ್ ಕಂಪನಿಗಳ ಮೊರೆ ಹೋದರು. ದತ್ತಾಂಶದ ವಿವರ ಕೋರಿ, ನಿರ್ದಿಷ್ಟ ವಿವರಗಳನ್ನು ಇಂಟರ್ನೆಟ್‌ನಿಂದ ತೆಗೆಯುವಂತೆ ಸೂಚಿಸಿ ಪೊಲೀಸರಿಂದ ಬರುವ ಕೋರಿಕೆ ಹಾಗೂ ಆದೇಶಗಳ ಪ್ರಮಾಣವು 2019ರ ಪೂರ್ವಾರ್ಧಕ್ಕೆ ಹೋಲಿಸಿದರೆ ಉತ್ತರಾರ್ಧದಲ್ಲಿ ದುಪ್ಪಟ್ಟಿಗಿಂತ ಹೆಚ್ಚಾಯಿತು ಎನ್ನುತ್ತಾರೆ ಪ್ರಜಾತಂತ್ರದ ಪರ ಇರುವ ಜನಪ್ರತಿನಿಧಿ ಚಾರ್ಲ್ಸ್‌ ಮೊಕ್.

ಗೋಪ್ಯ ಪೊಲೀಸ್‌ ಕೈಪಿಡಿ, ಪ್ರತಿಭಟನೆಗಳನ್ನು ಬೆಂಬಲಿಸುವ ಒಂದು ಯುಟ್ಯೂಬ್‌ ವಿಡಿಯೊ, ಪೊಲೀಸ್ ಅಧಿಕಾರಿಗಳ ಖಾಸಗಿ ವಿವರಗಳು ಇರುವ ವೆಬ್‌ ತಾಣವೊಂದರ ಕೊಂಡಿಯನ್ನು ತೆಗೆದುಹಾಕಬೇಕು ಎಂದು ಪೊಲೀಸರು ಗೂಗಲ್‌ ಕಂಪನಿಗೆ ಸೂಚಿಸಿದರು. ಆದರೆ, ಪೊಲೀಸರ ಸೂಚನೆಯನ್ನು ಗೂಗಲ್ ಪಾಲಿಸಲಿಲ್ಲ. ಸೂಚನೆ ಪಾಲಿಸಲು ಮತ್ತೆ ನಿರಾಕರಿಸಿದರೆ ಕಂಪನಿಗೆ ದಂಡ ವಿಧಿಸುವ, ಕಂಪನಿಯ ಸಲಕರಣೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಹಾಗೂ ಕಂಪನಿಯ ಪ್ರತಿನಿಧಿಗಳನ್ನು ಬಂಧಿಸುವ ಅವಕಾಶವನ್ನು ಹೊಸ ಕಾನೂನು ನೀಡುತ್ತದೆ. ‘ಕಾನೂನಿನ ಪರಿಣಾಮ ಏನಾಗಬಹುದು ಎಂಬ ವಿಚಾರದಲ್ಲಿ ಕೆಲವು ಸ್ಥಳೀಯ ಕಂಪನಿಗಳು ಹೆಚ್ಚು ಆತಂಕ ಹೊಂದಿರುತ್ತವೆ. ಅವು ಸರ್ಕಾರದ ಕೋರಿಕೆಗಳನ್ನು ಪಾಲಿಸಬಹುದು’ ಎಂದು ಮೊಕ್ ಹೇಳುತ್ತಾರೆ.


ಪೌಲ್ ಮೊಜುರ್

ಪ್ರಜಾತಂತ್ರದ ಪರ ನಡೆದ ಚಳವಳಿಗಳ ಜೊತೆ ಗುರುತಿಸಿಕೊಂಡಿದ್ದ ಕೆಲವು ಸಣ್ಣ, ಸ್ಥಳೀಯ ಆ್ಯಪ್‌ಗಳು ಈಗಾಗಲೇ ಕೆಲಸ ಸ್ಥಗಿತಗೊಳಿಸಿವೆ. ರೆಸ್ಟೊರೆಂಟ್‌ಗಳನ್ನು ಅವುಗಳ ರಾಜಕೀಯ ಒಲವು–ನಿಲುವುಗಳ ಆಧಾರದಲ್ಲಿ ವರ್ಗೀಕರಣ ಮಾಡಿದ್ದ ‘ಈಟ್ ವಿತ್ ಯೂ’ ಆ್ಯಪ್‌ ಹೊಸ ಕಾನೂನು ಜಾರಿಗೆ ಬಂದ ಮಾರನೆಯ ದಿನದಿಂದ ತನ್ನ ಕೆಲಸ ನಿಲ್ಲಿಸಿದೆ. ನಗರದ ವಾಣಿಜ್ಯೋದ್ಯಮಗಳನ್ನು ಪೊಲೀಸ್ ಪರ, ಪ್ರತಿಭಟನಕಾರರ ಪರ ಎಂಬ ಆಧಾರದಲ್ಲಿ ಗೂಗಲ್‌ ಮ್ಯಾಪ್‌ ಮೂಲಕ ಗುರುತಿಸಿಕೊಡುತ್ತಿದ್ದ ಇನ್ನೊಂದು ಸೇವೆ ಕೂಡ ಈಚೆಗೆ ಸ್ಥಗಿತಗೊಂಡಿದೆ.

ಕೆಲವರು ವೈಯಕ್ತಿಕ ನೆಲೆಯಲ್ಲಿಯೂ ಮೌನ ವಹಿಸಲು ಶುರು ಮಾಡಿದ್ದಾರೆ. ಹಲವರು ತಾವು ಇಂಟರ್ನೆಟ್‌ನಲ್ಲಿ ಬರೆದಿದ್ದ ಬರಹಗಳನ್ನು ಡಿಲೀಟ್ ಮಾಡಿದ್ದಾರೆ. ಪ್ರಜಾತಂತ್ರದ ಪರವಾಗಿ ಇದ್ದ ಪುಟಗಳನ್ನು ಲೈಕ್‌ ಮಾಡಿದ್ದನ್ನು ತೆಗೆದುಹಾಕಿದ್ದಾರೆ, ಟ್ವಿಟರ್‌ನಂತಹ ತಾಣಗಳಲ್ಲಿ ತಾವು ಹೊಂದಿದ್ದ ಖಾತೆಗಳನ್ನು ಡಿಲೀಟ್ ಮಾಡಿದ್ದಾರೆ ಎನ್ನುತ್ತಾರೆ ಪ್ರಜಾತಂತ್ರ ಪರ ಕಾರ್ಯಕರ್ತರು. ವಾಟ್ಸ್‌ಆ್ಯಪ್‌ ತನ್ನ ಮೂಲಕ ನಡೆದ ಸಂಭಾಷಣೆಗಳ ದತ್ತಾಂಶವನ್ನು ಹಸ್ತಾಂತರ ಮಾಡಬಹುದು ಎಂಬ ಭೀತಿಯಿಂದ ಜನ ‘ಸಿಗ್ನಲ್’ ಆ್ಯಪ್‌ ಅನ್ನು (ಇದು ಸಂಭಾಷಣೆಗಳನ್ನು ಗೋಪ್ಯವಾಗಿರಿಸುತ್ತದೆ) ದೊಡ್ಡ ಸಂಖ್ಯೆಯಲ್ಲಿ ಡೌನ್‌ಲೋಡ್‌ ಮಾಡಿಕೊಂಡರು. ಆದರೆ, ದತ್ತಾಂಶ ಹಸ್ತಾಂತರಿಸುವಂತೆ ಹಾಂಗ್‌ಕಾಂಗ್‌ ಪೊಲೀಸರಿಂದ ವಾಟ್ಸ್‌ಆ್ಯಪ್‌ಗೆ ಯಾವುದೇ ಕೋರಿಕೆ ಸಲ್ಲಿಕೆಯಾಗಿಲ್ಲ ಎಂದು ಮೂಲವೊಂದು ಹೇಳಿದೆ.

ಕಂಪನಿಗಳು ತಮ್ಮ ದತ್ತಾಂಶ ಕೇಂದ್ರಗಳನ್ನು ಹಾಂಗ್‌ಕಾಂಗ್‌ನಿಂದ ಹೊರಗೆ ಸ್ಥಳಾಂತರಗೊಳಿಸುವ ಆಯ್ಕೆ ಹೊಂದಿವೆ. ವಾಣಿಜ್ಯೋದ್ಯಮಗಳು ತಮ್ಮ ಸರ್ವರ್‌ಗಳನ್ನು ನಗರದಿಂದ ಹೊರಗೆ ಸ್ಥಳಾಂತರ ಮಾಡುತ್ತಿರುವುದು ಜೂನ್‌ನಲ್ಲಿ ತುಸು ಹೆಚ್ಚಾಗಿದೆ ಎಂದು ಹಾಂಗ್‌ಕಾಂಗ್‌ನ ಇಂಟರ್ನೆಟ್‌ ಸೇವಾದಾತರ ಸಂಘದ ಅಧ್ಯಕ್ಷ ಲೆಂಟೊ ಯಿಪ್ ಹೇಳುತ್ತಾರೆ. ಆದರೆ, ನಗರದಲ್ಲಿ ದೊಡ್ಡ ದತ್ತಾಂಶ ಕೇಂದ್ರಗಳನ್ನು ಹೊಂದಿರುವ ಅಮೆಜಾನ್‌ ಮತ್ತು ಗೂಗಲ್‌ನಂತಹ ಕಂಪನಿಗಳು ಹೀಗೆ ಮಾಡುವುದು ಸುಲಭವೂ ಅಲ್ಲ, ಅಗ್ಗವೂ ಅಲ್ಲ. ಅವರ ಮುಂದಿರುವ ಬೇರೆ ಆಯ್ಕೆಗಳೂ ಸಂಕೀರ್ಣವಾಗಿವೆ. ತಮ್ಮ ನೌಕರರನ್ನು ನಗರದಿಂದ ಬೇರೆಡೆ ಸ್ಥಳಾಂತರಿಸಿದರೆ, ಬಂಧನದ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಆದರೆ, ಇದೂ ಸಾಧ್ಯವಾಗಲಿಕ್ಕಿಲ್ಲ.

-ದಿ ನ್ಯೂಯಾರ್ಕ್‌ ಟೈಮ್ಸ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು