ಗುರುವಾರ , ಏಪ್ರಿಲ್ 22, 2021
22 °C
‘ಮನುಜಮತ ವಿಶ್ವಪಥ’ ಪರಿಕಲ್ಪನೆಯಡಿ ಸಮಗ್ರ ಯೋಜನೆ ರೂಪಿಸುವ ಸಂಕಲ್ಪ

ಬಸವ ತತ್ವಕ್ಕೆ ಬದ್ಧ; ಜನಸೇವೆಗೆ ಸಿದ್ಧ- ಬಿಎಸ್‌ವೈ ಸಂಕಲ್ಪ

ಬಿ.ಎಸ್‌. ಯಡಿಯೂರಪ್ಪ Updated:

ಅಕ್ಷರ ಗಾತ್ರ : | |

ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದ ಅಗ್ರಗಣ್ಯ ನಾಯಕರ ಸಾಲಿನಲ್ಲಿ ತಮ್ಮದೇ ಛಾಪು ಮೂಡಿಸಿದ ಮಹಾನ್ ಮುತ್ಸದ್ದಿ. ಒಂದೆರಡು ವರ್ಷಗಳ ಹಿಂದೆ ಅವರು ಲಂಡನ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಕರ್ನಾಟಕದ ಮಹಾನ್ ಸಂತ, ಸಮಾಜ ಸುಧಾರಕ ಬಸವಣ್ಣನವರ ತತ್ವ-ಸಿದ್ಧಾಂತಗಳು ತಮ್ಮ ಮೇಲೆ ಯಾವ ರೀತಿ ಪ್ರಭಾವ ಬೀರಿದವು ಎನ್ನುವುದನ್ನು ನಿದರ್ಶನಗಳ ಸಹಿತ ಹೀಗೆ ವಿವರಿಸಿದ್ದರು:

‘12ನೇ ಶತಮಾನದ ಮಹಾಪುರುಷ ಬಸವಣ್ಣ. ಅವರ ವಚನಗಳು ಭಾರತದ ಪ್ರತಿಯೊಂದು ಭಾಷೆಯಲ್ಲಿ ಲಭ್ಯ ಇವೆ. ಇಂದು ಅವರ ಜನ್ಮದಿನ. ನನ್ನ ತುರ್ತು ಕಾರ್ಯಕ್ರಮಗಳ ನಡುವೆ ಬಸವೇಶ್ವರರ ಪುತ್ಥಳಿಗೆ ನಮಿಸಿ ಇಲ್ಲಿಗೆ ಬಂದಿದ್ದೇನೆ. ನಾವು ಮ್ಯಾಗ್ನಕಾರ್ಟ ಬಗ್ಗೆ ಓದಿದ್ದೇವೆ. ಜನತಾಂತ್ರಿಕ ಮೌಲ್ಯಗಳ ಬಗ್ಗೆ ಮಾತನಾಡುತ್ತೇವೆ. ಮ್ಯಾಗ್ನಕಾರ್ಟಗೆ ಮೊದಲೇ, 12ನೇ ಶತಮಾನದಲ್ಲಿ ಲೋಕತಂತ್ರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಬಸವಣ್ಣ. ಅವರು ಅನುಭವ ಮಂಟಪ ಎನ್ನುವ ವ್ಯವಸ್ಥೆಯನ್ನು ರೂಪಿಸಿದ್ದರು. ಅದರಲ್ಲಿ ನಡೆಯುತ್ತಿದ್ದ ಸಂವಾದಗಳಲ್ಲಿ ಸಮಾಜದ ಎಲ್ಲ ವರ್ಗಗಳ ಜನರೂ ಭಾಗವಹಿಸುತ್ತಿದ್ದರು. ಸಾಮಾಜಿಕ ಸಮಸ್ಯೆಗಳ ಬಗ್ಗೆ ಸುದೀರ್ಘ ಪರಾಮರ್ಶೆ ನಡೆಸುತ್ತಿದ್ದರು. ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಕಡ್ಡಾಯ ಪ್ರಾತಿನಿಧ್ಯ ನೀಡುತ್ತಿದ್ದರು. ಪ್ರತಿಯೊಬ್ಬ ವ್ಯಕ್ತಿ ದುಡಿದು ಬದುಕಬೇಕು, ದುಡಿದುದರಲ್ಲಿ ಒಂದು ಭಾಗವನ್ನು ಸಮಾಜದ ಶ್ರೇಯಸ್ಸಿಗೆ ಬಳಸಬೇಕು ಎನ್ನುವ ಮಹಾನ್ ಸಂದೇಶವನ್ನು ಜಗತ್ತಿಗೆ ಸಾರಿದ್ದರು. ಇಂತಹ ವ್ಯವಸ್ಥೆಯು 12ನೇ ಶತಮಾನದಲ್ಲಿತ್ತು ಎಂದರೆ ನಿಮಗೆ ಆಶ್ಚರ್ಯ ಆಗಬಹುದು’.

‘ನಮ್ಮ ದೇಶವು ಜಾತಿವಾದ, ಉಚ್ಚ–ನೀಚ ಇಂತಹ ಆಲೋಚನೆಗಳಿಂದ ನೈತಿಕವಾಗಿ ಅಧಃಪತನದ ಹಾದಿ ಹಿಡಿದಿದೆ. ಬಸವೇಶ್ವರರು ಇವರೆಲ್ಲರನ್ನೂ ಒಂದೇ ಸೂರಿನಡಿ ತಂದು, ಭೇದಭಾವ ನಿವಾರಿಸುವ ಗಂಭೀರ ಪ್ರಯತ್ನ ಮಾಡಿದ್ದರು. ‘ಸರ್ವರಿಗೂ ಸಮಬಾಳು– ಸರ್ವರಿಗೂ ಸಮಪಾಲು’ ಎನ್ನುವ ಚಿಂತನೆಯು 12ನೇ ಶತಮಾನದಲ್ಲಿ ಬಸವೇಶ್ವರರಿಂದ ಸಾಕಾರಗೊಂಡಿತ್ತು. ಲೋಕತಂತ್ರದಲ್ಲಿ ಅತ್ಯವಶ್ಯಕವಾಗಿರುವ ಜಾತಿ ವ್ಯವಸ್ಥೆಯ ನಿರ್ಮೂಲನೆ, ಮಹಿಳಾ ಸಬಲೀಕರಣ, ಸರ್ವರ ಅಭಿವೃದ್ಧಿ, ಕಾಯಕ ಸಿದ್ಧಾಂತವು ಬಸವೇಶ್ವರರು ಸಾಕಾರಗೊಳಿಸಿದ ಮಾನವಪರ ನೀತಿಗಳು. ಈ ಹಿನ್ನೆಲೆಯಲ್ಲಿ ಬಸವೇಶ್ವರರು ಇಡೀ ಜಗತ್ತಿಗೆ ಮಾದರಿ’ ಎಂದು ಮುಕ್ತಕಂಠದಿಂದ ಪ್ರಶಂಸೆ ಮಾಡಿದ್ದರು. ‘ಸಬ್ ಕಾ ಸಾಥ್– ಸಬ್ ಕಾ ವಿಕಾಸ್’ ಎಂಬುದು ಮೋದಿ ನೇತೃತ್ವದ ಸರ್ಕಾರದ ಘೋಷಣೆ ಆಗಿದೆ. ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ಎಂಬ ಚಿಂತನೆಯು ಇದರ ಮೂಲದಲ್ಲಿದೆ.

ಮೋದಿಯವರು ಬಸವ ತತ್ವ-ಸಿದ್ಧಾಂತಗಳ ಬಗ್ಗೆ ಆಡಿರುವ ಪ್ರತಿಯೊಂದು ಮಾತೂ ಜನತಾಂತ್ರಿಕ ಪ್ರಕ್ರಿಯೆ ಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ಮೋದಿಯವರು ತೋರಿಸಿದ ಬಸವ ತತ್ವದ ಮುಂಬೆಳಕಲ್ಲಿ ಕರ್ನಾಟಕವನ್ನು ಮುನ್ನಡೆಸಬೇಕು ಎನ್ನುವುದು ನನ್ನ ಅಂತರಂಗದ ಅಭೀಪ್ಸೆ. ಕರ್ನಾಟಕ ಏಕೀಕರಣದ ರೂವಾರಿ ಸಿದ್ಧವನಹಳ್ಳಿ ನಿಜಲಿಂಗಪ್ಪ ಅವರನ್ನು ಹೊರತುಪಡಿಸಿದರೆ ನಾಲ್ಕು ಬಾರಿ ಕರ್ನಾಟಕದ ಮುಖ್ಯಮಂತ್ರಿ ಆಗುವ ಅವಕಾಶ ನನಗೆ ಮಾತ್ರ ದೊರೆತಿದೆ. ರಾಜ್ಯದ ಮತದಾರ ಪ್ರಭುವಿನಿಂದ ನನಗೆ ಇದು ಸಾಧ್ಯವಾಗಿದೆ. ನನ್ನ ಮೇಲೆ ವಿಶ್ವಾಸವಿಟ್ಟು ರಾಜ್ಯವನ್ನು ಅಭಿವೃದ್ಧಿಪಥದತ್ತ ಮುನ್ನಡೆಸುವ ಅವಕಾಶ ನೀಡಿದ ಕರ್ನಾಟಕದ ಜನರ ಋಣ ತೀರಿಸುವ ಗುರುತರ ಜವಾಬ್ದಾರಿ ನನ್ನ ಮೇಲಿದೆ. ನಾನು ಅಧಿಕಾರ ಸೂತ್ರ ಹಿಡಿದ ತಕ್ಷಣ ಒಂದು ಕಡೆ ಪ್ರಕೃತಿ ವಿಕೋಪದ ಭೀಕರತೆ ಈ ರಾಜ್ಯದ ಹದಿನೆಂಟು ಜಿಲ್ಲೆಗಳ ಜನರನ್ನು ಗಂಭೀರವಾಗಿ ಕಾಡಿದರೆ, ಇನ್ನೊಂದು ಕಡೆ ಹತ್ತರಿಂದ, ಹನ್ನೆರಡು ಜಿಲ್ಲೆಗಳು ತೀವ್ರ ಕ್ಷಾಮದಿಂದ ನರಳುತ್ತಿವೆ. ಅತ್ಯಂತ ಗಂಭೀರವಾದ ಎರಡೂ ಸವಾಲುಗಳನ್ನು ನಾವು ಸಮರ್ಥವಾಗಿ ಎದುರಿಸ ಬೇಕಾಗಿದೆ.

ಈ ವರ್ಷ ಕರ್ನಾಟಕದ ಯಾವುದೇ ಜಲಾಶಯ ತುಂಬುವುದು ಅಸಾಧ್ಯ ಎನ್ನುವ ಗಂಭೀರ ಆತಂಕ ಒಂದು ತಿಂಗಳ ಹಿಂದೆ ಮನೆ ಮಾಡಿತ್ತು. ಜನ–ಜಾನುವಾರುಗಳು ಕುಡಿಯುವ ನೀರಿಗೆ ಹಾಹಾಕಾರ ಪಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಸಾರ್ವತ್ರಿಕವಾಗಿ ಭಾವಿಸಲಾಗಿತ್ತು. ನಿಸರ್ಗಮಾತೆಯು ಕರುಣೆ ತೋರಿದ್ದು ನೆಮ್ಮದಿ ತರುವ ಅಂಶ. ಈಗ ಆಲಮಟ್ಟಿ, ಲಿಂಗನಮಕ್ಕಿ, ಕೃಷ್ಣರಾಜಸಾಗರ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ, ಹೇಮಾವತಿ, ಕಬಿನಿ, ಹಾರಂಗಿ ಸೇರಿದಂತೆ ಎಲ್ಲಾ ಜಲಾಶಯಗಳು ತುಂಬಿ ತುಳುಕುತ್ತಿವೆ. ಇದರಿಂದ ಕುಡಿಯುವ ನೀರು, ದನಕರುಗಳಿಗೆ ಮೇವಿನ ಸಮಸ್ಯೆ ಬಗೆಹರಿದಿದೆ. ಜೊತೆಗೆ ಜಲಾಶಯಗಳು, ಕೆರೆಕಟ್ಟೆಗಳು ತುಂಬಿರುವುದರಿಂದ ಅಂತರ್ಜಲದ ಮಟ್ಟ ವೃದ್ಧಿಯಾಗುತ್ತಿದೆ. ಅತಿವೃಷ್ಟಿ ಯಾಗಿರುವ ಮತ್ತು ಅನಾವೃಷ್ಟಿಯಾಗಿರುವ ಜಿಲ್ಲೆಗಳಲ್ಲಿ ಜನ ಎದುರಿಸುತ್ತಿರುವ ಸಮಸ್ಯೆಗಳನ್ನು ಸಮರೋಪಾದಿಯಲ್ಲಿ ಬಗೆಹರಿಸಲು ನಾವು ಮುಂದಡಿ ಇಟ್ಟಿದ್ದೇವೆ.

ಮೊದಲ ಹಂತದ ಸಚಿವ ಸಂಪುಟ ಈಗ ವಿಸ್ತರಣೆ ಆಗಿದೆ. ಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವ ಹೊಣೆ ಗಾರಿಕೆಯನ್ನು ಸಚಿವರಿಗೆ ವಹಿಸಲಾಗಿದೆ. ಕಂದಾಯ ಸಚಿವ ಅಶೋಕ ಅವರು ನೆರೆ ಹಾಗೂ ಬರಪೀಡಿತವಾಗಿರುವ ಪ್ರತಿ ಜಿಲ್ಲೆಗೂ ಖುದ್ದು ಭೇಟಿ ನೀಡಿ ಪರಿಹಾರ ಕಾಮಗಾರಿಗಳ ಪರಾಮರ್ಶೆ ನಡೆಸಲಿದ್ದಾರೆ. ಪ್ರತಿ ಜಿಲ್ಲೆಯ ಅಧಿಕಾರಿ ಸಮೂಹದ ಜೊತೆ ನಿರಂತರ ಸಂಪರ್ಕದಲ್ಲಿರುವ ನಾನು, ಪರಿಹಾರ ಕಾಮಗಾರಿಗಳಲ್ಲಿ ಯಾವುದೇ ರೀತಿಯ ಲೋಪ ದೋಷಗಳಾಗದಂತೆ ಎಚ್ಚರಿಕೆ ವಹಿಸಿದ್ದೇನೆ. ಪರಿಹಾರ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನುಸುಳಕೂಡದು. ಸಂಕಷ್ಟದಲ್ಲಿ ಸಿಲುಕಿರುವ ಜನರ ಸೇವೆಯೇ ಜನಾರ್ದನನ ಸೇವೆ ಎಂದು ಭಾವಿಸಬೇಕೆಂದು ಅಧಿಕಾರಶಾಹಿಗೆ ಸೂಚಿಸಿದ್ದೇನೆ.

ಕೇಂದ್ರ ಈಗಾಗಲೇ ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯಿಂದ ₹ 1029.39 ಕೋಟಿ ಬಿಡುಗಡೆ ಮಾಡಿದೆ. ಇದರ ಜೊತೆಗೆ, ಪ್ರಕೃತಿ ವಿಕೋಪದಿಂದ ಉಂಟಾಗಿರುವ ಕಷ್ಟನಷ್ಟಗಳ ಪ್ರಮಾಣದ ವರದಿ ಕೊಡಲು ಕೇಂದ್ರ ಅಧ್ಯಯನ ತಂಡ ವಿವಿಧ ಭಾಗಗಳಿಗೆ ಭೇಟಿ ನೀಡಿದೆ. ಈ ತಂಡ ತನ್ನ ವರದಿ ನೀಡಿದ ನಂತರ, ಪ್ರವಾಹದ ರುದ್ರ ತಾಂಡವಕ್ಕೆ ಗುರಿಯಾಗಿ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಕರ್ನಾಟಕಕ್ಕೆ ದೊಡ್ಡ ಪ್ರಮಾಣದಲ್ಲಿ ಕೇಂದ್ರ ಸರ್ಕಾರದಿಂದ ನೆರವು ದೊರೆಯಲಿದೆ ಎನ್ನುವ ವಿಶ್ವಾಸ ನನಗಿದೆ. ಇದರೊಂದಿಗೆ, ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವವರಿಗೆ ಸಾರ್ವಜನಿಕರಿಂದ ನೆರವಿನ ಮಹಾಪೂರವೇ ಹರಿದುಬಂದಿದೆ. ಇದರಿಂದಾಗಿ ನಮ್ಮ ಎದುರಿಗಿರುವ ತುರ್ತು ಸವಾಲುಗಳನ್ನು ಎದುರಿಸುವ ಭರವಸೆ ನನಗಿದೆ.

ಇವು ಸದ್ಯ ನಮ್ಮ ಮುಂದಿರುವ ದೊಡ್ಡ ಸವಾಲುಗಳು. ಇವುಗಳ ಜೊತೆಗೆ ಮುಂದಿನ ದಿನಗಳಲ್ಲಿ ಮೋದಿಯವರು ಮತ್ತು ಅಮಿತ್‌ ಶಾ  ಅವರ ಮಾರ್ಗದರ್ಶನದಲ್ಲಿ ಸಬ್ ಕಾ ಸಾಥ್– ಸಬ್ ಕಾ ವಿಕಾಸ್ ಪರಿಕಲ್ಪನೆಯ ಆಡಳಿತವನ್ನು ಅನುಷ್ಠಾನಕ್ಕೆ ತರಲು ಕಂಕಣಬದ್ಧರಾಗಿದ್ದೇವೆ. ನಮ್ಮ ಸರ್ಕಾರವು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಬಸವತತ್ವದಲ್ಲಿ ಅಪರಿಮಿತ ನಂಬಿಕೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯ ಸಿದ್ಧಾಂತಕ್ಕೆ ಹೆಚ್ಚು ಒತ್ತು ನೀಡುವುದು ನಮ್ಮ ಆದ್ಯತೆ. ಇನ್ನು ಮಹಿಳಾ ಸಬಲೀಕರಣ, ನಮ್ಮ ಇನ್ನೊಂದು ಪ್ರಧಾನ ಆದ್ಯತೆ. ಸ್ತ್ರೀಶಕ್ತಿ ಸಂಘಗಳನ್ನು ಬಲಪಡಿಸಿ, ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಅಗತ್ಯ ಭೂಮಿಕೆ ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ, ಕರ್ನಾಟಕದಲ್ಲಿರುವ ಕೇಂದ್ರ ಸರ್ಕಾರದ ಉದ್ದಿಮೆಗಳು, ಖಾಸಗಿ ಉದ್ದಿಮೆ ಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ದೊರಕಿಸಿಕೊಡಬೇಕು ಎನ್ನುವ ನೀತಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ‘ಮನುಜಮತ ವಿಶ್ವಪಥ’ ಪರಿಕಲ್ಪನೆಯಡಿ ಸಮಗ್ರ ಯೋಜನೆಯನ್ನು ರೂಪಿಸಲು ಸಂಕಲ್ಪ ಮಾಡಿದ್ದೇವೆ.

ಲೇಖಕ: ಕರ್ನಾಟಕದ ಮುಖ್ಯಮಂತ್ರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು