ಭಾನುವಾರ, ಸೆಪ್ಟೆಂಬರ್ 19, 2021
27 °C
‘ನಮ್ಮ ಮನೆಗೆ ಬೆಂಕಿ ಬಿದ್ದಿದೆ’ ಎಂಬ ‘ಭೂಪುತ್ರಿ’ಯ ಎಚ್ಚರಿಕೆ, ನಮ್ಮ ಆತಂಕಕ್ಕೆ ಧ್ವನಿಯಾಗಿದೆ

ಹವಾಗುಣ: ಚರ್ಚೆಯ ಎರಡು ಮುಖ

ಟಿ.ಆರ್. ಅನಂತರಾಮು Updated:

ಅಕ್ಷರ ಗಾತ್ರ : | |

Prajavani

ಸ್ವಿಟ್ಜರ್ಲೆಂಡ್‌ನ ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ 50ನೇ ಅಧಿವೇಶನದಲ್ಲಿ ಎಲ್ಲರ ಕಣ್ಣು ನೆಟ್ಟಿದ್ದು, ಭಾರಿ ಪ್ರಚಾರ ಪಡೆದ ‘ಹವಾಗುಣ ಬದಲಾವಣೆ’ಯ ಚರ್ಚೆಯ ಮೇಲೆ. ಈ ವೇದಿಕೆಗೆ ಜಗತ್ತಿನ ರಾಜಕೀಯ ಲೇಪವಿಲ್ಲ. ಜಾಗತಿಕ ಭವಿಷ್ಯದ ಬಗ್ಗೆ ಮುಖ್ಯ ಚರ್ಚೆಗೆ ಮುಕ್ತ ಅವಕಾಶ. ಹಾಗಾಗಿ ಯಾವ ದೇಶವನ್ನೂ ಓಲೈಸುವ ಅಥವಾ ಅದರ ಪರ ವಹಿಸುವ ಮುಲಾಜು ಇದಕ್ಕಿಲ್ಲ. ಇದು ಜಗತ್ತಿನ ‘ಚಿಂತಕರ ಚಾವಡಿ’.

ನಾಲ್ಕು ದಿನಗಳ ಸಮಾವೇಶದ (ಜ. 21ರಿಂದ 24) ಅಜೆಂಡಾದಲ್ಲೂ ಆದ್ಯತೆ ಗಳಿಸಿದ್ದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಈಗಾಗಲೇ ‘ಭೂಪುತ್ರಿ’ ಎಂದು ಪ್ರಶಂಸೆಗೆ ಪಾತ್ರಳಾಗಿರುವ ಸ್ವೀಡನ್ನಿನ ಗ್ರೇತಾ ಥುನ್‍ಬರ್ಗ್ ಉಪನ್ಯಾಸ. ಇದು ಹೇಗಿತ್ತೆಂದರೆ, ನ್ಯಾಯಾಧೀಶರಿಲ್ಲದೆ ವಾದಿ-ಪ್ರತಿವಾದಿಗಳು ಮೊಕದ್ದಮೆ
ಯೊಂದರ ವಿಚಾರದಲ್ಲಿ ತಮ್ಮ ತಮ್ಮ ವಾದ ಮಂಡಿಸಿದಂತೆ. ಸಭೆಯಲ್ಲಿ ಭಾಗವಹಿಸಿದ 3,000ಕ್ಕೂ ಹೆಚ್ಚು ಮಂದಿ ದೇಶ, ವಿದೇಶಗಳ ಪ್ರತಿನಿಧಿಗಳೇ ಚರ್ಚೆಯ ಮಹತ್ವವನ್ನು ವಿಶ್ಲೇಷಿಸಬಹುದಾಗಿತ್ತು. ಮೊದಲ ದಿನವೇ ಈ ಇಬ್ಬರಿಗೂ ವೇದಿಕೆ ಕಲ್ಪಿಸಿದ್ದರು. ಮಾಧ್ಯಮ ಪ್ರತಿನಿಧಿಗಳೆಲ್ಲರ ದೃಷ್ಟಿ ಅತ್ತ ತಿರುಗಿತ್ತು. ಈ ಪ್ರಭಾವಳಿಯಲ್ಲಿ, ದೀಪಿಕಾ ಪಡುಕೋಣೆ ಅವರ ತಾನು ಹೇಗೆ ಖಿನ್ನತೆಯಿಂದ ಆಚೆ ಬಂದೆ ಎಂಬುದರ ಕುರಿತ ಸಂದರ್ಶನ, ಚಿಂಪಾಂಜಿಪ್ರಿಯೆ ಜೇನ್ ಗುಡಾಲ್ ಅವರ ‘ಮರಕ್ಕೊಂದು ಹೆಸರು ನೀಡಿ, ಅದೇ ಸಂರಕ್ಷಣೆಯ ಮೂಲಮಂತ್ರ’ ಎಂಬ ವಿಶೇಷ ಮನವಿಯೂ ಮಂಕಾಗಿಬಿಟ್ಟಿದ್ದವು.

ಗ್ರೇತಾ ಥುನ್‍ಬರ್ಗ್ ವೇದಿಕೆ ಹತ್ತುವ ಒಂದು ಗಂಟೆಗೆ ಮೊದಲೇ ಬ್ಯಾಟಿಂಗ್‍ಗೆ ಟ್ರಂಪ್ ಸಿದ್ಧರಾಗಿ
ದ್ದರು. ಅವರ ಮುಂದಿನ ಮಾತುಗಳು ಆಕೆಯನ್ನೇ ಗುರಿ ಇಟ್ಟುಕೊಂಡಿದ್ದಂತೆ ಕಂಡುಬಂದವು. ಟ್ರಂಪ್, ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದಿರುವುದು ಜಗತ್ತಿಗೇ ಗೊತ್ತು. ಇದನ್ನು ಅವರೇ ಜಾಹೀರು ಮಾಡಿದ್ದಾರೆ ಕೂಡ. ಭೂಮಿಯ ಪರ ಅವರು ವಕಾಲತ್ತು ವಹಿಸುವವರಲ್ಲ, ಬದಲು, ಹವಾಗುಣ ಬದಲಾವಣೆಯಾಗುತ್ತಿದೆ ಎಂದು ಎಚ್ಚರಿಸುತ್ತಿರುವವರನ್ನೆಲ್ಲ ಇಲ್ಲೂ ಅವರು ಪ್ರಳಯವಾದಿಗಳು ಎಂದೇ ಜರಿದರು. ಟ್ರಂಪ್‍ಗೆ ಅಮೆರಿಕದ ಆರ್ಥಿಕತೆ ಮುಖ್ಯವಾಗಿತ್ತೇ ವಿನಾ ಜಗತ್ತನ್ನು ಸುಡುತ್ತಿರುವ ಭೂತಾಪ ಏರಿಕೆಯಲ್ಲ. ಅದನ್ನು ಅವರು ನಂಬುವವರೂ ಅಲ್ಲ. ಅಂಥವರನ್ನೇ ಅವರು ತಮ್ಮ ಆಡಳಿತಕ್ಕೆ ಚುಕ್ಕಾಣಿ ಹಿಡಿಯುವವರನ್ನಾಗಿ ಆರಿಸಿಕೊಂಡಿದ್ದಾರೆ. ಟ್ರಂಪ್ ಅವರ ಮಾತಿನ ಗುಡುಗು ಜೋರಾಗಿಯೇ ಇತ್ತು: 

‘ಹವಾಮಾನ ಬದಲಾಗಿದೆ ಎಂದು ಪ್ರತಿಪಾದಿಸುವವರೆಲ್ಲ ಬುರುಡೆದಾಸರು. ಅಮೆರಿಕದ ಆರ್ಥಿಕತೆ
ಯನ್ನು ಇವರೇ ಹಾಳುಗೆಡವುತ್ತಿದ್ದಾರೆ. ಜೊತೆಗೆ ನಮ್ಮ ನಿರ್ಣಯ ಸ್ವಾತಂತ್ರ್ಯವನ್ನೂ ಕಸಿಯುತ್ತಿದ್ದಾರೆ. ಇದು, ಪ್ರಳಯವಾದಿಗಳನ್ನು ತಿರಸ್ಕರಿಸುವ ಸಮಯ. 1960ರ ದಶಕದಲ್ಲಿ ಜನಸಂಖ್ಯಾ ಸ್ಫೋಟವಾಗುತ್ತದೆಂದು ಬುರುಡೆಬಿಟ್ಟರು. 70ರ ದಶಕದಲ್ಲಿ ಜಗತ್ತು ಹಸಿವಿನಿಂದ ಸಾಯುತ್ತದೆ ಎಂದು ಭವಿಷ್ಯ ನುಡಿದಿದ್ದರು. 90ರ ದಶಕದ ಹೊತ್ತಿಗೆ ತೈಲದ ಕಥೆ ಮುಗಿಯುತ್ತದೆ ಎಂದು ಬೊಬ್ಬೆ ಹೊಡೆದಿದ್ದರು. ಇವರಿಗೆ ಒಂದು ಖಯಾಲಿ ಇದೆ. ಜಗತ್ತನ್ನೇ ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ದುರಾಸೆ. ಅಮೆರಿಕವು ತೈಲ ಮತ್ತು ಕಲ್ಲಿದ್ದಲನ್ನು ಹೊರ ತೆಗೆಯುವುದನ್ನು ಯಾವ ಕಾರಣಕ್ಕೂ ನಿಲ್ಲಿಸಬಾರದು. ಆ ಸಂಪನ್ಮೂಲಗಳು ಅಮೆರಿಕದ ಆರ್ಥಿಕತೆಯನ್ನು ಹಿಗ್ಗಿಸುತ್ತವೆ. ಇದೇ ವೇಳೆ, ತೆರಿಗೆಯ ಪ್ರಮಾಣವನ್ನು ತಗ್ಗಿಸಬೇಕು. ಖಾಸಗಿ ಕಂಪನಿಗಳನ್ನು ಪ್ರೋತ್ಸಾಹಿಸಬೇಕು. ಇರುವ ಶಕ್ತಿ ಸಂಪನ್ಮೂಲವನ್ನು ಧಾರಾಳವಾಗಿ ಬಳಸಿಕೊಳ್ಳಬೇಕು. ಇಷ್ಟಾದರೆ ಅಮೆರಿಕ ಯಾಕೆ ಅಭಿವೃದ್ಧಿ ಆಗುವುದಿಲ್ಲ? ತಂತ್ರಜ್ಞಾನಕ್ಕೆ ಪ್ರೋತ್ಸಾಹ ಕೊಡಬೇಕು. ಅದು ಹವಾಗುಣ ಬದಲಾವಣೆಗೂ ಉತ್ತರ ಕೊಡಬಲ್ಲದು’- ಈ ಧಾಟಿಯಲ್ಲಿ ಸಾಗಿತ್ತು ಟ್ರಂಪ್ ಅವರ ಭವಿಷ್ಯವಾಣಿ.

ಇದರ ನಂತರ ವೇದಿಕೆ ಹತ್ತಿದವಳು ಗ್ರೇತಾ ಥುನ್‍ಬರ್ಗ್. ಇದೇ ವೇದಿಕೆಯಲ್ಲಿ ಕಳೆದ ವರ್ಷವೂ ಭೂಮಿ ಪರ ವಕಾಲತ್ತು ವಹಿಸಿದ್ದಳು. ಆಕೆಯ ಮಾತು ಈ ಬಾರಿ ತೀಕ್ಷ್ಣವಾಗಿಯೇ ಇತ್ತು:

‘ಒಂದು ವರ್ಷದ ಹಿಂದೆ ಇದೇ ವೇದಿಕೆಯಲ್ಲಿ ಹೇಳಿದ್ದೆ. ನಮ್ಮ ಮನೆಗೆ ಬೆಂಕಿ ಬಿದ್ದಿದೆ. ಇದು  ಭಯಪಡಬೇಕಾದ ಸಂಗತಿ ಎಂದಿದ್ದೆ. ಇಂಥ ಭಾಷೆ ಉಪಯೋಗಿಸಬಾರದು ಎಂಬ ಎಚ್ಚರಿಕೆಯನ್ನೂ ಈ ಬಾರಿ ಕೊಡಲಾಗಿತ್ತು. ಈಗ ಅಸ್ತಿತ್ವದಲ್ಲಿರುವ ತಂತ್ರಜ್ಞಾನವನ್ನು ನೆಚ್ಚಿ ಕುಳಿತುಕೊಳ್ಳಬೇಕೆಂದು ನಾನು ಹೇಳುತ್ತಿಲ್ಲ. ಯಾವ ಯಾವುದೋ ಸಂಖ್ಯೆಯನ್ನು ಒದರಿ ಶೂನ್ಯ ಕಾರ್ಬನ್ ಉತ್ಸರ್ಜನೆ ಕುರಿತು ನೀವು ಮಾತನಾಡಿ ಎಂದು ನಾನು ಹೇಳುತ್ತಿಲ್ಲ. ಅತ್ತ ಅಮೆಜಾನ್ ಕಾಡು ಸುಡುತ್ತಿದ್ದರೆ, ಇತ್ತ ಆಫ್ರಿಕಾದಲ್ಲಿ ಮರ ನೆಟ್ಟು ಆ ನಷ್ಟವನ್ನು ಸರಿದೂಗಿಸಿ ಎಂದು ನಾನು ಹೇಳುತ್ತಿಲ್ಲ. ಎಷ್ಟು ಹೊಸ ಮರ ನೆಟ್ಟರೂ ಈಗ ನಾಶವಾಗಿರುವ ಕಾಡನ್ನು ಮತ್ತೆ ಗಳಿಸಲು ಆಗದಂಥ ಸ್ಥಿತಿಗೆ ತಲುಪಿದ್ದೇವೆ. ಕಾರ್ಬನ್ ಕಡಿತಗೊಳಿಸಲು ನೀವು ಯಾವ ತಂತ್ರ ಅನುಸರಿಸುತ್ತೀರೋ ಅದು ಮುಖ್ಯವಲ್ಲ. ಈಗಿನ ಉಷ್ಣತೆಗಿಂತ ಜಾಗತಿಕ ಉಷ್ಣತೆ 1.5 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಲೇಬೇಕು, ನಾವು ಬದುಕಬೇಕೆಂದಿದ್ದರೆ’.

‘ಪ್ಯಾರಿಸ್ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿರುವುದು ಜಗತ್ತನ್ನೇ ಕಳವಳಕ್ಕೆ ಈಡುಮಾಡಿದೆ. ಅಧಿಕಾರದಲ್ಲಿರುವವರು ಈ ಒಪ್ಪಂದಕ್ಕೆ ಕವಡೆ ಕಿಮ್ಮತ್ತೂ ಕೊಡುವುದಿಲ್ಲ. ಎಡ-ಬಲ-ನಡು ಎಂದು ಬಲವಾಗಿ ಪ್ರತಿಪಾದಿಸುವವರು ಭೂಮಿಗೆ ಒದಗಿರುವ ದುರ್ಗತಿಯನ್ನು ಸರಿಪಡಿಸಲು ಆಗಿಲ್ಲ. ಅವರದು ಬರೀ ಮೌನ ಅಷ್ಟೆ. ಈ ಸಮಸ್ಯೆಯ ಬಗ್ಗೆ ಗಂಭೀರ ಚಿಂತನೆ ನಡೆದಿದೆಯೆಂದು ಹೇಳುತ್ತಿರುವವರು ಹುಸಿಮಾತುಗಳನ್ನೇ ಆಡುತ್ತಿದ್ದಾರೆ. ನಾವು ಅದನ್ನೇ ನಂಬಿ ಕೂರುವ ಯುವಜನಾಂಗವಲ್ಲ. ಪರಿಹಾರ ಎಂಬುದು ಒಂದೇ ದಿನಕ್ಕೆ ಸಿಕ್ಕುವಂಥದ್ದಲ್ಲ. ನಮಗೆ ಅಷ್ಟು ಸಮಯವೂ ಇಲ್ಲ. ನಾವು ಭೂಮಿಯನ್ನು ಉಳಿಸಲು ಹೊರಟಿರುವವರು. ಇಲ್ಲಿ ಭಾಗವಹಿಸಿರುವ ಕಂಪನಿಗಳು, ಬ್ಯಾಂಕುಗಳು, ಸಂಸ್ಥೆಗಳು ಮತ್ತು ಸರ್ಕಾರವನ್ನು ಕೇಳುವುದಿಷ್ಟು- ಜೀವ್ಯವಶೇಷ ಇಂಧನಗಳ ಪರಿಶೋಧನೆಗಳನ್ನು ನಿಲ್ಲಿಸಿ. ಅವಕ್ಕೆ ನೀಡುವ ಸಬ್ಸಿಡಿಯನ್ನು ಕೊನೆಗೊಳಿಸಿ. ಇದನ್ನು 2050ರಲ್ಲಿ ಅಥವಾ 2021ರಲ್ಲಿಯೇ ಜಾರಿ ಮಾಡಿ ಎಂದು ಕೇಳುತ್ತಿಲ್ಲ. ಅದು ಈಗಿನಿಂದಲೇ ಆಗಬೇಕು. ನಮ್ಮನ್ನು ಏನೂ ತಿಳಿಯದ ಅಮಾಯಕರು ಎಂದು ನೀವು ಬಿಂಬಿಸಬೇಕಾಗಿಲ್ಲ. ನೀವು ಕೈಚೆಲ್ಲಿ ಕೂಡಬಹುದು. ಆದರೆ ನಾವು ಹೋರಾಟ ಮಾಡಿಯೇ ತೀರುತ್ತೇವೆ. ಹವಾಗುಣ ಬದಲಾವಣೆ ತಂದಿರುವ ಸಂಕಷ್ಟಗಳನ್ನು ನಿಭಾಯಿಸುವುದರಲ್ಲಿ ನಾವು ವಿಫಲರಾಗಿದ್ದೇವೆ ಎಂದು ಯಾವ ಬಾಯಿಯಲ್ಲಿ ಮಕ್ಕಳಿಗೆ ಹೇಳುತ್ತೀರಿ, ಅದೂ ಒಂದು ಪ್ರಾಮಾಣಿಕ ಪ್ರಯತ್ನವನ್ನೂ ಮಾಡದೆ. ನಮ್ಮ ಮನೆಗೆ ಬಿದ್ದಿರುವ ಬೆಂಕಿ ಇನ್ನೂ ಆರಿಲ್ಲ. ಅದಕ್ಕೆ ನಿಮ್ಮ ನಿಷ್ಕ್ರಿಯತೆಯೇ ತುಪ್ಪ ಸುರಿಯುತ್ತಿದೆ’.

ಜಾಗತಿಕ ಆರ್ಥಿಕ ಸಮಾವೇಶದಲ್ಲಿ ಇಂಥ ಚರ್ಚೆಗಳು ಮುಂಚೂಣಿಯಲ್ಲಿಯೇ ಇರಬೇಕು. ಅಲ್ಲಿ ಚರ್ಚಿಸುವ ಅಂಶಗಳು ಜಗತ್ತಿಗೇ ಅನ್ವಯವಾಗುವಂತೆ ಇರಬೇಕು. ಅಲ್ಲಿ ತಳೆಯುವ ಚಿಂತನೆಗಳು ಅನುಷ್ಠಾನಗೊಳ್ಳಬೇಕು. ಆದರೆ ಇಂಥ ವೇದಿಕೆಗಳು ಮೂದಲಿಕೆಯ ಮಾತುಗಳಿಗೂ ವೇದಿಕೆಯಾಗಿಬಿಡುತ್ತವೆ. ಗ್ರೇತಾಳ ಧ್ವನಿಯನ್ನು ಅಡಗಿಸಲೆಂದೇ ವಿರೋಧಿಗಳು ಬಗೆಬಗೆಯ ಅಸ್ತ್ರ ಬಿಟ್ಟದ್ದೂ ಉಂಟು. ‘ಗ್ರೇತಾ, ನೀನು ಅರ್ಥಶಾಸ್ತ್ರದಲ್ಲಿ ಡಿಗ್ರಿ ಪಡೆದು ಆನಂತರ ನಮ್ಮನ್ನುದ್ದೇಶಿಸಿ ಮಾತನಾಡು’ ಎಂದು ಟ್ರಂಪ್ ಆಡಳಿತದಲ್ಲಿನ ತಿಜೋರಿ ಕಾರ್ಯದರ್ಶಿ ಸ್ಟೀವನ್ ಮುಂಚಿನ್ ಹೇಳಿದ್ದನ್ನು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪಾಲ್ ಕ್ರುಗ್‍ಮನ್ ಖಂಡಿಸಿದ್ದೂ ಉಂಟು. ಇದರಿಂದ, ಟ್ವಿಟರ್‌ನಲ್ಲಿ ಸಮರವಾಗಿ ಪರ- ವಿರೋಧದ ಮಾತುಗಳು ಹರಿದಾಡಿದ್ದೂ ಉಂಟು. ಸದ್ಯದ ಪರಿಸ್ಥಿತಿ ಹೇಗಿದೆ ಎಂದರೆ, ತಮ್ಮ ಮಾತುಗಳನ್ನು ಜಗತ್ತೇ ಬೆಂಬಲಿಸುತ್ತದೆ ಎಂಬ ಭ್ರಮೆ ಟ್ರಂಪ್‍ಗೆ ಇದೆ. ಇಂಥ ಭ್ರಮೆಗಳನ್ನು ಉತ್ಪಾಟನೆ ಮಾಡಲು ಗ್ರೇತಾ ಥುನ್‍ಬರ್ಗ್ ನಮ್ಮ ಮಾತುಗಳಿಗೆ ಧ್ವನಿ ನೀಡಿದ್ದಾಳೆ. ಇದು ಪರ- ವಿರೋಧದ ಮಾತಲ್ಲ, ಜಗತ್ತಿಗೆ ಯಾವುದು ವಾಸ್ತವ ಎಂಬುದರ ಅರಿವು ಅದಕ್ಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು