ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಮತಾಧಿಕಾರವು ಸರ್ವಾಧಿಕಾರವಲ್ಲ

ಪ್ರಜಾಪ್ರಭುತ್ವದಲ್ಲಿ ಬರೀ ಬಾಯಿ ಮುಖ್ಯವಲ್ಲ, ಕಿವಿ ಮತ್ತು ಕಣ್ಣು ಮುಖ್ಯ
Last Updated 13 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಫೆಬ್ರುವರಿ 27ರಂದು ನಡೆದ ಮುಖ್ಯಮಂತ್ರಿ ಯಡಿಯೂರಪ್ಪನವರ 78ನೇ ಜನ್ಮದಿನದ ಅಭಿನಂದನಾ ಸಮಾರಂಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು ಒಂದು ಪ್ರಸಂಗವನ್ನು ಹೇಳಿದರು:

‘ಯಡಿಯೂರಪ್ಪನವರು ಬಿಜೆಪಿಯನ್ನು ಪ್ರತಿನಿಧಿಸುವ ಶಾಸಕರಾಗಿದ್ದಾಗ ಆಗಿನ ಅರಣ್ಯ ಸಚಿವ ಬಿ.ರಾಚಯ್ಯನವರು ಒಂದು ಮಸೂದೆಯನ್ನು ಮಂಡಿಸಿದರು. ಅರಣ್ಯದ ಅಂಚಿನಲ್ಲಿ ಅಥವಾ ಒಳಗೆ ಇರುವವರನ್ನು ಒಕ್ಕಲೆಬ್ಬಿಸುವ ಅಧಿಕಾರವನ್ನು ಕೊಡುವ ಆ ಮಸೂದೆಯನ್ನು ಯಡಿಯೂರಪ್ಪನವರು ಬಲವಾಗಿ ವಿರೋಧಿಸಿದರು. ಸರ್ಕಾರಕ್ಕೆ ಬಹುಮತ ಇದ್ದದ್ದರಿಂದ ಮಸೂದೆಗೆ ಅಂಗೀಕಾರದ ಮುದ್ರೆ ಬೀಳುವುದು ಸ್ಪಷ್ಟವಾಗಿತ್ತು. ಆದರೆ ಯಡಿಯೂರಪ್ಪನವರು ಪಟ್ಟು ಬಿಡಲಿಲ್ಲ, ತಮ್ಮ ಕುರ್ಚಿ ಬಿಟ್ಟು ಕೆಳಗೆ ಕುಳಿತುಬಿಟ್ಟರು. ‘ರಾಚಯ್ಯನವರೆ, ನೀವು ನಿಮ್ಮದೇ ದಲಿತರಿಗೆ, ಬುಡಕಟ್ಟಿನವರಿಗೆ ಅನ್ಯಾಯ ಮಾಡ್ತಿದ್ದೀರಿ. ಇದನ್ನು ನಾನು ಕಡೆವರೆಗೂ ವಿರೋಧಿಸುತ್ತೇನೆ’ ಎಂದು ಒಬ್ಬರೇ ಪ್ರತಿಭಟಿಸಿದರು. ಆನಂತರ ರಾಚಯ್ಯನವರು ಯಡಿಯೂರಪ್ಪನವರ ಮಾತಿಗೆ ಬೆಲೆ ಕೊಟ್ಟು, ಮಸೂದೆಯನ್ನು ವೋಟಿಗೆ ಹಾಕಲು ಒತ್ತಾಯಿಸದೆ ವಾಪಸ್‌ ಪಡೆದರು’.

ಅಲ್ಲದೆ, ಒಬ್ಬರೇ ಹೋರಾಟ ಮಾಡಿ ಜಯಶೀಲರಾದ ಧೀಮಂತರೆಂದು ಯಡಿಯೂರಪ್ಪ ನವರನ್ನು ಇದೇ ವೇಳೆ ಪ್ರಶಂಸಿಸಿದರು. ಯಡಿಯೂರಪ್ಪನವರ ಪಟ್ಟು ಬಿಡದ ಪ್ರತಿಭಟನೆಯನ್ನು ಮೆಚ್ಚಬೇಕು. ಅದರಲ್ಲೂ ಅಭಿನಂದನಾ ಸಮಾ ರಂಭದಲ್ಲಿ ಇಂತಹ ಪ್ರಶಂಸೆಗೂ ಒಂದು ಅರ್ಥವಿರುತ್ತದೆ. ಆದರೆ ಇದೇ ಸಂದರ್ಭದಲ್ಲಿ ಅಂದಿನ ಸರ್ಕಾರ ಮತ್ತು ರಾಚಯ್ಯನವರು ಏಕವ್ಯಕ್ತಿಯ ಪ್ರತಿಭಟನೆ
ಯನ್ನು ಮನವರಿಕೆ ಮಾಡಿಕೊಂಡು ಮನ್ನಣೆ ನೀಡಿದ್ದನ್ನು ಬಹುಮುಖ್ಯವಾಗಿ ಮೆಚ್ಚದಿದ್ದರೆ, ಅರ್ಧಸತ್ಯವನ್ನು ಮಾತ್ರ ಹೇಳಿದಂತಾಗುತ್ತದೆ. ಆದ್ದರಿಂದ ಬಹುಮತವುಳ್ಳ ಸರ್ಕಾರವು ತಾನು ಮಾಡಿದ್ದೇ ಸರಿಯೆಂಬ ಅಂಧ ಹಟಕ್ಕೆ ಕಟ್ಟುಬೀಳದೆ ಪ್ರತಿಪಕ್ಷದ ಶಾಸಕರ ಪ್ರತಿರೋಧಕ್ಕೆ ಬೆಲೆ ಕೊಟ್ಟು ಮಸೂದೆ ವಾಪಸ್‌ ಪಡೆದದ್ದು, ಸಂಸದೀಯ ಪ್ರಜಾಪ್ರಭುತ್ವದ ಒಂದು ಆದರ್ಶ ಮಾದರಿ ಎಂದು ಹೇಳಲೇಬೇಕು.

ಇನ್ನೊಂದು ಪ್ರಸಂಗ: ನಮ್ಮ ರಾಜ್ಯಕ್ಕೆ ‘ಕರ್ನಾಟಕ’ ಎಂದು ಹೆಸರಿಡುವ ಬದಲು ‘ಮೈಸೂರು ರಾಜ್ಯ’ ಎಂದೇ ಇರಬೇಕು ಎಂದು ದೇವರಾಜ ಅರಸು ಅವರು ತಾವು ಅಧಿಕಾರಕ್ಕೆ ಬರುವ ಮೊದಲಿನಿಂದಲೂ ಪ್ರತಿಪಾದಿಸುತ್ತಿದ್ದರು. ಆದರೆ ಮುಖ್ಯಮಂತ್ರಿಯಾದ ಮೇಲೆ ಜನರ ಒತ್ತಾಯ ಮತ್ತು ಸಾಂಸ್ಕೃತಿಕ ವಲಯದ ಆಶಯಗಳಿಗೆ ಮನ್ನಣೆ ನೀಡಿ ತಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಂಡರು. ತಾವೇ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಿದರು.

ವಿಶ್ವದಲ್ಲೇ ಮೊತ್ತಮೊದಲ ‘ವೃಕ್ಷ ಸಂರಕ್ಷಣಾ ಕಾಯ್ದೆ’ಯನ್ನು ಅರಸು ರೂಪಿಸಿ ಅನುಷ್ಠಾನಕ್ಕೆ ತಂದಾಗ, ಅವರ ಪಕ್ಷದವರಲ್ಲೇ ಕೆಲವು ಪಟ್ಟಭದ್ರರು ವಿರೋಧಿಸಿದರು. ಆದರೆ, ತಮ್ಮ ನಿಲುವಿನಿಂದ ಹಿಂದೆ ಸರಿಯದ ಅರಸು, ಅವರನ್ನೆಲ್ಲ ಆಹ್ವಾನಿಸುತ್ತಾರೆ. ಅಂದು ಅರಣ್ಯಾಧಿಕಾರಿಯಾಗಿದ್ದ ಯಲ್ಲಪ್ಪ ರೆಡ್ಡಿಯವರನ್ನು ಕರೆದು ‘ಇವರಿಗೆ ಕಾಯ್ದೆಯನ್ನು ಮನವರಿಕೆ ಮಾಡಿಕೊಡಿ’ ಎಂದು ಹೇಳುತ್ತಾರೆ. ವಿವರ ಗಳನ್ನು ಕೇಳಿದ ವಿರೋಧಿಗಳು ಆನಂತರ ಸುಮ್ಮನಾಗು ತ್ತಾರೆ. ಅರಸು ಅವರ ಈ ಎರಡು ಮಾದರಿಗಳು ಸಂಸದೀಯ ಪ್ರಜಾಪ್ರಭುತ್ವದ ಆದರ್ಶಗಳಾಗಿವೆ.

ಜವಾಹರಲಾಲ್‌ ನೆಹರೂ ಅವರಿಗೆ ಸಂಬಂಧಿಸಿದ ಎರಡು ಪ್ರಸಂಗಗಳು ಹೀಗಿವೆ: ಹಿಂದಿಯನ್ನು ದೇಶದಾ ದ್ಯಂತ ‘ಹೇರುವ’ ಪ್ರಯತ್ನ ನೆಹರೂ ಕಾಲದಲ್ಲೂ ಆಗಿತ್ತು. ಆಗ, ದಕ್ಷಿಣ ಭಾರತದಲ್ಲಿ– ವಿಶೇಷವಾಗಿ ಇಂದಿನ ತಮಿಳುನಾಡಿನಲ್ಲಿ– ಪ್ರಖರ ಪ್ರತಿರೋಧ ವ್ಯಕ್ತವಾಗಿತ್ತು. ನೆಹರೂ ತಮ್ಮ ಹಿಂದಿ ನಿಲುವಿನಿಂದ ಹಿಂದೆ ಸರಿದರು. ‘ಹಿಂದಿ ಈಸ್‌ ಇಂಪಾರ್ಟೆಂಟ್‌; ಬಟ್‌ ಇಂಡಿಯಾ ಈಸ್‌ ಮೋರ್‌ ಇಂಪಾರ್ಟೆಂಟ್‌’ ಎಂದು ಹೇಳಿದರು. ನೆಹರೂ ಮತ್ತು ಲೋಹಿಯಾ ಅವರಿಗೆ ಸಂಬಂಧಿಸಿದ ಇನ್ನೊಂದು ಪ್ರಸಂಗವು ಉಲ್ಲೇಖಿಸಲೇಬೇಕಾದ ಪ್ರಜಾಪ್ರಭುತ್ವದ ಮಾದರಿ.

ಲೋಹಿಯಾ ಅವರು ನೆಹರೂ ಅವರ ಕಟು ಟೀಕಾಕಾರರು. ಅವರು ನೆಹರೂ ಅವರನ್ನು ಮೆಚ್ಚಿದ ಮಾತೇ ಇಲ್ಲ ಎನ್ನಬಹುದು. ಇಂತಹ ಲೋಹಿಯಾ ಒಂದು ಚುನಾವಣೆಯಲ್ಲಿ ಸೋಲುತ್ತಾರೆ. ಆಗ ಲೋಕಸಭೆಯಲ್ಲಿ ನೆಹರೂ ‘ಲೋಹಿಯಾ ಅವರಿಲ್ಲದ ಲೋಕಸಭೆ ಇಂದು ಅಪೂರ್ಣವಾಗಿದೆ’ ಎಂದು ಹೇಳುತ್ತಾರೆ. ಮುಂದೆ ಉಪಚುನಾವಣೆಯಲ್ಲಿ ಲೋಹಿಯಾ ಗೆದ್ದು ಬರುತ್ತಾರೆ. ಅಂದು ನೆಹರೂ ‘ಇಂದು ಲೋಕಸಭೆ ಪೂರ್ಣವಾಗಿದೆ’ ಎನ್ನುತ್ತಾರೆ. ತಮ್ಮ ಕಟು ಟೀಕಾಕಾರರ ಬಗ್ಗೆ ನೆಹರೂ ಅವರು ತೋರಿದ ಗೌರವವು ಸಂಸದೀಯ ನಡವಳಿಕೆಯ ಅಮರ ಮಾದರಿಯಾಗಿದೆ. ಪ್ರತಿಪಕ್ಷಗಳನ್ನು ಆಡಳಿತ ಪಕ್ಷ ಹೇಗೆ ನಡೆಸಿಕೊಳ್ಳಬೇಕು ಎನ್ನುವುದಕ್ಕೆ ನೆಹರೂ ಅಪೂರ್ವ ನಿದರ್ಶನವಾಗಿದ್ದಾರೆ.

ಗಾಂಧೀಜಿಯವರಿಗೂ ಈ ಕುರಿತು ಸ್ಪಷ್ಟತೆಯಿತ್ತು. ಆದ್ದರಿಂದಲೇ ಅವರು ‘ಪ್ರಜಾಪ್ರಭುತ್ವವು ಬಹುಪಾಲು ಸಂಖ್ಯಾಬಲವನ್ನೇ ಅವಲಂಬಿಸಿಬಿಡುತ್ತದೆ’ ಎಂದು ಒಂದು ‘ಕೊರತೆ’ಯನ್ನು ವ್ಯಕ್ತಪಡಿಸಿದ್ದರು. ಗಾಂಧೀಜಿ ಮುಂದುವರಿದು ಹೇಳಿದ್ದರು: ‘ನಮ್ಮ ವಿಶಾಲವಾದ ಈ ರಾಷ್ಟ್ರದಲ್ಲಿ ಎಲ್ಲ ಬಗೆಯ ಪ್ರಾಮಾಣಿಕ ಅಭಿಪ್ರಾಯಗಳಿಗೂ ಅವಕಾಶವಿರಬೇಕು. ಪ್ರತಿಪಕ್ಷಗಳ ಭಿನ್ನಾಭಿಪ್ರಾಯವನ್ನು ಸರಿಯಾಗಿ ಗ್ರಹಿಸಬೇಕು. ಒಂದು ವೇಳೆ ಅವರ ಅಭಿಪ್ರಾಯ ಒಪ್ಪಿತವಾಗದಿದ್ದರೂ ನಮ್ಮ ಅಭಿಪ್ರಾಯಗಳಿಗೆ ಅಪೇಕ್ಷಿಸುವ ಮನ್ನಣೆಯನ್ನೇ ಅವರ ಅಭಿಪ್ರಾಯಗಳಿಗೂ ಕೊಡಬೇಕು’.

ಅಂತೆಯೇ ಡಾ. ಅಂಬೇಡ್ಕರ್‌ ಅವರು 1949ರ ನವೆಂಬರ್‌ 25ರಂದು ಸಂವಿಧಾನದ ಅಂತಿಮ ಕರಡು ಮಂಡಿಸಿ ಮಾಡಿದ ಭಾಷಣದ ಕೆಲವು ಮಾತುಗಳನ್ನು ಗಮನಿಸಬೇಕು. ‘ಕೇಂದ್ರ ಸರ್ಕಾರಕ್ಕೆ ನೀಡಿರುವ ಹೆಚ್ಚಿನ ಅಧಿಕಾರವು ಎಲ್ಲ ಕಾಲ ಮತ್ತು ಎಲ್ಲ ಸಂದರ್ಭ
ಗಳಲ್ಲೂ ಚಲಾಯಿಸುವಂಥದ್ದಲ್ಲ. ಅದನ್ನು ಕೇವಲ ತುರ್ತು ಸಂದರ್ಭಗಳಲ್ಲಿ ಬಳಸತಕ್ಕದ್ದು’ ಎಂದ ಅಂಬೇಡ್ಕರ್‌, ವ್ಯಕ್ತಿಪೂಜೆಯ ವೈಪರೀತ್ಯವು ಅಪಾಯದ ಅಂಚಿಗೆ ಹೋಗಬಾರದೆಂದು ಎಚ್ಚರಿಸುತ್ತಾರೆ. ದೇಶಕ್ಕಾಗಿ ದುಡಿದವರಿಗೆ, ದೊಡ್ಡವರಿಗೆ, ಸಮರ್ಥರಿಗೆ
ಕೃತಜ್ಞರಾಗಿರುವುದು ಸರಿ ಎಂದು ಹೇಳುತ್ತಲೇ, ಅದು ಭಟ್ಟಂಗಿತನ, ಗುಲಾಮಗಿರಿ ಆಗಬಾರದು ಎನ್ನುತ್ತಾರೆ. ಮುಂದುವರಿದು ‘ರಾಜಕಾರಣದಲ್ಲಿ ವ್ಯಕ್ತಿಭಕ್ತಿ ಅಥವಾ ವ್ಯಕ್ತಿಪೂಜೆಯು ಸಮಾಜದ ಸರ್ವಾಂಗೀಣ ಅಧಃಪತನಕ್ಕೆ ಕಾರಣವಾಗುತ್ತ, ದೇಶವನ್ನು ಕ್ರಮೇಣ ಸರ್ವಾಧಿಕಾರಕ್ಕೆ ತಳ್ಳುತ್ತದೆ’ ಎಂದು ಸ್ಪಷ್ಟವಾಗಿ ನುಡಿಯುತ್ತಾರೆ.

ಇಲ್ಲಿ ಪ್ರಸ್ತಾಪಿಸಲಾದ ಪ್ರಸಂಗಗಳು ಮತ್ತು ಗಾಂಧಿ– ಅಂಬೇಡ್ಕರ್‌ ಅವರ ಅಭಿಪ್ರಾಯಗಳು, ಸಂಸದೀಯ ಪದ್ಧತಿಯಲ್ಲಿ ಬಹುಮತದ ತಾಂತ್ರಿಕತೆಯಷ್ಟೇ ತಾತ್ವಿಕ ತೆಯೂ ಮುಖ್ಯ ಎಂದು ಸ್ಪಷ್ಟಪಡಿಸುತ್ತವೆ. ಹಾಗೆಂದು ಜನರು ನಿರ್ದಿಷ್ಟ ಪಕ್ಷಕ್ಕೆ ಕೊಟ್ಟ ಬಹುಮತಕ್ಕೆ ಬೆಲೆ ಇಲ್ಲ ಎಂದಲ್ಲ. ಬಹುಮತ ಇದೆಯೆಂದು ಅನ್ಯರ ಅಭಿಪ್ರಾಯ ಗಳನ್ನು ಹತ್ತಿಕ್ಕಬಾರದು ಎಂದರ್ಥ. ಪ್ರಜಾಪ್ರಭುತ್ವದಲ್ಲಿ ಬರೀ ಬಾಯಿ ಮುಖ್ಯವಲ್ಲ, ಕಿವಿ ಮತ್ತು ಕಣ್ಣು ಮುಖ್ಯ. ಬಹುಮತವಿದೆಯೆಂದು ಬಾಯಿಯೊಂದನ್ನೇ ಬಳಸಿ ಕಿವಿ ಮತ್ತು ಕಣ್ಣು ಮುಚ್ಚಿ ಆಡಳಿತ ನಡೆಸಿದರೆ, ಏಕವ್ಯಕ್ತಿಯ ಹುಸಿ ವೈಭವೀಕರಣದಲ್ಲೇ ಮೋಕ್ಷ ಕಂಡರೆ, ಅಂಬೇಡ್ಕರ್‌ ಅವರು ಅಂದಂತೆ, ದೇಶವು ಸರ್ವಾಧಿಕಾರದತ್ತ ಸಾಗುವುದು ಸತ್ಯ.

ಪೌರತ್ವದ ವಿಷಯಕ್ಕೆ ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಪ್ರತಿಭಟನೆಗಳನ್ನು ಸರ್ಕಾರವು ಗ್ರಹಿಸುತ್ತಿರುವ ರೀತಿಯು ಸಂಸದೀಯ ಪ್ರಜಾಸತ್ತೆಗೆ ಅನುಗುಣವಾಗಿಲ್ಲ. ಸರ್ಕಾರದ ನೀತಿ– ನಿಲುವುಗಳ ವಿರೋಧವು ದೇಶದ ವಿರೋಧ ಅಲ್ಲ. ಆದ್ದರಿಂದ ಅದು ದೇಶದ್ರೋಹ ಅಲ್ಲ. ಇದನ್ನು ಅರ್ಥ ಮಾಡಿಕೊಂಡು, ತಾನು ಒಪ್ಪದ ವಿಚಾರಗಳ ಬಗ್ಗೆಯೂ ಸಂವಾದ ನಡೆಸುವುದು ಸರ್ಕಾರದ ಸಂಸದೀಯ ನಡವಳಿಕೆಯಾಗಬೇಕು. ಈ ನಿಟ್ಟಿನಲ್ಲಿ ಗಾಂಧಿ– ಅಂಬೇಡ್ಕರ್‌ ಅಭಿಪ್ರಾಯಗಳ ಜೊತೆಗೆ ರಾಚಯ್ಯ, ಅರಸು, ನೆಹರೂ ನಡವಳಿಕೆಗಳು ಆದರ್ಶ ಮಾದರಿಗಳಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT