ಸುದೀರ್ಘ ಬರಹ: ಮಾಧವ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಗಳಲ್ಲಿ ಏನಿದೆ?

7
ಕೊಡಗು-ಕೇರಳ ಪ್ರವಾಹ, ಪೆಟ್ಟು ತಿಂದೇ ಬುದ್ಧಿ ಕಲಿಯಬೇಕೆ?

ಸುದೀರ್ಘ ಬರಹ: ಮಾಧವ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಗಳಲ್ಲಿ ಏನಿದೆ?

Published:
Updated:

ಬೆಂಗಳೂರು: ಕೊಡಗಿನಲ್ಲಿ ಸಂಭವಿಸಿದ ನೆರೆ, ಭೂಕುಸಿತಕ್ಕೆ ಕಾರಣವೇನಿರಬಹುದು ಎಂಬ ಚರ್ಚೆ ಸಾರ್ವಜನಿಕರಲ್ಲಿ ಕಾವು ಪಡೆದುಕೊಂಡಿದೆ. ಪಶ್ಚಿಮಘಟ್ಟಗಳ ಕುರಿತು ಪ್ರಸ್ತಾಪವಾಗುವ ಎಲ್ಲ ಚರ್ಚೆಗಳಲ್ಲಿ ಪ್ರೊ.ಮಾಧವ್‌ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ವರದಿಯ ಶಿಫಾರಸುಗಳು ಪ್ರಸ್ತಾಪವಾಗುತ್ತವೆ. ಈ ಶಿಫಾರಸುಗಳನ್ನು ಸರ್ಕಾರ ಅನುಷ್ಠಾನ ಮಾಡಬೇಕಿತ್ತು ಎಂದು ಹಲವರು, ಅವು ಸರಿಯಿಲ್ಲ ಎಂದು ಕೆಲವರು ವಾದ ಮಂಡಿಸುತ್ತಿದ್ದಾರೆ. ಆ ವರದಿಗಳಲ್ಲಿ ನಿಜಕ್ಕೂ ಏನಿದೆ ಎಂಬುದನ್ನು ಅರಿತವರ ಸಂಖ್ಯೆ ಕಡಿಮೆ.

ಇಂಗ್ಲಿಷ್‌ನಲ್ಲಿರುವ ಆ ವರದಿಗಳನ್ನು ಓದಿರುವ ಕೆಲವರು ಹೇಳುವ ಒಂದೆರಡು ಅಂಶಗಳ ಮೇಲೆ ಚರ್ಚೆ ಸಾಗುತ್ತಿದೆ. ಆ ವರದಿಯ ಪ್ರಮುಖಾಂಶಗಳನ್ನು ಎಲ್ಲರಿಗೂ ತಿಳಿಸುವ ಪ್ರಯತ್ನವನ್ನು ಗೇರು ಸಂಶೋಧನಾ ನಿರ್ದೇಶನಾಲಯದ ಹಿರಿಯ ಸಂಶೋಧಕ ಮೋಹನ್‌ ತಲಕಾಲುಕೊಪ್ಪ ಮಾಡಿದ್ದಾರೆ. ವರದಿಗಳ ಶಿಫಾರಸುಗಳನ್ನು ಕನ್ನಡಕ್ಕೆ ಅನುವಾದಿಸಿ, ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ರಾಜ್ಯ ಸರ್ಕಾರ 2013ರಲ್ಲಿ ರಚಿಸಿದ್ದ ಪಶ್ಚಿಮ ಘಟ್ಟ ಕಾರ್ಯಪಡೆಯ ಪ್ರಾಯೋಗಿಕ ವರದಿಯ ಅಂಶಗಳನ್ನು ವಿವರಿಸಿದ್ದಾರೆ. 

ಪ್ರೊ.ಮಾಧವ್ ಗಾಡ್ಗೀಳ್ ಸಮಿತಿಯ ಸದಸ್ಯರಾದ ಪ್ರೊ. ಕೆ.ಎನ್. ಗಣೇಶಯ್ಯ, ಪಶ್ಚಿಮಘಟ್ಟ ಕಾರ್ಯಪಡೆಯ ಸದಸ್ಯ ಡಾ. ವಾಸುದೇವ್, ವಿಜ್ಞಾನ ಮತ್ತು ಪರಿಸರ ಬರಹಗಾರರಾದ ನಾಗೇಶ್ ಹೆಗಡೆ ಮತ್ತು ರೋಹಿತ್ ಚಕ್ರತೀರ್ಥ, ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಶ್ರೀಪಡ್ರೆ, ಗೇರು ಸಂಶೋಧಕರಾದ ಡಾ.ದಿನಕರ ಅಡಿಗ ಈ ಕಾರ್ಯದಲ್ಲಿ ಮೋಹನ್ ಅವರಿಗೆ ನೆರವಾಗಿದ್ದಾರೆ.

ಮೋಹನ್ ತಲಕಾಲುಕೊಪ್ಪ ಅವರ ಸುದೀರ್ಘ ಬರಹದ ಪೂರ್ಣಪಾಠ ರೂಪ ಇಲ್ಲಿದೆ...


ಮಡಿಕೇರಿಯಲ್ಲಿ ಶಾಲೆಗೆ ಹೊರಟಿರುವ ಮಕ್ಕಳು (ಪ್ರಜಾವಾಣಿ ಚಿತ್ರ: ಬಿ.ಎಚ್.ಶಿವಕುಮಾರ್)

ಮಲೆನಾಡಿಗೆ ಮಳೆ ಹೊಸದೇ?

ಜನರು ನಿಧಾನವಾಗಿ ಮಹಾಮಳೆ ತಂದಿಟ್ಟ ದುರಂತವನ್ನು ಮರೆಯುತ್ತಿದ್ದಾರೆ. ಆದರೂ ಈಗ ಇದನ್ನು ಬರೆಯಲು ಕಾರಣವಿದೆ. ಈ ಬರಹದಲ್ಲಿ ಪ್ರೊ.ಗಾಡ್ಗೀಳ್ ವರದಿ, ಪ್ರೊ.ಕಸ್ತೂರಿ ರಂಗನ್ ವರದಿಗಳ ಮುಖ್ಯ ಶಿಫಾರಸ್ಸುಗಳ ಯಥಾವತ್ ಕನ್ನಡದ ಅನುವಾದವಿದೆ (ಹಲವು ಲೇಖಕರು ಸಾರಾಂಶಗಳನ್ನು ಬರೆದಿದ್ದಾರೆ). ಜೊತೆಗೆ, ಕರ್ನಾಟಕ ಸರ್ಕಾರವೇ 2013ರಲ್ಲಿ ರಚಿಸಿದ ಪಶ್ಚಿಮಘಟ್ಟ ಕಾರ್ಯಪಡೆಯ, ನಿಜಕ್ಕೂ ಪ್ರಾಯೋಗಿಕವಾದ ಶಿಫಾರಸುಗಳ ವರದಿಯ ಕಡತ ಇಲ್ಲಿದೆ. ಇವೆಲ್ಲ ವರದಿಗಳ ಹೋಲಿಕೆಯ ಜೊತೆಗೆ ನನ್ನ ಅನಿಸಿಕೆಯೂ ಇದೆ. ನಿಮಗೆ ಈ ಕೆಲಸ ಮೆಚ್ಚುಗೆಯಾದರೆ ನನ್ನ ಶ್ರಮ ಸಾರ್ಥಕ.

ಮಲೆನಾಡಿನ ಮೂಲದ ನನಗೆ ಪಶ್ಚಿಮಘಟ್ಟಗಳ ಮೇಲೆ ಅವ್ಯಕ್ತ ಪ್ರೀತಿ, ಹೆಮ್ಮೆ. ಈಗ ನಾನು ಇರುವುದೂ ಮಲೆನಾಡಿನಲ್ಲೇ. ಕೊಡಗು-ಕೇರಳಗಳ ದುರಂತ ಸಂಭವಿಸಿದಾಗ ಸಂಕಟಪಟ್ಟಿದ್ದೆ. ನಾನು ಆರು ವರ್ಷ ಕೆಲಸ ನಿರ್ವಹಿಸಿದ್ದ ಕೊಡಗಿನ ಸ್ಥಿತಿ ನೋಡಿ ಮನಸ್ಸು ಕಲಕಿಹೋಗಿತ್ತು. ಅಲ್ಲಿರುವಾಗ ಕೊಡಗಿನ ಮೂಲೆ-ಮೂಲೆಯನ್ನು ಸುತ್ತಾಡಿದ್ದ ನನಗೆ ಜಲಪ್ರಳಯದ ಸುದ್ದಿ ಬರಲಾರಂಭಿಸಿದಾಗ ಪೊನ್ನಂಪೇಟೆಯ ಅರಣ್ಯ ಕಾಲೇಜಿನ ನನ್ನ ಸಹೋದ್ಯೋಗಿಗಳಾಗಿದ್ದವರಿಗೆ ಫೋನ್ ಮಾಡಿದೆ. ಸ್ಥಿತಿ ಗಂಭೀರವಾಗಿದೆ ಅಂತ ಗೊತ್ತಾಯಿತು. ಆದರೆ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮಕ್ಕೆ ಒಂದಿಷ್ಟು ಧನಸಹಾಯವಷ್ಟೇ ನನ್ನಿಂದ ಮಾಡಲು ಸಾಧ್ಯವಾಗಿದ್ದು. ಈ ಮಹಾ ದುರಂತಕ್ಕೆ ದೇಶದ ಮೂಲೆ-ಮೂಲೆಗಳಿಂದ ಸಹಾಯ ಹರಿದು ಬಂತು/ಬರುತ್ತಿದೆ. ನಿಧಾನಕ್ಕೆ ಕಟ್ಟುವ ಕಾರ್ಯ ಶುರುವಾಗಿದೆ. ಈ ಸ್ಪಂದನೆ ಶ್ಲಾಘನೀಯ.

ಆದರೆ ಮಳೆಯೇನು ಈ ಪ್ರದೇಶಗಳಿಗೆ ಹೊಸತಲ್ಲ. ಈ ಹಿಂದೆಯೂ ಮಳೆ ಈಗ ಸುರಿದಿರುವುದಕ್ಕಿಂತ ಜಾಸ್ತಿ ಸುರಿದಿದೆ. ಆಗೆಲ್ಲಾ ಆಗದ ಈ ದುರಂತ, ಈಗ ಸಂಭವಿಸಲು ಅವ್ಯಾಹತವಾಗಿ ಮರಗಳನ್ನು ಕಡಿದಿದ್ದೇ ಕಾರಣ, ಕಾಡಿನ ಒತ್ತುವರಿ, ಗಣಿಗಾರಿಕೆ, ಗುಡ್ಡ ಕತ್ತರಿಸಿ ರಿಸಾರ್ಟ್ ನಿರ್ಮಾಣ, ಚರಂಡಿ ವ್ಯವಸ್ಥೆ ಸಮರ್ಪಕವಾಗಿರದ ಹೆದ್ದಾರಿ ಮತ್ತು ಇನ್ನಿತರ ರಸ್ತೆಗಳ ನಿರ್ಮಾಣ, ಭತ್ತದ ಗದ್ದೆಗಳು ಕಾಂಕ್ರೀಟ್ ಕಾಡಾಗುತ್ತಿರುವುದು, ನೀರಿನ ಸಹಜ ಹರಿವಿಗೆ ತಡೆ, ನದಿತೀರದ ಒತ್ತುವರಿ, ಮರಳು ತೆಗೆಯುವಿಕೆ, ಹುಲ್ಲುಗಾವಲು ಹಾಗೂ ಶೋಲಾ ಅರಣ್ಯಗಳ ನಾಶ ಇವೆಲ್ಲವೂ ಮಳೆಯ ಪರಿಣಾಮವನ್ನು ದ್ವಿಗುಣಗೊಳಿಸಿವೆ. ಕೊಡಗಿನ ಸಾಂಪ್ರದಾಯಿಕ ಕೃಷಿ- ಕಾಡನ್ನು ಕಡಿದು ಕಾಫಿತೋಟದ ವಿಸ್ತರಣೆ ಈ ದುರಂತಕ್ಕೆ ಅಷ್ಟು ಕಾರಣವಲ್ಲ ಅಂತ ನನ್ನನಿಸಿಕೆ. ಏಕೆಂದರೆ ಕಾಫಿತೋಟದಲ್ಲಿ ಮರಗಳ ಸಂಖ್ಯೆ ಹಾಗೂ ವೈವಿಧ್ಯ ಸಾಕಷ್ಟಿರುತ್ತದೆ. ನಾವದನ್ನು ಅಧ್ಯಯನ ಮಾಡಿ ದಾಖಲಾತಿ ಮಾಡಿದ್ದೇವೆ ಕೂಡಾ. ಅದರೆ ಇತ್ತೀಚೆಗೆ ಸ್ಥಳೀಯ ಮರಗಳ ಸಂಖ್ಯೆ ಕಡಿಮೆಯಾಗಿ ಸಿಲ್ವರ್ ಓಕ್ ಮರಗಳ ಸಂಖ್ಯೆ ಹೆಚ್ಚುತ್ತಿದೆ.

ಎಲ್ಲೆಲ್ಲಿ ಭೂಮಿಯನ್ನು ಬಗೆದಿದ್ದಾರೋ, ಮಣ್ಣು ಕಾಣುವಂತೆ ಮಾಡಿದ್ದಾರೋ ಅಲ್ಲೆಲ್ಲ ನಾಶ ದುಪ್ಪಟ್ಟಾಗಿದೆ. ಕಾಡು ಕಡಿದು ಶುಂಠಿ ಬೆಳೆದದ್ದೂ ಹಾನಿಗೆ ಪೂರಕವಾಗಿರಬಹುದು. ಇವೆಲ್ಲದರ ಬಗ್ಗೆ ದಿನಪತ್ರಿಕೆಗಳಲ್ಲಿ ಸಾಕಷ್ಟು ಜನರು ಬರೆದಿದ್ದಾರೆ. ಇನ್ನೂ ವರದಿಗಳೂ ಬರುತ್ತಿವೆ. ಕೊಡಗಿನ ಪರಿಹಾರ ಕಾರ್ಯದಲ್ಲಿ ಅತ್ಯಂತ ಗಮನೀಯವಾಗಿ ತೊಡಗಿಸಿಕೊಂಡಿರುವ ಮಡಿಕೇರಿಯ ಎಂಜಿನಿಯರ್ ಹಾಗೂ ಪ್ರವೃತ್ತಿಯಿಂದ ಪರಿಸರಾಸಕ್ತ ಸಸ್ಯತಜ್ಞ, ಶಿವಕುಮಾರ್ ಕುಕ್ಕೇಮನೆ ಮಡಿಕೇರಿಯಿಂದ ಸೋಮವಾರಪೇಟೆಯವರೆಗೆ, ಅಲ್ಲಲ್ಲಿ ಗುಡ್ಡ ಕುಸಿದು ಅತ್ಯಂತ ಹಾನಿಯಾಗಿದೆ. ಇಲ್ಲಿ ಮೊದಲು ಹುಲ್ಲುಗಾವಲು ಮತ್ತು ಶೋಲಾ ಅರಣ್ಯಗಳಿದ್ದವು. ಅವೆಲ್ಲದರ ಬದಲಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೆಸಾರ್ಟ್‌ಗಳು ನಿರ್ಮಾಣವಾಗಿವೆ. ಜೆಸಿಬಿ ಕೆಲಸ ಅವ್ಯಾಹತವಾಗಿ ನಡೆದಿದೆ.. ಇದೇ ನಿಸ್ಸಂಶಯವಾಗಿ ಇಲ್ಲಿನ ಹಾನಿಗೆ ಕಾರಣ” ಎನ್ನುತ್ತಾರೆ. “ಇದೇ ರೀತಿ ಮಡಿಕೇರಿಯಿಂದ ಸಂಪಾಜೆಯ ದಾರಿಯಲ್ಲಿ ಕೂಡ ನಾಶ ಸಂಭವಿಸಿದೆ” ಮಾಹಿತಿ ನೀಡುತ್ತಾರೆ.

ಇದನ್ನೂ ಓದಿ: ‘ಕಸ್ತೂರಿರಂಗನ್‌ ಶಿಫಾರಸಿಗೆ ಒಪ್ಪಿಗೆ ಇಲ್ಲ’


ಮಡಿಕೇರಿ ನಗರದ ಚಾಮುಂಡೇಶ್ವರಿನಗರದಲ್ಲಿ ಭೂಕುಸಿತದಿಂದ ಮನೆಗಳನ್ನು ಕಳೆದುಕೊಂಡವರು (ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್‌ ಪಿ.ಎಸ್‌.)

ಮರೆತರೆ ನಮಗೇ ಹಾನಿ

ಪರಿಸರ ವಿಜ್ಞಾನಿಗಳು ತಿಳಿಸುವಂತೆ ಜಾಗತಿಕವಾಗಿ ಹವಾಮಾನ ಬದಲಾವಣೆಯ ಪ್ರಕ್ರಿಯೆಗಳಿಂದುಂಟಾಗುವ ಈ ರೀತಿಯ ಪ್ರಕೃತಿ ವಿಕೋಪಗಳನ್ನು ತಡೆಯಲಸಾಧ್ಯ. ಆದರೆ ಅದರ ದುಷ್ಪರಿಣಾಮಗಳನ್ನು ಆದಷ್ಟು ಕಡಿಮೆಗೊಳಿಸಲು ಸಾಧ್ಯವಿರಲಿಲ್ಲವೇ? ಇತ್ತು ಅಂತ ನನ್ನನಿಸಿಕೆ. ಪಶ್ಚಿಮಘಟ್ಟದಂಥ ಸೂಕ್ಷ್ಮಪ್ರದೇಶದ ಉಳಿವಿಗೆ ಈ ಹಿಂದೆಯೇ ಸಾಕಷ್ಟು ಹೋರಾಟ ನಡೆದಿದೆ. ಜೊತೆಗೆ ಪರಿಸರ ವಿಜ್ಞಾನಿಗಳು ಸತತ ಅಧ್ಯಯನದಿಂದ, ಅಂಕಿ-ಅಂಶಗಳ ಆಧಾರದಿಂದ ಘಟ್ಟಗಳ ಮಹತ್ವವನ್ನು ವೈಜ್ಞಾನಿಕವಾಗಿ ಅರಿತಿದ್ದಾರೆ. ಅಂತೆಯೇ ಈ ಸೂಕ್ಷ್ಮಪ್ರದೇಶವನ್ನು ಸಂರಕ್ಷಿಸಲು ವೈಜ್ಞಾನಿಕ ವಿಧಾನಗಳನ್ನು ಸೂಚಿಸಿದ್ದಾರೆ. ಪ್ರಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ಅವರು “ಇನ್ನಾದರೂ ಎಚ್ಚತ್ತುಕೊಳ್ಳದಿದ್ದರೆ, ಗೋವಾ ಕೂಡಾ ಕೇರಳ-ಕೊಡಗಿನಂತೆಯೇ ಹಾನಿಗೊಳಗಾಗುತ್ತದೆ” ಎಂದು ಹೇಳಿದ ವರದಿಗಳು, ಖ್ಯಾತ ಪರಿಸರ ತಜ್ಞ ಅ.ನ. ಯಲ್ಲಪ್ಪರೆಡ್ಡಿಯವರೂ ‘ಈಗಲೇ ಕಾರ್ಯಪ್ರವೃತ್ತರಾಗದಿದ್ದರೆ ಬೆಂಗಳೂರು ಕೂಡಾ ಇದೇ ಹಾದಿ ಹಿಡಿಯುತ್ತದೆ.” ಅಂತ ಎಚ್ಚರಿಸಿದ್ದು ಇತ್ತೀಚೆಗೆ ದಿನಪತ್ರಿಕೆಗಳಲ್ಲಿ ಬಂದಿವೆ. ಇವನ್ನೆಲ್ಲಾ ಪ್ರಜ್ಞಾಪೂರ್ವಕವಾಗಿ ಮರೆತರೆ ನಮಗೇ ಹಾನಿಯಲ್ಲವೇ?

ಫೇಸ್‌ಬುಕ್‌ನಲ್ಲಿ ಅಥವಾ ವೃತ್ತಪತ್ರಿಕೆಗಳಲ್ಲಿ ಅಲ್ಲಲ್ಲಿ ಈಗಿನ ಸಂದರ್ಭಕ್ಕೆ ಅತ್ಯಂತ ಪ್ರಸ್ತುತವಾದ ಪ್ರೊ. ಮಾಧವ್ ಗಾಡ್ಗೀಳ್ ಮತ್ತು ಪ್ರೊ. ಕಸ್ತೂರಿ ರಂಗನ್ ಸಮಿತಿಯ ವರದಿಗಳು ಪಶ್ಚಿಮಘಟ್ಟಗಳ ಸೂಕ್ಷ್ಮ ಪರಿಸರದ ಬಗ್ಗೆ ಏನು ಹೇಳಿವೆ? ಯಾವ ರೀತಿ ಪರಿಸರ ಮತ್ತು ಅಭಿವೃದ್ಧಿಯನ್ನು ಸರಿದೂಗಿಸಿಕೊಂಡು ಹೋಗಬೇಕು ಎಂದು ಸಲಹೆ ಕೊಟ್ಟಿವೆ ಎಂಬುದನ್ನು ಹಲವು ಲೇಖಕರು ಪುನರವಲೋಕಿಸಿದ್ದಾರೆ. ಆದರೆ ವರದಿಗಳ ಯಥಾವತ್ ಕನ್ನಡ ಅನುವಾದಗಳೆಲ್ಲೂ ಕಾಣಲಿಲ್ಲ. ಅವುಗಳ ಸಾರಾಂಶಗಳನ್ನು ಮಾತ್ರ ಬರೆದಾಗ, ‘ಲೇಖಕರು ಪರಿಸರವಾದಿ, ಅದ್ದರಿಂದ ಇವನ್ನು ತಿರುಚಿ ಬರೆದಿದ್ದಾರೆ’ ಎಂದು ಹೇಳುವ ಸಾಧ್ಯತೆ ಇದೆ. ಹಾಗಾಗಿ ಆ ವರದಿಗಳನ್ನು ಸಾಕಷ್ಟು ಸಮಯ ತೆಗೆದುಕೊಂಡು ವಿಸ್ತೃತ ಅಧ್ಯಯನ ಮಾಡಿ ಮುಖ್ಯ ಶಿಫಾರಸುಗಳನ್ನು ಅವರು ಯಾವ ರೂಪದಲ್ಲಿ ಕೊಟ್ಟಿದ್ದರೋ ಅದೇ ರೂಪದಲ್ಲಿ, ಕನ್ನಡದಲ್ಲಿ ಅನುವಾದ ಮಾಡಿದ್ದೇನೆ. ಮಾಧವ್ ಗಾಡ್ಗೀಳ್ ಸಮಿತಿಯ ವರದಿಯ ಮುಖ್ಯಭಾಗಗಳ ಕನ್ನಡಾನುವಾದ ಓದಲು ಇಲ್ಲಿ ಕ್ಲಿಕ್ ಮಾಡಿ. ಹಾಗೆಯೇ ಕಸ್ತೂರಿ ರಂಗನ್ ವರದಿಯ ಮುಖ್ಯಭಾಗಗಳ ಕನ್ನಡಾನುವಾದ ಓದಲು ಇಲ್ಲಿ ಕ್ಲಿಕ್ ಮಾಡಿ. ಆಸಕ್ತರು ಈ ವರದಿಗಳನ್ನು ಬಳಸಿಕೊಳ್ಳಬಹುದು/ಹಂಚಿಕೊಳ್ಳಬಹುದು. ಮಲೆನಾಡಿನ ಹಿನ್ನೆಲೆಯಿರುವ ನಾನು ಇಷ್ಟು ಮಾಡಲೇಬೇಕಾದ ಕೆಲಸ ಅಂತ ನನಗನ್ನಿಸಿದೆ.

ಇದನ್ನೂ ಓದಿ: ‘ಊರಿಗೆ ಹೋಗಲು ಹೆದರಿಕೆ ಆಗುತ್ತೆ’ ಅಂತಾರೆ ಬದುಕುಳಿದವರು


ಮಡಿಕೇರಿ ಸಮೀಪ ಮಾದಾಪುರ ಹಂದಿಗುತ್ತಿ ಎಸ್ಟೇಟ್‌ನಲ್ಲಿ ಭೂಕುಸಿತ, ಮಳೆಗೆ ಮನೆ ನೆಲಸಮವಾಗಿದೆ (ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್‌ ಪಿ.ಎಸ್‌.)

ಅಪೂರ್ವ ಘಟ್ಟಗಳು

ಪಶ್ಚಿಮ ಘಟ್ಟಗಳು ಗುಜರಾತಿನಿಂದ ಕೇರಳದವರೆಗೆ ಆರು ರಾಜ್ಯಗಳ ನಲವತ್ತನಾಲ್ಕು ಜಿಲ್ಲೆ ಹಾಗೂ 142 ತಾಲ್ಲೂಕುಗಳಲ್ಲಿ ಹಬ್ಬಿರುವ ಘಟ್ಟಶ್ರೇಣಿ. ದಕ್ಷಿಣ ಭಾರತದ ಜೀವರೇಖೆ. ಹಲವಾರು ಜೀವನದಿಗಳ ಉಗಮಸ್ಥಾನ. ಇಲ್ಲಿರುವ ಸಸ್ಯ, ಪ್ರಾಣಿ, ಪಕ್ಷಿ, ಕೀಟ ಹಾಗೂ ಇನ್ನಿತರ ಜೀವಜಂತುಗಳು ಪ್ರಪಂಚಕ್ಕೇ ವಿಶಿಷ್ಟ. ಜಗತ್ತಿನ 34 ಅತಿ-ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ಇದೂ ಒಂದು (ಈಗ ಸೂಕ್ಷ್ಮ ಪ್ರದೇಶಗಳ ಸಂಖ್ಯೆ ಜಾಸ್ತಿಯಾಗಿರಬಹುದು). ಇದನ್ನು ನಾವು ಹಾಳುಮಾಡಿದರೆ ಅದು ಆತ್ಮಹತ್ಯೆಯೇ ಸರಿ! ಅದನ್ನು ನಾಶ ಮಾಡುವುದು ಪರೋಕ್ಷವಾಗಿ ನಮ್ಮನ್ನೇ ನಾಶ ಮಾಡಿಕೊಂಡ ಹಾಗೆ! ಖಂಡಿತಾ ಭಸ್ಮಾಸುರನ ಕಥೆಯಾಗುತ್ತದೆ. ಇಂಥ ಪಾರಿಸಾರಿಕ ಸೂಕ್ಷ್ಮ ಪ್ರದೇಶಗಳನ್ನು ಕಾಪಿಡುವುದು ಹೇಗೆ, ಜೊತೆಗೆ ಇಲ್ಲಿನ ನಿವಾಸಿಗಳ ಅಭ್ಯುದಯ ಹೇಗೆ ಎಂಬುದರ ಬಗ್ಗೆ 2011ರಲ್ಲಿ ಪ್ರೊ. ಮಾಧವ ಗಾಢ್ಗೀಳ್ ಅಧ್ಯಕ್ಷರಾಗಿದ್ದ ಸಮಿತಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ನಿರ್ದೇಶನದ ಮೇರೆಗೆ ವರದಿ ಕೊಟ್ಟಿದೆ. ಮಾಧವ ಗಾಡ್ಗೀಳ್ ಸಮಿತಿಯ ವರದಿ ‘ಪರಿಸರ ಕೇಂದ್ರಿತ’ ಹಾಗೂ ‘’ಮಾನವ ಆರ್ಥಿಕ ಅಭ್ಯುದಯ”ದ ಬಗ್ಗೆ ಸಾಕಷ್ಟು ಗಮನಹರಿಸಿಲ್ಲ ಎಂಬ ಟೀಕೆಗಳು ಬಂದಾಗ, ಕೇಂದ್ರ ಸರ್ಕಾರ ರಚಿಸಿದ ಪ್ರೊ. ಕಸ್ತೂರಿ ರಂಗನ್‌ ನೇತೃತ್ವದ ಇನ್ನೊಂದು ಕಮಿಟಿ ತನ್ನ ವರದಿಯನ್ನೂ ಸಲ್ಲಿಸಿದೆ.


ಪಶ್ಚಿಮಘಟ್ಟಗಳ ಕುರಿತು ಮಾಧವ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ಸಮಿತಿಯ ವರದಿಗಳು

ವರದಿಗಳ ಅವಲೋಕನ

ಮಾಧವ ಗಾಡ್ಗೀಳ್ ವರದಿ ಪರಿಸರ ಕೇಂದ್ರಿತವಾದರೆ, ಕಸ್ತೂರಿ ರಂಗನ್ ವರದಿ ಅಧಿಕಾರಶಾಹಿ/ಅಭಿವೃದ್ಧಿ ಕೇಂದ್ರಿತವಾದದ್ದು ಎನ್ನುವ ಆರೋಪಗಳಿವೆ. ಮಾಧವ್ ಗಾಡ್ಗೀಳ್ ಸಮಿತಿಯ ವರದಿಯ ಇಡೀ ಪಶ್ಚಿಮಘಟ್ಟವನ್ನು ಪಾರಿಸಾರಿಕ ಸೂಕ್ಷ್ಮಪ್ರದೇಶವೆಂದು ಹೇಳಿ ಅದರಲ್ಲಿ ಸೂಕ್ಷ್ಮವಲಯಗಳನ್ನು ಗುರುತಿಸಿದ್ದರೆ ಕಸ್ತೂರಿ ರಂಗನ್ ಸಮಿತಿಯು ಕೆಲವು ಪ್ರದೇಶಗಳನ್ನು ಮಾತ್ರ ಪಾರಿಸಾರಿಕ ಸೂಕ್ಷ್ಮಪ್ರದೇಶವೆಂದು ಗುರುತಿಸಿದೆ. ಗಾಡ್ಗೀಳ್ ವರದಿ ಪ್ರಕಾರ ಪಶ್ಚಿಮಘಟ್ಟದಲ್ಲಿ ಪಾರಿಸಾರಿಕ ಸೂಕ್ಷ್ಮ ವಲಯ-1ರ ವಿಸ್ತೀರ್ಣ 77,000 ಚದರ ಕಿಮೀಗಳು. ಆದರೆ ಕಸ್ತೂರಿ ರಂಗನ್ ವರದಿಯಲ್ಲಿ ಗುರುತು ಮಾಡಿರುವ ಸೂಕ್ಷ್ಮ ಪಾರಿಸಾರಿಕ ಪ್ರದೇಶಗಳ ವಿಸ್ತೀರ್ಣ 60,000 ಚದರ ಕಿಮೀಗಳು. ಎರಡನೇ ವರದಿಯಲ್ಲಿ ಸೂಕ್ಷ್ಮ ಪಾರಿಸಾರಿಕ ವಲಯ-1ರ ವಿಸ್ತೀರ್ಣ 17,000 ಚದರ ಕಿಮೀ ಕಡಿಮೆಯಾಗಿದೆ. ಗಾಡ್ಗೀಳ್ ಸಮಿತಿಯ ವರದಿಯಲ್ಲಿ ತಾಲೂಕುಗಳನ್ನು ಒಟ್ಟಾಗಿ ಸೂಕ್ಷ್ಮವಲಯಗಳಿಗೆ ಸೇರಿಸಿದ್ದರೆ ಕಸ್ತೂರಿ ರಂಗನ್ ವರದಿಯಲ್ಲಿ ಪಾರಿಸಾರಿಕ ಸೂಕ್ಷ್ಮಪ್ರದೇಶಗಳಲ್ಲಿ ಬರುವ ಹಳ್ಳಿಗಳ ಪಟ್ಟಿಯನ್ನು ಕೊಟ್ಟಿದ್ದಾರೆ. ಇದರಲ್ಲಿ ಅಭಯಾರಣ್ಯ ಮತ್ತು ಸಂರಕ್ಷಿತ ಪ್ರದೇಶಗಳು ಸೇರಿಕೊಂಡಿವೆ.

ನನಗೆ ಮಾಧವ್ ಗಾಡ್ಗೀಳ್ ವರದಿಯಲ್ಲಿರುವ ಪ್ರದೇಶಗಳ ವರ್ಗೀಕರಣ ಸಮಂಜಸವಾಗಿ ಕಂಡಿದೆ. ಯಾಕೆಂದರೆ ಕಸ್ತೂರಿ ರಂಗನ್ ಸಮಿತಿಯ ವರದಿ ಪ್ರಕಾರ ಗುರುತಿಸಲಾಗಿರುವ ಪಾರಿಸಾರಿಕ ಸೂಕ್ಷ್ಮಪ್ರದೇಶಗಳ ಹಳ್ಳಿಗಳ ಪಕ್ಕದಲ್ಲಿರುವ ಪಶ್ಚಿಮಘಟ್ಟದ ಹಳ್ಳಿಗಳು ‘ಸಾಂಸ್ಕೃತಿಕ ವಲಯ’ ಕ್ಕೆ ಬರುತ್ತವೆ ಮತ್ತು ಅಲ್ಲಿ ಪಾರಿಸಾರಿಕ ಸೂಕ್ಷ್ಮಪ್ರದೇಶಗಳಲ್ಲಿರುವ ಯಾವುದೇ ನಿರ್ಬಂಧಗಳು ಲಾಗೂ ಆಗುವುದಿಲ್ಲ. ಇದು ಪಕ್ಕದ ಸೂಕ್ಷ್ಮಪ್ರದೇಶಗಳಲ್ಲಿ ಅನಾಹುತಕ್ಕೆ ಎಡೆ ಮಾಡಿಕೊಡಬಹುದು. ಊರೂರುಗಳ ಮಧ್ಯೆ ಭಿನ್ನಾಭಿಪ್ರಾಯಕ್ಕೂ ಕಾರಣವಾಗಬಹುದು. ಹಾಗಾಗಿ ಗಾಡ್ಗೀಳ್ ಸಮಿತಿಯ ವರದಿ ಹೆಚ್ಚು ಪ್ರಾಯೋಗಿಕ ಎನ್ನುವ ಅಭಿಪ್ರಾಯ ನನ್ನದು. ಇನ್ನೊಂದು ಬಹುಮುಖ್ಯ ಅಂಶವೆಂದರೆ ಗಾಡ್ಗೀಳ್ ವರದಿಯ ಪ್ರಕಾರ ಸೂಕ್ಷ್ಮವಲಯ- ಮೂರರಲ್ಲಿ ಮಾಡಿರುವ ಶಿಫಾರಸುಗಳು ಇಡೀ ಭಾರತದ ಎಲ್ಲ ಪ್ರದೇಶಗಳಿಗೂ ಬರಬೇಕು ಅಂತ ನನಗನ್ನಿಸಿದೆ. ಆ ರೀತಿಯ ಪರಿಸರಸ್ನೇಹಿ, ನಿಯಂತ್ರಿತ ಅಭಿವೃದ್ಧಿ ಎಲ್ಲ ಕಡೆ ಅತ್ಯಗತ್ಯ. ಇಲ್ಲದಿದ್ದರೆ ನಾವು ಎಲ್ಲ ಕಡೆ ಈಗ ಆಗಿರುವ ಮಹಾನಗರಗಳ/ಕೈಗಾರಿಕಾ ಪ್ರದೇಶಗಳ ಮಿತಿಮೀರಿದ ಸ್ಥಿತಿಯನ್ನು ಕಾಣಬೇಕಾಗಬಹುದು.

ಉಳಿದಂತೆ ಗಾಡ್ಗೀಳ್ ಸಮಿತಿ ವರದಿ ಪಶ್ಚಿಮಘಟ್ಟದ ಸೂಕ್ಷ್ಮಪ್ರದೇಶಗಳ ಉಳಿವಿಗೆ ಏನು ಅಗತ್ಯವೋ ಅದನ್ನು ಶಿಫಾರಸು ಮಾಡಿದೆ ಎನ್ನುವುದು ನನ್ನನಿಸಿಕೆ (ಅನುವಾದದಲ್ಲಿರುವ ಎರಡನೇ ಟೇಬಲ್ ನೋಡಿ). ಇಂಧನ, ಭೂಬಳಕೆ, ಹಸಿರು ತಂತ್ರಜ್ಞಾನ, ಶಿಕ್ಷಣ, ಸಾರಿಗೆ, ಮಾಲಿನ್ಯ, ಪಶು ಸಂಗೋಪನೆ, ಮೀನುಗಾರಿಕೆ, ಅರಣ್ಯ, ಜೀವವೈವಿಧ್ಯ, ಗಣಿಗಾರಿಕೆ, ಕಲ್ಲು ಕ್ವಾರಿ ಮತ್ತು ಮರಳು ತೆಗೆಯುವುದು, ಪ್ರವಾಸದ ಕುರಿತಾದ ಶಿಫಾರಸುಗಳು ಯಾವುದೂ ಜಾರಿ ಮಾಡಲು ಬಾರದಷ್ಟು ಕ್ಲಿಷ್ಟವಾಗಿಲ್ಲ. ಬಹುಮುಖ್ಯ ಅಂಶವೆಂದರೆ ಒಂದು ಪ್ರದೇಶದ ಧಾರಣ ಶಕ್ತಿಯನ್ನು ಪರೀಕ್ಷಿಸಿದ ನಂತರವೇ ಅಲ್ಲಿ ಅಭಿವೃದ್ಧಿ ಮಾಡಬೇಕೋ ಬೇಡವೋ ಎನ್ನುವುದನ್ನು ನಿರ್ಧಾರ ಮಾಡಬೇಕು ಎಂದಿದೆ ಸಮಿತಿ. ಜೊತೆಗೆ ಗ್ರಾಮ ಪಂಚಾಯತ್‌ಗಳಿಗೆ ಈ ನಿಟ್ಟಿನಲ್ಲಿ ಸಾಕಷ್ಟು ಅಧಿಕಾರವನ್ನು ಶಿಫಾರಸು ಮಾಡಿದೆ.

ನನಗೆ ಕಂಡ ಹಾಗೆ ಕೃಷಿಯಲ್ಲಿ ಕೀಟನಾಶಕ ಮತ್ತು ರಸಗೊಬ್ಬರಗಳ ಬಳಕೆ ಕುರಿತಂತೆ ಹಂತ-ಹಂತವಾಗಿ ನಿಲ್ಲಿಸುವಂತೆ ಶಿಫಾರಸು ಮಾತ್ರ ಪ್ರಾಯೋಗಿಕವಾಗಿ ಕಷ್ಟ. ಆದರೆ ಸಮಿತಿ ಸಾವಯವ ಕೃಷಿ, ಸ್ಥಳೀಯ ತಳಿ ಸಂರಕ್ಷಣೆ (ಸಸ್ಯ ಮತ್ತು ಪಶು), ಸ್ಥಳೀಯ ಪ್ರಭೇದಗಳ ಸಂರಕ್ಷಣೆಗೆ ಪ್ರೋತ್ಸಾಹಧನವನ್ನು ಸೂಚಿಸಿದೆ. ಜೊತೆಗೆ ಖಾಸಗಿ ಜಾಗದಲ್ಲಿ ಅರಣ್ಯ ಬೆಳೆಸುವುದರಿಂದ ಇಂಗಾಲದ ಅಂಶವನ್ನು ಮರಗಳು ಸ್ಥಿರೀಕರಿಸುತ್ತವೆ. ಇದಕ್ಕೆ ಧನಸಹಾಯವನ್ನೂ ಸಮಿತಿ ಶಿಫಾರಸು ಮಾಡಿದೆ. ಜೊತೆಗೆ ಇವೆಲ್ಲಾ ಪಶ್ಚಿಮಘಟ್ಟಗಳಲ್ಲಿ ಜನಪ್ರಿಯವಾಗುತ್ತಿರುವುದರಿಂದ ಅಷ್ಟು ಕಷ್ಟವಾಗಲಾರದು. ಜೊತೆಗೆ ಕಾಡುಪ್ರಾಣಿಗಳ ಉಪಟಳಕ್ಕೆ ಪರಿಹಾರವಾಗಿ ಪ್ರೋತ್ಸಾಹಧನವನ್ನೂ ಹೇಳಿದೆ.

ಪಶ್ಚಿಮಘಟ್ಟ ಕಾರ್ಯಪಡೆಯ ವರದಿ

ಇವೆರಡು ವರದಿಗಳ ಜೊತೆಗೆ 2013ರಲ್ಲಿ ಕರ್ನಾಟಕ ಸರ್ಕಾರವೇ ರಚಿಸಿದ ಪಶ್ಚಿಮಘಟ್ಟ ಕಾರ್ಯಪಡೆ (ಶ್ರೀ ಅನಂತ ಹೆಗಡೆ ಅಶೀಸರ ಇದರ ಅಧ್ಯಕ್ಷರಾಗಿದ್ದರು) ನಮ್ಮ ರಾಜ್ಯದಲ್ಲಿರುವ ಮಲೆನಾಡಿನ ಉಳಿವು ಮತ್ತು ಅಭಿವೃದ್ಧಿಗೆ ಸಂಬಂಧಪಟ್ಟಂತೆ ವಿಸ್ತೃತ ವರದಿಯನ್ನು ಕೊಟ್ಟಿದೆ. ಇದನ್ನು ಕಾರ್ಯಪಡೆಯ ಹಲವಾರು ಕಾರ್ಯಕ್ರಮಗಳಲ್ಲಿ ಜನರಿಗೆ ಹಂಚಲಾಗಿದೆ ಕೂಡಾ. ಈ ವರದಿಯು ಕನ್ನಡದಲ್ಲಿರುವುದರಿಂದ ಇದರ ಶಿಫಾರಸುಗಳನ್ನು ಇಲ್ಲಿ ಕೊಡಲು ಹೋಗುವುದಿಲ್ಲ. ವರದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಈ ಕಾರ್ಯಪಡೆ ಪಶ್ಚಿಮಘಟ್ಟದಲ್ಲಿ ಪರಿಸರಸ್ನೇಹಿ ಇಂಧನ, ಜನಸಹಭಾಗಿತ್ವ, ಆಡಳಿತ, ಕಾನೂನು ಸಂಬಂಧೀ ವಿಷಯಗಳು, ಖನಿಜ-ಅದಿರು ನಿರ್ವಹಣೆ, ಜಲಾಯನ ಅಭಿವೃದ್ಧಿ, ಪರಿಸರ ಶಿಕ್ಷಣ, ಪಶ್ಚಿಮಘಟ್ಟದಲ್ಲಿರುವ ಪ್ರತಿ ಜಿಲ್ಲೆಯ ಸೂಕ್ಷ್ಮಪ್ರದೇಶಗಳ ಸಂರಕ್ಷಣೆ, ಪರಿಸರ ಪ್ರವಾಸೋದ್ಯಮ, ಔಷಧಿ ಸಸ್ಯಗಳ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ, ಕರಾವಳಿ ಸಂರಕ್ಷಣೆ, ಮಲೆನಾಡಿನ ಸುಸ್ಥಿರ ಅಭಿವೃದ್ಧಿಗಾಗಿ ಸಮಗ್ರ ನೀತಿ, ವನವಾಸಿ ಮತ್ತು ಬುಡಕಟ್ಟು ಜನಾಂಗಗಳ ಶ್ರೇಯೋಭಿವೃದ್ಧಿ, ಕೈಗಾ ಅಣುಸ್ಥಾವರ ಪ್ರದೇಶದ ಪರಿಸರ ಸಂರಕ್ಷಣೆ, ಕಾಡಿನ ಬೆಂಕಿ ನಿಯಂತ್ರಣ, ಮಲೆನಾಡಿನ ನಗರಗಳ ತ್ಯಾಜ್ಯ ನಿಯಂತ್ರಣ ಇವೆಲ್ಲದರ ಬಹಳ ಗಮನಾರ್ಹ ಅಂಶಗಳಿರುವ ವರದಿ ನೀಡಿದೆ.

ಇದನ್ನೂ ಓದಿ: ಕೊಡಗಿನಲ್ಲಿ ಮೈಮುರಿದ ಭೂಮಿ, ಕಣ್ಮುಂದೆಯೇ ಜಾರಿತು ಕಾಫಿನಾಡು


ಸೊಮವಾರಪೇಟೆ-ಮಡಿಕೇರಿ ರಸ್ತೆಯು ಹಾಲೇರಿ ಗುಡ್ಡದಲ್ಲಿ ಭೂಕುಸಿತವಾಗಿ ರಸ್ತೆಯೇ ಮಾಯವಾಗಿದೆ (ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್‌ ಪಿ.ಎಸ್‌.)

ಪಶ್ಚಿಮಘಟ್ಟ ಉಳಿಸಬೇಕೇ? ಬೇಡವೇ?

ಈ ವರದಿಗಳನ್ನು ರಾಜ್ಯ ಸರಕಾರಗಳು ಜಾರಿ ಮಾಡುತ್ತವೋ ಬಿಡುತ್ತವೋ ಅದು ಬೇರೆ ವಿಷಯ. ಆದರೆ ಜನಸಾಮಾನ್ಯರು ಈ ವರದಿಗಳಲ್ಲಿ ಏನಿದೆ ಅನ್ನುವುದನ್ನು ಸರಿಯಾಗಿ ತಿಳಿದುಕೊಳ್ಳಲೇಬೇಕು. ಸ್ಥಳೀಯ ಜನರಲ್ಲಿ/ಗ್ರಾಮ ಸಭೆಗಳಲ್ಲಿ ಅರಿವು ಮೂಡಿದರೆ ಅವರು ಏನು ಮಾಡಬೇಕು/ಮಾಡಬಹುದು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಾಗುತ್ತದೆ. ಆದರೆ ಸಮರ್ಪಕವಾಗಿ ತಿಳಿದುಕೊಳ್ಳದೆ ಈ ವರದಿಗಳ ವಿರೋಧ ಮಾಡುವುದು ಸರಿಯಲ್ಲ. ಹೀಗೆ ಮಾಡುವ ಎಷ್ಟು ಜನ ನಿಜವಾಗಿ ಈ ವರದಿಗಳನ್ನು ಓದಿದ್ದಾರೆ ಅಂತ ನನಗೆ ಗೊತ್ತಿಲ್ಲ. ಕೆಲವರು ಫೇಸ್ಬುಕ್ಕಿನಲ್ಲಿ “ಈ ವರದಿಗಳು ಮೂಲನಿವಾಸಿಗಳಿಗೆ, ಕೃಷಿಕರಿಗೆ ಮಾರಕ” ಅಂತೆಲ್ಲಾ ಬರೆಯುವುದು ನೋಡಿದೆ. ಜೊತೆಗೆ ‘ಈ ಸಮಿತಿಗಳಲ್ಲಿ ಕೆಲಸ ಮಾಡಿದವರಿಗೆ ತಳಮಟ್ಟದ ಸಮಸ್ಯೆಗಳ ಅರಿವಿಲ್ಲ. ಅವರಿಗೆ ಏನೂ ಜನಸಾಮಾನ್ಯರ ಸಮಸ್ಯೆ ಗೊತ್ತಿಲ್ಲ:’ ಅಂತಲೂ ಟೀಕೆಗಳು ಬಂದಿವೆ. ಆದರೆ ವಾಸ್ತವಾಂಶ ಬೇರೆಯೇ ಇದೆ.

ಇದು ಯಾರೋ ದಾರಿಹೋಕರು ಕೊಟ್ಟ ವರದಿಯಲ್ಲ. ಈ ವಿಜ್ಞಾನಿಗಳು ಮೂರ್ಖರಲ್ಲ ಅಥವಾ ಸ್ಥಾಪಿತ ಹಿತಾಸಕ್ತಿ ಇರುವವರಲ್ಲ (ಅವರಿಗೆ ಪಶ್ಚಿಮಘಟ್ಟಗಳು ಉಳಿದರೆ/ಉರುಳಿದರೆ ಏನಾಗಬೇಕಾಗಿದೆ? ಅವರ ಸಂಬಳ ಬಂದೇ ಬರುತ್ತದೆ ತಾನೇ?). ಇದರಲ್ಲಿರುವವರು ಪರಿಸರದ ಮೇಲೆ ಹಾಗು ಪಶ್ಚಿಮಘಟ್ಟ ಸಾಲುಗಳಲ್ಲಿ ನೈಜ ಕಾಳಜಿ ಇರುವವರು. ಹಲವರು ಕೃಷಿ ಹಿನ್ನೆಲೆಯವರಿದ್ದಾರೆ. ಪಶ್ಚಿಮಘಟ್ಟದಲ್ಲೇ ಹುಟ್ಟಿಬೆಳೆದವರೂ ಇದ್ದಾರೆ. ಇಡೀ ಜೀವನವನ್ನೇ ಪಶ್ಚಿಮಘಟ್ಟಗಳ ಅಧ್ಯಯನಕ್ಕೆ ಮೀಸಲಿಟ್ಟವರಿದ್ದಾರೆ. ಕೆಲವರು ತಪ್ಪಾಗಿ ತಿಳಿದ ಹಾಗೆ ಇವು ಕೃಷಿಕರ, ಮೂಲನಿವಾಸಿಗಳ ವಿರುದ್ಧವಿರುವ ವರದಿಗಳಲ್ಲ. ಬದಲಾಗಿ ಪರಿಸರಸ್ನೇಹಿ ಸುಸ್ಥಿರ ಅಭಿವೃದ್ಧಿಯನ್ನು ಶಿಫಾರಸು ಮಾಡುವ ವರದಿಗಳಿವು.

ಕೆಲವರು ನಾವು ಪಶ್ಚಿಮಘಟ್ಟದಲ್ಲಿರುವವರು ಮಾತ್ರ ಯಾಕೆ ಸಂರಕ್ಷಿಸಬೇಕು? ಇಲ್ಲಿ ಅಭಿವೃದ್ಧಿ ಬೇಕು. ಹೆದ್ದಾರಿ ಬೇಕು, ಮಾಲ್ ಬೇಕು... ಹೀಗೆ ಮಾತಾಡುತ್ತಾರೆ. ಬೇರೆಯವರು ಮಾತ್ರ ಎಲ್ಲವನ್ನೂ ಮಾಡಬಹುದಾ? ಅವರಿಗೆ ಜವಾಬ್ದಾರಿಗಳಿಲ್ಲವಾ ಎಂದೆಲ್ಲ ಪ್ರಶ್ನೆ ಕೇಳುತ್ತಾರೆ. ಕೊನೆಗೂ ಇದಕ್ಕೆ ಉತ್ತರ ಇಷ್ಟೆ. ಪಶ್ಚಿಮಘಟ್ಟಗಳು ಪಾರಿಸಾರಿಕವಾಗಿ ಸೂಕ್ಷ್ಮ ಪ್ರದೇಶ. ಇದು ಪ್ರಕೃತಿಯ ಕೊಡುಗೆ. ಇಲ್ಲಿ ಅಭಿವೃದ್ಧಿ ಆಗಬಾರದು ಎಂದು ಯಾರೂ ಹೇಳುವುದಿಲ್ಲ. ಆದರೆ ಇಲ್ಲಿ ಆಗಬೇಕಾದ್ದು ಸುಸ್ಥಿರ ಅಭಿವೃದ್ಧಿ ಹೊರತು ಬೇಕಾಬಿಟ್ಟಿ ಅಭಿವೃದ್ಧಿಯಲ್ಲ. ಈ ಘಟ್ಟಸಾಲುಗಳನ್ನು ಉಳಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಅಲ್ಲಿರುವ ನಮಗೇ ತೊಂದರೆ. ಇನ್ನಿತರ ಪ್ರದೇಶದವರಿಗೂ ತೊಂದರೆ ಆಗಿಯೇ ಆಗುತ್ತದೆ. ಏಕೆಂದರೆ ಹಲವಾರು ನದಿಗಳು ಇಲ್ಲಿ ಹುಟ್ಟುತ್ತವೆ. ಇಡೀ ದಕ್ಷಿಣ ಭಾರತದ ಹವಾಮಾನದ ಮೇಲೆ ಈ ಘಟ್ಟಸಾಲುಗಳು ಪರಿಣಾಮ ಬೀರುತ್ತವೆ.

ಕೇರಳ-ಕೊಡಗಿನಲ್ಲಾದಂತೆ ತಪ್ಪು ಮಾಡಿದವರು, ಅಮಾಯಕರು, ಜಾತಿ ಹಾಗೂ ಅಂತಸ್ತುಗಳ ಹಂಗಿಲ್ಲದಂತೆ ಎಲ್ಲರೂ ಇನ್ನಿಲ್ಲದ ತೊಂದರೆಗೀಡಾಗುತ್ತಾರೆ. ಮನೆ, ಕೃಷಿಭೂಮಿ ಕಳೆದುಕೊಂಡು ಒಮ್ಮೆಲೇ ಬೀದಿಗೆ ಬಿದ್ದ ಕುಟುಂಬಗಳನ್ನು ಒಂದು ಸಾರಿ ಕಣ್ಣು ಮುಂದೆ ತಂದುಕೊಳ್ಳಿ. ಅಭಿವೃದ್ಧಿಯ ಮರೀಚಿಕೆಯ ಹಿಂದೆ ಬಿದ್ದು ನಾಗಾಲೋಟದಲ್ಲಿ ಓಡುತ್ತಿರುವಾಗ ಪ್ರಕೃತಿ ವಿಕೋಪದಿಂದ ಒಮ್ಮೆಲೆ 50 ವರ್ಷ ಹಿಂದೆ ಹೋಗುವಂತಾದರೆ? ಯಾರೋ ಕೆಲವರು ಮಾಡುವ ತಪ್ಪುಗಳಿಂದ ಎಲ್ಲರೂ ಅನುಭವಿಸುವಂತೆ ಆಗಬೇಕೆ? ನಾವು ಮುಂಬೈ, ದೆಹಲಿ, ಚೆನ್ನೈ ಬೆಂಗಳೂರಿನಂತಹ ಮಹಾನಗರದ ವಿಪರೀತ ಹಾಗೂ ಅನಿಯಂತ್ರಿತ ಅಭಿವೃದ್ಧಿ (!) ಹಾಗೂ ಆಗಿರುವ ಪರಿಣಾಮಗಳನ್ನು ನೋಡಿ, ಅನುಭವಿಸಿ ಬಸವಳಿದಿಲ್ಲವೇ?

ಮೊನ್ನೆ ಮೊನ್ನೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಕಸ್ತೂರಿ ರಂಗನ್ ವರದಿಯ ಬಗ್ಗೆ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಆದರೆ ಪಶ್ಚಿಮಘಟ್ಟಗಳ ಉಳಿವಿಗೆ ಕಸ್ತೂರಿ ರಂಗನ್ ವರದಿಗಿಂತ ಹೆಚ್ಚಾಗಿ, ಗ್ರಾಮಪಂಚಾಯತಿಗಳಿಗೆ ಗಮನಾರ್ಹ ಅಧಿಕಾರ ಶಿಫಾರಸು ಮಾಡಿದ ಗಾಡ್ಗೀಳ್ ವರದಿ ಹಾಗೂ ನಮ್ಮದೇ ಪಶ್ಚಿಮಘಟ್ಟ ಕಾರ್ಯಪಡೆ ಕೊಟ್ಟ ಪ್ರಾಯೋಗಿಕ ಮಾರ್ಗಸೂಚಿಗಳ ಪ್ರಕಾರ ಮುಂದುವರಿಯಬಹುದು ಅಂತ ನನ್ನ ಸ್ಪಷ್ಟ ಅನಿಸಿಕೆ. ರಾಜ್ಯ ಸರಕಾರಗಳು ಏನೇ ಮಾಡಲಿ, ಗ್ರಾಮ ಪಂಚಾಯತ್ ಗಳು ಮನಸ್ಸು ಮಾಡಿ ನಮ್ಮನ್ನು ನಾವು ಉಳಿಸಿಕೊಳ್ಳುತ್ತೇವೆ ಎನ್ನುವ ನಿರ್ಧಾರಕ್ಕೆ ಬಂದರೆ ಈ ಅಪೂರ್ವ ಘಟ್ಟಸಾಲುಗಳ ಸಂರಕ್ಷಣೆ ಖಂಡಿತಾ ಸಾಧ್ಯ.

 

ಇದನ್ನೂ ಓದಿ

ಕಾಡಿನಿಂದ ಹೊರಬರಲು ಹಲವರು ಸಿದ್ಧ?

ಕೊಡಗು: ಊರೇ ಮಾಯ, ರಸ್ತೆ ಮಾಯ, ಎಲ್ಲಾ ಮಾಯ!

ಕೊಡಗಿನ ಪುನರ್ವಸತಿಗೆ ಹತ್ತು ಸೂತ್ರಗಳು

ಪೂರಕ ಮಾಹಿತಿ

ಮಾಧವ್ ಗಾಡ್ಗೀಳ್ ವರದಿಯ ಕನ್ನಡ ಅನುವಾದ: https://bit.ly/2NKb6ds

ಕಸ್ತೂರಿ ರಂಗನ್ ವರದಿಯ ಕನ್ನಡ ಅನುವಾದ: https://bit.ly/2D2Qjxu

ಮಾಧವ್ ಗಾಡ್ಗೀಳ್ ಸಮಿತಿಯ ವರದಿ (ಇಂಗ್ಲಿಷ್): https://bit.ly/2nX3WnD

ಕಸ್ತೂರಿ ರಂಗನ್ ಸಮಿತಿಯ ವರದಿ (ಇಂಗ್ಲಿಷ್) ಭಾಗ 1: https://bit.ly/2MBMjI7

ಕಸ್ತೂರಿ ರಂಗನ್ ಸಮಿತಿಯ ವರದಿ (ಇಂಗ್ಲಿಷ್) ಭಾಗ 2: https://bit.ly/2NLorlS

ಪಶ್ಚಿಮಘಟ್ಟ ಕಾರ್ಯಪಡೆ ವರದಿ: https://bit.ly/2xgtDop

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !