ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಮನುಷ್ಯನ ರೋಗಕ್ಕೆ ಪ್ರಕೃತಿಯೇ ಮದ್ದು

ಪರಿಸರ– ಪ್ರಾಣಿಗಳ ಆರೋಗ್ಯಕ್ಕೆ ಗಮನ ಕೊಡದೆ ಮಾನವನ ಆರೋಗ್ಯ ಸಂರಕ್ಷಣೆ ಅಸಾಧ್ಯ
Last Updated 7 ಜುಲೈ 2020, 19:30 IST
ಅಕ್ಷರ ಗಾತ್ರ
ADVERTISEMENT
""

ವಿಶ್ವ ಪ್ರಕೃತಿ ನಿಧಿ (ವರ್ಲ್ಡ್‌ವೈಡ್ ಫಂಡ್ ಫಾರ್ ನೇಚರ್) ಜಾಗತಿಕ ಮಟ್ಟದ ಮಹತ್ವದ ವರದಿಯೊಂದನ್ನು ಜೂನ್ 17ರಂದು ಬಿಡುಗಡೆ ಮಾಡಿದೆ. ಪ್ರಪಂಚದ 200ಕ್ಕೂ ಹೆಚ್ಚು ದೇಶಗಳು ಕೋವಿಡ್-19ರ ಹಿಡಿತದಲ್ಲಿ ಸಿಲುಕಿ, ಜನರ ಬದುಕು ನೆಲಕಚ್ಚಿರುವ ಸಂದರ್ಭದಲ್ಲಿ ಹೊರಬಂದಿರುವ ಈ ವೈಜ್ಞಾನಿಕ ವರದಿಯು ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ವಿವಿಧ ದೇಶಗಳ ಆರೋಗ್ಯ ವ್ಯವಸ್ಥೆಗೆ ಸವಾಲೊಡ್ಡುತ್ತಿರುವ ಸಾಂಕ್ರಾಮಿಕ ರೋಗಗಳು ಮತ್ತೆ ಮತ್ತೆ ಬರುತ್ತಿರುವುದೇಕೆ, ಈ ರೋಗಗಳಲ್ಲಿ ಶೇ 70ಕ್ಕೂ ಹೆಚ್ಚು ಭಾಗ ಪ್ರಾಣಿಮೂಲಗಳಿಂದಲೇ ಬರಲು ಏನು ಕಾರಣ, ಇಂಥ ರೋಗಗಳನ್ನು ತಡೆಯಲು– ನಿಯಂತ್ರಿಸಲು ಸಾಧ್ಯವೇ ಎಂಬ ಮೂರು ಮೂಲಭೂತ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಿದೆ.

1976- 2020ರ ಅವಧಿಯಲ್ಲಿ ಪ್ರಪಂಚದ ವಿವಿಧೆಡೆ ಕಾಣಿಸಿಕೊಂಡು ಹರಡಿರುವ ಎಬೋಲಾ, ಎಚ್‍ಐವಿ1 ಮತ್ತು 2, ವೆಸ್ಟ್‌ನೈಲ್, ಸಾರ್ಸ್, ಎಚ್5ಎನ್1 ಹಕ್ಕಿಜ್ವರ, ಹಂದಿಜ್ವರ, ಎಚ್7ಎನ್9 ಹಕ್ಕಿಜ್ವರ, ಮೆರ್ಸ್, ಜೈಕಾ , ಇದೀಗ ಕೋವಿಡ್-19 ಮುಂತಾದ ಯಾವುವೂ ಆಕಸ್ಮಿಕವಾಗಿ ಬಂದಿರುವ ರೋಗಗಳಲ್ಲ ಎನ್ನುವ ಈ ವರದಿ, ಪ್ರಕೃತಿ ವ್ಯವಸ್ಥೆಯಲ್ಲಿ ನಾವು ತರುತ್ತಿರುವ ತೀವ್ರಗತಿಯ ಬದಲಾವಣೆಗಳೇ ಈ ಪರಿಸ್ಥಿತಿಗೆ ಕಾರಣ ಎಂಬುದನ್ನು ಆಧಾರಸಹಿತವಾಗಿ ಪ್ರತಿಪಾದಿಸುತ್ತದೆ.

ಜೈವಿಕ ವೈವಿಧ್ಯ ಮತ್ತು ಪರಿಸರ ವ್ಯವಸ್ಥೆಯ ಸೇವೆಗಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯು ಕಳೆದ ವರ್ಷ ಹೊರತಂದ ವರದಿಯಂತೆ, ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಕೆಲಸಗಳಿಂದ ಭೂಪರಿಸರದ ಶೇ 75ರಷ್ಟು ಭಾಗ ಮತ್ತು ಸಾಗರ ಪರಿಸರದ ಶೇ 66ರಷ್ಟು ಭಾಗವನ್ನು ನಾವು ಎದ್ದು ಕಾಣುವಂತೆ ಬದಲಿಸಿದ್ದೇವೆ. ಸಮಶೀತೋಷ್ಣ ಮತ್ತು ಉಷ್ಣವಲಯದ ಅರಣ್ಯಗಳ ಅರ್ಧಭಾಗ ನಾಶವಾಗಿದೆ. ಹಿಮಾಚ್ಛಾದಿತ ಪ್ರದೇಶಗಳನ್ನು ಬಿಟ್ಟರೆ ಜಗತ್ತಿನ ಅರ್ಧದಷ್ಟು ಭೂಪ್ರದೇಶ ಕೃಷಿಭೂಮಿಯಾಗಿ ಪರಿವರ್ತಿತವಾಗಿದೆ. 8 ಲಕ್ಷ ಅಣೆಕಟ್ಟುಗಳ ಮೂಲಕ, ಜಗತ್ತಿನ ಶೇ 60ರಷ್ಟು ನದಿಗಳಲ್ಲಿನ ನೀರಿನ ಸಹಜ ಹರಿವನ್ನು ಪ್ರತಿಬಂಧಿಸಿದ್ದೇವೆ. ಪ್ರಪಂಚದ 60 ದೇಶಗಳ ನಡುವೆ, 150 ಕಳ್ಳಮಾರ್ಗಗಳಲ್ಲಿ, ನೂರಾರು ಪ್ರಭೇದಗಳಿಗೆ ಸೇರಿದ ವನ್ಯಜೀವಿಗಳ ಕಳ್ಳಸಾಗಣೆ, ಮಾರಾಟ ಅವ್ಯಾಹತವಾಗಿ ನಡೆದಿದೆ. ಈ ಬದಲಾವಣೆಗಳಿಗೆ ಪ್ರಕೃತಿ ತನ್ನದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದೆ.

ಆಫ್ರಿಕಾದ ಅರಣ್ಯಗಳಲ್ಲಿ ಟೆರೋಪೋಡಿಡೈಯೀ ಕುಟುಂಬಕ್ಕೆ ಸೇರಿದ ಬಾವಲಿಗಳು ವಾಸಿಸುತ್ತವೆ. ಎಬೋಲಾ ವೈರಸ್‍ಗಳಿಗೆ ಈ ಬಾವಲಿಗಳೇ ಸ್ವಾಭಾವಿಕ ಆತಿಥೇಯ (ಹೋಸ್ಟ್‌) ಜೀವಿಗಳು. ಅಭಿವೃದ್ಧಿಯ ಹೆಸರಿನಲ್ಲಿ ಕಾಡು ಕಡಿದು, ರಸ್ತೆಗಳನ್ನು ನಿರ್ಮಿಸಿ, ಜನವಸತಿಗೆ ಅವಕಾಶ ನೀಡಿ, ಸೌಲಭ್ಯಗಳನ್ನು ಕಲ್ಪಿಸುವ ಭರದಲ್ಲಿ, ಮಾನವ– ಬಾವಲಿಗಳ ನಡುವೆ ನೇರವಾದ, ಪರೋಕ್ಷವಾದ ಸಂಪರ್ಕ ಪ್ರಾರಂಭವಾಗಿ, ಎಬೋಲಾ ವೈರಸ್‍ಗಳು ಬಾವಲಿಗಳಿಂದ ಮಾನವ ದೇಹಕ್ಕೆ ಜಿಗಿದು ಸಾಂಕ್ರಾಮಿಕ ರೂಪ ತಳೆದವು. ಇದೇ ರೀತಿ ಎಚ್‍ಐವಿ ವೈರಸ್‍ಗಳ ಆತಿಥೇಯ ಜೀವಿ ಪ್ರೈಮೇಟ್ ಗಣಕ್ಕೆ ಸೇರಿದ ಚಿಂಪಾಂಜಿಗಳು. ಮಧ್ಯ ಆಫ್ರಿಕಾದ ಅರಣ್ಯಗಳ ಸ್ವರೂಪವು ಅಭಿವೃದ್ಧಿಯ ನೆಪದಲ್ಲಿ ಬದಲಾದ್ದರಿಂದ ಮತ್ತು ವ್ಯಾಪಕ ಕಳ್ಳಬೇಟೆಯ ಕಾರಣದಿಂದ ಚಿಂಪಾಂಜಿ– ಮಾನವರ ಸಂಪರ್ಕ ಹೆಚ್ಚಿ ಎಚ್‍ಐವಿ ವೈರಸ್‍ಗಳು ಮಾನವ ದೇಹ ಪ್ರವೇಶಿಸಿ ಏಡ್ಸ್ ಸಾಂಕ್ರಾಮಿಕಕ್ಕೆ ಕಾರಣವಾಗಿ, ಇದುವರೆವಿಗೂ ಪ್ರಪಂಚದಲ್ಲಿ ಮೂರೂವರೆ ಕೋಟಿ ಜನರ ಸಾವಿಗೆ ಕಾರಣವಾಗಿವೆ. ವಿಶ್ವ ಪ್ರಕೃತಿ ನಿಧಿಯ ವರದಿಯಲ್ಲಿ, 1957ರಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾರಂಭವಾದ ಕ್ಯಾಸನೂರು ಅರಣ್ಯ ಕಾಯಿಲೆಯ ಪ್ರಸ್ತಾಪವೂ ಇದೆ.

ವಿಶ್ವ ಆರೋಗ್ಯ ಸಂಸ್ಥೆಯ ಮೂಲದಂತೆ ಜಗತ್ತಿನಲ್ಲಿ ವರ್ಷವೊಂದಕ್ಕೆ ಸರಾಸರಿ ಮೂರರಿಂದ ನಾಲ್ಕು ಹೊಸ ರೋಗಗಳು ಕಾಣಿಸಿಕೊಂಡು ಅವುಗಳಲ್ಲಿ ಕೆಲವೊಂದು ಸಾಂಕ್ರಾಮಿಕದ ರೂಪ ಪಡೆಯುತ್ತವೆ. ಈ ರೋಗಗಳಿಗೆ ಕಾರಣವಾಗುವ ರೋಗಜನಕ ಸೂಕ್ಷ್ಮಜೀವಿಗಳು ಎಲ್ಲಿಂದ, ಹೇಗೆ ಬರುತ್ತವೆ ಎಂಬುದು ವಿಜ್ಞಾನಿಗಳಿಗೆ ಮತ್ತೆ ಮತ್ತೆ ಎದುರಾಗುವ ಪ್ರಶ್ನೆ. ವಿಶಾಲವಾದ ಅರಣ್ಯಗಳನ್ನು ಕಡಿದಾಗ, ಛಿದ್ರಗೊಂಡು ಅಳಿದುಳಿದ ಅರಣ್ಯದ ಭಾಗಗಳು ಸಣ್ಣ ಸಣ್ಣ ದ್ವೀಪಗಳಂತೆ ವರ್ತಿಸುತ್ತವೆ. ಈ ದ್ವೀಪಗಳಲ್ಲಿ ಒತ್ತೊತ್ತಾಗಿ ಸೇರುವ ಸೂಕ್ಷ್ಮಜೀವಿಗಳು ಮತ್ತು ಅವುಗಳ ಆತಿಥೇಯ ಪ್ರಾಣಿಗಳು ತ್ವರಿತಗತಿಯಲ್ಲಿ ವೈವಿಧ್ಯೀಕರಣಕ್ಕೆಒಳಗಾಗುತ್ತವೆ. ಈ ಪ್ರಕ್ರಿಯೆಯಲ್ಲಿ ತೀವ್ರ ಸ್ವರೂಪದ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುವ ವೈರಸ್‍ಗಳು ರೂಪುಗೊಳ್ಳುವುದುಂಟು.

ಅನೇಕ ವನ್ಯಜೀವಿಗಳು ಅಪಾಯಕಾರಿ ವೈರಸ್‍ಗಳಿಗೆ ಆತಿಥೇಯ ಜೀವಿಗಳಾಗಿರುವುದು ಸಾಮಾನ್ಯ. ಇವನ್ನು ಬೇಟೆಯಾಡಿ ಸೇವಿಸಿದಾಗ, ಅಸಾಮಾನ್ಯ ಔಷಧೀಯ ಗುಣಗಳಿವೆ ಎಂಬ ಭ್ರಮೆಯಲ್ಲಿ ಕಳ್ಳಸಾಗಾಟ ಮಾಡಿದಾಗ, ಜೀವಂತ ಜೀವಿಗಳ ಮಾರುಕಟ್ಟೆಯಲ್ಲಿ (ವೆಟ್ ಮಾರ್ಕೆಟ್) ವ್ಯಾಪಾರ ಮಾಡಿದಾಗ ವೈರಸ್‍ಗಳು ಮಾನವ ದೇಹವನ್ನು ಸೇರುವ ಸಾಧ್ಯತೆಗಳಿವೆ. ಕೋವಿಡ್-19 ಸಾಂಕ್ರಾಮಿಕಕ್ಕೆ ಕಾರಣವಾಗಿರುವ ಕೊರೊನಾ ವೈರಸ್, ಚೀನಾದ ವುಹಾನ್ ಪ್ರಾಂತ್ಯದ ವನ್ಯಜೀವಿಗಳ ಮಾರುಕಟ್ಟೆಯಿಂದಲೇ ಬಂದಿರುವ ಅನುಮಾನವಿದೆ. ಇಂತಹ ಮಾರುಕಟ್ಟೆಗಳು ಪ್ರಪಂಚದ ಅನೇಕ ದೇಶಗಳಲ್ಲಿವೆ. ನಮ್ಮ ದೇಶದಲ್ಲಿಯೇ ಅರುಣಾಚಲ ಪ್ರದೇಶದ ಅಲಾಂಗ್ ಮಾರುಕಟ್ಟೆ, ಅಸ್ಸಾಮಿನ ಬೋಡೊ ಪ್ರದೇಶದ ಕೊಕ್ರಜಹಾರ್ ಮಾರುಕಟ್ಟೆ, ಕೊಹಿಮಾದ ನಾಗಾ ಬಜಾರ್‌ನಲ್ಲಿ ಹಕ್ಕಿಗಳು, ಮರಿಹಂದಿಗಳು, ಹಾವುಗಳು, ಹಾವುಮೀನುಗಳು, ಮೊಸಳೆಯ ಮರಿಗಳು, ಇರುವೆ ಭಕ್ಷಕಗಳು (ಪ್ಯಾಂಗೋಲಿನ್), ಕೋತಿಗಳು, ಬಾವಲಿಗಳು, ಕಪ್ಪೆಗಳು, ಕ್ರಿಕೆಟ್, ಕಣಜ, ಕಂಬಳಿಹುಳು, ಬಸವನಹುಳು ಮುಂತಾದ ಜೀವಿಗಳನ್ನು ಅಲ್ಲಿಯೇ ವಧಿಸಿ, ಮಾಂಸವನ್ನು ಮಾರಾಟ ಮಾಡುವುದು ಬಹು ಸಾಮಾನ್ಯ. ಅನೇಕ ಸಂರಕ್ಷಿತ ವನ್ಯಜೀವಿಗಳೂ ಇಲ್ಲಿನ ಮಾರುಕಟ್ಟೆಗಳಲ್ಲಿ ದೊರೆಯುವುದು ದೊಡ್ಡ ವಿಪರ್ಯಾಸ.

ವಿವಿಧ ಪ್ರಭೇದಗಳಿಗೆ ಸೇರಿದ, ವಿವಿಧ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವ ವೈರಸ್‍ಗಳಿಗೆ ಆಶ್ರಯ ನೀಡಿರುವ ವನ್ಯಜೀವಿಗಳನ್ನು ಒಟ್ಟೊಟ್ಟಿಗೆ, ಇಕ್ಕಟ್ಟಾದ ಬೋನುಗಳಲ್ಲಿ ತುಂಬಿ, ಸಾಗಿಸಿ, ಕೂಡಿಟ್ಟಾಗ ಪರಚುವುದು, ಕಚ್ಚುವುದು, ಕೆಮ್ಮುವುದು, ಮಲಮೂತ್ರ ವಿಸರ್ಜನೆ ಮುಂತಾದವು ಬಹು ಸಾಮಾನ್ಯ. ಇಂತಹ ಅಸಹನೀಯ ಪರಿಸ್ಥಿತಿಯು ಜೀನ್‍ಗಳ ಮರುಸಂಯೋಗ (ಜೆನೆಟಿಕ್ ರೀಕಾಂಬಿನೇಷನ್) ಪ್ರಕ್ರಿಯೆಗೆ ಮತ್ತು ಆ ಮೂಲಕ ಹೊಸ ರೋಗಕಾರಕ ವೈರಸ್‍ಗಳ ಸೃಷ್ಟಿಗೆ ಮುಕ್ತ ಆಹ್ವಾನ. ಇಂತಹ ಪರಿಸರದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಬಹು ಸುಲಭವಾಗಿ ಸಾಂಕ್ರಾಮಿಕ ರೋಗಗಳು ತಗಲುತ್ತವೆ. ನಮ್ಮ ಪ್ರಪಂಚದ ಮುಂದಿನ ಸಾಂಕ್ರಾಮಿಕ ರೋಗವು ವ್ಯಾಪಕವಾದ ಕಳ್ಳಬೇಟೆಯಿಂದ ಮತ್ತು ಜೀವಂತ ಜೀವಿಗಳ ಮಾರುಕಟ್ಟೆಯಿಂದಲೇ ಬರಲಿದೆಯೆಂಬ ಗಂಭೀರ ಎಚ್ಚರಿಕೆಯನ್ನು ವಿಶ್ವ ಪ್ರಕೃತಿ ನಿಧಿಯ ವರದಿ ನೀಡಿದೆ. ಈ ಅಪಾಯಕಾರಿ ಸಾಧ್ಯತೆಯನ್ನು ಪ್ರತ್ಯೇಕವಾದ ಬೋನುಗಳು, ಪ್ರಾಣಿಗಳೊಡನೆ ಕೆಲಸ ಮಾಡುವಾಗ ವೈಯಕ್ತಿಕ ಸುರಕ್ಷತೆಯ ಉಡುಪು, ಕೈಗವಸು, ಅತ್ಯಂತ ಶುಚಿಯಾದ ಕಸಾಯಿಖಾನೆ, ವಿವಿಧ ಜೀವಿಗಳ ಮಾಂಸವನ್ನು ಪ್ರತ್ಯೇಕಿಸಿಡುವ ವ್ಯವಸ್ಥೆ, ಕಟ್ಟುನಿಟ್ಟಾದ ನಿಗಾವಣೆಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ವಿವರವಾದ ಮಾರ್ಗದರ್ಶಿ ಸೂತ್ರಗಳನ್ನು ನೀಡಿದ್ದರೂ ಅವು ಪಾಲನೆಯಾಗುತ್ತಿಲ್ಲ.

‘ಒನ್ ಹೆಲ್ತ್’ ಎಂಬುದು ಜಾಗತಿಕ ಮಟ್ಟದಲ್ಲಿ ಕಳೆದೊಂದು ದಶಕದಲ್ಲಿ ಮತ್ತೆ ಪ್ರಾಮುಖ್ಯವನ್ನು ಪಡೆಯುತ್ತಿರುವ ಪರಿಕಲ್ಪನೆ. ಪರಿಸರದ ಆರೋಗ್ಯ ಮತ್ತು ಪ್ರಾಣಿಗಳ ಆರೋಗ್ಯಕ್ಕೆ ಗಮನಕೊಡದೆ ಮಾನವನ ಆರೋಗ್ಯವನ್ನು ಸಂರಕ್ಷಿಸುವುದು ಸಾಧ್ಯವೇ ಇಲ್ಲ ಎನ್ನುವುದು ಇದರ ಸಾರಾಂಶ. ವಿಶ್ವಸಂಸ್ಥೆಯ ನಾಲ್ಕು ಅಂಗ ಸಂಸ್ಥೆಗಳು ಜೊತೆಗೂಡಿ ಬೆಳೆಸಲು ಪ್ರಯತ್ನಿಸುತ್ತಿರುವ ಆರೋಗ್ಯದ ಈ ಸಮಗ್ರ ಪರಿಕಲ್ಪನೆಯನ್ನು ಪರಿಚಯಿಸುವ ಈ ವರದಿಯು ಹೆಜ್ಜೆ ಹೆಜ್ಜೆಗೂ ಸಾಮಾಜಿಕವಾಗಿ, ಆರ್ಥಿಕವಾಗಿ, ಜೀವಹಾನಿಯ ದೃಷ್ಟಿಯಿಂದ ಹಿಂದೆಂದೂ ಕಂಡಿರದಂತಹ ಸಾಂಕ್ರಾಮಿಕ ರೋಗಗಳಿಗೆ ನಮ್ಮ ದೂರದೃಷ್ಟಿರಹಿತ ಕೆಲಸಗಳೇ ನೇರ ಕಾರಣವೆಂದು ಮನವರಿಕೆ ಮಾಡಿಕೊಡುತ್ತದೆ. ಕೋವಿಡ್- 19ರಿಂದ ಪಾಠ ಕಲಿತು, ಪ್ರಕೃತಿಯೊಡನೆ ನಮ್ಮ ಸಂಬಂಧದ ಕೊಂಡಿಗಳನ್ನು ಬಲಪಡಿಸದಿದ್ದಲ್ಲಿ, ಅದಕ್ಕಿಂತ ತೀವ್ರವಾದ ಹೊಸ ವೈರಸ್‍ಗಳ ದಾಳಿಗೆ ಜಗತ್ತು ಈಡಾಗಲಿದೆಯೆಂಬ ಎಚ್ಚರಿಕೆಯನ್ನೂ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT