ಸೋಮವಾರ, ಮಾರ್ಚ್ 30, 2020
19 °C
ಜೆ.ಪಿ. ಆಂದೋಲನದ ವೇಳೆ ಜನ ಬೀದಿಗೆ ಇಳಿದಿದ್ದಂಥ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ

ಬಿಕ್ಕಟ್ಟಿನಿಂದ ಪಾರಾಗಲು ನಾನಾ ವೇಷ

ಫ್ರೊ.ಬಿ.ಕೆ.ಚಂದ್ರಶೇಖರ್ Updated:

ಅಕ್ಷರ ಗಾತ್ರ : | |

prajavani

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ದೇಶದಲ್ಲಿ ನಡೆಯುತ್ತಿರುವ ಹೋರಾಟಗಳಲ್ಲಿ ಒಂದು ವಿಶೇಷವಿದೆ. 2019ರ ಡಿಸೆಂಬರ್‌ನಲ್ಲಿ ಆರಂಭವಾದ ಪ್ರತಿಭಟನೆಗಳು ಕೆಲವೇ ದಿನಗಳಲ್ಲಿ ದೇಶದ ಉದ್ದಗಲಕ್ಕೂ ವ್ಯಾಪಿಸಿವೆ. ಇದರ ವಿಶೇಷ ಏನೆಂದರೆ, ರಾಜಕೀಯ ಪಕ್ಷಗಳು ಹೋರಾಟಕ್ಕೆ ಇಳಿಯುವ ಮೊದಲೇ ವಿದ್ಯಾರ್ಥಿಗಳು, ಶಿಕ್ಷಕರು, ಸಾಮಾಜಿಕ ಕಾರ್ಯಕರ್ತರು ಮತ್ತು ಎಲ್ಲ ಜಾತಿ, ಮತಗಳ ಅಸಂಖ್ಯಾತ ಮಹಿಳೆಯರು ಪ್ರತಿಭಟನೆಗೆ ಮುಂದಾಗಿದ್ದು, ದಶಕಗಳ ನಂತರ ಇಂತಹದ್ದೊಂದು ವಿದ್ಯಮಾನ ನಡೆದಿದೆ. ಇದಲ್ಲದೆ ಬ್ರಿಟನ್‌, ಅಮೆರಿಕದಂತಹ ದೇಶಗಳಲ್ಲಿಯೂ ಭಾರತೀಯರು ಬೀದಿಗಿಳಿದರು.

ಈ ಪ್ರತಿಭಟನಕಾರರು ರಾಜಕೀಯ ಪಕ್ಷಗಳು ಒತ್ತಾಯಿಸುವಂತೆ ಪ್ರಧಾನಿ ಅಥವಾ ಗೃಹ ಸಚಿವರ ರಾಜೀನಾಮೆ ಕೇಳಲಿಲ್ಲ. ಅವರ ಬೇಡಿಕೆ ಒಂದೇ. ಸಿಎಎ ವಾಪಸು ಪಡೆಯಿರಿ, ಎನ್‌ಆರ್‌ಸಿ ಬೇಡ. ಇದರಿಂದ ಕೇಂದ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕಿತು. ತಾನೇ ಸೃಷ್ಟಿಸಿಕೊಂಡ ಬಿಕ್ಕಟ್ಟಿನಿಂದ ಪಾರಾಗಲು ದಾರಿ ಹುಡುಕತೊಡಗಿತು.

ಸರ್ಕಾರವೊಂದು ತಾನೇ ಸೃಷ್ಟಿಸಿಕೊಂಡ ಬಿಕ್ಕಟ್ಟಿನಿಂದ ಪಾರಾಗಲು ಕಾರಣ ಹುಡುಕುವುದು ಹೊಸತೇನೂ ಅಲ್ಲ. 1974ರಲ್ಲಿಯೂ ಹೀಗೆಯೇ ಆಗಿತ್ತು.  ಗುಜರಾತ್ ರಾಜ್ಯದ ವಿದ್ಯಾರ್ಥಿಗಳು, ಕಾಂಗ್ರೆಸ್ ನೇತೃತ್ವದ ಅಲ್ಲಿನ ಸರ್ಕಾರದ ವಿರುದ್ಧ ಆರಂಭಿಸಿದ ‘ನವನಿರ್ಮಾಣ’ ಚಳವಳಿಯು ಪಕ್ಕದ ಬಿಹಾರಕ್ಕೂ ಹಬ್ಬಿತು. ದುರಾಡಳಿತ ಮತ್ತು ಗಗನಕ್ಕೇರಿದ್ದ ಅಗತ್ಯ ವಸ್ತುಗಳ ಬೆಲೆ ವಿರುದ್ಧ ಹಾಗೂ ತುರ್ತು ಭೂಸುಧಾರಣೆಗಾಗಿ ಆಗ್ರಹಿಸಿ ರೈತರು ಆರಂಭಿಸಿದ್ದ ಆಂದೋಲನವು ರಾಜ್ಯವ್ಯಾಪಿ ವಿಸ್ತರಿಸಿತ್ತು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇತರ ಕೆಲವು ಗುಂಪುಗಳೊಡನೆ ‘ಛಾತ್ರ ಸಂಘರ್ಷ ಸಮಿತಿ’ಯನ್ನು ರಚಿಸಿ ಆಗಲೇ ಹೋರಾಟಕ್ಕೆ ಮುಂದಾಗಿತ್ತು. ಈ ಸಮಿತಿಯು 1974ರ ಮಾರ್ಚ್‌ನಲ್ಲಿ ರಾಜ್ಯ ವಿಧಾನಮಂಡಲದತ್ತ ದಂಡೆತ್ತಿ ಹೊರಟಿತ್ತು. ಅದನ್ನು ತಡೆಯಲು ಪ್ರಯತ್ನಿಸಿದ ಪೊಲೀಸರೊಡನೆ ಸಂಘರ್ಷಕ್ಕಿಳಿದ ವಿದ್ಯಾರ್ಥಿಗಳು, ಸರ್ಕಾರಿ ಗೋದಾಮುಗಳೂ ಸೇರಿದಂತೆ ಇತರ ಕಟ್ಟಡಗಳು, ವೃತ್ತಪತ್ರಿಕೆ ಕಚೇರಿಗಳಿಗೆ ಬೆಂಕಿ ಇಟ್ಟರು. ಮೂವರು ವಿದ್ಯಾರ್ಥಿಗಳು ಪ್ರಾಣ ತೆತ್ತ ಸುದ್ದಿ ರಾಜ್ಯದಲ್ಲೆಲ್ಲಾ ಪ್ರತಿಭಟನೆಗೆ ಕಾರಣವಾಗಿತ್ತು. ಈ ಹಂತದಲ್ಲಿ ಎ.ಬಿ.ವಿ.ಪಿ. ಮತ್ತಿತರ ಗುಂಪುಗಳು ಜಯಪ್ರಕಾಶ್ ನಾರಾಯಣ್‌ ಅವರು ಚಳವಳಿಯ ನೇತೃತ್ವ ವಹಿಸಲು ಒತ್ತಾಯಪೂರ್ವಕ ಮನವಿ ಮಾಡಿದವು. ಆಗ ಜೆ.ಪಿ. ಅವರಿಗೆ 71 ವರ್ಷ. ದಶಕಗಳಿಂದ ಅವರು ಹಲವಾರು ಶಾಂತಿಯುತ ಪ್ರತಿಭಟನೆಗಳ ನೇತೃತ್ವ ವಹಿಸಿದ್ದರು. ನಕ್ಸಲರ ಉದ್ದೇಶಗಳನ್ನು ಸಹಾನುಭೂತಿಯಿಂದ ಅರಿಯಲು ಪ್ರಯತ್ನಿಸಿದ್ದರು. ಅಧಿಕಾರ ವ್ಯಾಮೋಹದಿಂದ ದೂರವಿದ್ದು, ನೈತಿಕತೆಯ ಪ್ರತೀಕವಾಗಿದ್ದರು. ಕಟ್ಟುನಿಟ್ಟಾದ ಶಾಂತಿಪಾಲನೆ ಮತ್ತು ಹೋರಾಟವನ್ನು ಬಿಹಾರಕ್ಕೆ ಸೀಮಿತಗೊಳಿಸುವ ಷರತ್ತುಗಳೊಡನೆ ಆಂದೋಲನದ ನೇತೃತ್ವ ವಹಿಸಿಕೊಂಡರು.

ವಿದ್ಯಾರ್ಥಿಗಳ ಚಳವಳಿ ‘ಜೆ.ಪಿ. ಆಂದೋಲನ’ ವಾಯಿತು. ‘ತರಗತಿಗಳನ್ನು ಬಹಿಷ್ಕರಿಸಿ, ವಿದ್ಯಾರ್ಥಿ ಜೀವನ
ದಿಂದ ಒಂದು ವರ್ಷ ಹೊರಬಂದು ಸಾಮಾನ್ಯ ಜನರ ವಿವೇಚನಾಶಕ್ತಿಯನ್ನು ಹೆಚ್ಚಿಸಿ’ ಎಂದು  ಅಂದೋಲನದ ಎಲ್ಲಾ ನಾಯಕರ ಧ್ವನಿಯಾಗಿ ಕರೆ ಕೊಟ್ಟರು. ನಂತರ ವಿದ್ಯಾರ್ಥಿಗಳು- ಪೊಲೀಸರ ಘರ್ಷಣೆಯಿಂದಾದ ಹಿಂಸಾಚಾರಕ್ಕೆ ಬೇಸತ್ತು ‘ಸಂಪೂರ್ಣ ಕ್ರಾಂತಿ’ಯ ಘೋಷಣೆ ಮಾಡಿದರು. ಸೈನ್ಯ ಮತ್ತು ಪೊಲೀಸರಿಗೆ ‘ನಿಮಗೆ ನ್ಯಾಯವಲ್ಲವೆಂದು ಕಾಣುವ ಕೇಂದ್ರ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ’ ಎಂದರು. ಆಂದೋಲನ ತೀವ್ರವಾದಾಗ 1975ರ ಜೂನ್ 25ರಂದು ಕೇಂದ್ರ ಸರ್ಕಾರವು ಆಂತರಿಕ ತುರ್ತು ಪರಿಸ್ಥಿತಿ ಘೋಷಿಸಿತು.

ಸಂವಿಧಾನಾತ್ಮಕವಾಗಿ ಚುನಾಯಿತವಾಗಿದ್ದ ಸರ್ಕಾರದ ವಿರುದ್ಧವೇ ಆಗ ಜನರು ಬೀದಿಗೆ ಇಳಿದಿದ್ದರು. ಈಗಲೂ ದೇಶದಲ್ಲಿ ಅಂತಹುದೇ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಜನರಿಂದಲೇ ಚುನಾಯಿತವಾದ ಸರ್ಕಾರ. ಅದರ ವಿರುದ್ಧವೇ ಈಗ ಜನರು ಸಿಡಿದೆದ್ದಿದ್ದಾರೆ. 1975ರಲ್ಲಿ ಆಗಿನ ಕೇಂದ್ರ ಸರ್ಕಾರದ ಮುಖಂಡರು ಪ್ರತಿಭಟನ ಕಾರರ ವಿರುದ್ಧ ಹೇಳಿದ್ದ ಮಾತುಗಳನ್ನು ಕೇಳಿಸಿಕೊಳ್ಳಿ.

‘ಇಂದಿರಾ ಗಾಂಧಿ ಜೀವ ತೆಗೆಯಲು ವಿರೋಧ ಪಕ್ಷಗಳು ನಿರ್ಧರಿಸಿವೆ’, ‘ಭಾರತದ ಸಾಮಾನ್ಯ ವ್ಯಕ್ತಿಗಳ ಅನುಕೂಲಕ್ಕಾಗಿ ಕೆಲವು ಪ್ರಗತಿಪರ ಕಾರ್ಯಕ್ರಮಗಳನ್ನು ಜಾರಿಗೆ ತಂದ ದಿನದಿಂದಲೇ ಆಳವಾಗಿ ಬೇರೂರಿದ್ದ ಸಂಚಿನ ವಿರುದ್ಧ ತುರ್ತು ಪರಿಸ್ಥಿತಿ ಆದೇಶ ಅಗತ್ಯವಾಗಿತ್ತು’. ‘ಜೆ.ಪಿ. ಅಂದೋಲನವೇ ಸಂವಿಧಾನಬಾಹಿರ’. ‘ಜನರೊಡನೆ ಮನದಾಳದ ಮಾತನಾಡಲು ಬಯಸುತ್ತೇನೆ’ (ಪ್ರಧಾನಿ ಮೋದಿಯವರ ಇಂದಿನ ‘ಮನ್ ಕಿ ಬಾತ್’), ‘ತುರ್ತು ಪರಿಸ್ಥಿತಿ ವಿರುದ್ಧ ಪಾಶ್ಚಿಮಾತ್ಯ ದೇಶಗಳ ಮಾಧ್ಯಮ ವರದಿಗಳು ಭಾರತವನ್ನು ಚುಚ್ಚುವ ಗುರಿ ಹೊಂದಿವೆ’– ಇಂಥ ಹೇಳಿಕೆಗಳು ಈಗಲೂ ಕೇಳಿದಂತೆ ಇವೆಯಲ್ಲವೇ?
ಹೌದು, ಆಗ ಇಂದಿರಾ ಗಾಂಧಿ ಮತ್ತು ಅವರ ಬೆಂಬಲಿಗರು ಹೇಳುತ್ತಿದ್ದ ಮಾತುಗಳನ್ನೇ ಈಗ ನರೇಂದ್ರ ಮೋದಿ ಮತ್ತು ಅವರ ಬೆಂಬಲಿಗರು ಹೇಳುತ್ತಿದ್ದಾರೆ.

ಯಾವುದೇ ಪಕ್ಷದ ನೇತೃತ್ವದ ಸರ್ಕಾರ ತನ್ನ ಕಾರ್ಯಸೂಚಿ ಪ್ರಕಾರ ತೆಗೆದುಕೊಂಡ ನಿರ್ಧಾರಗಳು ಸಂವಿಧಾನದ ಅಥವಾ ಸಾಮಾಜಿಕ ಸೌಹಾರ್ದದ ದೃಷ್ಟಿಕೋನದಿಂದ ಆಕ್ಷೇಪಾರ್ಹ ಆಗಿರಬಹುದು. ಅದು ಸ್ವಪ್ರತಿಷ್ಠೆಯ ಪ್ರಶ್ನೆಯಾಗದಂತೆ ನಿಯಂತ್ರಿಸುವುದು ಸರ್ಕಾರದ ಹೊಣೆಯಲ್ಲವೇ? ‘ಸಂಸತ್ತಿನಲ್ಲಿ ಬಹುಮತವಿದೆ. ಸಿಎಎ ಸಂಸತ್ತಿನ ಅನುಮೋದನೆ ಪಡೆದಿದೆ. ಈಗ ಅದನ್ನು ವಿರೋಧಿಸುವುದು ಸಂವಿಧಾನಕ್ಕೆ ಮಾಡುವ ಅಪಚಾರ’ ಎಂದು ಹೇಳುವುದು ಎಷ್ಟು ಸರಿ? ಸರ್ಕಾರ ತನ್ನ ತೀರ್ಮಾನವನ್ನು
ಸಮರ್ಥಿಸಿಕೊಳ್ಳಬಹುದು. ಅದು ಸರ್ಕಾರದ ಹಕ್ಕು ಹೌದು. ಆದರೆ ಸಂಸತ್ತಿನಲ್ಲಿ ಅನುಮೋದಿಸಲಾದ ಕಾಯ್ದೆಯಲ್ಲಿ ನ್ಯೂನತೆ, ಅನ್ಯಾಯ, ಪಕ್ಷಪಾತದ ಅಂಶಗಳಿದ್ದರೆ ಅವುಗಳನ್ನು ಎತ್ತಿ ತೋರಿಸಿ ಪರಿಹಾರಕ್ಕೆ ಒತ್ತಾಯಿಸುವುದೂ ವಿರೋಧ ಪಕ್ಷಗಳ ಹಕ್ಕು. ಇದು ಸಂಸದೀಯ ಪ್ರಜಾಪ್ರಭುತ್ವದ ಅಂತಃಸತ್ವ. ಚುನಾವಣೆಯಲ್ಲಿ ಜನರು ಮತ ಕೊಟ್ಟ ಮಾತ್ರಕ್ಕೆ, ನಂತರದ ಗಂಭೀರ ಬೆಳವಣಿಗೆಗಳಿಗೆ, ಅನ್ಯಾಯಕ್ಕೆ ಮೂಕರಾಗಿರಬೇಕು ಎಂದು ಯಾವುದೇ ಸರ್ಕಾರ ಬಯಸಬಾರದು. ಸಂವಿಧಾನವು ಕೇವಲ ಅಕ್ಷರಗಳ ಜೋಡಣೆಯಲ್ಲ; ಪ್ರತಿ ನಿಮಿಷವೂ ಪ್ರಜೆಗಳು ಆಡಳಿತದ ಮಾಪನ ಮಾಡಲು ಉಪಯೋಗಿಸುವ ಅಳತೆಗೋಲು. ಸಂವಿಧಾನವು ಭಾವ, ಆತ್ಮ ಮತ್ತು ಚೈತನ್ಯವನ್ನು ಮೈಗೂಡಿಸಿಕೊಂಡಿರುವ ಆಧುನಿಕ ‘ಧರ್ಮಶಾಸ್ತ್ರ’ ಹಾಗೂ ‘ಸಾಂವಿಧಾನಿಕ ನೈತಿಕತೆ’ಯನ್ನು ಪ್ರತಿಪಾದಿಸುವ ದಾಖಲೆ. 1948ರ ನವೆಂಬರ್ 4ರಂದು, ಸಂವಿಧಾನದ ಕರಡು ಪ್ರತಿಯನ್ನು ಮಂಡಿಸುತ್ತಾ ಡಾ. ಅಂಬೇಡ್ಕರ್ ಅವರು ‘ಸಂವಿಧಾನದ ಸ್ವರೂಪವನ್ನು ಬದಲಾಯಿಸದೆಯೇ ಕೇವಲ ಆಡಳಿತಾತ್ಮಕ ಬದಲಾವಣೆಗಳ ಮೂಲಕ, ಅಸಮಂಜಸ ವ್ಯಾಖ್ಯಾನದ ಮೂಲಕ ಸಂವಿಧಾನವನ್ನು ತಿರುಚಲು, ಅದರ ಆತ್ಮಕ್ಕೇ ಧಕ್ಕೆ ತರಲು ಸಾಧ್ಯ’ ಎಂದು ಹೇಳಿದ್ದರು.

ಅಂಬೇಡ್ಕರ್ ಅವರು ಎಚ್ಚರಿಸಿದಂತೆಯೇ ಆಗುತ್ತಿದೆ ಎಂಬ ಕಾರಣಕ್ಕಾಗಿಯೇ, ಯಾವ ರಾಜಕೀಯ ಪಕ್ಷದ ಸ್ಫೂರ್ತಿಯೂ ಇಲ್ಲದೇ ಕಳೆದ ಕೆಲವು ವರ್ಷಗಳ ಭೀತಿಯ ವಾತಾವರಣದಿಂದ ಮಹಿಳೆಯರು, ವಿದ್ಯಾರ್ಥಿ ಸಮೂಹ ಈಗ ಹೊರಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಕರ್ಷಕ ವ್ಯಕ್ತಿತ್ವ, ಅಮಿತ್ ಶಾ ಅವರ ಕಠೋರ ಆದೇಶ, ಎಚ್ಚರಿಕೆಗಳಿಗೆ ಯುವಜನರು ಬಗ್ಗುತ್ತಿಲ್ಲ. ಕಳೆದ ಎರಡು ಲೋಕಸಭೆ ಚುನಾವಣೆಗಳಲ್ಲಿ ಅವರನ್ನು ಬೆಂಬಲಿಸಿದ್ದ ಯುವಜನಾಂಗವೇ ಇದೀಗ ಅವರಿಗೆ ಸವಾಲಾಗಿ ನಿಂತಿರುವಂತಿದೆ!

ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ‘ಸಹಕಾರಿ ಒಕ್ಕೂಟ’ ಜಾರಿಗೆ ತರುವ ಆಶ್ವಾಸನೆ ನೀಡಿತ್ತು. ಸಿಎಎ ಅಂತಹ ಸೂಕ್ಷ್ಮ ಕಾರ್ಯಸೂಚಿ ಬಗ್ಗೆ ರಾಜ್ಯ ಸರ್ಕಾರಗಳೊಡನೆ ಸಮಾಲೋಚಿಸಿದ ನಂತರ ಮಸೂದೆ ಮಂಡಿಸ
ಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ. 

ಲೇಖಕ: ಕಾಂಗ್ರೆಸ್‌ನ ಹಿರಿಯ ಮುಖಂಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು