ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಮೂರ್ತಿ ಹನೂರು ಬರಹ | ‘ಬೇರು ಸತ್ತೀ ಮರವನೆತ್ತಿ ನಿಲ್ಲಿಸು ಮಗೂ...’ 

ಸಂಸ್ಥೆಗೆ ಇನ್ನೂ ಸರಿಯಾಗಿ ತಳವೂರಲೇ ಸಾಧ್ಯವಾಗದಿದ್ದರೆ ಯೋಜನೆಗಳ ಅನುಷ್ಠಾನ ಯಾವಾಗ?
Last Updated 30 ಆಗಸ್ಟ್ 2020, 20:00 IST
ಅಕ್ಷರ ಗಾತ್ರ
ADVERTISEMENT
""

2008ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತ ಸಂದರ್ಭದ ಸಂತೋಷ ಹಾಗೂ ಉತ್ಸಾಹದಲ್ಲಿ, ಕರ್ನಾಟಕದ ಮತ್ತು ಹೊರಗಿನ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಲಾ ₹ 2 ಕೋಟಿ ಅನುದಾನ ನೀಡಿದರು. ಕನ್ನಡ ವಿಭಾಗಗಳು ಆ ಅನುದಾನದಲ್ಲಿ ತಮತಮಗೆ ಅನುಗುಣವೆನಿಸಿದ ಯೋಜನೆಗಳನ್ನು ಹಾಕಿಕೊಂಡು, ಹಳೆಯದಾದ ಸಣ್ಣಪುಟ್ಟ ಪುನರ್‌ಮುದ್ರಣ ಗ್ರಂಥಗಳನ್ನು ಪ್ರಕಟಿಸಿದವು.

ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಅಡಿಯಲ್ಲಿ 2011ರಲ್ಲಿ ಆರಂಭಗೊಂಡ ‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ’ವು ಅಲ್ಲಿಂದಲೇ ತನ್ನ ಯೋಜನೆಗಳಲ್ಲಿ ತೊಡಗಿದರೂ ಬಲವಾಗಿ ಊರ್ಜಿತಗೊಳ್ಳಲಾಗದೆ ಹಾಗೂಹೀಗೂ ಸಾಗಿ ಬರುತ್ತಿದೆ. ಇದಕ್ಕೆ ಕಾರಣ, ಈ ಸಂಸ್ಥೆಯು ಹಿಂದೆ ಲಿಂಗದೇವರು ಹಳೆಮನೆ, ಕಿಕ್ಕೇರಿ ನಾರಾಯಣ ಅವರಂಥ ವಿದ್ವಾಂಸರು ಬಂದುಹೋದ ನಂತರದ ಅನ್ಯಭಾಷಿಕರ ಕೃಪೆಯ ಅಡಿಯಲ್ಲಿ ಬದುಕಿರುವುದೋ, ಒಂದು ಸ್ವಾಯತ್ತ ಸಂಸ್ಥೆಯಾಗಿ ದಿಟ್ಟವಾಗಿ ಹೊರಬರಲಾಗದಿರುವುದೋ, ಸಮರ್ಥ ನಿರ್ದೇಶಕರ ಕೊರತೆಯೋ ಅಥವಾ ಇದ್ದರೂ ಒಳಗೊಳಗೇ ನಾನಾ ಕಾರಣಗಳ ನಿಮಿತ್ತ ಹುಟ್ಟಿಕೊಂಡ ಗೊಂದಲಗಳೋ ಅಂತೂ ಮೈಸೂರಿನಲ್ಲಿ ಶಾಸ್ತ್ರೀಯ ಕನ್ನಡ ಸಂಸ್ಥೆಗೊಂದು ಸತ್ವಯುತ ಅಸ್ತಿತ್ವವಿದೆ ಎಂಬುದು ಯಾರಿಗೂ ಎದ್ದು ಕಾಣದಂತಾಯಿತು. ಇದರೊಂದಿಗೆ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದ ಸಂದರ್ಭದಲ್ಲಿ ರಾಜ್ಯ ಸರ್ಕಾರ ನೀಡಿದ ಅನುದಾನದಲ್ಲಿ ಗ್ರಂಥ ಪ್ರಕಟಣೆ ಮಾಡಿದ ಕನ್ನಡ ವಿಭಾಗಗಳ ವಿದ್ವಾಂಸರು, ಕನ್ನಡ ಶಾಸ್ತ್ರೀಯ ಯೋಜನೆ ಎಂದರೆ ಅಷ್ಟೇ ಎಂಬಂತೆ ಸುಮ್ಮನಾಗಿಬಿಟ್ಟರು!

ಕೃಷ್ಣಮೂರ್ತಿ ಹನೂರು

ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ಅಡಿಯಲ್ಲಿ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರ ಆರಂಭವಾದಾಗಿನಿಂದಲೇ ಈ ವಿಭಾಗದಲ್ಲಿ ನಡೆಯಬೇಕಾದ ಕನ್ನಡಪರ ಯೋಜನೆಗಳಿಗೆ ಹೊರತಾದ ಚರ್ಚೆಗಳೇ ಮುಖ್ಯವೆನಿಸಿಬಿಟ್ಟಿವೆ. ಎಲ್ಲಕ್ಕಿಂತ ಮೊದಲಾದುದೆಂದರೆ, ಈ ಸಂಸ್ಥೆ ಮೈಸೂರಿನಲ್ಲಿರಬೇಕೋ ಬೆಂಗಳೂರಿಗೆ ವರ್ಗಾವಣೆಗೊಳ್ಳಬೇಕೋ ಎಂಬುದು. ಈ ಚರ್ಚೆಯೆದ್ದಾಗ, ಮೈಸೂರಿನವರಾದ, ಆಗ ಮುಖ್ಯಮಂತ್ರಿಯೂ ಆಗಿದ್ದ ಸಿದ್ದರಾಮಯ್ಯನವರು, ಕನ್ನಡಪರ ಹೋರಾಟಗಾರರು ಹಾಗೂ ವಿದ್ವಾಂಸರ ಒತ್ತಾಯವನ್ನರಿತು, ಅದು ಮೈಸೂರಿನಲ್ಲೇ ಇರಬೇಕಾದುದೆಂದು ನಿರ್ಧಾರ ತೆಗೆದುಕೊಂಡರು. ಇದಾದ ಬಳಿಕ ಈಗ ಈ ಅಧ್ಯಯನ ಕೇಂದ್ರ ಸ್ಥಾಪನೆಯು ಗಂಗೋತ್ರಿಯಲ್ಲೋ ಅಥವಾ ಅದೇ ಗಂಗೋತ್ರಿಯ ಇನ್ನೊಂದು ಪ್ರತ್ಯೇಕ ಸ್ಥಳವೆನಿಸುವ ಚಾಮುಂಡಿ ಬೆಟ್ಟದ ತಪ್ಪಲಿನಲ್ಲೋ ಎಂಬ ಚರ್ಚೆಯೆದ್ದು, ಗಂಗೋತ್ರಿಯ ಬಳಿ ಈಗಾಗಲೇ ನೀಡಿದ್ದ ಕಟ್ಟಡ ಸಹಿತದ ನಾಲ್ಕೂವರೆ ಎಕರೆ ಜಾಗವನ್ನು ಹಿಂಪಡೆಯುವ ಪ್ರಯತ್ನವಾಗುತ್ತಿದೆ.

ತೀರಾ ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ಶಾಸ್ತ್ರೀಯ ಕನ್ನಡ ಸಂಸ್ಥೆಗೆ ಶೀಘ್ರದಲ್ಲೇ ಸ್ವತಂತ್ರ ಕಟ್ಟಡ ನಿರ್ಮಾಣದ ಭರವಸೆಯ ಮಾತುಗಳನ್ನಾಡಿದ್ದಾರೆ. ಇತ್ತ ಭಾರತೀಯ ಭಾಷಾ ಸಂಸ್ಥಾನವು ಶಾಸ್ತ್ರೀಯ ಸಂಸ್ಥೆಗೆ ಹೊಸ ನಿರ್ದೇಶಕರನ್ನು ತುರ್ತಾಗಿ ಆಯ್ಕೆ ಮಾಡಿದೆ. ಯಾಕೆಂದರೆ, ಭಾರತೀಯ ಭಾಷಾ ಸಂಸ್ಥಾನದ ಪ್ರಭಾರಿ ನಿರ್ದೇಶಕರ ಅವಧಿಯು ಮುಂದಿನ ತಿಂಗಳು ಕೊನೆಯಾಗುತ್ತಿದೆಯಂತೆ. ಇಂಥ ವೇಳೆ ಶಾಸ್ತ್ರೀಯ ಕನ್ನಡ ಸಂಸ್ಥೆಗೆ ಜಾಗ ಯಾವುದು ಎಂದು ವಾಸ್ತು ಹಿಡಿದು ಕೂತರೆ, ಈಗಾಗಲೇ ನಾನಾ ತೊಡಕುಗಳಿಂದ ತೆವಳುತ್ತಿರುವ ಈ ಸಂಸ್ಥೆಗೆ ಮುಂದೆ ತೊಡಗಿಕೊಳ್ಳಬಹುದಾದ ಯೋಜನೆಗಳೇನಾದರೂ ಹೊಳೆಯುತ್ತವೆಯೇ?

ಶಾಸ್ತ್ರೀಯ ತಮಿಳಿಗೆ ಸಂಬಂಧಿಸಿದಂತೆ ಚೆನ್ನೈನಲ್ಲಿ ಅಲ್ಲಿಯ ವಿದ್ವಾಂಸರು ಹಾಕಿಕೊಂಡಿರುವ ಹಲವು ಮಾದರಿಯ ಯೋಜನೆಗಳನ್ನು ಇಲ್ಲಿ ಜಾರಿಗೆ ತರುವುದಿರಲಿ, ಸಂಸ್ಥೆಯಿಂದ ಐದಾರು ಕೃತಿಗಳ ಹೊರತಾಗಿ ಯಾವುದೇ ಮಹತ್ವದ ಪ್ರಕಟಣಾ ಕಾರ್ಯಗಳೂ ನಡೆದಂತೆ ತೋರುತ್ತಿಲ್ಲ. ಚೆನ್ನೈನ ಶಾಸ್ತ್ರೀಯ ತಮಿಳು ಸಂಸ್ಥೆಯು 2006ರಲ್ಲಿ ಆರಂಭವಾಗಿ ವರ್ಷಕ್ಕೆ ಸುಮಾರು ನೂರು ಕೋಟಿಯಷ್ಟು ಅನುದಾನ ಪಡೆಯುತ್ತ, ಅದು ನಡೆಸುತ್ತಿರುವ ಕಾರ್ಯಯೋಜನೆಗಳನ್ನು ಗಮನಿಸಿದರೆ, ಮತ್ತೆ ಅವರ ಭಾಷಾಭಿಮಾನದ ಸಂಗತಿ ಸಾಬೀತಾಗುತ್ತದೆ. ಅದು ಮೆಚ್ಚಬೇಕಾದದ್ದೇ. ಕೇಂದ್ರ ಸರ್ಕಾರ ಕೊಟ್ಟ ಅನುದಾನದೊಂದಿಗೆ, ಹಿರಿಯ ತಮಿಳು ವಿದ್ವಾಂಸರನ್ನು ಗೌರವಿಸುವ ಸಲುವಾಗಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿಯವರು ಪುದುವಟ್ಟು ಇಟ್ಟು, ತಮ್ಮ ಹೆಸರಿನಲ್ಲಿ ಪ್ರತ್ಯೇಕವಾಗಿ ಕೊಡಮಾಡುವ ಪ್ರಶಸ್ತಿಯೂ ಸೇರಿಕೊಂಡಿದೆ. ಹಳೆಯ ತಮಿಳು ಕವಿಗಳ ಹೆಸರಿನಲ್ಲೇ ಕೊಡುವ ಇನ್ನಿತರ ಪ್ರಶಸ್ತಿ ವಿಚಾರ ಹಾಗಿರಲಿ, ತಮಿಳಿನ ಹಳೆಯ ಕಾವ್ಯ ಗ್ರಂಥಗಳನ್ನು ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಕೇಳಿಸಿ, ಹೇಳಿಸಿ, ಹಾಡಿಸಿ ಅವರ ಮನಃಸ್ಥಿತಿಯನ್ನು ಮಾತೃಭಾಷೆಯ ಕಡೆಗೆ ಒಲಿಯುವಂತೆ ಮಾಡುವ ಯೋಜನೆಗಳಿವೆ. 2006ರಲ್ಲಿ ಆರಂಭವಾದ ಸಂಸ್ಥೆ ಇಂಥ ಹಲವು ಹತ್ತು ಯೋಜನೆಗಳನ್ನು ಈಗಾಗಲೇ ನಿಯೋಜನೆಗೊಂಡಿರುವ ನೂರಾರು ಸಿಬ್ಬಂದಿಯೊಡನೆ, ಸುಸಜ್ಜಿತ ಕಟ್ಟಡಗಳೊಡನೆ ತನ್ನ ಯೋಜನೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿದ್ದರೆ, ಅದೇ ವೇಳೆ 2008ರಲ್ಲೇ ಆರಂಭಗೊಂಡ ಕನ್ನಡ ಶಾಸ್ತ್ರೀಯ ಸಂಸ್ಥೆ ಈವರೆಗೆ ಸ್ವಾಯತ್ತತೆಯನ್ನೇ ಪಡೆಯುವಂತಾಗಿಲ್ಲ. ಇದೀಗ ಅದು ಮೈಸೂರಿನಲ್ಲೇ ಎಲ್ಲಿ ತಳವೂರಬೇಕೆಂಬ ವಿಚಾರವೇ ನನೆಗುದಿಗೆ ಬಿದ್ದಿದೆ.

ಶಾಸ್ತ್ರೀಯ ತೆಲುಗು ಸಂಸ್ಥೆಯು ಸ್ವಾಯತ್ತತೆ ಪಡೆಯುವ ನಿಮಿತ್ತವಾಗಿ ಇತ್ತೀಚೆಗೆ ನೆಲ್ಲೂರು ಪ್ರದೇಶದಲ್ಲಿ ನೆಲೆಗೊಂಡಿರುವುದನ್ನು ಕನ್ನಡಿಗರು ಗಮನಿಸಬೇಕು. ಹತ್ತು ವರ್ಷಗಳ ನಂತರವಾದರೂ ಸಚಿವ ಸಿ.ಟಿ.ರವಿ ಅವರು ಶಾಸ್ತ್ರೀಯ ಕನ್ನಡ ಸಂಸ್ಥೆಯ ಸ್ವಾಯತ್ತತೆ ಸಂಬಂಧ ವಿಸ್ತೃತ ವರದಿಯನ್ನು ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ಅವರಿಗೆ ನೀಡಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರೊಡನೆ ಶೀಘ್ರವಾಗಿಯೇ ಶಾಸ್ತ್ರೀಯ ಕನ್ನಡ ಸಂಸ್ಥೆಯ ಭೌತಿಕವೆನಿಸುವ ಕಟ್ಟಡಗಳ ಮತ್ತು ಅದರ ಆಂತರಿಕ ಯೋಜನೆಗಳ ಅನುಷ್ಠಾನ ಪ್ರಯತ್ನಕ್ಕೆ ತೊಡಗುವ ಮಾತುಗಳನ್ನಾಡಿದ್ದಾರೆ.

ಈ ಸಮಯದಲ್ಲಿ ಸಿ.ಟಿ.ರವಿ ಅವರು, ನೂರು ವರ್ಷಗಳ ಐತಿಹಾಸಿಕ ಮಹತ್ವವಿರುವ, ಕುವೆಂಪು ಅವರು ಮೊದಲುಗೊಂಡು ಅನೇಕ ಮಹನೀಯರು ಕಟ್ಟಿ ಬೆಳೆಸಿದ ಮಾನಸಗಂಗೋತ್ರಿಯ ಆವರಣದಲ್ಲೇ ಶಾಸ್ತ್ರೀಯ ಕನ್ನಡ ಸಂಸ್ಥೆ ನೆಲೆಗೊಳ್ಳುವುದು ಅತ್ಯಂತ ಸೂಕ್ತ ಎಂಬ ತೀರ್ಮಾನವನ್ನು ಮುಖ್ಯಮಂತ್ರಿಯೊಡನೆ ಚರ್ಚಿಸಿ ನಿರ್ಧರಿಸಲಿ. ಒಂದೂವರೆ ಸಾವಿರ ವರ್ಷಗಳ ಸಾಂಸ್ಕೃತಿಕ ಇತಿಹಾಸವನ್ನು ಬೆಳಗಲಿರುವ ಸಂಸ್ಥೆಯು ಈಗಾಗಲೇ ಪೂರಕ ವಾತಾವರಣದಿಂದ ಕೂಡಿದ ಕಟ್ಟಡಗಳಿರುವ ಗಂಗೋತ್ರಿ ಆವರಣದಲ್ಲೇ ನೆಲೆಗೊಳ್ಳಲಿ. ಯಾಕೆಂದರೆ ಚೆನ್ನೈನಲ್ಲಿ ಶಾಸ್ತ್ರೀಯ ತಮಿಳು ಕೇಂದ್ರ ಇರುವುದು ಐತಿಹಾಸಿಕ ಮದ್ರಾಸು ವಿಶ್ವವಿದ್ಯಾಲಯದ ಸನಿಹದಲ್ಲೇ. ಮಾತ್ರವಲ್ಲದೆ, ಈಚೆಗೆ ಕೇಂದ್ರ ಸರ್ಕಾರವು ಪ್ರಕಟಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ, ಶಾಸ್ತ್ರೀಯ ಭಾಷಾ ಕೇಂದ್ರಗಳನ್ನು ವಿಶ್ವವಿದ್ಯಾಲಯಗಳೊಂದಿಗೆ ಜೋಡಿಸಿ ಮತ್ತಷ್ಟು ಪ್ರಗತಿಪಥದಲ್ಲಿ ಸಾಗಲು ಸಹಕಾರಿಯಾಗುವಂತೆ ಸೂಚಿಸಿದೆ. ಆದುದರಿಂದ ಮೈಸೂರು ವಿಶ್ವವಿದ್ಯಾಲಯವು ಪಶ್ಚಿಮ ದಿಕ್ಕಿಗಿರುವ ಮತ್ತು ಮಂಜೂರಾಗಿದ್ದ ನಾಲ್ಕೂವರೆ ಎಕರೆ ಜಾಗದೊಂದಿಗೆ ಇನ್ನಷ್ಟು ಸ್ಥಳ ಶಾಸ್ತ್ರೀಯ ಸಂಸ್ಥೆಗೆ ಅಗತ್ಯವೆನಿಸಿದರೆ, ಅದರ ಬಲಭಾಗ ಮತ್ತು ಹಿಂದಕ್ಕೇ ಖಾಲಿ ಇರುವ ಜಾಗವನ್ನು ಪಡೆಯಬಹುದು. ಅಲ್ಲಿ ಅಗತ್ಯವಿರುವ ಇನ್ನಷ್ಟು ಕಟ್ಟಡಗಳನ್ನು ನಿರ್ಮಿಸಿಕೊಳ್ಳಬಹುದು. ಇದು ಶಾಸ್ತ್ರೀಯ ಕನ್ನಡ ಕೇಂದ್ರವು ತ್ವರಿತಗತಿಯಲ್ಲಿ ಸ್ಥಾಪಿತಗೊಂಡು ಸ್ವಾಯತ್ತತೆ ಪಡೆಯಲು ಅನುಕೂಲಕರವಾಗಿದೆ.

ಕಟ್ಟಡಗಳು ಮತ್ತು ಕೇಂದ್ರ ಸರ್ಕಾರವು ಕೊಡಮಾಡುವ ನೂರಾರು ಕೋಟಿ ಅನುದಾನದಿಂದ ಹಳಗನ್ನಡ ಅಧ್ಯಯನಕ್ಕೆ ಸಂಸ್ಥೆಯೊಂದನ್ನು ತೆರೆಯಬಹುದು ಸರಿ, ಅದಕ್ಕೆ ಸಂಬಂಧಪಟ್ಟ ಹತ್ತಾರು ಯೋಜನೆಗಳನ್ನು ಹಾಕುವುದೂ ಸರಿ; ಆದರೆ ವಿಶ್ವವಿದ್ಯಾಲಯಗಳಲ್ಲೇ ಹಳಗನ್ನಡದ ಓದು, ವ್ಯಾಖ್ಯಾನ, ಅಧ್ಯಯನ, ಗ್ರಂಥ ಸಂಪಾದನಾ ಕಾರ್ಯ, ಶಾಸನ ಓದು ಇವೆಲ್ಲ ಕ್ಷೀಣಿಸುತ್ತ ಬರುತ್ತಿವೆ. ವಿಶ್ವವಿದ್ಯಾಲಯಗಳಿಂದ ತತ್ಸಂಬಂಧಿ ಓದಿನ ಅಧ್ಯಾಪಕರೂ ನಿಯೋಜನೆಗೊಳ್ಳುತ್ತಿಲ್ಲ. ವಿಭಾಗಗಳು ಖಾಲಿ ಬೀಳುತ್ತಿವೆ! ಇಂಥ ಹೊತ್ತಲ್ಲಿ ಪ್ರಾಮಾಣಿಕ ಮತ್ತು ನಿಜದ ಅರಿವಿನ ಉದ್ದೇಶಗಳಿಲ್ಲದೆ ಆರಂಭವಾಗುವ, ಆದರೆ ಏನನ್ನೂ ಕಲಿಸಲಾಗದ ಯಾವುದೇ ಸಂಸ್ಥೆಗಳು ಭವ್ಯವಾಗಿ ತಲೆಯೆತ್ತಿ ನಿಂತರೆ ‘ಬೇರು ಸತ್ತೀ ಮರವನೆತ್ತಿ ನಿಲ್ಲಿಸು ಮಗೂ...’ ಎಂಬ ಗೋಪಾಲಕೃಷ್ಣ ಅಡಿಗರ ‘ಇಂದು ನಮ್ಮೀ ನಾಡು’ ಪದ್ಯಸಾಲು ಸಾಬೀತಾಗುವಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT