ಬುಧವಾರ, ಆಗಸ್ಟ್ 10, 2022
19 °C
ಸೌರ ಫಲಕಗಳ ಮೆರವಣಿಗೆಯಿಂದ ಜನರಿಗೆ ಆನಂದ, ಖಗೋಳ ವೀಕ್ಷಕರಿಗೆ ಸಂಕಷ್ಟ

ಆಕಾಶದಲ್ಲೊಂದು ರೈಲುಗಾಡಿ

ಬಿ.ಎಸ್.ಶೈಲಜಾ Updated:

ಅಕ್ಷರ ಗಾತ್ರ : | |

Prajavani

ಗಗನಯಾನವನ್ನು ಪ್ರವಾಸೋದ್ಯಮವನ್ನಾಗಿ ಪರಿವರ್ತಿ ಸುವ ದಿಕ್ಕಿನಲ್ಲಿ ಮೊದಲ ಹೆಜ್ಜೆ ಇಟ್ಟ ಸ್ಪೇಸ್ ಎಕ್ಸ್ ಸಂಸ್ಥೆಯ ಯಶಸ್ಸಿನ ಸುದ್ದಿ ಈಚೆಗೆ ವರದಿಯಾಗಿದೆ. ಇದೇ ಸಂಸ್ಥೆ ಕಳೆದ ವರ್ಷ ಆರಂಭಿಸಿದ ಸ್ಟಾರ್ ಲಿಂಕ್ ಎಂಬ ಇನ್ನೊಂದು ಯೋಜನೆ ಸೃಷ್ಟಿಸಿದ ಆಕಾಶದ ರೈಲು ಈಗ ಸುದ್ದಿಯಾಗಿದೆ. ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದ ವಿಡಿಯೊಗಳು ‘ಹಾರಾಡುವ ತಟ್ಟೆ’ಗಳೆಂದು ಈಗ ವಾಟ್ಸ್‌ಆ್ಯಪ್‌ನಲ್ಲಿ ವ್ಯಾಪಕ ಪ್ರಚಾರ ಪಡೆಯುತ್ತಿವೆ. ಸದ್ಯದಲ್ಲೇ ಅವು ಬೆಂಗಳೂರಿನಲ್ಲಿ ರಾತ್ರಿಯ ಆಕಾಶದಲ್ಲಿಯೂ ಕಾಣಲಿವೆ.

ಸ್ಪೇಸ್ ಎಕ್ಸ್ ಸಂಸ್ಥೆಯು ಸ್ಟಾರ್ ಲಿಂಕ್ ಯೋಜನೆಯನ್ನು ಆರಂಭಿಸಿದ್ದು ಬಹಳ ಹಿಂದೆಯೇ ಆದರೂ ಅನೇಕ ಎಡರು ತೊಡರುಗಳನ್ನು ನಿವಾರಿಸಿಕೊಂಡು ಮೊದಲ ಉಪಗ್ರಹವನ್ನು ಹಾರಿಸಿದ್ದು ಒಂದು ವರ್ಷದ ಹಿಂದೆ- 2019ರ ಏಪ್ರಿಲ್‍ನಲ್ಲಿ. ‘ಮೊದಲ’ ಎಂಬ ವಿಶೇಷಣ ಏಕೆಂದರೆ, ಈ ಬೃಹತ್ ಯೋಜನೆಯ ಗುರಿ 30,000 ಉಪಗ್ರಹಗಳ ದೊಡ್ಡದೊಂದು ಕವಚವನ್ನೇ ಭೂಮಿಗೆ ಹೊದೆಸುವುದು. ಇದೇಕೆ ಬೇಕು? ಸಂಪರ್ಕ ವ್ಯವಸ್ಥೆಯ ಸುಧಾರಣೆ ಎಂಬುದು ಮೂಲ ಉದ್ದೇಶ. ಈಗ ಲಂಡನ್ ಮತ್ತು ನ್ಯೂಯಾರ್ಕ್‌ ನಡುವಿನ ಸಂಪರ್ಕದಲ್ಲಿ ಸುಮಾರು 70-75 ಮಿಲಿಸೆಕೆಂಡ್‌ಗಳಷ್ಟು ತಡವಾಗಿ ಸಂದೇಶಗಳು ರವಾನೆಯಾಗುತ್ತಿವೆ. ಇದಕ್ಕೆ ಕಾರಣ, ಈಗ ಲಭ್ಯವಿರುವ ಸಂಪರ್ಕ ಉಪಗ್ರಹಗಳ ಮಿತಿ. ಸ್ಟಾರ್ ಲಿಂಕ್ ಯೋಜನೆಯಿಂದ ಈ ತಡವಾಗುವ ಅವಧಿಯನ್ನು 30- 35 ಮಿಲಿಸೆಕೆಂಡ್‌ಗಳಿಗೆ ಇಳಿಸಬಹುದು.

ಇನ್ನೂ ಒಂದು ವಾಣಿಜ್ಯ ಉದ್ದೇಶವಿದೆ. ಇಂಟರ್‌ ನೆಟ್ ಬ್ಯಾಂಡ್‌ವಿಡ್ತ್‌ಗೆ ಭಾರಿ ಬೇಡಿಕೆ ಇರುವ ಮುಖ್ಯ ನಗರಗಳಲ್ಲಿ ಇದನ್ನು ಮಾರಾಟಕ್ಕೆ ಇಡುವುದು. ಲಂಡನ್, ನ್ಯೂಯಾರ್ಕ್ ಮುಂತಾದ ನಗರಗಳ ಮೇಲೆ ಕಣ್ಣಿರುವುದ ರಿಂದ ಮೊದಲ ಹಂತದಲ್ಲಿ ಅಮೆರಿಕ, ಯುರೋಪ್ ಮತ್ತು ಕೆನಡಾ ಮಾತ್ರ ಈ ಜಾಲಕ್ಕೆ ಸೇರುತ್ತವೆ. ಈ ಉದ್ದೇಶಕ್ಕಾಗಿ ಕೆಲವೊಂದು ಭೂಕೇಂದ್ರಗಳನ್ನೂ ಅಲ್ಲಲ್ಲಿ ಸ್ಥಾಪಿಸಲಾಗಿದೆ.

ಈ ಉಪಗ್ರಹಗಳು ಸುಮಾರು 500- 550 ಕಿ.ಮೀ. ಎತ್ತರದ ಕಕ್ಷೆಗಳಲ್ಲಿ ಭೂಮಿಯನ್ನು ಸುತ್ತುತ್ತವೆ. ಇದನ್ನು ಲೋ ಅರ್ಥ್‌ ಆರ್ಬಿಟ್ ಎನ್ನುತ್ತಾರೆ. ಇವುಗಳ ಇಂಧನದ ಬೇಡಿಕೆ ಕಡಿಮೆ ಮಾಡಲು ಬೇರೊಂದು ತಂತ್ರವನ್ನು ಅಳವಡಿಸಲಾಗಿದೆ. ಅಯಾನ್ ಪ್ರೊಪಲ್ಷನ್ ಎಂದರೆ ಝೆನಾನ್ ಅನಿಲವನ್ನು ಬಳಸಿ ಅಯಾಣುಗಳನ್ನು ಸೃಷ್ಟಿಸಿ ದಾಗ ಅವುಗಳ ನಿಷ್ಕಾಸವೇ (exhaust) ಉಪಗ್ರಹವನ್ನು ಮುನ್ನಡೆಸುತ್ತದೆ. ಈ ಕಾರ್ಯಕ್ಕಾಗಿ ಇವು ಸೌರಶಕ್ತಿಯನ್ನೇ ಹೆಚ್ಚಾಗಿ ಬಳಸಿಕೊಳ್ಳುತ್ತವೆ. ಆದ್ದರಿಂದ ಮಡಿಸಿಟ್ಟು ಕಳಿಸಿದ ಸೌರ ಫಲಕಗಳು ಮೇಲೇರಿದೊಡನೆ ಬಾವುಟದಂತೆ ಬಿಚ್ಚಿಕೊಳ್ಳುತ್ತವೆ. ಈ ವಿಸ್ತಾರವಾದ ಫಲಕಗಳು ಸೂರ್ಯನ ಬೆಳಕನ್ನು ನೆಲಕ್ಕೆ ಪ್ರತಿಫಲಿಸಿದಾಗ ನಮಗೆ ಚುಕ್ಕೆಗಳಂತೆ ಕಾಣುತ್ತವೆ.

ಒಂದೊಂದು ಕಂತಿನಲ್ಲಿ ಅರವತ್ತು ಉಪಗ್ರಹಗಳನ್ನು ಹಾರಿಸುವುದು ಹೆಚ್ಚುಗಾರಿಕೆ ಏನಲ್ಲ (ಎರಡು ವರ್ಷಗಳ ಕೆಳಗೆ ಇಸ್ರೊ 100ಕ್ಕೂ ಹೆಚ್ಚು ಉಪಗ್ರಹಗಳನ್ನು ಹಾರಿ ಸಿತ್ತು). ಈ ಎಲ್ಲ ಉಪಗ್ರಹಗಳೂ ಒಂದೇ ಕಕ್ಷೆಯಲ್ಲಿದ್ದು, ನಿಧಾನವಾಗಿ ತಮ್ಮ ತಮ್ಮ ಸ್ಥಾನಗಳನ್ನು ಸೇರುತ್ತವೆ. ಈ ಅವಧಿಯಲ್ಲಿ ಅವು ರೈಲಿನ ಹಾಗೆ ಕಾಣುತ್ತವೆ. ಈ ಕಕ್ಷೆಗಳು ಪೂರ್ವ-ಪಶ್ಚಿಮವಾಗಿಲ್ಲ; ಪೋಲಾರ್ ಆರ್ಬಿಟ್, ಅಂದರೆ ಉತ್ತರ ದಕ್ಷಿಣವಾಗಿಯೂ ಇಲ್ಲ. 53 ಡಿಗ್ರಿಗಳಷ್ಟು ಓರೆಯಾಗಿವೆ.

ಇತ್ತೀಚೆಗೆ, ಅಂದರೆ ಏಪ್ರಿಲ್‌ನಲ್ಲಿ ಹಾರಿಸಿದ ಸರಣಿ ಜೂನ್ 5ರಿಂದ ಬೆಂಗಳೂರಿನಲ್ಲಿ (ದಕ್ಷಿಣ ಭಾರತ ಎನ್ನಬಹುದು) ಸಂಜೆಯ ವೇಳೆಗೆ ಆಕಾಶದಲ್ಲಿ ಕಾಣಲಿದೆ. ಆದರೆ ಅಂದು ದಕ್ಷಿಣದ ಅಂಚಿನಲ್ಲಿ ಮಾತ್ರ ಅವು ಕಾಣುತ್ತವೆ. ಜೂನ್ 6ರಿಂದ ಮುಂದೆ 9ರವರೆಗೂ ಸಂಜೆ ಸುಮಾರು 7.30ರ ಹೊತ್ತಿಗೆ ಮೊದಲ ಚುಕ್ಕೆಯು ದಕ್ಷಿಣದ ಅಂಚಿನಲ್ಲಿ ಕಾಣುವುದು. ಇದು ಇನ್ನೂ ಚಲಿಸು ತ್ತಿರುವ ಹಾಗೆಯೇ ಒಂದು ನಿಮಿಷದಲ್ಲಿ ಇನ್ನೊಂದು ಚುಕ್ಕೆ ಅದರ ಹಿಂದೆಯೇ ಬರುವುದು. ಇನ್ನೊಂದು ನಿಮಿಷದಲ್ಲಿ ಇನ್ನೂ ಒಂದು- ಹೀಗೆ ಒಂದೊಂದಾಗಿ ಕಾಣ ತೊಡಗುವುವು. ತಡವಾಗಿ ಬರುವ ಚುಕ್ಕೆಗಳ ಎತ್ತರ ಮತ್ತು ಪ್ರಕಾಶವೂ ಹೆಚ್ಚುತ್ತಾ ಹೋಗುವುದು. ನೆತ್ತಿಯ ಮೇಲೆ ಹಾದುಹೋಗುವ ಚುಕ್ಕೆಯು ಚಿತ್ರಾ ನಕ್ಷತ್ರದ ಪಕ್ಕವೇ ಹಾದುಹೋದಾಗ ಅದರಷ್ಟೇ ಪ್ರಕಾಶಮಾನವಾಗಿ ಇರುತ್ತದೆ.

ಸುಮಾರು ಒಂದು ಗಂಟೆಯ ಕಾಲ ಇವು ಹೀಗೆ ಒಂದೊಂದಾಗಿ ಹಾದು ಹೋಗುವುವು. 9ರ ಬೆಳಗಿನ ಜಾವ ಸುಮಾರು 5.30ರಲ್ಲಿಯೂ ಒಂದೆರಡು ಕಾಣುವುವು. ಆ ಮುಂದೆ ಸಂಜೆಯ ‘ಬೋಗಿ’ಗಳ ಸಂಖ್ಯೆ ಕಡಿಮೆಯಾಗಿ ಬೆಳಗಿನ ಚುಕ್ಕೆಗಳ ಸಂಖ್ಯೆ ಹೆಚ್ಚಾಗುವುದು. 14ರ ಮುಂಜಾವಿನಲ್ಲಿ 4.30ರಿಂದ 5.30ರವರೆಗೆ ನಡೆಯುವ ಮೆರವಣಿಗೆ ಕೊನೆಯದು.

ಹೀಗೆ ಆಕಾಶದಲ್ಲಿ ನಡೆಯುವ ಈ ಮೆರವಣಿಗೆ ಒಂದು ಅಪೂರ್ವ ನೋಟದಿಂದ ಮಹತ್ವ ಪಡೆದುಕೊಳ್ಳುತ್ತದೆ. ನೋಡಿ ಆನಂದಿಸಲು ಕಷ್ಟಪಡಬೇಕಾಗಿಲ್ಲ. ಆದರೆ ಇದರಿಂದ ನಿಜವಾಗಿ ಸಂಕಷ್ಟಕ್ಕೆ ಸಿಲುಕಿರುವವರು ಖಗೋಳ ವೀಕ್ಷಕರು. ಆಕಾಶಕಾಯಗಳ ಅಧ್ಯಯನ
ಕ್ಕೆಂದು ಕೋಟ್ಯಂತರ ಹಣ ವ್ಯಯಿಸಿ ನಿರ್ಮಿಸಿದ ದೂರದರ್ಶಕಗಳು ಮತ್ತು ವಿಶೇಷ ಸಂವೇದಕಗಳನ್ನು ಬಳಸಿ ದೂರದ ಕಾಯಗಳನ್ನು ವೀಕ್ಷಿಸುತ್ತಿರುವಾಗ ಈ ಉಪಗ್ರಹ ಅಡ್ಡವಾಗಿ ಹಾದುಹೋದರೆ ಅವರ ಶ್ರಮವೆಲ್ಲ ನಿರರ್ಥಕ ವಾಗುತ್ತದೆ. ಒಂದು ಹಾದು ಹೋಯಿತು; ಇನ್ನೊಂದು ಚಿತ್ರ ತೆಗೆಯೋಣ ಎಂದರೆ, ಈ ರೈಲುಗಾಡಿಯು ಜಾಲ ವಾಗಿ ಬಿಟ್ಟಿರುವುದರಿಂದ ಒಂದಲ್ಲದಿದ್ದರೆ ಇನ್ನೊಂದು ಅಡ್ಡವಾಗಿ ಹೋಗುತ್ತಲೇ ಇರುತ್ತದೆ. ಚಿಲಿ ದೇಶದ ಮರುಭೂಮಿಯಲ್ಲಿ ವರ್ಷದ ಹೆಚ್ಚು ಕಾಲ ಶುಭ್ರ ಆಕಾಶ ಸಿಗುತ್ತದೆ ಎಂಬ ಕಾರಣಕ್ಕೆ ದೊಡ್ಡ ದೊಡ್ಡ ದೂರದರ್ಶಕ ಗಳನ್ನು ಸ್ಥಾಪಿಸಿದ್ದಾರೆ. ಅಲ್ಲಿಯ ವೀಕ್ಷಕರೊಬ್ಬರು ನಕ್ಷತ್ರಗುಚ್ಛದ ಚಿತ್ರದ ಮೇಲೆ 19 ಅಡ್ಡ ಗೆರೆಗಳು ಹಾದು ಹೋಗಿರುವುದನ್ನು ತೋರಿಸಿ ತಮ್ಮ ಅಳಲನ್ನು ಟ್ವೀಟ್‌ನಲ್ಲಿ ತೋಡಿಕೊಂಡಿದ್ದಾರೆ. ನಾವು ಅಧ್ಯಯನ ಮುಂದುವರಿಸುವುದು ಹೇಗೆ ಎಂದು ಜುಗುಪ್ಸೆಯನ್ನು ವ್ಯಕ್ತಪಡಿಸಿದ್ದಾರೆ.

ಭೂಮಿಗೆ ಅತಿ ಸಮೀಪವಾಗಿ ಹಾದುಹೋಗುವ ನಿಯರ್ ಅರ್ಥ್‌ ಅಸ್ಟೆರಾಯ್ಡ್ ಎಂಬ ವರ್ಗದ ಕ್ಷುದ್ರ ಗ್ರಹಗಳ ಅಧ್ಯಯನ ಈಚಿನ ದಿನಗಳಲ್ಲಿ ವಿಶೇಷ ಮಹತ್ವ ಪಡೆದಿದೆ. ಇದಕ್ಕಾಗಿ ಸ್ವಯಂಚಾಲಿತ ದೂರದರ್ಶಕಗಳ ವ್ಯವಸ್ಥೆಯೇ ಇದೆ. ಆಕಾಶದಲ್ಲಿ ಯಾವುದೇ ಚುಕ್ಕೆ ಚಲಿಸಿದರೂ ಇವು ಅದನ್ನು ಹಿಂಬಾಲಿಸಿ ವರದಿ ಮಾಡುತ್ತವೆ. ಕೆಲವು ಗಂಟೆಗಳ ಅಂತರದಲ್ಲಿ, ಚುಕ್ಕೆ ಎಷ್ಟು ಚಲಿಸಿದೆ ಎಂಬುದನ್ನು ಅಳತೆ ಮಾಡಿ ಆ ಕ್ಷುದ್ರಗ್ರಹದ ಕಕ್ಷೆಯಿಂದ ಭೂಮಿಗೆ ಅಪಾಯವಿದೆಯೇ ಎಂಬುದನ್ನೆಲ್ಲಾ ಲೆಕ್ಕ ಮಾಡಬೇಕಾಗುತ್ತದೆ. ಸ್ಟಾರ್ ಲಿಂಕ್‌ನ 30,000 ಚುಕ್ಕೆಗಳು ಓಡಾಡತೊಡಗಿದರೆ, ಕ್ಷೀಣವಾದ ಕ್ಷುದ್ರಗ್ರಹಗಳನ್ನು ಪತ್ತೆ ಮಾಡುವ ಈ ಕೆಲಸವನ್ನು ಕೈಬಿಡಬೇಕಾಗಬಹುದು.

ಆಕಾಶಕಾಯಗಳ ರೇಡಿಯೊ ಅಧ್ಯಯನಕ್ಕೂ ಸ್ಟಾರ್ ಲಿಂಕ್ ಉಪಗ್ರಹಗಳು ದೊಡ್ಡ ಸಮಸ್ಯೆಯನ್ನುಂಟು ಮಾಡುತ್ತವೆ. ಇದಕ್ಕಿಂತ ಮುಖ್ಯವಾದುದೆಂದರೆ, ಇವು ಸೃಷ್ಟಿಸುವ ‘ಕಸ’! ಈಗಾಗಲೇ ಆಕಾಶದಲ್ಲಿ ತುಂಬಿಕೊಂಡಿರುವ ತ್ಯಾಜ್ಯ ವಸ್ತುಗಳ ನಿರ್ವಹಣೆ ಬಹು ದೊಡ್ಡ ಸಮಸ್ಯೆಯಾಗಿದೆ. ಈ 30,000 ಉಪಗ್ರಹಗಳು ಕೆಲವು ವರ್ಷಗಳಲ್ಲಿ ತಮ್ಮ ಸೇವಾವಧಿಯನ್ನು ಮುಗಿಸಿ ನಿವೃತ್ತಿ ಪಡೆಯುವುದು ಖಚಿತ. ಆಮೇಲೆ? ಆ ‘ಕಸ’ವನ್ನು ಗುಡಿಸಿ ಹಾಕುವುದು ಹೇಗೆ?

ಈ ಆಕ್ಷೇಪಗಳೆಲ್ಲ ಈಗ ಉದ್ಭವಿಸಿದವಲ್ಲ. ನೌಕೆಗಳು ಹಾರುವ ಮೊದಲೇ ಬಹಳ ವಾದ ವಿವಾದ, ಚರ್ಚೆಗಳು ನಡೆದವು. ನಿವೃತ್ತಿಯಾದ ಉಪಗ್ರಹಗಳನ್ನು ಅಂತರಿಕ್ಷದಲ್ಲಿಯೇ ಸುಟ್ಟು ಬೂದಿ ಮಾಡುತ್ತೇವೆ ಎಂದು ಸ್ಪೇಸ್ ಎಕ್ಸ್ ಹೇಳಿಕೊಂಡಿದೆ. ಕೆಲವು ಸಂಸ್ಥೆಗಳು ಕೋರ್ಟ್ ಮೆಟ್ಟಿಲೂ ಏರಿವೆ. ಈ ಖಟ್ಲೆಗಳು ಇತ್ಯರ್ಥವಾಗುವ ಮೊದಲೇ 1,500ಕ್ಕೂ ಹೆಚ್ಚು ಉಪಗ್ರಹಗಳು ಕಕ್ಷೆ ಸೇರಿವೆ ಎಂದರೆ, ಇವುಗಳ ವಾಣಿಜ್ಯ ಮೌಲ್ಯದ ಅರಿವಾಗಬಹುದು.

ಜೂನ್ 6ರಿಂದ 14ರವರೆಗೆ ಆಕಾಶದಲ್ಲಿ ಈ ಚುಕ್ಕೆಗಳ ರೈಲನ್ನು ನೋಡುತ್ತಾ ನಿಂತಾಗ, ಬಡಪಾಯಿ ಖಗೋಳ ವಿಜ್ಞಾನಿಗಳನ್ನು ನೆನೆಸಿಕೊಳ್ಳಿ.

ಲೇಖಕಿ: ಆಹ್ವಾನಿತ ವಿಜ್ಞಾನಿ, ಜವಾಹರಲಾಲ್‌ ನೆಹರೂ ತಾರಾಲಯ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು