ಸೋಮವಾರ, ಮೇ 17, 2021
29 °C
ದೇಶದ ಪರಿವರ್ತನೆಗೆ ನಿಜವಾದ ದಿಕ್ಸೂಚಿ ಆಗಬೇಕಾದರೆ ಆಯೋಗದ ರೀತಿ-ನೀತಿ ಬದಲಾಗಬೇಕು

ನೀತಿ ಆಯೋಗದ ಸಾಧನೆ ಏನು?

ಡಾ. ಜಿ.ವಿ. ಜೋಶಿ Updated:

ಅಕ್ಷರ ಗಾತ್ರ : | |

Prajavani

ಅರವತ್ತೈದು ವರ್ಷಗಳ ಇತಿಹಾಸ ಹೊಂದಿದ್ದ ಯೋಜನಾ ಆಯೋಗಕ್ಕೆ ವಿದಾಯ ಹೇಳುವ ನಿರ್ಧಾರವನ್ನು 2014ರ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದರು. ಬಳಿಕ, 2015ರ ಜನವರಿ 1ರಂದು ಕೇಂದ್ರ ಸರ್ಕಾರ ಪ್ರತ್ಯೇಕ ಅಧಿಸೂಚನೆ ಹೊರಡಿಸಿ, ಬದಲಾಗುತ್ತಿರುವ ಭಾರತಕ್ಕಾಗಿಯೋ ಅಥವಾ ಭಾರತವನ್ನು ಬದಲಿಸಲಿಕ್ಕಾಗಿಯೋ ನೀತಿ ಆಯೋಗದ (National Institution for Transforming India) ಸ್ಥಾಪನೆಯನ್ನು ಘೋಷಿಸಿತು. ‘ಚಿಂತಕರ ಚಾವಡಿ’ ಎಂಬ ಬಿರುದನ್ನೂ ಪಡೆದ ನೀತಿ ಆಯೋಗವು ಇನ್ನು ಒಂದೂವರೆ ತಿಂಗಳಲ್ಲಿ ಐದು ವರ್ಷಗಳನ್ನು ಪೂರ್ಣಗೊಳಿಸಲಿದ್ದು, ಅನೇಕ ನಿರೀಕ್ಷೆಗಳ ಮೇಳದೊಂದಿಗೆ ಅವತರಿಸಿದ ಅದರ ಕಾರ್ಯಗಳ ಮೌಲ್ಯಮಾಪನ ಮಾಡಬೇಕಾದ ಅಗತ್ಯ ಇದೆ.

ಅಧಿಸೂಚನೆಯು ಹತ್ತು ಅಂಶಗಳ ಕಾರ್ಯಸೂಚಿಯನ್ನು ಒಳಗೊಂಡಿದೆ. ಆಹಾರ ಭದ್ರತೆಗಷ್ಟೇ ಗಮನಕೊಡದೆ, ಕೃಷಿರಂಗದ ಒಟ್ಟಾರೆ ಶಕ್ತಿ ಹೆಚ್ಚಿಸಿ ಕೃಷಿಕರಿಗೆ ಸರಿಯಾದ ಪ್ರತಿಫಲ ಬರುವಂತೆ ಮಾಡುವುದು ಸಹಜವಾಗಿ ಮಹತ್ವ ಪಡೆದ ಅಂಶ. ಆದರೆ ಸಮಸ್ಯೆಗಳ
ಬೀಡಾಗಿರುವ ಕೃಷಿರಂಗದಲ್ಲಿ ಶೇ 3ರಷ್ಟು ಬೆಳವಣಿಗೆಯೂ ಸಾಧ್ಯವಾಗುತ್ತಿಲ್ಲವೆಂದು ಅಧ್ಯಯನಗಳು ಹೇಳುತ್ತಿವೆ. ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ ತಮ್ಮ ಪ್ರಥಮ ಬಜೆಟ್‌ನಲ್ಲಿ ‘ತಂತ್ರಜ್ಞಾನದ ಬಳಕೆಯಿಂದ ದ್ವಿತೀಯ ಹಸಿರುಕ್ರಾಂತಿಯಾಗಬೇಕು’
ಎಂಬ ಕನಸು ಕಂಡಿದ್ದರು. ಇಡೀ ದೇಶ ಬಯಸಿದರೂ ನನಸಾಗಲು ಇನ್ನೂ ನಿರಾಕರಿಸುತ್ತಿರುವ ಭಾಗ್ಯ ಅದು!

ಕೇಂದ್ರ ಸರ್ಕಾರದ ಅಧೀನದ, ಹೈದರಾಬಾದ್‌ನಲ್ಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಅಧ್ಯಯನ ಸಂಸ್ಥೆಯು ರೈತರ ಆತ್ಮಹತ್ಯೆ ಪ್ರಕರಣಗಳ ಮೇಲೆ ಬೆಳಕು ಚೆಲ್ಲುವ ಸಮಗ್ರ ವರದಿಯನ್ನು ಹೊರತಂದಿದೆ. ದೊಡ್ಡ ಸಂಖ್ಯೆಯಲ್ಲಿರುವ ಸಣ್ಣ ಮತ್ತು ಅತಿಸಣ್ಣ ರೈತರ ಸಂಕಷ್ಟಗಳನ್ನು ಅದು ವಿವರಿಸಿದೆ. ಮೋದಿ ನೇತೃತ್ವದ ಸರ್ಕಾರವು ಬೆಂಬಲ ಬೆಲೆಯನ್ನು ಹೆಚ್ಚಿಸಿದರೂ ಅದರ ಲಾಭ ರೈತರಿಗೆ ದೊರಕಿಲ್ಲ. ಅವರ ಪ್ರಮುಖ ಬೆಳೆಗಳಲ್ಲಿ ಹೂಡುವಳಿ (ಕೃಷಿ ಸಾಮಗ್ರಿ) ಮತ್ತು ಹುಟ್ಟುವಳಿಗಳ ನಡುವಣ ಸಂಬಂಧ ದಶಕಗಳ ಹಿಂದೆಯೇ ಹದಗೆಟ್ಟಿದ್ದು, ಅನೇಕ ಸಣ್ಣ ರೈತರು ಕುಲಕಸುಬಾದ ವ್ಯವಸಾಯ ಮಾಡಿ ಹತಾಶರಾಗಿದ್ದಾರೆ.

ನೋಟು ರದ್ದತಿಯಿಂದ ಬಲವಾದ ಏಟು ತಿಂದ ಅಸಂಘಟಿತ ವಲಯದಲ್ಲಿ ಕೃಷಿಯೂ ಒಂದು. ಬರ, ನೆರೆ ಸಮಸ್ಯೆಗಳಿಂದ ರೈತರ ಬದುಕು ದಿನದಿಂದ ದಿನಕ್ಕೆ ಭಾರವಾಗುತ್ತಿರುವಾಗ, 2022ರ ಹೊತ್ತಿಗೆ ಕೃಷಿಕರ ಆದಾಯ ದುಪ್ಪಟ್ಟುಗೊಳಿಸುವ ಕೇಂದ್ರ ಸರ್ಕಾರದ ಹೊಂಗನಸಿಗೆ ವಾಸ್ತವದ ಪ್ರಭಾವಳಿಯನ್ನು ಜೋಡಿಸುವ ಸಾಮರ್ಥ್ಯ ಚಿಂತಕರ ಚಾವಡಿಗಂತೂ ಇಲ್ಲ. ಈಗಿನ ಕೃಷಿ ವಲಯದ ದುಃಸ್ಥಿತಿಯನ್ನೂ, ವಿಶ್ವ ಹಸಿವು ಸೂಚ್ಯಂಕದಲ್ಲಿ ಕೆಳಗೆ ಜಾರಿರುವ ಭಾರತದ ಸ್ಥಾನವನ್ನೂ ಗಮನಿಸಿ, 2015ರ ಕಾರ್ಯಸೂಚಿ ಬಯಸಿದಂತೆ ಆಹಾರ ಭದ್ರತೆ ಸುಲಭ ಸಾಧ್ಯವಲ್ಲವೆಂದು ಹೇಳಬೇಕಾಗುತ್ತದೆ. ಕೃಷಿರಂಗದ ಒಟ್ಟಾರೆ ಶಕ್ತಿಯಲ್ಲಿ ಸುಧಾರಣೆಯಾಗಿಲ್ಲ, ಸರಿಯಾದ ಪ್ರತಿಫಲಕ್ಕೆ ಕಾದು ಸುಸ್ತಾಗಿ ಅನೇಕ ಸಣ್ಣ ರೈತರು ಅಸ್ತಂಗತರಾಗಿದ್ದನ್ನು ಸರ್ಕಾರಿ ಅಂಕಿ-ಸಂಖ್ಯೆಗಳೇ ದೃಢಪಡಿಸಿವೆ.

ಆರ್ಥಿಕ ಅಭಿವೃದ್ಧಿ ಕಾಣದ ಸಮುದಾಯಗಳಿಗೆ ಪ್ರಾಶಸ್ತ್ಯ ನೀಡುವುದು ಆಯೋಗದ ಇತರ ಧ್ಯೇಯಗಳಲ್ಲಿ ಒಂದು. ಈ ಧ್ಯೇಯಕ್ಕೆ ಸಾಮಾಜಿಕ ಮಹತ್ವ ಇರುವುದು ಹೌದಾದರೂ, ಇದಕ್ಕೆ ಸ್ಪಷ್ಟತೆ ಇರಬೇಕಿತ್ತು. ಆರ್ಥಿಕ ಅಭಿವೃದ್ಧಿ ಪ್ರಕ್ರಿಯೆಯ ಲಾಭಗಳಿಂದ ಈ ತನಕ ವಂಚಿತವಾದ ಸಮುದಾಯಗಳಿಗೆ ಈ ಲಾಭಗಳನ್ನು ಪ್ರಾಶಸ್ತ್ಯದ ಮೇರೆಗೆ ತಲುಪಿಸಬೇಕು. ಗಣನೀಯವಾಗಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ ಮತ್ತು ತೀವ್ರವಾದ ನಿರುದ್ಯೋಗ ಸಮಸ್ಯೆಗಳನ್ನು ಎದುರಿಸುತ್ತಿರುವ ದೇಶಕ್ಕೆ ಸದ್ಯ ಬೇಕಾಗಿರುವುದು ಎಲ್ಲರ ಒಳಗೊಳ್ಳುವಿಕೆಯ ಅಭಿವೃದ್ಧಿ. ಇದಕ್ಕೆ ಬೇಕಾದ ಸಾಂಸ್ಥಿಕ ಬದಲಾವಣೆಗಳನ್ನು ಆಯೋಗ ಸೂಚಿಸಬೇಕಾಗಿತ್ತು. ಹಾಗೆ ಮಾಡದಿರುವ ಕಾರಣ, ಭಾರತಕ್ಕೆ ಬೇಕಾದ ಬದಲಾವಣೆ ಸೂಚಿಸಿ, ರಾಷ್ಟ್ರೀಯ ಸಂಸ್ಥೆಯಾಗುವ ಅವಕಾಶವನ್ನು ಅದು ಕಳೆದುಕೊಂಡಿದೆ.

ಆಯೋಗ ಸ್ಥಾಪನೆಯಾದ ಮೊದಲ ಎರಡು ವರ್ಷಗಳ ಅವಧಿಯಲ್ಲಿ ನಡೆದ ಸಭೆಗಳಲ್ಲಿ ಆದಾಯ ಕ್ರೋಡೀಕರಣ, ಸಾರ್ವಜನಿಕ ವೆಚ್ಚಗಳ ಸರಳೀಕರಣ ಮತ್ತು ಬಡತನ ನಿವಾರಣೆಗೆ ಬೇಕಾದ ಉಪಯುಕ್ತ ಸಲಹೆಗಳು ಬಂದಿದ್ದವು. ನವಭಾರತದ ನಿರ್ಮಾಣಕ್ಕಾಗಿ ಆಯೋಗ ತಯಾರಿಸಿದ ನೀಲನಕ್ಷೆ ಉಪಯುಕ್ತ ಮಾಹಿತಿ ನೀಡುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮಾತ್ರ, ಹಸ್ತಿನಾವತಿಯಲ್ಲಿರುವ ನೀತಿ ಆಯೋಗವೆಂಬ ರಾಯರ ಕುದುರೆ ಹೇಗೇಗೋ ಓಡಲು ಪ್ರಾರಂಭಿಸಿತು. 2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದ ಹೊತ್ತಿನಲ್ಲಿ ಕೇಂದ್ರದ ಪರ ವಕಾಲತ್ತು ವಹಿಸುವುದೇ ಅದರ ಆದ್ಯತೆಯಾಯಿತು!

ಆಯೋಗವು ತನ್ನ ಕಾರ್ಯವ್ಯಾಪ್ತಿಯಲ್ಲಿರದ ಜಿಡಿಪಿ ಅಂಕಿಗಳನ್ನು ಪ್ರಕಟಿಸುವ ಮೂಲಕ ಕೇಂದ್ರದ ಯೋಗಕ್ಷೇಮವನ್ನು ಅನಪೇಕ್ಷಿತ ರೀತಿಯಲ್ಲಿ ನೋಡಿಕೊಂಡಿತು. ರಾಷ್ಟ್ರೀಯ ಸಾಂಖ್ಯಿಕ ಆಯೋಗದ ಸುಪರ್ದಿಯಲ್ಲಿ ಪ್ರಚಲಿತ ಸಂಖ್ಯಾಶಾಸ್ತ್ರದ ವಿಧಾನವನ್ನೇ ಆಧರಿಸಿದ, 2018ರ ಜುಲೈ ತಿಂಗಳಿನಲ್ಲಿ ಪ್ರಕಟವಾದ ಜಿಡಿಪಿಯ ವರದಿಯು, ‘ಬೆಳವಣಿಗೆ ದರವು ಮೋದಿ ನೇತೃತ್ವದ ಪ್ರಥಮ ಸರ್ಕಾರದ ಅವಧಿಯಲ್ಲಿ ದಾಖಲಾಗಿದ್ದಕ್ಕಿಂತ ಯುಪಿಎ ಅವಧಿಯಲ್ಲಿ ಜಾಸ್ತಿ ಇತ್ತು’ ಎಂಬ ಚಿತ್ರಣ ನೀಡಿತ್ತು. ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರು ಕೇಂದ್ರೀಯ ಸಾಂಖ್ಯಿಕ ಕೇಂದ್ರವನ್ನು (ಸಿಎಸ್ಒ) ಕೂಡ ಬದಿಗೆ ಸರಿಸಿ ಮುಂಚೂಣಿಯಲ್ಲಿ ನಿಂತು ಸರ್ಕಾರಕ್ಕೆ ಅನುಕೂಲವಾಗುವ ಹೇಳಿಕೆ ನೀಡಿದರು. ಜಿಡಿಪಿಗೆ ಸಂಬಂಧಿಸಿದ ಅಂಕಿಗಳನ್ನು ಪರಿಷ್ಕರಿಸಲು ಎಲ್ಲಿಲ್ಲದ ಆಸಕ್ತಿ ತೋರಿಸಿ ವಿವಾದ ಸೃಷ್ಟಿಸಿದರು.

2018ರ ನ. 29ರಂದು ಸಿಎಸ್ಒ ಅಧ್ಯಕ್ಷ ಮತ್ತು ನೀತಿ ಆಯೋಗದ ಉಪಾಧ್ಯಕ್ಷರು ಜಂಟಿ ಸುದ್ದಿಗೋಷ್ಠಿ ನಡೆಸಿ ಪರಿಷ್ಕೃತ ನೈಜ ಜಿಡಿಪಿಯನ್ನು ಬಹಿರಂಗಪಡಿಸಿದರು. ಯುಪಿಎ ಅವಧಿಯಲ್ಲಿ (2005-14) ವಾರ್ಷಿಕ ಬೆಳವಣಿಗೆ ದರ ಶೇ 6.7ರಷ್ಟು ಇದ್ದದ್ದು ಎನ್‌ಡಿಎ ಅವಧಿಯಲ್ಲಿ 7.35ಕ್ಕೆ ಏರಿದೆಯೆಂಬ ವಾದವನ್ನು ರಾಜೀವ್ ಕುಮಾರ್ ಮಂಡಿಸಿ ಆರ್ಥಿಕ ತಜ್ಞರ ಟೀಕೆಗೆ ಗುರಿಯಾದರು.

ಸುದ್ದಿಗೋಷ್ಠಿಯಲ್ಲಿ ಅವರ ಪಾಲ್ಗೊಳ್ಳುವಿಕೆಯೇ ಪ್ರಶ್ನಾರ್ಹವಾಗಿತ್ತು. ಸಕಾಲದಲ್ಲಿ ಅಖಾಡಕ್ಕೆ ಧುಮುಕಿ ‘ಧನ್ಯೋಸ್ಮಿ’ ಎಂದುಕೊಂಡಿದ್ದ ರಾಜೀವ್ ಕುಮಾರ್ ಟೀಕೆ, ಪ್ರಶ್ನೆಗಳಿಗೆ ತಲೆಕೆಡಿಸಿಕೊಳ್ಳಲಿಲ್ಲ!

ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದ ವರದಿಯ ಪ್ರಕಟಣೆಯಲ್ಲಂತೂ ಆಯೋಗವು ಸರ್ಕಾರಕ್ಕೆ ನೆರವಾಗಲು ಮಾಡಿದ ಯತ್ನ ಅಸಾಮಾನ್ಯ. ನ್ಯಾಷನಲ್‌ ಸ್ಯಾಂಪಲ್‌ ಸರ್ವೆ ಆಫೀಸ್‌ (ಎನ್ಎಸ್ಎಸ್ಒ) ಹಿಂದಿನಂತೆ ಕ್ರಮಬದ್ಧವಾಗಿ ನಡೆಸಿದ ಸಮೀಕ್ಷೆಯ ಪ್ರಕಾರ 2017-18ರಲ್ಲಿ ನಿರುದ್ಯೋಗದ ಪ್ರಮಾಣ ಶೇ 6.1ರಷ್ಟಾಗಿ, 45 ವರ್ಷಗಳ ಅತ್ಯಧಿಕ ಮಟ್ಟ ತಲುಪಿತ್ತು. ಲೋಕಸಭಾ ಚುನಾವಣೆಯತ್ತ ದೃಷ್ಟಿಯಿಟ್ಟ ಕೇಂದ್ರ ಸರ್ಕಾರ, 2018ರ ಡಿಸೆಂಬರ್‌ ಅಂತ್ಯದೊಳಗೆ ವರದಿ ಹೊರಬರದಂತೆ ಪ್ರಯತ್ನಿಸಿತ್ತು. ಆದರೆ,  2019ರ ಜನವರಿಯಲ್ಲಿ ವರದಿಯ ಅಂಕಿ–ಅಂಶಸೋರಿಕೆಯಾಗಿ ಅದು ಚರ್ಚೆಗೆ ಒಳಪಟ್ಟಿತು. ದೇಶದಾದ್ಯಂತ ವಿವಾದ ಸೃಷ್ಟಿಯಾದಾಗ ರಾಜೀವ್ ಕುಮಾರ್ ಸ್ವಲ್ಪವೂ ವಿಳಂಬ ಮಾಡದೆ, ಸೋರಿಕೆಯಾದ ವರದಿ ಅಂತಿಮವಲ್ಲ ಎಂದರು. ಕೋಟ್ಯಂತರ ಉದ್ಯೋಗಗಳು ಸೃಷ್ಟಿಯಾಗಿದ್ದರೂ ಎನ್ಎಸ್ಎಸ್ಒ ಅವುಗಳನ್ನು ಪರಿಗಣಿಸಿಲ್ಲ ಎಂದು ಆರೋಪಿಸಿದರು. ಅಲ್ಲದೆ 2019ರ ಮಾರ್ಚ್ ಅಂತ್ಯದೊಳಗೆ ಅಂತಿಮ ವರದಿ ಹೊರಬರಲಿದೆಯೆಂದು ಹೇಳಿದರು! ಚುನಾವಣೆ ಮುಗಿದ ನಂತರ, ಎನ್ಎಸ್ಎಸ್ಒ ವರದಿಯನ್ನು ಸರ್ಕಾರವೇ ಒಪ್ಪಿಕೊಂಡಾಗ ಆಯೋಗದ ಬಣ್ಣ ಬಯಲಾಯಿತು!

ನೀತಿ ಆಯೋಗವು ಬರೀ ಕೇಂದ್ರ ಸರ್ಕಾರದ ಪರವಾಗಿ ನಿಲ್ಲುವ ಸಂಸ್ಥೆಯಾಗದೆ, ದೇಶದ ಪರಿವರ್ತನೆಗೆ ದಿಕ್ಸೂಚಿಯಾಗುವ ರಾಷ್ಟ್ರೀಯ ಸಂಸ್ಥೆಯಾಗಬೇಕಾದರೆ ಅದರ ರೀತಿ-ನೀತಿ ಬದಲಾಗಬೇಕಾಗಿದೆ. 

ಲೇಖಕ: ಪ್ರಾಧ್ಯಾಪಕ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ ವಿಭಾಗ, ಆಳ್ವಾಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ, ಮೂಡುಬಿದಿರೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು