ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಯ ಮಿತಿ ಮೀರುವುದೆಂದರೆ...

ಒಳ್ಳೆಯವನಾಗಿ ಜೀವಿಸು ಎಂಬುದೇ ಧರ್ಮದ ಧ್ಯೇಯ ಎಂಬುದನ್ನು ಅರಿಯಬೇಕು
Last Updated 29 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಮಾನವಲೋಕದಲ್ಲಿ ಹಲವಾರು ಕ್ಷೇತ್ರಗಳು. ಉತ್ತಮ ಆಡಳಿತ, ಸಾಮಾಜಿಕ ಸುಧಾರಣೆ ಮತ್ತು ಸುವ್ಯವಸ್ಥೆಗಾಗಿ ರೂಪಿಸಿಕೊಂಡಂತಹ ಕ್ಷೇತ್ರಗಳು. ಹೀಗೆ ರೂಪಿಸಿಕೊಂಡ ಪ್ರತೀ ಕ್ಷೇತ್ರದಲ್ಲೂ ನ್ಯೂನತೆಗಳು. ವಿಚಾರಿಸಿದರೆ, ಮಾನವ ದೇಹವೇ ದೌರ್ಬಲ್ಯದ ತಾಣ. ಶರೀರಕ್ಕೆ ಸಾಧನಗಳಾದ ಇಂದ್ರಿಯಗಳು ಅರಿತೋ ಅರಿಯದೆಯೋ ಹರಿಹಾಯುತ್ತವೆ. ಬುದ್ಧಿಯ ವಶದಲ್ಲಿರಬೇಕಾದ ಇಂದ್ರಿಯಗಳು, ಬುದ್ಧಿಯ ನಿಯಂತ್ರಣವನ್ನು ಮೀರಿ ವರ್ತಿಸಲು ಹೋಗಿ, ಅನಾಹುತವನ್ನು ಆಮಂತ್ರಿಸುತ್ತವೆ. ಅವುಗಳ ಉಪಟಳವನ್ನು ಬಸವಣ್ಣನವರು ಹೀಗೆ ವರ್ಣಿಸುತ್ತಾರೆ-

ಕಾಯವಿಕಾರ ಕಾಡಿಹುದಯ್ಯಾ
ಮನೋವಿಕಾರ ಕೂಡಿಹುದಯ್ಯಾ
ಇಂದ್ರಿಯವಿಕಾರ ಸುಳಿವುದಯ್ಯಾ!
ಸುಳುವಿನೊಳಗೆ ಸುಳಿವುತ್ತಲಿದ್ದೇನೆ, ಸಿಲುಕಿಸದಿರಯ್ಯಾ!
ಅನ್ಯಚಿತ್ತದಲ್ಲಿರಿಸದಿರಯ್ಯಾ, ನಿಮ್ಮ ಚಿತ್ತದಲ್ಲಿರಿಸಯ್ಯಾ
ಅನುಪಮಸುಖಸಾರಾಯ ಶರಣರಲ್ಲಿ–
ಕೂಡಲಸಂಗಮದೇವಯ್ಯಾ, ಇದನೆ ಬೇಡುವೆನಯ್ಯಾ

ದೇಶಕ್ಕೆ ತನ್ನದೇ ಆದ ಸಂವಿಧಾನ ಇರುವಂತೆ, ಅವರವರ ದೇಹ ಮತ್ತು ಬದುಕಿಗೆ ತಮ್ಮದೇ ಆದ ನೀತಿಸಂಹಿತೆ ಇರುತ್ತದೆ. ನೀತಿಯ ಚೌಕಟ್ಟಿನ ಒಳಗಡೆ ಬದುಕುವಂತಾದರೆ ಯಾವ ಕೇಡೂ ಇಲ್ಲ, ದುರಂತವೂ ಇಲ್ಲ. ನಾವೇನೋ ರಸ್ತೆಯ ನಿಯಮವನ್ನು ಪಾಲಿಸುತ್ತ ಸುರಕ್ಷಿತವಾಗಿ ಚಲಿಸುತ್ತಿರುತ್ತೇವೆ. ಕೆಲವರು ಅದನ್ನು ಪಾಲಿಸದೆ ಏರಿಬರುತ್ತಾರೆ, ಅಪಘಾತ ಮಾಡುತ್ತಾರೆ. ಜಗತ್ತಿನಲ್ಲಿ ಎಲ್ಲವೂ ದೊರೆಯುತ್ತದೆ; ಆದರೆ ಜೀವ ಮಾತ್ರ ದೊರೆಯುವುದಿಲ್ಲ. ಚಾಲಕರು ಜೀವದ ಮಹತ್ವ ಅರಿತು ವಾಹನ ಚಾಲನೆ ಮಾಡಬೇಕು. ಅಪಘಾತ ಮಾಡುವವರಿಗೆ ಪ್ರಾಣ ತೆಗೆಯಲು ಬರುತ್ತದೆ; ಪ್ರಾಣ ಕೊಡಲು ಆಗುತ್ತದೆಯೇ? ಈ ಬಗ್ಗೆ ಅರಿವು ಅಗತ್ಯ.

ಅದರಂತೆ ಶರೀರವೂ ಒಂದು ವಾಹನ. ಬುದ್ಧಿಯೆಂಬ ಚಾಲಕನು ಜಾಣ್ಮೆಯಿಂದ ಅದನ್ನು ಚಲಾಯಿಸಬೇಕಾಗುತ್ತದೆ. ಕೆಲವರು ಅತಿವೇಗದಿಂದ ಚಲಾಯಿಸುತ್ತಾ ರಸ್ತೆ ನಿಯಮ ಮೀರುವಂತೆ, ಇಂದ್ರಿಯಗಳ ದೌರ್ಬಲ್ಯಕ್ಕೆ ಒಳಗಾಗಿ ಆಪತ್ತನ್ನು ತಂದುಕೊಳ್ಳುವ ಸಾಧ್ಯತೆ ಇರುತ್ತದೆ. ಇಂದ್ರಿಯಗಳು ಅಪರಾಧಿ ಸ್ಥಾನದಲ್ಲಿ ಇರುತ್ತವೆ. ಬುದ್ಧಿಯು ಅವುಗಳ ಪರವಾಗಿ ವಾದ ಮಾಡುವ ಹಾಗೂ ಪಾರು ಮಾಡುವ ನ್ಯಾಯವಾದಿಯಂತೆ.

ಅಪರಾಧಿ ಮತ್ತು ಬುದ್ಧಿಯ ನಡುವಿನ ವಾದಸರಣಿಯನ್ನು ಆಲಿಸಿ ನ್ಯಾಯ ನಿರ್ಣಯಿಸಬೇಕಾಗುತ್ತದೆ, ಅಂತಃಸಾಕ್ಷಿಯೆಂಬ ನ್ಯಾಯಮೂರ್ತಿ. ಶರೀರ ಬಡಪಾಯಿ! ಇಂದ್ರಿಯಗಳು ಮಾಡುವ ತಪ್ಪಿಗೆ ಶರೀರವು ಶಿಕ್ಷೆ ಅನುಭವಿಸಬೇಕಾಗುತ್ತದೆ. ಒಂದು ಶರೀರದಲ್ಲಿ ಇಷ್ಟೆಲ್ಲ ದೋಷ-ದುರ್ಗುಣಗಳು. ಇನ್ನು ಸಾಮಾಜಿಕ ವ್ಯವಸ್ಥೆಯಲ್ಲಿ ಒಬ್ಬೊಬ್ಬರದು ಒಂದೊಂದು ಆಲೋಚನೆ, ವರ್ತನೆ. ಅದನ್ನೆಲ್ಲ ಸರಿಯಾಗಿಸಿಕೊಂಡು ಹೋಗಲು ಧರ್ಮ, ನೀತಿ, ಸಂವಿಧಾನ, ಕಾನೂನು ಕಟ್ಟಲೆಗಳು. ಇವೆಲ್ಲ ಇದ್ದಾಗ್ಯೂ ಮಾನವ ದಾರ್ಷ್ಟ್ಯದಿಂದ ವರ್ತಿಸುತ್ತಾನೆ. ಸುವ್ಯವಸ್ಥೆಗಾಗಿ ರೂಪಿಸಿದ ಪ್ರತೀ ಕ್ಷೇತ್ರದಲ್ಲೂ ತಪ್ಪು-ತಡೆಗಳು.

ಸಾಮಾಜಿಕ ಕ್ಷೇತ್ರದಲ್ಲಿ ಕಂಡುಬರುವ ದೌರ್ಬಲ್ಯವೆಂದರೆ, ಅಸಮಾನತೆ. ಸರ್ವರಿಗೂ ಸಮಪಾಲು; ಸರ್ವರಿಗೂ ಸಮಬಾಳು ಎಂಬುದು ಸಂವಿಧಾನದ ಮತ್ತು ಸರ್ವ ದಾರ್ಶನಿಕರ ಆಶಯ. ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಆರ್ಥಿಕ ಅಸಮಾನತೆ ಇದೆ. ಸಂಪತ್ತು ಕೆಲವರಲ್ಲಿ ಮಾತ್ರ ಕ್ರೋಡೀಕರಣವಾಗಿದೆ. ದುರ್ಬಲ ವರ್ಗಗಳ ಸಬಲೀಕರಣಕ್ಕಾಗಿ ಮೀಸಲಾತಿ ಕಲ್ಪಿಸಲಾಗಿದೆ. ಕೆಲವರು ಮೀಸಲಾತಿಯನ್ನು ಸದುಪಯೋಗ ಮಾಡಿಕೊಳ್ಳಲಾರದೆ, ಇನ್ನು ಕೆಲವರು ಈ ಬಗ್ಗೆ ಸೂಕ್ತವಾದ ಮಾಹಿತಿ ಇಲ್ಲದೆ ತೊಂದರೆ ಅನುಭವಿಸುತ್ತಾರೆ.

ಮೀಸಲಾತಿಯನ್ನು ಬಳಸಿಕೊಂಡು ಕೆಲವರು ಅಪಾರವಾದ ಶ್ರೀಮಂತಿಕೆ ಹೊಂದಿದ್ದಾರೆ. ಕೆಲ ಶೋಷಿತರು ಶ್ರೀಮಂತರಾಗಿದ್ದಾರೆ. ಇನ್ನುಳಿದವರು ಬಡತನ ರೇಖೆಯಿಂದ ಕೆಳಗಡೆ ಇದ್ದಾರೆ. ಈ ಸ್ಥಿತಿಯು ಕೆಲವರಲ್ಲಿ ಅಂತರ ಸೃಷ್ಟಿಸುತ್ತಿದ್ದು, ಸಾಮಾಜಿಕ ಕ್ಷೋಭೆಗೆ ಕಾರಣ ಆಗುತ್ತಿದೆ. ಆರ್ಥಿಕ ಅಸಮಾನತೆ ನಿವಾರಿಸುವಲ್ಲಿ ಮೀಸಲಾತಿಯಂತಹ ಅವಕಾಶಗಳು. ಮಧ್ಯಮವರ್ಗದವರು ಅವಕಾಶ ವಂಚಿತರಾಗುತ್ತಿದ್ದು, ಅವರನ್ನು ಗುರಿಯಾಗಿಟ್ಟುಕೊಂಡು ಸರ್ಕಾರಗಳು ನಿರ್ದಿಷ್ಟವಾದ ಯೋಜನೆ ರೂಪಿಸಬೇಕಾಗಿದೆ.

ಧಾರ್ಮಿಕ ಕ್ಷೇತ್ರವು ಮಾನವ ಬದುಕಿಗೆ ಅಗತ್ಯವಾದ ನೀತಿ-ನಿರೂಪಣೆಗಳನ್ನು ನಿರ್ದೇಶಿಸುತ್ತ ಕೆಲವೊಂದು ಕಟ್ಟುಪಾಡುಗಳನ್ನು ಜಾರಿಗೊಳಿಸುತ್ತದೆ. ಧರ್ಮವೆಂದರೆ, ಮಾನವೀಯ ಮೌಲ್ಯಗಳ ಸಂಕಲನ. ದೈವತ್ವಕ್ಕೆ ಕರೆದೊಯ್ಯುವ ಸಾಧನವೇ ಧರ್ಮ. ಧರ್ಮವೆಂದರೆ ಒಳ್ಳೆಯತನ ಎಂಬುದನ್ನು ಅರಿಯಬೇಕು. ಅಮಾನವೀಯವಾಗಿ ನಡೆದುಕೊಳ್ಳಬೇಡ, ಅನಾಗರಿಕನಾಗಿ ವರ್ತಿಸಬೇಡ ಎನ್ನುತ್ತದೆ ಧರ್ಮ.

ಮಡಿವಂತಿಕೆಯನ್ನು ಕೆಲವರು ಧರ್ಮವೆಂದು ಭಾವಿಸಿದಂತಿದೆ. ಮಡಿವಂತಿಕೆಯು ನಿಜವಾದ ಧರ್ಮ ಅಲ್ಲ. ಅಸ್ಪೃಶ್ಯತಾ ಆಚರಣೆಯನ್ನು ಧರ್ಮವೆಂದು ಭ್ರಮಿಸಿರುವುದರಿಂದ ಅಸ್ಪೃಶ್ಯತೆಯು ಸಮಾಜದಲ್ಲಿ ಜೀವಂತವಾಗಿದೆ. ಜಾತಿ ಜ್ಯೇಷ್ಠತೆಯ ಭ್ರಮೆ ಅಸ್ಪೃಶ್ಯತೆಯ ಮೂಲ. ಮೇಲ್ವರ್ಗಗಳಲ್ಲಿ ಈ ಆಚರಣೆ ಸ್ವಲ್ಪಮಟ್ಟಿಗೆ ಕಡಿಮೆ ಆಗುತ್ತಿದ್ದು, ನಿಮ್ನ ವರ್ಗಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಬೇಕಾಗಿದೆ.

10-20 ವರ್ಷಗಳ ಹಿಂದೆ ಶೋಷಿತರಿಗೆ ಗ್ರಾಮಾಂತರ ಪ್ರದೇಶದ ಕೆಲ ಹೋಟೆಲುಗಳಲ್ಲಿ ಕಾಫಿ ಕುಡಿಯಲು ಒಳಗಡೆ ಬಿಡುತ್ತಿರಲಿಲ್ಲ. ಬಿಟ್ಟರೂ ದಲಿತರಿಗೇ ಬೇರೆ ಕುಡಿಯುವ ಲೋಟ (ವಾಟೆ). ಕ್ಷೌರ ಮಾಡಲು ನಿರಾಕರಿಸಲಾಗುತ್ತಿತ್ತು. ಕೆಲವೊಂದು ಕಡೆ ನೀರು ಸೇದಿಕೊಳ್ಳಲು ಬಾವಿಯ ಹತ್ತಿರ ಬಿಡುತ್ತಿರಲಿಲ್ಲ.

ಈ ಬಗ್ಗೆ ಸೂಕ್ತವಾದ ಜಾಗೃತಿಯನ್ನು ಮೂಡಿಸುತ್ತ ಬಂದಿದ್ದರಿಂದ ಅದರ ಪ್ರಭಾವ ಕಡಿಮೆ ಆಗುತ್ತಿದೆ. ಇನ್ನು ಕೆಲವೊಂದು ಭಾಗದಲ್ಲಿ ಅದರ ಆಚರಣೆ ಇರಬಹುದು. ನಾಯಕ ಮತ್ತು ಮಾದಿಗರ ನಡುವೆ ಕೆಲವೊಂದು ಕಡೆ ಜಾತಿ ಕಾರಣಕ್ಕೆ ಜಗಳ ಉಂಟಾಗಿದ್ದು, ಅಂಥ ಕಡೆ ಸ್ವತಃ ಪಾದಯಾತ್ರೆ ಮಾಡಿ ಅರಿವು ಮೂಡಿಸಲಾಗಿದೆ. ಸವರ್ಣೀಯರು ಮತ್ತು ದಲಿತರ ನಡುವೆ ದೌರ್ಜನ್ಯ ನಡೆದ ಊರು-ಕೇರಿಗಳಿಗೆ ಭೇಟಿ ನೀಡಿ, ಅರಿವು ಮೂಡಿಸುವ ಕೆಲಸ ಮಾಡಲಾಗಿದೆ.

ನಮ್ಮ ಸ್ವಾತಂತ್ರ್ಯ ಸಂಗ್ರಾಮವು ಕೆಲವರಿಗಷ್ಟೇ ಸ್ವಾತಂತ್ರ್ಯ ತಂದುಕೊಡುತ್ತಿದೆ. ಭಾರತವನ್ನು ಸ್ಪೃಶ್ಯ ಭಾರತ ಮತ್ತು ಅಸ್ಪೃಶ್ಯ ಭಾರತವೆಂದು ಎರಡು ಭಾಗಗಳಾಗಿ ವಿಂಗಡಿಸಬಹುದು. ಅಸ್ಪೃಶ್ಯ ಭಾರತಕ್ಕೆ ಸ್ವಾತಂತ್ರ್ಯ ಸಿಗಬೇಕಿದೆ. ನಮ್ಮ ಸ್ವಾತಂತ್ರ್ಯಕ್ಕೆ 70 ವರ್ಷಗಳು ಗತಿಸಿವೆ. ಅಸ್ಪೃಶ್ಯರಿಗೆ ಇನ್ನೂ ಸ್ವಾತಂತ್ರ್ಯ ದೊರಕಬೇಕಿದೆ. ಅಸ್ಪ‍ೃಶ್ಯತೆ ಎಂಬುದು ಭಯಾನಕವಾದ ಕೊರೊನಾ ವೈರಸ್ ಇದ್ದಂತೆ. ಸಾಮಾಜಿಕ ಮತ್ತು ಧಾರ್ಮಿಕ ಉದಾರೀಕರಣವೊಂದೇ ಅಸ್ಪೃಶ್ಯತೆಗೆ ಪರಿಹಾರ. ಜಾತಿಯ ಮಿತಿಗಳನ್ನು ಮೀರುತ್ತ, ಪರಜಾತಿಯನ್ನು ಪ್ರೀತಿಸುತ್ತ ಹೋಗುವುದೇ ಈ ಕಾಲಘಟ್ಟದ ಅನಿವಾರ್ಯ.

ಚಿತ್ರದುರ್ಗ ಜಿಲ್ಲೆ ಮತ್ತು ತುಮಕೂರು ಜಿಲ್ಲೆಯ ಕೆಲ ಗೊಲ್ಲರಹಟ್ಟಿಗಳಲ್ಲಿ ಮಹಿಳೆಯರು ಮುಟ್ಟಾದರೆ, ಅಂಥವರನ್ನು ವಾರಗಟ್ಟಲೆ ಮನೆಯಿಂದ ಹೊರಗಡೆ ಇರಿಸಲಾಗುತ್ತದೆ. ಈ ಬಗ್ಗೆ ಆ ಸಮುದಾಯದ ಸ್ವಾಮಿಗಳೊಟ್ಟಿಗೆ ಜಾಗೃತಿಯನ್ನು ಮೂಡಿಸಲಾಗಿದೆ. ಕೆಲ ಗೊಲ್ಲರಹಟ್ಟಿ ಮತ್ತು ಭೋವಿಹಟ್ಟಿಗಳಲ್ಲಿ ಮಾದಿಗ ಜಾತಿಗೆ ಸೇರಿದವರನ್ನು ಬಿಟ್ಟುಕೊಳ್ಳದಿರುವ ಸಂಪ್ರದಾಯವು ಜಾರಿಯಲ್ಲಿದೆ. ಗಾಂಧೀಜಿಯವರು ಅಸ್ಪೃಶ್ಯತೆಯು ಒಂದು ಅಪರಾಧ ಎಂದರು. ಇಂಥ ಅಪರಾಧವನ್ನು ಜಾಗೃತಿಯ ಮೂಲಕವೇ ತಡೆಯಬೇಕಾಗುತ್ತದೆ. ಅಸ್ಪೃಶ್ಯತೆಯ ಮೂಲಮಂತ್ರವೇ ಜಾತಿಜ್ಯೇಷ್ಠತೆ. ಗರ್ಭಗುಡಿ ಸಂಸ್ಕೃತಿ ಇರುವೆಡೆ, ಮಹಿಳೆಯರು ಮುಟ್ಟಾಗುತ್ತಾರೆ ಎಂಬ ಕಾರಣಕ್ಕೆ ಪ್ರವೇಶವನ್ನು ನಿಷೇಧಿಸಲಾಗುತ್ತದೆ.

ಅದರಂತೆ ಶೋಷಿತರನ್ನು ಬಹಿಷ್ಕರಿಸಲಾಗುತ್ತದೆ. ನಿಸರ್ಗವು ಎಲ್ಲರಿಗೂ ಸಮಾನವಾಗಿ ಗಾಳಿ, ಬೆಳಕು, ನೀರು ಇತ್ಯಾದಿ ಕೊಡಮಾಡುತ್ತದೆ. ಇಂತಹ ನಿಸರ್ಗ ನಿಯಮಕ್ಕೆ ವಿರುದ್ಧವಾಗಿ ಕಟ್ಟುಪಾಡುಗಳನ್ನು ನಿರ್ಮಿಸಿಕೊಂಡ ಮಾನವ, ಉಚ್ಚ-ನೀಚ ಭಾವನೆಯನ್ನು ಕಲ್ಪಿಸಿಕೊಂಡಿದ್ದಾನೆ. ಯಾರೂ ಉಚ್ಚರಲ್ಲ, ಯಾರೂ ನೀಚರಲ್ಲ. ಅವರವರ ಆಲೋಚನೆ ಮತ್ತು ವರ್ತನೆಯಿಂದ ಉತ್ತಮ ಮತ್ತು ಅಧಮ ಅನಿಸಿಕೊಳ್ಳುತ್ತಾರಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT