ಬುಧವಾರ, ಜನವರಿ 29, 2020
30 °C
ರಾಜಕೀಯ ವಿಶ್ಲೇಷಣೆ

Analysis | ಕರ್ನಾಟಕದಲ್ಲಿ ಬಿಜೆಪಿ ಗೆಲುವು: ಎಷ್ಟು ಪಾಠ? ಯಾರಿಗೆ ಏನು ಸಂದೇಶ?

ಡಿ.ಎಂ.ಘನಶ್ಯಾಮ Updated:

ಅಕ್ಷರ ಗಾತ್ರ : | |

ಡಿಸೆಂಬರ್‌ 9 ದೇಶದ ಬಹುತೇಕ ರಾಜಕಾರಿಣಿಗಳಿಗೆ ಕೇವಲ ದಿನಾಂಕ ಮಾತ್ರ ಆಗಿರಲಿಲ್ಲ. ಪಕ್ಷಾಂತರದ ಪ್ರಶ್ನೆಗೆ ಜನರೇ ತೀರ್ಪು ಕೊಡಲಿ ಎಂಬ ಸುಪ್ರೀಂ ಕೋರ್ಟ್‌ ಆದೇಶದ ಮುಂದುವರಿದ ಭಾಗದಂತಿತ್ತು ಆ ನಿರೀಕ್ಷೆ. ಇದೀಗ ಜನರ ತೀರ್ಪು ಹೊರಬಂದಿದ್ದು, ಅಧಿಕಾರದಲ್ಲಿರುವ ಬಿಜೆಪಿ ನಿಚ್ಚಳ ಬಹುಮತದಿಂದ ಬೀಗಿದೆ. ಉಪಚುನಾವಣೆಯ ತೀರ್ಪಿನಲ್ಲಿ ಕಣದಲ್ಲಿ ಸೆಣೆಸಿದ್ದ ರಾಜಕೀಯ ಪಕ್ಷಗಳ ಜೊತೆಗೆ ದೂರದ ದೆಹಲಿಯಲ್ಲಿ ರಿಮೋಟ್‌ ಕಂಟ್ರೋಲ್ ಹಿಡಿದ ಹೈಕಮಾಂಡ್ ಸರದಾರರಿಗೂ ಪಾಠಗಳಿವೆ. ಅವು ಏನು?

ಕಥನ ಕಾರಣ

ಚುನಾವಣೆಯಲ್ಲಿ ಪ್ರಸ್ತಾಪವಾದ ಕಥನಗಳು ಮತ್ತು ಅದಕ್ಕೆ ಜನರು ಮತದಾನದ ಮೂಲಕ ತೋರಿದ ಪ್ರತಿಕ್ರಿಯೆಯೇ ಒಂದು ಅಧ್ಯಯನದ ವಸ್ತು. ‘ಒಂದು ರಾಜಕೀಯ ಪಕ್ಷದ ಟಿಕೆಟ್‌ ಮೇಲೆ ಗೆದ್ದು, ಮತ್ತೊಂದು ಪಕ್ಷಕ್ಕೆ ಹಾರುವುದು ಪಕ್ಷಾಂತರ, ಅದು ಅಕ್ರಮ, ಅಂಥವರಿಗೆ ಮತ ಹಾಕಬೇಡಿ’ ಎನ್ನುವುದು ಜೆಡಿಎಸ್‌–ಕಾಂಗ್ರೆಸ್‌ ಪಕ್ಷಗಳು ಜನರ ಮುಂದಿಟ್ಟ ಕಥನ.

‘ನನಗೆ ನೆಮ್ಮದಿಯಾಗಿ ಆಡಳಿತ ನಡೆಸಲು ಬಿಡಲಿಲ್ಲ. ಕಾಂಗ್ರೆಸ್‌ ಜೊತೆಗೆ ಇನ್ನೆಂದೂ ಹೋಗುವುದಿಲ್ಲ. ನನಗೆ ಬಲಕೊಡಿ. ನಿಮ್ಮನ್ನು ಕಾದುಕೊಳ್ಳುತ್ತೇನೆ’ ಎನ್ನುವುದು ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೇಳಿದ ಕಥನ. ‘ಡಿಸೆಂಬರ್ ನಂತರ ಬಿಜೆಪಿ ಸರ್ಕಾರ ಪತನವಾಗುತ್ತೆ’ ಎಂದು ಒಮ್ಮೆ, ‘ಬಿಜೆಪಿ ಸರ್ಕಾರ ಸ್ಥಿರವಾಗಿರುತ್ತೆ’ ಎಂದು ಮತ್ತೊಮ್ಮೆ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.

‘ಈ ಉಪಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿಗೆ ಮುಖಭಂಗವಾಗಿ, ವಿಧಾನಸಭೆಯಲ್ಲಿ ಅಗತ್ಯವಿರುವಷ್ಟು ಸಂಖ್ಯಾಬಲ ದೊರೆಯದಿದ್ದರೆ ಮತ್ತೊಮ್ಮೆ ಮೈತ್ರಿಯ ಆಲೋಚನೆ ಮಾಡುತ್ತೇವೆ’ ಎನ್ನುವುದು ಹಲವು ಕಾಂಗ್ರೆಸ್‌ ನಾಯಕರು ಪರೋಕ್ಷವಾಗಿ ಮತದಾರರಿಗೆ ರವಾನಿಸಿದ ಸಂದೇಶ. ಇಂಥ ಹೇಳಿಕೆಗಳಿಗೆ ಪ್ರತಿಕ್ರಿಯೆಯನ್ನೇ ನೀಡದೆ ಮೌನದಿಂದಲೇ, ‘ಮತ್ತೊಮ್ಮೆ ಮೈತ್ರಿ ಸಾಧ್ಯವಿಲ್ಲ’ ಎಂದು ಸಾರಿ ಹೇಳಿದ್ದು ಸಿದ್ದರಾಮಯ್ಯ ಅವರ ಶ್ರೇಯ.

‘ರಾಜ್ಯದ ಅಭಿವೃದ್ಧಿಗೆ ಸ್ಥಿರ ಸರ್ಕಾರ ಬೇಕು. ಜನರ ನೋವಿಗೆ ಸ್ಪಂದಿಸಲು ಯಡಿಯೂರಪ್ಪನಂಥ ಗಟ್ಟಿ ನಾಯಕ ಬೇಕು. ಜೆಡಿಎಸ್‌–ಕಾಂಗ್ರೆಸ್‌ ಈಗಾಗಲೇ ಪರಸ್ಪರ ನಂಬಿಕೆ ಇಲ್ಲದ ದಾಂಪತ್ಯ ನಡೆಸಿ ಮುರಿದುಬಿದ್ದ ಜೋಡಿ. ನೀವು ಅನರ್ಹತೆ–ಅರ್ಹತೆ ಅಂತೆಲ್ಲಾ ನೋಡಬೇಡಿ. ಯಡಿಯೂರಪ್ಪ ಸರ್ಕಾರ ಉಳೀಬೇಕು ಅಂತ ಮತಹಾಕಿ. ನೀವು ಕೇವಲ ನಿಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಮತ ಕೊಡುತ್ತಿಲ್ಲ; ಯಡಿಯೂರಪ್ಪ ಸರ್ಕಾರಕ್ಕೆ ಮತ ಕೊಡ್ತಿದ್ದೀರಿ’ ಎನ್ನುವುದು ಬಿಜೆಪಿ ಜನರ ಮುಂದಿಟ್ಟ ಕಥನ.

ನಿನ್ನೆಯ (ಡಿ.9) ಫಲಿತಾಂಶವನ್ನು ಸಾಲುಗಳ ಮಧ್ಯೆ ಓದಿಕೊಂಡರೆ ಯಡಿಯೂರಪ್ಪ ಕಥನವನ್ನೇ ಜನರು ಹೆಚ್ಚು ನಂಬಿದ್ದಾರೆ. ಇದರ ಜೊತೆಜೊತೆಗೆ ‘ಒಂದು ಪಕ್ಷದಿಂದ ಗೆದ್ದು, ಮತ್ತೊಂದಕ್ಕೆ ಜಿಗಿದವರನ್ನು ಮಣಿಸಿ, ಪಕ್ಷಾಂತರಿಗಳಿಗೆ ಉಳಿಗಾಲವಿಲ್ಲ ಎನ್ನುವ ಸಂದೇಶವನ್ನು ದೇಶಕ್ಕೆ ರವಾನಿಸಿ’ ಎನ್ನುವ ಜೆಡಿಎಸ್–ಕಾಂಗ್ರೆಸ್‌ ಕಥನವನ್ನು ಜನರು ಸಾರಾಸಗಟಾಗಿ ತಿರಸ್ಕರಿಸಿರುವುದು ಫಲಿತಾಂಶದ ಸಾರ.

ಇದನ್ನೂ ಓದಿ: ಬಿಜೆಪಿಗೆ ಒಲಿದ ಮತದಾರ ಜೆಡಿಎಸ್‌, ಕಾಂಗ್ರೆಸ್‌ಗೆ ಕೊಟ್ಟ ಸಂದೇಶವೇನು


ನರೇಂದ್ರ ಮೋದಿ, ಯಡಿಯೂರಪ್ಪ, ಅಮಿತ್ ಶಾ

ಮೋದಿ–ಶಾ ಜೋಡಿಗೆ ಫಲಿತಾಂಶದ ಸಂದೇಶ

ಈ ಉಪಚುನಾವಣೆಯ ಹಿನ್ನೆಲೆಯನ್ನು ಒಮ್ಮೆ ಪರಿಶೀಲಿಸೋಣ. ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆ, ಅಲ್ಪಾವಧಿ ಮುಖ್ಯಮಂತ್ರಿಯಾಗಿ, ಬಹುಮತ ಸಾಬೀತುಪಡಿಸಲು ಆಗದೆ ರಾಜೀನಾಮೆ ಕೊಟ್ಟ ಯಡಿಯೂರಪ್ಪ, ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ, ಅದನ್ನು ಕೆಡವಲು ಬಿಜೆಪಿ ನಡೆಸಿದ ಮ್ಯಾರಥಾನ್ ಪ್ರಯತ್ನ, 17 ಶಾಸಕರ ರಾಜೀನಾಮೆ ಅದರ ಕ್ಲೈಮ್ಯಾಕ್ಸ್, ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಕ್ರಮ, ಕುಮಾರಸ್ವಾಮಿ ರಾಜೀನಾಮೆ, ಸುಪ್ರೀಂ ಕೋರ್ಟ್‌ ತೀರ್ಪು... ಇದಿಷ್ಟೂ ಆದ ಮೇಲೆ ನಡೆದದ್ದು ಉಪಚುನಾವಣೆ.

ಕರ್ನಾಟಕ ಉಪಚುನಾವಣೆಯಲ್ಲಿ ಬಿಜೆಪಿ ಸಾಧಿಸಿದ ಗೆಲುವಿನ ಮೇಲ್ಮೆ ಇಡಿಯಾಗಿ ಇಲ್ಲಿನ ರಾಜ್ಯ ನಾಯಕತ್ವಕ್ಕೆ ಸಲ್ಲಬೇಕು. ಕೇಂದ್ರದ ನಾಯಕರು ಅಥವಾ ಬಿಜೆಪಿಯ ಇತರ ರಾಜ್ಯಗಳ ಸ್ಟಾರ್‌ ಪ್ರಚಾರಕರು ಈ ಬಾರಿ ಕಾಣಿಸಿಕೊಳ್ಳಲಿಲ್ಲ. ಕದನ ಕಣದಲ್ಲಿ ಬಿಜೆಪಿಯ ತಥಾಕಥಿತ ಅಯೋಧ್ಯೆ ವಿವಾದ ಇತ್ಯರ್ಥ, ಕಾಶ್ಮೀರದ ವಿಶೇಷ ಸ್ಥಾನಮಾನ ಹಾಗೂ ತ್ರಿವಳಿ ತಲಾಖ್  ರದ್ದು,  ಏಕರೂಪ ನಾಗರಿಕ ಸಂಹಿತೆಯಂಥ ವಿಚಾರಗಳು ಪ್ರಸ್ತಾಪವಾಗಲೂ ಇಲ್ಲ. ಯಡಿಯೂರಪ್ಪ ನಾಯಕತ್ವ, ಸ್ಥಿರ ಸರ್ಕಾರ, ಅಭಿವೃದ್ಧಿ ಬಿಜೆಪಿ ಮಂತ್ರವಾಗಿದ್ದರೆ, ಅನರ್ಹ ಶಾಸಕರ ಸೋಲಿಸಿ ಎಂಬುದು ಎದುರಾಳಿ ಪಕ್ಷಗಳ ಏಕತಾರಿಯಾಗಿತ್ತು.  ಹೀಗೆ, ಸ್ಥಳೀಯ ನಾಯಕರು, ಸ್ಥಳೀಯ ವಿಚಾರಗಳನ್ನು ಮುಂದಿಟ್ಟುಕೊಂಡು ಎದುರಿಸಿದ ಚುನಾವಣೆ ಇದು.

ಉಪಚುನಾವಣೆಯಲ್ಲಿ ಪ್ರಚಾರ ಮತ್ತು ಮತ್ತು ಪಕ್ಷವನ್ನು ಮುನ್ನಡೆಸುವ ಹೊಣೆಹೊತ್ತಿದ್ದವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಹೀಗಾಗಿಯೇ ಈ ಉಪಚುನಾವಣೆಯ ಫಲಿತಾಂಶ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿಯ ಕಾರ್ಯತಂತ್ರ ನಿರ್ಧರಿಸುವ ಮಹತ್ವದ ಫಲಿತಾಂಶ ಎಂದು ವಿಶ್ಲೇಷಿಸಲಾಗುತ್ತಿದೆ.

ಕರ್ನಾಟಕದಲ್ಲಿ ಪ್ರಬಲ ಸ್ಥಳೀಯ ನಾಯಕತ್ವ ಮತ್ತು ಸಮುದಾಯ ನಾಯಕನ ಪ್ರಭೆಯಿಲ್ಲದೆ ಉತ್ತಮ ಫಲಿತಾಂಶ ಸಾಧ್ಯವಿಲ್ಲ ಎನ್ನುವ ಸಂದೇಶವನ್ನೂ ಈ  ಫಲಿತಾಂಶ ಸ್ಪಷ್ಟವಾಗಿ ಅಮಿತ್‌ ಶಾ ಮತ್ತು ನರೇಂದ್ರ ಮೋದಿ ಅವರಿಗೆ ರವಾನಿಸಿದೆ.

ಇದನ್ನೂ ಓದಿ: ಬಿಜೆಪಿಗೆ ಬಲ ತುಂಬಿದ ಫಲಿತಾಂಶ: ಅಭಿವೃದ್ಧಿ ಇನ್ನಾದರೂ ಆದ್ಯತೆಯಾಗಲಿ

ವಿರೋಧಪಕ್ಷಗಳೂ ಪಾಠ ಕಲಿಯಬೇಕು

ತನ್ನನ್ನು ತಾನು ಜಾತ್ಯತೀತ ಎಂದು ಬಣ್ಣಿಸಿಕೊಳ್ಳುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ನಾಯಕರಲ್ಲಿ ಒಂದು ಲೆಕ್ಕಾಚಾರ ಚಾಲ್ತಿಯಲ್ಲಿದೆ. ಜೆಡಿಎಸ್‌ಗೆ ಆಗುವ ನಷ್ಟದ ಲಾಭ ಸದಾ ಕಾಂಗ್ರೆಸ್‌ಗೆ, ಕಾಂಗ್ರೆಸ್‌ಗೆ ಆಗುವ ನಷ್ಟದ ಲಾಭ ಸದಾ ಜೆಡಿಎಸ್‌ಗೆ ಎನ್ನುವುದು ಆ ಲೆಕ್ಕದ ತತ್ವ. ಆದರೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಈ ಲೆಕ್ಕಾಚಾರವನ್ನು ಉಲ್ಟಾಪಲ್ಟಾ ಮಾಡಿದೆ.

‘ಇಂದಲ್ಲಾ ನಾಳೆ ವಯೋ ಸಹಜ ಕಾರಣದಿಂದ ಯಡಿಯೂರಪ್ಪ ಹಿಂದೆ ಸರಿಯುತ್ತಾರೆ. ರಾಜ್ಯದಲ್ಲಿ ಬಿಜೆಪಿ ಕಳೆಗುಂದುತ್ತದೆ. ಆಗ ತನಗೆ ಮತ್ತೊಂದು ಅವಕಾಶ ಇದ್ದೇ ಇದೆ’ ಎನ್ನುವುದು ಪ್ರಸ್ತುತ ಕಾಂಗ್ರೆಸ್ ನಾಯಕರು ಮುಂದಿಡುವ ತರ್ಕ. ಒಂದು ರಾಷ್ಟ್ರೀಯ ಪಕ್ಷದ ಹಿರಿಯ ನಾಯಕತ್ವ ಹೀಗೂ ಯೋಚಿಸಬಹುದು!

ಆದರೆ ವಾಸ್ತವವಾಗಿ, ಕರ್ನಾಟಕದಲ್ಲಿ ಬಿಜೆಪಿಯ ಓಟ ಕಟ್ಟಿಹಾಕಲು ಶರದ್‌ ಪವಾರ್‌ರಂಥ ಚಾಣಾಕ್ಷರೇ ಬೇಕು. ಪ್ರತಿಪಕ್ಷಗಳಲ್ಲಿ ಅಂಥ ಭರವಸೆ ಮೂಡಿಸಿದ್ದವರು ಡಿ.ಕೆ.ಶಿವಕುಮಾರ್. ಅವರು ಮಹತ್ವಾಕಾಂಕ್ಷಿಯೇನೋ ಹೌದು. ಆದರೆ ಶರದ್‌ ಪವಾರ್‌ರ ಚಾಕಚಕ್ಯತೆ ಇನ್ನೂ ರೂಢಿಸಿಕೊಳ್ಳಬೇಕಿದೆ.

ಮೈತ್ರಿ ಸರ್ಕಾರ ಉಳಿಸಲು ಡಿ.ಕೆ.ಶಿವಕುಮಾರ್ ಕಳೆದ ಜುಲೈನಲ್ಲಿ ಮಾಡಿದ ಪ್ರಯತ್ನ ದೇಶದ ಎಲ್ಲ ಮಾಧ್ಯಮಗಳ ಗಮನ ಸೆಳೆದಿತ್ತು. ಮುಂಬೈ ಹೊಟೆಲ್ ಎದುರು ಸುರಿವ ಮಳೆಯಲ್ಲೇ ಡಿಕೆಶಿ ಇಡ್ಲಿ ತಿಂದಿದ್ದ ಸಂಗತಿ ರಾಷ್ಟ್ರೀಯ ಸುದ್ದಿಯಾಗಿತ್ತು. ಆದರೆ ಅಲ್ಲಿಂದಾಚೆಗೆ ನಡೆದ ಬೆಳವಣಿಗೆಗಳು ಶಿವಕುಮಾರ್‌ರನ್ನು ಹಣ್ಣು ಮಾಡಿದಂತೆ ಭಾಸವಾಗುತ್ತದೆ. ಅಕ್ಟೋಬರ್‌ನಲ್ಲಿ ಅವರು ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿಗೆ ಬಂದಾಗ ವಿರೋಚಿತ, ಅದ್ಧೂರಿ ಸ್ವಾಗತ ಸಿಕ್ಕಿತ್ತು. ಶಿವಕುಮಾರ್ ಸಹ ಹುಮ್ಮಸ್ಸು ತೋರಿದ್ದರು. ಆದರೆ ಜುಲೈನಲ್ಲಿ ಸರ್ಕಾರ ಉಳಿಸಿಕೊಳ್ಳಲೇಬೇಕು ಎನ್ನುವ ಹಟ ತೋರಿದ್ದ ಈ ನಾಯಕ ಉಪಚುನಾವಣೆಯ ನಿರ್ಣಾಯಕ ಕ್ಷಣಗಳಲ್ಲಿ ಚುರುಕಾಗಲಿಲ್ಲ ಎನ್ನುವ ಮಾತುಗಳು ಪಕ್ಷದ ಆಂತರಿಕ ವಲಯದಲ್ಲಿ ಕೇಳಿ ಬರುತ್ತವೆ.

ಕಿಂಗ್‌, ಕಿಂಗ್‌ಮೇಕರ್ ಎರಡೂ ಆಗಲಿಲ್ಲ ಎಚ್‌ಡಿಕೆ

ಉಪಚುನಾವಣೆಯಲ್ಲಿ ಅತಿದೊಡ್ಡ ಹೊಡೆತ ತಿಂದ ಪಕ್ಷ ಜೆಡಿಎಸ್. ತಮ್ಮ ಪಕ್ಷಕ್ಕೆ ಒಂದಿಷ್ಟು ಸ್ಥಾನಗಳು ಬಂದರೆ ಕಾಂಗ್ರೆಸ್‌ನೊಂದಿಗೆ ಮತ್ತೆ ಚೌಕಾಸಿ ಮಾಡಬಹುದು ಅಥವಾ ಬಿಜೆಪಿಯೊಂದಿಗೆ ಮಾತುಕತೆ ನಡೆಸಬಹುದು ಎನ್ನುವ ನಿರೀಕ್ಷೆ ಕುಮಾರಸ್ವಾಮಿ ಅವರಿಗಿತ್ತು. ಮತ್ತೊಮ್ಮೆ ಕಿಂಗ್ ಅಥವಾ ಕಿಂಗ್‌ಮೇಕರ್ ಆಗುವ ಭರವಸೆ ಇಟ್ಟುಕೊಂಡಿದ್ದ ಕುಮಾರಸ್ವಾಮಿ ಅವರಿಗೆ ದಕ್ಕಿದ್ದು ಮಾತ್ರ ಭ್ರಮನಿರಸನ. ಫಲಿತಾಂಶದ ದಿನ ಅವರು ಮಾಡಿದ್ದ ಟ್ವೀಟ್‌ನಲ್ಲಿಯೂ ಅದೇ ವ್ಯಕ್ತವಾಯಿತು.

ಕರ್ನಾಟಕದ ಮತ್ತೊಂದು ಮಾದರಿ

ಇಷ್ಟು ದಿನ ದೇಶದಲ್ಲಿ ‘ಅಪರೇಷನ್ ಕಮಲ’ದ ವಿಚಾರ ಪ್ರಸ್ತಾಪವಾದಾಗಲೆಲ್ಲಾ ‘ಕರ್ನಾಟಕ ಮಾದರಿ’ ಎನ್ನುವ ಪರಿಕಲ್ಪನೆ ತೇಲಿಬರುತ್ತಿತ್ತು. ಪ್ರತಿಪಕ್ಷಗಳ ಸದಸ್ಯರ ರಾಜೀನಾಮೆ ಕೊಡಿಸಿ, ಉಪಚುನಾವಣೆಗಳಲ್ಲಿ ಅವರನ್ನು ಆಡಳಿತಾರೂಢ ಪಕ್ಷಗಳಿಂದ ಗೆಲ್ಲಿಸಿಕೊಂಡು ಬರುವ ಮಾದರಿಯದು. ಈಗ ದೇಶದ ರಾಜಕೀಯ ವಲಯದಲ್ಲಿ ಕರ್ನಾಟಕದ್ದೇ ಆದ ಮತ್ತೊಂದು ಮಾದರಿ ಪ್ರಸ್ತಾಪವಾಗುತ್ತಿದೆ.

ಯಡಿಯೂರಪ್ಪ ಅವರ ವಯಸ್ಸು ಈಗ 76 (ಜನನ: 27ನೇ ಫೆಬ್ರುವರಿ 1943). ಬಿಜೆಪಿಯ ಕೇಂದ್ರ ನಾಯಕರು ಸಕ್ರಿಯ ರಾಜಕಾರಣಕ್ಕೆ ವಿಧಿಸಿರುವ ವಯೋ ನಿರ್ಬಂಧ 75 ವರ್ಷ. ಅಂದರೆ ಯಡಿಯೂರಪ್ಪ ಈಗಾಗಲೇ ರಾಜಕೀಯ ನಿವೃತ್ತಿ ಪಡೆದು ಒಂದು ವರ್ಷವಾಗಬೇಕಿತ್ತು. ಆದರೆ ವಾಸ್ತವವಾಗಿ ಆಗಿರುವುದೇನು? ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಮೂಲಕ ಮತ್ತು ಮುಂದಿನ ವಿಧಾನಸಭೆ ಚುನಾವಣೆ ಎದುರಿಸಲು ನಾನು ಸಿದ್ಧ ಎನ್ನುವ ಮೂಲಕ ಯಡಿಯೂರಪ್ಪ ಕೇಂದ್ರದ ಈ ನಿಯಮ ಲೆಕ್ಕಕ್ಕಿಲ್ಲ ಎಂದು ಪರೋಕ್ಷ ಸಂದೇಶ ರವಾನಿಸಿದ್ದಾರೆ.

ಮೈತ್ರಿ ಕೆಡವಿದರೆ ಕೆಟ್ಟ ಹೆಸರು ಬರುತ್ತೆ ಎನ್ನುವ ಕೇಂದ್ರ ನಾಯಕರ ಹಿಂಜರಿಕೆಯನ್ನು ಮೀರಿ ರಿಸ್ಕ್ ತೆಗೆದುಕೊಂಡ ಯಡಿಯೂರಪ್ಪ ಉಪಚುನಾವಣೆಯಲ್ಲಿ ತಾವೇ ಬಿಜೆಪಿಯ ಮುಖ ಆಗುವ ಮೂಲಕ ಚುನಾವಣೆ ಎದುರಿಸಿದರು. ಈ ಮೂಲಕ ಕರ್ನಾಟಕ ಬಿಜೆಪಿಗೆ ತಾನು ಎಷ್ಟರಮಟ್ಟಿಗೆ ಅನಿವಾರ್ಯ ಎನ್ನುವುದನ್ನು ತೋರಿಸಿಕೊಟ್ಟರು.

ಕಣ್ಣಿಗೆ ಕಾಣುವ ಭರವಸೆ

ಪ್ರಸ್ತುತ ಅಧಿಕಾರ ಕಳೆದುಕೊಂಡಿರುವ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಬಿಜೆಪಿ ಸಾವರಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದೆ. ಅಧಿಕಾರ ಕಳೆದುಕೊಂಡ ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್, ರಾಜಸ್ಥಾನದ ವಸುಂಧರ ರಾಜೆ ಅವರನ್ನು ರಾಷ್ಟ್ರೀಯ ಘಟಕದ ಉಪಾಧ್ಯಕ್ಷರನ್ನಾಗಿಸಿ ದೆಹಲಿಗೆ ಬಿಜೆಪಿ ಆಹ್ವಾನಿಸಿದೆ. ಆದರೆ ಇವರಿಬ್ಬರೂ ದೆಹಲಿಯಿಂದ ದೂರವೇ ಉಳಿದಿದ್ದಾರೆ. ಇಂದಲ್ಲ ನಾಳೆ ಮತ್ತೆ ಮುಖ್ಯಮಂತ್ರಿಯಾಗುವ ಆಕಾಂಕ್ಷೆ ಅವರಲ್ಲಿದೆ. ಅವರ ಪಾಲಿಗೆ ಈಗ ಯಡಿಯೂರಪ್ಪ ಕಣ್ಣಿಗೆ ಕಾಣುವ ಭರವಸೆ.

ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ ಪ್ರಬಲ ಪ್ರತಿಪಕ್ಷ ಬಿಜೆಪಿ ಎದುರು ದುರ್ಬಲ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಈವರೆಗೂ ಶಿವಸೇನಾ, ಕಾಂಗ್ರೆಸ್ ಮತ್ತು ಎನ್‌ಸಿಪಿ ನಡುವೆ ಒಮ್ಮತ ಮೂಡಿಲ್ಲ. ಕರ್ನಾಟಕದ ಉಪಚುನಾವಣೆಯ ಫಲಿತಾಂಶವು ಬಿಜೆಪಿಗೆ ಕೊಟ್ಟಿರುವ ಭರವಸೆ ಯಿಂದಾಗಿ ಉದ್ಧವ್ ಠಾಕ್ರೆ, ಶರದ್‌ ಪವಾರ್‌ ಇನ್ನು ಮುಂದೆ ಹೆಚ್ಚು ಎಚ್ಚರಿಕೆಯಿಂದ ಇರಬೇಕಾದ ಸಂದೇಶವನ್ನೂ ಕೊಟ್ಟಿದೆ.

ಇದನ್ನೂ ಓದಿ: ಉಪಚುನಾವಣೆ ಫಲಿತಾಂಶ | ಸ್ಥಿರತೆಗೆ ಮತ: ಸಂಪುಟದತ್ತ ಚಿತ್ತ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು