ಬೆಂಗಳೂರಿನ ರಜನಿ ಎಲ್ಲ ಮಕ್ಕಳಂತೆ ಆಡಿಕೊಂಡಿದ್ದ ಹುಡುಗಿ. ಒಂಬತ್ತು ವರ್ಷದವಳಿದ್ದಾಗ ಸಣ್ಣ ಶೀತವೊಂದಕ್ಕಾಗಿ ವೈದ್ಯರು ಕೊಟ್ಟ ಔಷಧಿ ತೀವ್ರ ಅಲರ್ಜಿಯಾಗಿ ಅವಳ ಕಣ್ಣಿನ ದೃಷ್ಟಿ ನಿಧಾನವಾಗಿ ಕ್ಷೀಣಿಸಲು ಪ್ರಾರಂಭವಾಯಿತು. ಕಾಮರ್ಸ್ ಪದವಿ ಮುಗಿಯುವ ವೇಳೆಗೆ ಬಲಗಡೆಯ ಕಣ್ಣಿನ ದೃಷ್ಟಿ ಸಂಪೂರ್ಣವಾಗಿ ಹೋಯಿತು. ಎಡಗಣ್ಣಿನ ದೃಷ್ಟಿಯೂ ಕ್ಷೀಣಿಸಲು ಶುರುವಾಯಿತು. ಆದರೆ ಅದರ ಹೊರತಾಗಿಯೂ ರಜಿನಿ ಸಿಎ ಓದಬೇಕೆಂದು ಪಣ ತೊಟ್ಟರು. ದೃಷ್ಟಿ ಸರಿ ಇರುವವರಿಗೇ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗುವುದು ಕಷ್ಟಕರವಾದದ್ದು. ಆದರೆ ರಜನಿ ತಾವು ಚಾರ್ಟರ್ಡ್ ಅಕೌಂಟೆಂಟ್ ಆಗಲೇಬೇಕೆಂದು ತೀರ್ಮಾನಿಸಿದ್ದರು.

ಪರೀಕ್ಷೆಗೆ ತಯಾರಿ ನಡೆಸುತ್ತಿರುವಾಗಲೇ ಎಡಗಣ್ಣಿನ ದೃಷ್ಟಿಯೂ ಹೊರಟುಹೋಯಿತು. ಇದು ಆಗಿದ್ದು 1993ರಲ್ಲಿ. ಧೃತಿಗೆಟ್ಟ ಹುಡುಗಿಗೆ ದಿಕ್ಕೇ ತೋಚಲಿಲ್ಲ. ಕಾರಣ ಆಗ ಓದಲು ಸಹಾಯ ಮಾಡುವ ತಂತ್ರಜ್ಞಾನ ಬೆಳೆದಿರಲಿಲ್ಲ. ಹೀಗಾಗಿ ಏಳು ವರ್ಷ ಓದು ನಿಲ್ಲಿಸಿದರು. ಸಹೋದರ ಮತ್ತು ಪಾಲಕರು ಆತ್ಮ ಸ್ಥೈರ್ಯ ಮುದುಡಲು ಬಿಡಲಿಲ್ಲ. 2000ನೇ ಇಸವಿಯಲ್ಲಿ ಮತ್ತೆ ಓದಲು ಮರಳಿದರು. ಕಂಪ್ಯೂಟರ್ ಪರದೆಯ ಮೇಲಿನ ವಾಕ್ಯಗಳನ್ನು ಓದುವ ಸಾಫ್ಟ್ವೇರ್ ಸಹಾಯ ಮಾಡಿತು. ಹಗಲೂ ರಾತ್ರಿ ಕಷ್ಟಪಟ್ಟರು. ಅಂತೂ 2002ರಲ್ಲಿ ಭಾರತದ ಮೊದಲ ದೃಷ್ಟಿವಿಹೀನ ಮಹಿಳಾ ಚಾರ್ಟರ್ಡ್ ಅಕೌಂಟೆಂಟ್ ಆದರು ರಜನಿ ಗೋಪಾಲಕೃಷ್ಣ.

ಆದರೆ ರಜನಿ ಕೆಲಸದ ಹುಡುಕಾಟದಲ್ಲಿ ತೊಡಗಿದಾಗ ದೃಷ್ಟಿದೋಷವನ್ನೇ ಮುಖ್ಯವೆಂದು ಪರಿಗಣಿಸಲಾಯಿತು. ಅಂಗವಿಕಲರಿಗೆ ಸೌಲಭ್ಯಗಳ ಕೊರತೆಗಿಂತ ಸಮಸ್ಯೆಯನ್ನುಂಟು ಮಾಡುವ ಸಂಗತಿ ಎಂದರೆ ಸಮಾಜದ ಯೋಚನಾ ವಿಧಾನ ಎನ್ನುತ್ತಾರೆ ರಜನಿ. ಅಂಗವಿಕಲರು ಏನು ಮಾಡಬಲ್ಲರು ಎಂಬ ಪ್ರಶ್ನೆ ಕೇಳದೇ ಅವರಲ್ಲಿರುವ ಸಾಮರ್ಥ್ಯಕ್ಕೆ ಸಮಾಜ ಬೆಲೆ ಕೊಟ್ಟಾಗ ಮಾತ್ರ ಸರ್ಕಾರಗಳ, ಕಾರ್ಪೊರೇಟ್ ಸಂಸ್ಥೆಗಳ ಒಳಗೊಳ್ಳುವಿಕೆಯ ಘೋಷಣೆಗಳಿಗೆ ಅರ್ಥ ಬರುತ್ತದೆ ಎನ್ನುತ್ತಾರೆ ಅವರು. ಬೇರೆಯವರು ತಮ್ಮ ದೃಷ್ಟಿಹೀನತೆಯಿಂದ ಹಿಂಜರಿದರೂ ತಾವು ಹಿಂದೆ ಸರಿಯಲಿಲ್ಲ ಎನ್ನುವ ರಜನಿ ಗೋಪಾಲಕೃಷ್ಣ ಈಗ ಭಾರತದ ಪ್ರಮುಖ ಸಾಫ್ಟ್ವೇರ್ ಕಂಪನಿಗಳ ಜತೆ ಕೆಲಸ ಮಾಡುತ್ತಿದ್ದಾರೆ ಮತ್ತು ತಮ್ಮಂತಹುದೇ ಸಮಸ್ಯೆ ಇರುವವರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.

ಆಘಾತ ಅಪ್ಪಳಿಸಿದಾಗ ರಜನಿ ಅದನ್ನು ಎದುರಿಸಿದ ಬಗೆ ಪ್ರತಿಯೊಬ್ಬರಿಗೂ ಮಾದರಿ. ಸಮಸ್ಯೆ ಶುರುವಾದಾಗ ಶಾಲೆಯಲ್ಲೂ ಸಮಸ್ಯೆಯಾಯಿತು. ಸಂಬಂಧಿಕರು ಪರಿಚಯದವರ ಅನುಕಂಪ ಬಹಳ ಕಿರಿಕಿರಿಯನ್ನುಂಟು ಮಾಡುತ್ತಿತ್ತು. ಅದರಿಂದ ಪಾರಾಗಲು ಹೆಚ್ಚು ಹೆಚ್ಚು ಓದಿದರು. ಕಾಲೇಜಿನಲ್ಲಿ ಸಂವೇದನಾಶೀಲ ಸ್ನೇಹಿತರು ಸಿಕ್ಕಿದರು. ಎರಡನೇ ಕಣ್ಣಿನ ದೃಷ್ಟಿ ಕೂಡ ಹೋದಾಗ ತಮ್ಮ ಮೊದಲ ಸವಾಲು ತನಗಿನ್ನು ಕಣ್ಣು ಕಾಣುವುದಿಲ್ಲ ಎಂಬುದನ್ನು ಒಪ್ಪಿಕೊಳ್ಳುವುದಾಗಿತ್ತು ಎನ್ನುತ್ತಾರೆ ರಜನಿ. ಆದರೆ ಕೊರಗುತ್ತ ಕೂರುವ ಬದಲು ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಉದ್ಯೋಗ ಪಡೆಯುವುದೊಂದೇ ತಮ್ಮೆದುರು ಇರುವ ದಾರಿ ಎಂದು ಯೋಚಿಸಿದರು. ಅಷ್ಟೇ ಅಲ್ಲ, ಚೆಸ್ ಕಲಿತರು, ಅಡುಗೆ ಕಲಿತರು, ವೀಣೆ ನುಡಿಸಲು ಕಲಿತರು. ತಮ್ಮ ಸಾಧನೆಗೆ ರಾಷ್ಟ್ರಪತಿಗಳಿಂದ ಸನ್ಮಾನವನ್ನೂ ಪಡೆದರು.

ನಮಗೆ ನಾವೇ ಮಿತಿಗಳನ್ನು ಹಾಕಿಕೊಳ್ಳುವುದೇ ಹೊರತು ಮನುಷ್ಯನಿಗೆ ಸಾಧಿಸಲು ಸಾಧ್ಯವಾಗದ್ದು ಏನೂ ಇಲ್ಲ ಎಂಬುದನ್ನು ಸಾಧಿಸಿ ತೋರಿಸಿದ ರಜನಿಯವರ ಬದುಕು ಸಣ್ಣ ಸಣ್ಣ ವಿಷಯಗಳಿಗೂ ಭರವಸೆ ಕಳೆದುಕೊಳ್ಳುವವರಿಗೆ ಬಹುದೊಡ್ಡ ಮಾದರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.