ಒಬ್ಬ ಹುಡುಗ ಮಧ್ಯಾಹ್ನ ಊಟಕ್ಕೆ ಬಂದ. ಕಾಲು ಬುಳಬುಳ ಅಂತದೆ ಎಂದ. ಏನಿದು ಬುಳಬುಳ? ಇಂತಹ ಶಬ್ದವೊಂದು ಕನ್ನಡ ಡಿಕ್ಷನರಿಯಲ್ಲೇ ಇಲ್ಲ. ತಲೆನೋವು ಅಂದರೆ ಗುಳಿಗೆ ಕೊಡಬಹುದು. ಕೆಮ್ಮು ಜ್ವರ ಅಂದರೆ ಔಷಧಿ ಕೊಡಬಹುದು. ಈ ಬುಳಬುಳಕ್ಕೆ ಏನು ಮದ್ದು ಕೊಡುವುದು? ಆದರೆ ತಾಯಿಗೆ ಗೊತ್ತು. ಬುಳಬುಳ ಅಂದರೆ ಏನು ಅಂತ. ಬುಳಬುಳ ಅಂದರ ರಾತ್ರಿ ಊಟಕ್ಕೆ ಹೊರಗೆ ಹೋಗೋಣ ಅಂತ ಅಷ್ಟೆ. ಮಕ್ಕಳ ಈ ಅಭ್ಯಾಸ ತಪ್ಪಿಸಬೇಕು. ದುಡಿಯಲು ಹಚ್ಚಬೇಕು.
ಬೆಂಗಳೂರಲ್ಲಿ ಒಬ್ಬಳು ಮಹಿಳೆ ಇದ್ದಾಳೆ. ಅವಳಿಗೆ 70 ವರ್ಷ. 30X40 ಸೈಟಲ್ಲಿ ಮನೆ ಕಟ್ಟಿಕೊಂಡಿದ್ದಾಳೆ. ನೂರಾರು ಬಗೆಯ ಹಣ್ಣು, ಕಾಯಿಪಲ್ಲೆ ಮನೆ ಒಳಗೇ ಬೆಳೀತಾಳೆ. ಕಾಯಿಪಲ್ಲೆ, ಹಣ್ಣು ತರೋಕೆ ವಟ್ಟಾ ಬಜಾರಕ್ಕೆ ಹೋಗಿಯೇ ಇಲ್ಲ ಆಕೆ. ಸಂಕಲ್ಪ ಇತ್ತು ಅಂದರೆ ನಮ್ಮ ಮನೇನು ಹೊಲ ಆಗುತೈತಿ. ನೀವು ದುಡಿಯಾಕೆ ಶುರುಮಾಡಿದ್ರ ಮೊದಲು ನಿಮ್ಮ ಕೈಯಾಗಿನ ಮೊಬೈಲ್ ಕೆಳಕ್ಕೆ ಬೀಳುತೈತಿ. ಮೈ ಬಾಗುತೈತಿ. ಆರೋಗ್ಯ ಬರುತೈತಿ. ದುಡಕೋತ ಇದ್ದರ ಆರೋಗ್ಯ ಇರ್ತದ.
ಗುರುಗಳತ್ತ ಒಬ್ಬರು ಬಂದರು. ‘ನಿಮ್ಮ ಆಶೀರ್ವಾದದಿಂದ ಮಗಳಿಗೆ ಚಲೋ ಮನಿ ಸಿಕ್ಕಿದೆ’ ಎಂದರು. ಚಲೋ ಮನಿ ಎಂದರೆ ಏನು? ಕಡ್ಡಿ ತೆಗೆದು ಆ ಕಡೆ ಈ ಕಡೆ ಇಡೋಂಗಿಲ್ಲ. ಅಂತಾ ಮನಿ. ಒಂದು ವರ್ಷ ಆಗೋದರೊಳಗೆ ಮಗಳು ತವರು ಮನಿಗೆ ಬಂದಳು. ಆಗ ಅವಳು ನೂರು ಕೆ.ಜಿ. ತೂಕ ಆಗಿದ್ದಳು. ‘ಅಲ್ಲಬೆ ಹೀಂಗ್ಯಾಕೆ ಆದಿ’ ಎಂದು ಕೇಳಿದಳು ತಾಯಿ. ‘ನೀನು ಅಂಥಾ ಮನೀಗೆ ಕೊಟ್ಟಿ. ಕಡ್ಡಿ ಕೆಲಸ ಇಲ್ಲ. ಅದಕ್ಕ ಗುಡ್ಡ ಆಗೇನಿ’ ಅಂದಳು ಮಗಳು. ಮಕ್ಕಳಿಗೆ ದುಡಿಯೋದು ಕಲಿಸಬೇಕೇ ಹೊರತು ಸುಮ್ಮನೆ ಕುಳಿತುಕೊಳ್ಳೋದು ಕಲಿಸಬಾರದು. ಶರಣರು ಕಲಿಸಿದ್ದು ಅದನ್ನು. ದುಡಿಯೋದರಿಂದ ಆರೋಗ್ಯ ಐತಿ, ಸಮೃದ್ಧಿ ಐತಿ, ಚಿಂತಿ ದೂರವಾಗುತೈತಿ.
ಉಪಕಾರ ಸ್ಮರಣೆಗಾಗಿಯೂ ಕೆಲಸ ಮಾಡಬೇಕು. ಮನುಷ್ಯ ಅಂದರ ಯಾರೋ ಎಲ್ಲೋ ಒಗೆದ ಕಲ್ಲು ಅಲ್ಲ. ಮಾಂಸದ ಮುದ್ದೆ ಅಲ್ಲ. ಬಹಳ ಜನರ ಉಪಕೃತದ ಮೊತ್ತ ಮನುಷ್ಯ. ನಾವು ಈ ಭೂಮಿಗೆ ಬರುವುದಕ್ಕೆ ಮೊದಲೇ ನಮ್ಮ ತಾಯಿಯ ಎದೆಯ ಒಳಗೆ ಹಾಲು ಇಟ್ಟು ಕಳಿಸ್ಯಾನಲ್ಲ ದೇವರು. ಅವ ಎಷ್ಟು ಉಪಕಾರ ಮಾಡ್ಯಾನ ನಮಗ. ತಾಯಿ ಹಾಲಿನಲ್ಲಿ ಎಷ್ಟು ಫ್ಯಾಟ್ ಇರಬೇಕು? ಯಾವ ವಿಟಮಿನ್ ಇರಬೇಕು ಅಂತಾ ನಾವು ಚೆಕ್ ಮಾಡ್ಯಾವೇನು? ಅವ ತುಂಬಿ ಕಳಿಸ್ಯಾನ. ಇಷ್ಟೆಲ್ಲಾ ಕೊಟ್ಟ ಅವನ ಉಪಕಾರ ಸ್ಮರಣೆಗೆ ನಾವು ಏನು ಮಾಡಬೇಕು? ಅದಕ್ಕ ನಾವು ಹಿಮಾಲಯ ನಿರ್ಮಾಣ ಮಾಡಬೇಕಿಲ್ಲ. ಹೊಳೆ ನಿರ್ಮಾಣ ಮಾಡಬೇಕಿಲ್ಲ. ಗುಡ್ಡ ಕಟ್ಟಬೇಕಿಲ್ಲ. ಜೀವನ ಸಾರ್ಥಕ ಆಗಬೇಕು ಎಂದರೆ ನೀವು ಹೆಚ್ಚೇನು ಮಾಡಬೇಕಿಲ್ಲ. ದೇವರು ಏನು ಕೊಟ್ಟಾನಲ್ಲ ಅದನ್ನು ಕೆಡಿಸಲಾರದಂಗೆ ಇಟ್ಟರೆ ಸಾಕು. ಸ್ವಚ್ಛ ಇಡಬೇಕು. ಸ್ವಚ್ಛ ದೇಶ, ಸ್ವಚ್ಛ ರಾಜ್ಯ. ಇಷ್ಟು ಮಾಡಿದರೆ ಸಾಕು. ಅದೇ ಧರ್ಮ. ಅದನ್ನು
ಮಕ್ಕಳಿಗೆ ಕಲಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.