ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಕಪ್ಪೆಂದರೆ ಕನಿಷ್ಠವೇ?

Published 29 ಫೆಬ್ರುವರಿ 2024, 22:30 IST
Last Updated 29 ಫೆಬ್ರುವರಿ 2024, 22:30 IST
ಅಕ್ಷರ ಗಾತ್ರ

ಬಿಳುಪಿನ ಹುಚ್ಚು ಹಿಡಿದಿದೆ ಜನಕ್ಕೆ...

ಮೊನ್ನೆ ಅಯೋಧ್ಯೆಯಲ್ಲಿ ಪ್ರತಿಷ್ಠಾಪಿತವಾದ ಬಾಲರಾಮನ ಮೂರ್ತಿ ಅರಳಿರುವುದೇ ಕಪ್ಪು ಶಿಲೆಯಲ್ಲಿ. ರಾಮ, ಕೃಷ್ಣರೆಲ್ಲ ನಮ್ಮ ಪೌರಾಣಿಕ ಕಲ್ಪನೆಯಲ್ಲಿ ಕಪ್ಪು ಸುಂದರರೇ. ಶಕ್ತಿದೇವತೆ ಕಾಳಿಯೂ ಕಪ್ಪೇ. ಕೃಷ್ಣ ಮತ್ತು ಕಾಳಿ ಎಂಬ ಶಬ್ದಗಳ ಅರ್ಥವೇ ಕಪ್ಪು. ಬಹುಶಃ ನಮ್ಮ ದೇವತೆಗಳ ರೂಪಕಲ್ಪನೆ ಮಾಡಿದ ಕಾಲದಲ್ಲಿ ಕಪ್ಪು ಎಂದರೆ ಕನಿಷ್ಠ, ಬಿಳುಪು ಎಂದರೆ ಶ್ರೇಷ್ಠ ಎಂಬ ಈ (ಅ)ಸಾಂಸ್ಕೃತಿಕ ಅಭಿಪ್ರಾಯವೇ ಇರಲಿಲ್ಲ. ಅದೆಲ್ಲಾ ಕಾಲಾನಂತರದಲ್ಲಿ ಆದ ಪ್ರಮಾದ.

ನಮ್ಮ ಜನಕ್ಕೆ ಬಿಳುಪೆಂದರೆ ಅದೇನೋ ಮೋಹ. ಕಪ್ಪಗಿರುವ ಹುಡುಗ ಬಿಳಿಯ ಹುಡುಗಿಯನ್ನೇ ಮದುವೆಯಾಗಬೇಕು. ಕಪ್ಪು ಹುಡುಗಿಗೂ ಬಿಳಿಯ ಹುಡುಗನೇ ಬೇಕು. ನಮ್ಮ ಬಿಳಿಯ ಚರ್ಮದ ಮೋಹವನ್ನೇ ಬಂಡವಾಳ ಆಗಿಸಿಕೊಂಡ ಕಂಪನಿಗಳು ಮೂರು ವಾರದಲ್ಲೋ, ಆರು ವಾರದಲ್ಲೋ ನಮ್ಮ ಕಪ್ಪು ಚರ್ಮವನ್ನು ಬಿಳಿಯಾಗಿಸುವ ಆಸೆ ಹುಟ್ಟಿಸಿ, ಬಗೆ ಬಗೆ ಕ್ರೀಮ್, ಲೋಷನ್‌ಗಳನ್ನು ತಯಾರಿಸಿ, ಸಹಜ ಚರ್ಮಕ್ಕೆ ಕೆಮಿಕಲ್ ಮೆತ್ತಿಸಿ ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿ ಬಾಚಿಕೊಳ್ಳುತ್ತವೆ.

ಇನ್ನು ನಮ್ಮ ಬಟ್ಟೆಗಳನ್ನೂ ಬೆಳ್ಳಗೆ...ಇನ್ನೂ ಭೆಳ್ಳಗೆ ಝಗಮಗಿಸುವಂತೆ ಒಗೆಯಲು ರಾಸಾಯನಿಕ ಗಳನ್ನು ಸುರಿದು ‘ಎಕ್ಸ್ ಟ್ರಾ ವೈಟ್’, ‘ಅಲ್ಟ್ರಾ ವೈಟ್', ಡಿಟರ್ಜೆಂಟ್ ಪುಡಿ, ಸಾಬೂನುಗಳನ್ನು ತಯಾರಿಸುತ್ತವೆ. ಬಾತ್ ರೂಂಗಳನ್ನು ಬೆಳ್ಳಗೆ ಲಕಲಕ ಹೊಳೆಯುವಂತೆ ಮಾಡಲು ಈ ರಾಸಾಯನಿಕಗಳೇ ಬೇಕು. ಅದರಿಂದಾಗಿ ನಮ್ಮ ಒಳಚರಂಡಿಯ ತುಂಬಾ ರಾಸಾಯನಿಕವೇ ಹರಿಯುತ್ತದೆ. ಆ ನೀರನ್ನು ಉಪಯೋಗಿಸಿ ಬೆಳೆಯುವ ಸೊಪ್ಪು ತರಕಾರಿ ಗಳಲ್ಲೂ ಆ ರಾಸಾಯನಿಕಗಳೇ ತುಂಬಿಕೊಂಡಿರುತ್ತವೆ. ಆ ಮೂಲಕವಾಗಿ ನಮ್ಮ ದೇಹದೊಳಕ್ಕೂ ಬಂದು ತುಂಬಿಕೊಳ್ಳುತ್ತವೆ. ಒಟ್ಟಿನಲ್ಲಿ ನಮಗೆ‌ ಬೆಳ್ಳಗಿದ್ದುದೆಲ್ಲಾ ಹಾಲು.

ನಮ್ಮ ಸಮಾಜದಲ್ಲಿ ಅದು ಯಾಕೋ, ಹೇಗೋ, ಯಾವಾಗಲೋ ಬೆಳ್ಳಗಿರುವ ಜನ ಶ್ರೇಷ್ಠರು ಕಪ್ಪಗಿರುವವರು ಕನಿಷ್ಠರು ಎಂದೂ ಆಗಿಹೋಯಿತು. ಬರುಬರುತ್ತಾ ಕಪ್ಪು ಎನ್ನುವುದು ಅಜ್ಞಾನ, ಅನಕ್ಷರತೆ, ಬಡತನ, ಎಂದೂ ಬಿಳುಪು ಎನ್ನುವುದು ಜ್ಞಾನ, ವಿದ್ಯೆ, ಸಿರಿವಂತಿಕೆ ಎಂದೂ ಸಂಕೇತಗೊಂಡಿತು.

ಸೌಂದರ್ಯವೆನ್ನುವುದು ಬಿಳಿಯ ಬಣ್ಣದಲ್ಲಿದೆ, ಕಪ್ಪಿನಲ್ಲಿರುವುದು ಕುರೂಪ ಎಂಬುದು ಅನ್ಯಾಯದ ತಿಳಿವಳಿಕೆ. ಬಣ್ಣಕ್ಕಿಂತ ಗುಣ, ಜ್ಞಾನ, ಅಂತಃಕರಣ ಮುಖ್ಯ ಎಂಬ ಅರಿವಿರುವುದು ಪ್ರಬುದ್ಧ ಸಮಾಜದ ಲಕ್ಷಣ. ಕಪ್ಪು ಅಥವಾ ಕಂದು ಬಣ್ಣದ ಚರ್ಮ ಇರುವ ಭಾರತೀಯರು ಬಿಳಿಯ ತ್ವಚೆ ಎಂಬುದೇ ಸುಂದರ, ಶ್ರೇಷ್ಠ ಎಂದು ಭಾವಿಸುವುದು ಕೂಡಾ ನಮ್ಮನ್ನು ನಾವೇ ಅವಮಾನಿಸಿಕೊಂಡಂತೆ ಅನ್ನಿಸುವುದಿಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT