ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಆದ್ಯತೆಯೇ ಸಾಧನೆಗೆ ದಾರಿ

Published 1 ಏಪ್ರಿಲ್ 2024, 23:35 IST
Last Updated 1 ಏಪ್ರಿಲ್ 2024, 23:35 IST
ಅಕ್ಷರ ಗಾತ್ರ

ಬುದ್ಧ ಹೇಳಿದ, ‘ಪ್ರತಿಯೊಬ್ಬ ಮನುಷ್ಯನೂ ಮೋಕ್ಷವನ್ನು ಪಡೆಯಬಹುದು ಅಂತಹ ಶಕ್ತಿ ಪ್ರತಿಯೊಂದು ಜೀವಕ್ಕೂ ಇದೆ’ ಎಂದು. ಶಿಷ್ಯ ಕೇಳಿದ, ‘ಮೋಕ್ಷವನ್ನು ಪಡೆದುಕೊಳ್ಳುವುದೇ ಮನುಷ್ಯನ ಗುರಿಯಾದರೆ, ಎಲ್ಲ ಮನುಷ್ಯರಿಗೂ ಅದು ಏಕೆ ಸಿಗುತ್ತಿಲ್ಲ? ಅದಕ್ಕಾಗಿ ನೀನು ಸಹಾಯ ಮಾಡಬೇಕಲ್ಲವೇ?’ ಎಂದು. ‘ಸಹಾಯ ಮಾಡೋಣ, ಆದರೆ ಅದು ಅವರ ಬೇಕುಗಳ ಪಟ್ಟಿಯಲ್ಲಿ ಇದೆಯಾ ಇಲ್ಲವಾ? ತಿಳಿಯಬೇಕು. ನಿನಗೆ ಪರಿಚಿತರಿರುವ ಎಲ್ಲರ ಹತ್ತಿರ ಹೋಗಿ, ಏನನ್ನೂ ಹೇಳದೆ, ಅವರ ಅಗತ್ಯದ ಪಟ್ಟಿಯನ್ನು ಕೇಳಿ ತೆಗೆದುಕೊಂಡು ಬಾ’ ಎಂದನು ಬುದ್ಧ. ಶಿಷ್ಯ ಮನೆ ಮನೆಗಳನ್ನು ಸುತ್ತಿದ, ಕಂಡವರನ್ನೆಲ್ಲಾ ಕೆದಕಿ ಕೆದಕಿ ಕೇಳಿದ.

ಕೇಳಿದವರೆಲ್ಲಾ ಚಿನ್ನ ಬೆಳ್ಳಿ, ಹಣ, ಬಂಗಲೆ, ವಸ್ತ್ರ... ಹೀಗೆ ಯಾವ ಯಾವುದನ್ನೋ ಆದ್ಯತೆಯಾಗಿ ಪಟ್ಟಿ ಮಾಡಿಕೊಟ್ಟರು. ಶಿಷ್ಯನಿಗೆ ತಲೆ ಕೆಟ್ಟು ಹೋಯಿತು. ಜಗತ್ತಿನ ಎಲ್ಲ ಜೀವಗಳ ಉದ್ಧರಣ ಆಗಬೇಕೆಂದು ಬುದ್ಧನನ್ನು ಪ್ರಶ್ನಿಸಿದವನಿಗೆ ಜನರ ಆದ್ಯತೆಯಲ್ಲಿ ಮೋಕ್ಷವೇ ಇಲ್ಲವಲ್ಲ ಎನ್ನುವ ಖೇದವೂ ಆಯಿತು. ಕಡೆಗೆ ಅವನು ಕೂಗಿ ಕೇಳಿದ, ‘ನಿಮಗೆ ಯಾರಿಗೂ ಮೋಕ್ಷ ಬೇಡವೇ?’ ಕೆಲವರು ನಕ್ಕರು, ‘ಹುಚ್ಚಾ ಬದುಕಿರುವವರೆಗೂ ಹೊಟ್ಟೆ ತುಂಬಿಸಿಕೊಳ್ಳಬೇಕು. ಅದಕ್ಕೆ ಹಣಬೇಕು. ಇರಲಿಕ್ಕೆ ಮನೆ ಬೇಕು ಅದಕ್ಕೆ ದುಡಿಯಬೇಕು, ನಿನ್ನ ಮಾತನ್ನು ಕೇಳಿದರೆ ನಾವು ಸಾಯುವುದಲ್ಲದೆ, ಮನೆಯಲ್ಲಿರುವವರನ್ನೆಲ್ಲಾ ಸಾಯಿಸಬೇಕಾಗುತ್ತದೆ’ ಎಂದರು.


ಶಿಷ್ಯ ಸಪ್ಪಗೆ ಮುಖಮಾಡಿ ಬುದ್ಧನ ಹತ್ತಿರ ಬಂದು ಪಟ್ಟಿಯನ್ನು ಇಡುತ್ತಾನೆ. ಕಿರುನಗೆಯಿಂದ ಬುದ್ಧ ಆ ಪಟ್ಟಿಯನ್ನು ಕೈಗೆತ್ತಿಕೊಂಡು ನೋಡುತ್ತಾನೆ. ಆ ಪಟ್ಟಿಯಲ್ಲಿ ನೂರಾರು ಜನರ ನೂರಾರು ಅಪೇಕ್ಷೆಗಳ ರಾಶಿಯಿದೆ, ಮೋಕ್ಷ ಎನ್ನುವ ಪದವೇ ಇರಲಿಲ್ಲ. ಬುದ್ಧ ಕೇಳಿದ, ‘ನಿನ್ನ ಪಟ್ಟಿಯಲ್ಲಿರುವ ಜನರಿಗೆ ಮೋಕ್ಷದ ಆಪೇಕ್ಷೆಯೇ ಇಲ್ಲವಲ್ಲ’. ಅದಕ್ಕೆ ಶಿಷ್ಯ, ‘ಅದೇ ಗುರುವೇ ನನಗೂ ಅಚ್ಚರಿಯಾಗುತ್ತಿರುವುದು, ಪ್ರತಿಯೊಬ್ಬ ಮನುಷ್ಯನೂ ಮೋಕ್ಷವನ್ನು ಸಾಧಿಸಬಲ್ಲವನಾಗಿದ್ದರೆ, ಅದೇಕೆ ಅವನ ಪಟ್ಟಿಯಲ್ಲಿ ಇಲ್ಲ?  ಇವರಿಗೆಲ್ಲಾ ಮೋಕ್ಷ ದೊರೆಯುವುದು ಹೇಗೆ? ಅದರ ಬಗ್ಗೆ ಯೋಚನೆ ಮಾಡದೆ ಇದ್ದರೆ ಅವರು ಮೋಕ್ಷಕ್ಕೆ ಅನರ್ಹರೇ?’ ಎಂದು. 

ಬುದ್ಧ ನಕ್ಕ, ‘ನಿಜ ಮೋಕ್ಷ ಮಾತ್ರವಲ್ಲ, ಯಾವುದೇ ಆದರೂ ಅದರ ಬಗ್ಗೆ ಯೋಚಿಸದೆ ಹೋದರೆ ಅದು ಸಿಗಲಾರದು. ಸಿಗಲಿಲ್ಲ ಎಂದ ಮಾತ್ರಕ್ಕೆ ಅವನಿಗೆ ಅದನ್ನು ಪಡೆಯುವ ಯೋಗ್ಯತೆ ಇಲ್ಲ ಎಂದಲ್ಲ. ಹೊರಗಿನ ಅಪೇಕ್ಷೆಗಳನ್ನು ಬಿಟ್ಟು ಯಾರು ಮೋಕ್ಷದ ಆಕಾಂಕ್ಷಿಗಳಾಗಿರುತ್ತಾರೋ ಅವರು ಅದನ್ನು ಗಳಿಸಿಕೊಳ್ಳುತ್ತಾರೆ. ಹೊರಗಿನ ವಸ್ತುಗಳ ಪ್ರಲೋಭನೆಗೆ ಬಿದ್ದವನು ಅದನ್ನು ಮರೆತುಬಿಡುತ್ತಾನೆ. ಹೀಗಾಗಿ ಅದು ಅವನ ಬಳಿಗೆ ಬರುವುದಿಲ್ಲ. ನನಗೆ ನಿಶ್ಚಿತವಾಗಿ ಗೊತ್ತಿಗೆ ಯಾರು ಬೇಕಾದರೂ ಮೋಕ್ಷವನ್ನು ಪಡೆದುಕೊಳ್ಳಬಲ್ಲರು. ಆದರೆ ಎಲ್ಲರೂ ಮೋಕ್ಷಾಕಾಂಕ್ಷಿಗಳು ಹೌದಾ ಅಲ್ಲವಾ ಗೊತ್ತಿಲ್ಲ’ ಎನ್ನುತ್ತಾನೆ. 

ಬುದ್ಧ ತನಗೆ ಗೊತ್ತಿಲ್ಲದ್ದನ್ನು ಗೊತ್ತಿಲ್ಲವೆಂದು ಹೇಳುತ್ತಿದ್ದ. ಗೊತ್ತಿಲ್ಲದ್ದನ್ನು ಗೊತ್ತಿಲ್ಲ ಎಂದರೆ ಮನುಷ್ಯ ದೊಡ್ಡವನಾಗಿಬಿಡುತ್ತಾನೆ. ಅದೇ ಜ್ಞಾನೋದಯ. ಹುಡುಕಾಟದಲ್ಲಿ ಇದೇ ಮಹತ್ವದ್ದು ಅಲ್ಲವೇ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT