ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಸಾಹಸಿಗನ ಬದುಕು..

ನುಡಿ ಬೆಳಗು
Published : 5 ಸೆಪ್ಟೆಂಬರ್ 2024, 18:37 IST
Last Updated : 5 ಸೆಪ್ಟೆಂಬರ್ 2024, 18:37 IST
ಫಾಲೋ ಮಾಡಿ
Comments

ಅಮೆರಿಕದೊಳಗ ಅರಿಜೋನಾ ಅಂತ ಒಂದು ಪ್ರಾಂತ್ಯ ಇದೆ. ಅಲ್ಲಿ ಒಂದು ದಂಪತಿಗೆ ಮಗು ಹುಟ್ಟಿತು. ಹುಟ್ಟುವಾಗಲೇ ಆ ಮಗುವಿಗೆ ಎರಡೂ ಕೈಗಳು ಇರಲಿಲ್ಲ. ಆ ಹೆಣ್ಣು ಮಗುವಿಗೆ ಜೆಸ್ಸಿಕಾ ಅಂತ ಹೆಸರಿಟ್ಟರು. ಆ ಮಗು ಬೆಳೆತಾ ಬೆಳಿತಾ ಕಾಲಿನಲ್ಲಿ ಬರೆಯುವುದನ್ನು ಕಲಿಯಿತು. ಕಾಲಿನಿಂದಲೇ ಜಳಕಾ ಮಾಡೋದು, ಕಾಲಿನಿಂದಲೇ ಚಮಚ ಹಿಡಕೊಂಡು ಊಟ ಮಾಡೋದು ಕಲೀತು. 10ನೇ ತರಗತಿ ರಿಸಲ್ಟ್ ಬಂದಾಗ ಆಕಿ ಇಡೀ ಶಾಲೆಗೆ ಮೊದಲಿಗಳಾಗಿದ್ದಳು. ಕರಾಟೆ ಕಲಿತಳು. ಕರಾಟೆ ಬ್ಲ್ಯಾಕ್ ಬೆಲ್ಟ್‌ನಲ್ಲಿಯೂ ಪ್ರಥಮ ಸ್ಥಾನ
ಪಡೆದಳು.

ಆಕಿ ಒಂದು ಕನಸು ಕಂಡಳು. ತಾನು ವಿಮಾನ ಹಾರಿಸಬೇಕು ಎಂಬುದು ಆಕಿಯ ಕನಸು. ಪೈಲೆಟ್ ಆಗಬೇಕು ಅಂತ ಅರ್ಜಿ ಹಾಕಿದರೆ ‘ನಿನಗೆ ಕೈಗಳಿಲ್ಲ. ಅದಕ್ಕೆ ಪೈಲಟ್ ತರಬೇತಿಗೆ ಅವಕಾಶ ಕೊಡಲ್ಲ’ ಅಂತ ಸರ್ಕಾರ ಅರ್ಜಿ ತಿರಸ್ಕರಿಸಿತು. ಆದರೂ ಆಕಿ ಸುಮ್ಮನೆ ಕೂಡಲಿಲ್ಲ. ನ್ಯಾಯಾಲಯದ ಮೊರೆ ಹೋದಳು. ನ್ಯಾಯಾಲಯದಿಂದ ಅನುಮತಿ ಪಡೆದು ವಿಮಾನ ಹಾರಾಟದ ತರಬೇತಿ ಪಡೆದು ವಿಮಾನ ಹಾರಿಸಿದಳು. ಎರಡೂ ಕೈಗಳು ಇಲ್ಲದೆ ವಿಮಾನ ಹಾರಿಸಿದ ಜಗತ್ತಿನ ಮೊದಲ ಮಹಿಳೆ ಜಸ್ಸಿಕಾ ಕಾಕ್ಸ್. ಇದು ಗೆಲುವಿನ ಭಾಷೆ.

ನಮ್ಮ ಹಾಗೆ ಆಕೆ ಜ್ಯೋತಿಷಿ ಬಳಿ ಹೋಗಲಿಲ್ಲ. ಅಂಗೈನಲ್ಲಿರುವ ರೇಖಿ ನೋಡಿ ಬದುಕಲಿಲ್ಲ. ಮುಂಗೈ ಒಳಗಿನ ಬಲವನ್ನು ನಂಬಿ ಬದುಕಿದಳು. ಇದು ಸಾಹಸಿಗನ ಬದುಕು. ಭೂಮಿಯ ಮೇಲೆ ಮನುಷ್ಯ ಬದುಕಬೇಕಾದರೆ ಸಾಹಸದ ಭಾಷೆಯೇ ಗೆಲುವಿನ ಭಾಷೆ ಆಗಬೇಕು. ಅದು ಜೀವನವನ್ನು ಕಟ್ಟುತ್ತದೆ. ಸಾವಿನ ಸಂದರ್ಭದಲ್ಲಿಯೂ ಗೆಲುವಿನ ಉತ್ಸಾಹ ಇರಬೇಕು. 

ನಾವು ಈಗ ಸ್ವಾತಂತ್ರ್ಯದ ಸುಖ ಅನುಭವಿಸುತ್ತಿದ್ದೇವೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಹೀಗೆ ಸುಮ್ಮನೆ ಬಂತೇನು? ಸಾವಿರ ಸಾವಿರ ಜನ, ಸಾವಿರ ಸಾವಿರ ಮಕ್ಕಳು ಇದಕ್ಕಾಗಿ ಪ್ರಾಣ ತೆತ್ತಿದ್ದಾರೆ. 1947ಕ್ಕಿಂತ ಮುಂಚೆ ಸರ್ಕಾರಿ ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಿಸುವಂತಿರಲಿಲ್ಲ. ಆಗ 6–7ನೇ ಕ್ಲಾಸ್ ಓದುತ್ತಿರುವ ಹುಡುಗನೊಬ್ಬ ಬ್ರಿಟಿಷರ ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಿಸಿದ. ಅವನ ಮೇಲೆ ಬ್ರಿಟಿಷರು ಗುಂಡು ಹಾರಿಸಿದರು. ಗಾಯಗೊಂಡ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆತನಿಗೆ ಪ್ರಜ್ಞೆ ಬಂದಾಗ ತಾನು ಇಲ್ಲೇಕೆ ಇದ್ದೇನೆ ಎಂದು ಕೇಳಿದ. ಬ್ರಿಟಿಷ್ ಪೊಲೀಸರು ಗುಂಡು ಹಾರಿಸಿದ್ದನ್ನು ಆತನಿಗೆ ತಿಳಿಸಲಾಯಿತು.

‘ಬ್ರಿಟಿಷರು ಹಾರಿಸಿದ ಗುಂಡು ನನ್ನ ಎದ್ಯಾಗಿಂದ ಹೋಗೈತೋ ಅಥವಾ ಬೆನ್ನಾಗಿಂದ ಹೋಗೈತೋ’ ಎಂದು ಕೇಳಿದ ಬಾಲಕ. ‘ಎದ್ಯಾಗಿಂದಲಾದರೂ ಬರಲಿ, ಬೆನ್ನಾಗಿಂದಲಾದರೂ ಬರಲಿ, ಅದರಾಗೇನೈತಿ ವ್ಯತ್ಯಾಸ’ ಅಂತ ಕೇಳಿದರು ವೈದ್ಯರು. ‘ಗುಂಡು ಬೆನ್ನಾಗೆ ಹೋಗಿದ್ದರೆ ನಾನು ಬ್ರಿಟಿಷರಿಗೆ ಹೆದರಿ ಓಡುವಾಗ ಅವರು ಗುಂಡು ಹಾರಿಸಿದರು ಎಂಬ ತಪ್ಪು ಸಂದೇಶ ದೇಶದ ಜನರಿಗೆ ಹೋಗತೈತಿ. ಅದು ನನಗೆ ಇಷ್ಟವಿಲ್ಲ. ಗುಂಡು ನನ್ನ ಎದೆಯಾಗೆ ಹೊಕ್ಕಿದ್ದರೆ ಸಂತಸದಿಂದ ಪ್ರಾಣ ಬಿಡ್ತೀನಿ. ಯಾಕಂದರ ಈ ಹುಡುಗ ಬ್ರಿಟಿಷರ ಗುಂಡಿಗೆ ಎದೆಯೊಡ್ಡಿ ಸಾವನ್ನಪ್ಪಿದ ಎಂಬ ಸಂದೇಶ ಜನರಿಗೆ ಹೋಗ್ತದಲ್ಲ ಅದಕ್ಕೆ’ ಎಂದ ಹುಡುಗ.

ಸಾವಿನಂಚಿನಲ್ಲೂ ಗೆಲುವಿನ ಭಾಷೆ ಇದು. ಇದು ಬದುಕನ್ನು ಕಟ್ಟುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT