ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು | ನಮ್ಮ ದಾರಿಗೆ ಅಡೆತಡೆ ಯಾರು?

Published 7 ಆಗಸ್ಟ್ 2024, 23:40 IST
Last Updated 7 ಆಗಸ್ಟ್ 2024, 23:40 IST
ಅಕ್ಷರ ಗಾತ್ರ

ಒಮ್ಮೆ ಒಂದು ದೊಡ್ಡ ಸಂಸ್ಥೆಯಲ್ಲಿ ಬೆಳಿಗ್ಗೆ ಎಲ್ಲರೂ ಕೆಲಸಕ್ಕೆ ಬಂದಾಗ ಸೂಚನಾ ಫಲಕದ ಮೇಲೆ ಹೀಗೆ ಬರೆದಿತ್ತು: ‘ನಿಮ್ಮ ಬೆಳವಣಿಗೆಯನ್ನು ತಡೆಯುತ್ತಿದ್ದ ವ್ಯಕ್ತಿ ಇವತ್ತು ಮೃತಪಟ್ಟಿದ್ದಾರೆ. ಅಂತಿಮ ದರ್ಶನಕ್ಕಾಗಿ ಅವರ ಶರೀರವನ್ನು ಮೊದಲನೇ ಮಹಡಿಯ ಸಭಾಂಗಣದಲ್ಲಿ ಇಡಲಾಗಿದೆ’. ಯಾರು ತೀರಿಕೊಂಡಿರಬಹುದು, ಯಾರು ನಮ್ಮ ದಾರಿಯನ್ನು ತಡೆದವರಿರಬಹುದು ಎಂಬ ಕುತೂಹಲದಿಂದ ಎಲ್ಲರೂ ಅವರ ಹೆಸರನ್ನು ತಿಳಿದುಕೊಳ್ಳಲು ಪ್ರಯತ್ನಪಡತೊಡಗಿದರು. ಒಳಹೋಗಿ ನೋಡಿಬಂದವರನ್ನು ಕೇಳುವ ಎಂದರೆ ಹೊರಬರುವವರು ಒಳಹೋಗುವವರನ್ನು ಭೇಟಿಯಾಗದಂತೆ ವ್ಯವಸ್ಥೆ ಮಾಡಲಾಗಿತ್ತು. ಪ್ರತಿಯೊಬ್ಬರೂ ದೇಹವನ್ನು ನೋಡಲು ಹೊರಟರು. ಉದ್ದನೆಯ ಸರದಿ ಸಾಲು. ದೂರದಿಂದ ಹೊರಬರುತ್ತಿರುವವರನ್ನು ನೋಡಿದರೆ ಅವರ ಮುಖ ಸಪ್ಪಗಾಗಿತ್ತು. ಅಲ್ಲಿ ಶ್ರೀಧರ ಎನ್ನುವ ಗುಮಾಸ್ತನಿದ್ದ. ಅವನದ್ದು ಯಾವಾಗಲೂ ಬೇರೆಯವರ ಮೇಲೇ ದೂರು. ‘ಸದ್ಯ, ನನ್ನ ದಾರಿಗೆ ಅಡ್ಡ ಬಂದವರು ಯಾರೋ ಹೋದರಲ್ಲ, ಒಳ್ಳೆಯದಾಯಿತು’ ಎಂದುಕೊಳ್ಳುತ್ತ ಒಳಹೋದ.

ಒಳಹೋದರೆ ಅಲ್ಲೊಂದು ಶವಪೆಟ್ಟಿಗೆ. ನೋಡಿದರೆ ಅದರೊಳಗೆ ಏನೂ ಇರಲಿಲ್ಲ. ಬದಲಾಗಿ ಒಂದು ಕನ್ನಡಿ ಇತ್ತು. ಶ್ರೀಧರ ಬಗ್ಗಿ ನೋಡಿದಾಗ ಅದರಲ್ಲಿ ಶ್ರೀಧರನ ಪ್ರಗತಿಗೆ ಅಡ್ಡಿಯಾಗಿದ್ದವನ ಬಿಂಬ ಕಾಣಿಸಿತು! ಪಕ್ಕದಲ್ಲೊಂದು ಚೀಟಿ ಇತ್ತು. ಅದರ ಮೇಲೆ ‘ನಿಮ್ಮ ಬೆಳವಣಿಗೆಯನ್ನು ತಡೆಯುತ್ತಿರುವ ವ್ಯಕ್ತಿ ಬೇರೆ ಯಾರೂ ಅಲ್ಲ, ನೀವೇ’ ಎಂದು ಬರೆದಿತ್ತು.

ನಮ್ಮೆಲ್ಲರಿಗೂ ಒಮ್ಮೆಯಾದರೂ ನಮ್ಮನ್ನು ಕಂಡರೆ ಆಗದವರು ಯಾರೋ ನಮ್ಮ ಬೆಳವಣಿಗೆಯನ್ನು ತಡೆಯುತ್ತಿದ್ದಾರೆ ಎಂಬ ಭಾವನೆ ಸುಳಿದುಹೋಗಿರುತ್ತದೆ. ಅಥವಾ ನಾವು ಅಂದುಕೊಂಡಷ್ಟು ಯಶಸ್ವಿಯಾಗದಿರಲು ಬೇರೆ ಯಾರೋ ಕಾರಣ ಎಂದು ಬಲವಾಗಿಯೇ ನಂಬಿಕೊಂಡಿರುತ್ತೇವೆ. ಕೆಲವರಂತೂ ತಮಗೆ ಮಧ್ಯವಯಸ್ಸು ದಾಟಿದರೂ ತಂದೆತಾಯಿಗಳನ್ನು ದೂಷಿಸುತ್ತಲೇ ಇರುತ್ತಾರೆ. ಆದರೆ ಏನೇ ಅಂದರೂ ನಮ್ಮ ಒಳಮನಸ್ಸಿಗೆ ನಮ್ಮೆಲ್ಲಾ ಕ್ರಿಯೆಗಳಿಗೆ, ಅದರ ಪರಿಣಾಮಗಳಿಗೆ ನಾವೇ ಕಾರಣರೆಂಬ ಸತ್ಯ ಗೊತ್ತಿರುತ್ತದೆ.

ನಮ್ಮ ದೃಢಸಂಕಲ್ಪ, ಮನೋಬಲ ಗಟ್ಟಿಯಾಗಿದ್ದರೆ ಎಲ್ಲ ಅಡೆತಡೆಗಳೂ ಸುನಾಮಿಯೆದುರಿನ ಪುಟ್ಟ ಗುಡಿಸಲಿನಂತೆ! ಮನುಷ್ಯನನ್ನು ಮನುಷ್ಯನಂತೆಯೇ ಪರಿಗಣಿಸದ ಅವಮಾನ ಅನುಭವಿಸಿದ ಅಂಬೇಡ್ಕರ್‌ ಅವರಿಗೆ ಹೆಜ್ಜೆ ಹೆಜ್ಜೆಗೂ ಅಡೆತಡೆಗಳಿರಲಿಲ್ಲವೇ? ಎಂಟರ ಹರೆಯದಲ್ಲೇ ಪತ್ರಿಕೆ ಹಂಚುತ್ತಿದ್ದ ಅಬ್ದುಲ್‌ ಕಲಾಂ ಅವರಿಗೆ ಸಮಸ್ಯೆಗಳಿರಲಿಲ್ಲವೇ? ಸಗಣಿ ನೀರನ್ನು ಎರಚಿಸಿಕೊಂಡರೂ ಬಡ ಹೆಣ್ಣುಮಕ್ಕಳಿಗೆ ಪಾಠ ಮಾಡುವುದನ್ನು ಬಿಡದ ಸಾವಿತ್ರಿಬಾಯಿ ಫುಲೆಯವರ ದಾರಿ ಸುಗಮವಾಗಿತ್ತೇ?

ಮನೆಯ, ಕಚೇರಿಯ ವಾತಾವರಣ ಸರಿಯಿಲ್ಲ, ಜನ ಸರಿಯಿಲ್ಲ ಎನ್ನುವ ಬದಲು ನಮ್ಮ ಬಲಹೀನತೆಯನ್ನು ತಿಳಿದುಕೊಳ್ಳುವುದು ಮತ್ತು ಅದು ಹೇಗೆ ನಮ್ಮನ್ನು ಮುಂದುವರೆಯದಂತೆ ತಡೆಯುತ್ತಿದೆ ಎಂಬುದನ್ನು ಅರಿತುಕೊಂಡು ಸರಿಪಡಿಸಿಕೊಳ್ಳುವುದು ಸಾಧನೆಯೆಡೆಗಿನ ಮೊದಲ ಹೆಜ್ಜೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT