ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಹಕ್ಕಿ ಹೇಳಿದ ಮಾತು

Published 2 ಏಪ್ರಿಲ್ 2024, 23:33 IST
Last Updated 2 ಏಪ್ರಿಲ್ 2024, 23:33 IST
ಅಕ್ಷರ ಗಾತ್ರ

ಆ ಹಳ್ಳಿಯಲ್ಲಿ ಮಧುರವಾಗಿ ಕೂಗುವ ಹಕ್ಕಿಯೊಂದು ವಾಸವಾಗಿತ್ತು. ಇರುಳ ಕನಸುಗಳು ಮುಗಿದಾಗ ಬೆಳಗಾಯಿತು ಏಳಿರಿ ಎಂದು ಜನರಿಗೆ ಎಚ್ಚರಿಸುತ್ತಿತ್ತು. ಈ ಹಕ್ಕಿಯ ನಾದ ಎದೆಯಾಳಕ್ಕೆ ಇಳಿದು ಸಂತೃಪ್ತಿ ನೀಡುತ್ತಿತ್ತು. ಇದರ ಕೊಕ್ಕು ಮತ್ತು ರೆಕ್ಕೆಯ ಬಣ್ಣವನ್ನು ಕಂಡು ಜನ ಹಿಗ್ಗುತ್ತಿದ್ದರು. ಹಕ್ಕಿಯ ರಾಗ ಮಾಧುರ್ಯ ಹಳ್ಳಿಯ ದೇವವಾಣಿಯೇ ಆಗಿತ್ತು.

ಒಂದು ದಿನ ಇದ್ದಕ್ಕಿದ್ದಂತೆ ಈ ಹಕ್ಕಿ ಊರು ಬಿಟ್ಟು ಹೊರಟು ಹೋಯಿತು. ಅದು ಹೋದ ಮೇಲೆ ಹಳ್ಳಿಯಲ್ಲಿ ಮಳೆ-ಬೆಳೆ ಕಡಿಮೆಯಾದವು. ಕುಡಿಯುವ ನೀರಿಗೂ ತತ್ವಾರ ಹುಟ್ಟಿತು. ಊರಲ್ಲಿ ರೋಗ, ಸಾವುಗಳು ಹೆಚ್ಚಾದವು.

ಊರಿನ ಹಿರಿಯರು ಹಕ್ಕಿಯನ್ನು ವಾಪಸು ಊರಿಗೆ ಕರೆ ತರಲು ಹೊರಟರು. ಬಹಳ ದೂರ ನಡೆದು ದಟ್ಟ ಅರಣ್ಯವನ್ನು ಮುಟ್ಟಿದರು. ಆ ಹಕ್ಕಿ ಹಚ್ಚ ಹಸಿರಾದ ತಾಣದಲ್ಲಿತ್ತು. ತಿಳಿ ನೀರು ಹರಿವ, ತಂಪಾದ ಗಾಳಿ ಸುಳಿಯುವ ಜಾಗದಲ್ಲಿ ಕೂತು ಹಾಡುತ್ತಿತ್ತು.

ಹಳ್ಳಿಯ ಹಿರಿಯರು ನೀನು ನಮ್ಮೂರು ತೊರೆದು ಬಂದ ಮೇಲೆ ಬರಗಾಲವೇ ಬಂದಿದೆ. ನಮ್ಮ ಬದುಕು ಕಷ್ಟವಾಗಿದೆ. ದಯಮಾಡಿ ಹಿಂತಿರುಗು. ನೀನಿಲ್ಲದೆ ನಮಗೆ ಸುಖ, ಸಂತೋಷ, ನೆಮ್ಮದಿಗಳಿಲ್ಲ ಎಂದು ಕೋರಿಕೊಂಡರು. ಆಗ ಹಕ್ಕಿ ಅಯ್ಯೋ ಹುಚ್ಚಪ್ಪಗಳಿರಾ! ನೀವು ತಪ್ಪು ತಿಳಿದಿದ್ದೀರಿ. ನಾನಿರುವ ಜಾಗದಲ್ಲಿ ನೆಮ್ಮದಿ ಇರುವುದಿಲ್ಲ. ನೆಮ್ಮದಿ ಇರುವ ಜಾಗದಲ್ಲಿ ನಾನಿರುತ್ತೇನೆ. ಇಲ್ಲಿರುವಂತೆ ಮತ್ತೆ ನಿಮ್ಮೂರು ಬದಲಾದಾಗ ನಾನು ಖಂಡಿತಾ ಬರುತ್ತೇನೆ. ನೆಮ್ಮದಿಯ ನಿಮ್ಮೂರು ಹಾಳಾಗಿದ್ದನ್ನು ಮೊದಲು ಸರಿಪಡಿಸಿ ಹೋಗಿ ಎಂದಿತು.

ಹಿರಿಯರಿಗೆ ಹೌದಲ್ಲ ಮೊದಲು ನಮ್ಮೂರು ಕೂಡ ಹೀಗೆ ಇತ್ತು, ಅದನ್ನು ನಾಶ ಮಾಡಿದವರು ನಾವೇ ಅಲ್ಲವೇ? ಪ್ರಕೃತಿ ನಮಗೆ ಬಳುವಳಿಯಾಗಿ ಕೊಟ್ಟ ಗಿಡ, ಮರ, ಹಳ್ಳ ಕೊಳ್ಳಗಳನ್ನು ನಾವು ಉಳಿಸಿಕೊಳ್ಳಲಿಲ್ಲ. ಅದರ ಮೌಲ್ಯವೇನೆಂದು ತಿಳಿಯಲಿಲ್ಲ. ನಾವು ಏನೆಲ್ಲಾ ಕಳೆದುಕೊಂಡಿದ್ದೇವೆ ಎಂದು ಕೂತು ಲೆಕ್ಕ ಹಾಕಿದಾಗ ಭಯವಾಯಿತು. ಹಕ್ಕಿಗೆ ಅರ್ಥವಾದ ಸರಳ ಪರಿಸರದ ಪಾಠ ನಮ್ಮ ಅರಿವಿಗೆ ಬರದಾಯಿತಲ್ಲ ಎಂದು ಚಿಂತಿಸಿದರು. ಮತ್ತೆ ಎಲ್ಲವನ್ನೂ ಮರಳಿ ಗಳಿಸಿ ಹಕ್ಕಿ ನಮ್ಮೂರಿಗೆ ಬರುವಂತೆ ಮಾಡೋಣ ಎಂದು ದೃಢ ಸಂಕಲ್ಪ ಮಾಡಿಕೊಂಡು ಹಳ್ಳಿಗೆ ಬಂದರು.

ನಮಗೆ ಸಿಕ್ಕ ಪರಿಸರದ ಉಚಿತ ಉಡುಗೊರೆಗಳ ಬಗ್ಗೆ ಅಸಡ್ಡೆ ಹೆಚ್ಚು. ಹಾಗೆಯೇ ಅದಮ್ಯ ಪ್ರೀತಿ, ಸ್ನೇಹ, ಮಮತೆ, ತೋರುವ ಮನುಷ್ಯ ಸಂಬಂಧಗಳ ಬಗ್ಗೆಯೂ ತಿರಸ್ಕಾರ ಅಧಿಕ. ಹುಟ್ಟಿದ ಹಳ್ಳಿಯ ಸೊಗಡನ್ನು ತಿರಸ್ಕರಿಸಿ ನಂತರ ಕೂತು ಅಳುವ ಪ್ರಸಂಗ ಯಾರಿಗೂ ಬಾರದಿರಲಿ. ಹಕ್ಕಿ ಮತ್ತೆ ಹಳ್ಳಿಗೆ ಬಂದೀತು. ಆದರೆ ನಮ್ಮ ಬದುಕಲ್ಲಿ ಕಳೆದು ಹೋದ ಯಾವ ಹಕ್ಕಿಗಳು ಮತ್ತೆಂದೂ ಹಾರಿ ಬರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT