ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಅವಮಾನ

Published 5 ಡಿಸೆಂಬರ್ 2023, 0:05 IST
Last Updated 5 ಡಿಸೆಂಬರ್ 2023, 0:05 IST
ಅಕ್ಷರ ಗಾತ್ರ

ಮನುಷ್ಯನನ್ನು ಅವಮಾನ ಕಾಡಿಸುವಂತೆ ಯಾವುದೂ ಕಾಡಿಸಲಾರದು. ಆದರೆ ಯಾವ ಅವಮಾನವನ್ನೇ ಆಗಲಿ ನಾವು ಗೆಲುವನ್ನಾಗಿ ಮಾರ್ಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಅವು ದುಃಖವಾಗಿ ನಮ್ಮನ್ನು ಕಾಡುತ್ತಲೇ ಇರುತ್ತವೆ. ನಮ್ಮ ಸೋಲು ಅವಮಾನಗಳು ನಾವು ಮಾಗಿದ ಹಾಗೆ ಅವೂ ಮಾಗುತ್ತಾ, ನಮ್ಮ ವ್ಯಕ್ತಿತ್ವವನ್ನು ಬೆಳೆಸಬೇಕೆ ಹೊರತು ಅದೊಂದು ರೋಗವಾಗಬಾರದು. ಅದಕ್ಕೊಂದು ಉದಾಹರಣೆ ಹಿಟ್ಲರ್.

ಹಿಟ್ಲರ್ ಕೊನೆಗಾಲದಲ್ಲಿ ತನ್ನ ಮನೆ ಸೇಂಟ್ ಹೆನ್ನಾದಲ್ಲಿ ಕುಳಿತು ಯೋಚಿಸುತ್ತಿದ್ದ. ತಾನು ಎಲ್ಲಿಂದ ಎಲ್ಲಿಗೆ ಬಂದೆ? ಚರಿತ್ರೆಯಲ್ಲಿ ರಕ್ತಸಿಕ್ತ ಪುಟದಲ್ಲಿ ಹೇಗೆಲ್ಲಾ ರಾರಾಜಿಸಿದೆ? ಇಡೀ ದೇಶವನ್ನೇ ತನ್ನ ಕಿರುಬೆರಳಲ್ಲಿ ಅಲುಗಾಡಿಸಿದೆ. ವಿಶ್ವವನ್ನು ವಶಮಾಡಿಕೊಳ್ಳಲು ಹೊರಟೆ. ಇದೆಲ್ಲ ನಡೆಯಲಿಕ್ಕೆ ಕಾರಣ ಬಾಲ್ಯದ ಆ ಘಟನೆಯೇಅಲ್ಲವೇ ಎಂದು ಯೋಚಿಸತೊಡಗಿದ.

ಸಣ್ಣವನಿದ್ದಾಗ ಪಾಠ ಕಲಿಯದ ಹಿಟ್ಲರ್‌ಗೆ, ‘ಇಷ್ಟು ಸಣ್ಣ ಪಾಠವನ್ನು ಕಲಿಯದ ನೀನು ಜೀವನದಲ್ಲಿ ಏನನ್ನು ಸಾಧಿಸುತ್ತೀಯೇ?’ ಎಂದು ಮೇಷ್ಟ್ರು ಬೆತ್ತದಿಂದ ಹೊಡೆದಿದ್ದರು. ಆ ಮಾತುಗಳು ಹಿಟ್ಲರ್‌ನನ್ನು ಬಿಡದೆ ಹಿಂಬಾಲಿಸುತ್ತಿದ್ದವು. ತನ್ನ ಕೈಲಿ ಪಾಠ ಮಾತ್ರವಲ್ಲ ಇಡೀ ಜಗತ್ತೇ ಇರಬೇಕು ಎಂದು ನಿರ್ಧಾರ ಮಾಡಿದ. ಸರ್ವಾಧಿಕಾರಿಯಾಗಿ ಮೆರೆದ. ಜನರನ್ನು ಕೊಂದ. ತನ್ನ ಹೆಸರು ಕೇಳಿದರೆ ಜನ ಗಡಗಡ ನಡುಗುವಂತೆ ಮಾಡಿದ.

ಇಂಥ ಹಿಟ್ಲರ್ ತನ್ನ ಇಳಿಗಾಲದಲ್ಲಿ ಕುಳಿತು ಎಲ್ಲವನ್ನೂ ನೆನಪಿಸಿಕೊಳ್ಳುತ್ತಾ– ಈಗಲಾದರೂ ಆ ಮುದಿ ಮೇಷ್ಟ್ರಿಗೆ ಅರ್ಥವಾಯಿತೋ ಇಲ್ಲವೋ ನಾನು ಇತಿಹಾಸದಲ್ಲಿ ಏನನ್ನು ಸಾಧಿಸಿದೆ ಎಂಬುದು ಎಂದುಕೊಳ್ಳುತ್ತಾನೆ.

ಹಿಟ್ಲರ್‌ನ ನೋವು, ಅವಮಾನಗಳು ಇನ್ನೂ ಅವನ ಬಾಲ್ಯಾವಸ್ಥೆಯಲ್ಲೇ ಉಳಿದುಬಿಟ್ಟಿದ್ದವು. ಅವನು ಅವುಗಳಲ್ಲಿಯೇ ಮುಳುಗಿ ಹೋಗಿದ್ದ. ಆದ್ದರಿಂದ ತನ್ನ ಬಾಲ್ಯದಲ್ಲಿ ಮುದಿಯಾಗಿದ್ದ ಮೇಷ್ಟ್ರು ಇನ್ನೂ ಬದುಕಿದ್ದಾನೆ ಎಂದು ಭ್ರಮಿಸುತ್ತಾನೆ. ತನ್ನ ಸಾಧನೆಯ ಶಿಖರವನ್ನು ಮರೆಯುತ್ತಾನೆ. ಮತ್ತದೇ ದುಃಖಕ್ಕೆ ಜಾರುತ್ತಾನೆ. ಮನುಷ್ಯ ಮಾಗಿದ ಹಾಗೆ ದುಃಖಗಳು ಮಾಗಬೇಕು. ಇಲ್ಲದಿದ್ದರೆ ಮನುಷ್ಯ ಸಮಾಜಕ್ಕೆ ಮಾರಕವಾಗುತ್ತಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT