ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಹಿಂದಕ್ಕೆ ಚಲಿಸುವ ಜನ

Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
ಅಕ್ಷರ ಗಾತ್ರ

ಇವರು ಸದಾ ಹೀಗೆ. ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಲೇ ಇರುತ್ತಾರೆ. ಪುನರಾವರ್ತಿತ ವಿಷಯಗಳು ಬಿಟ್ಟರೆ ಮತ್ತೇನೂ ಹೊಸದು ಅವರ ಬಳಿ ಸಿಗುವುದಿಲ್ಲ. ಈ ದಿನದ ತಾಜಾ ಬದುಕನ್ನು, ನಾಳೆಯ ಕನಸನ್ನು ಅವರೆಂದೂ ವಿಸ್ತರಿಸುವುದಿಲ್ಲ. ತಿರುಗಿ ಕ್ರಿಸ್ತಪೂರ್ವದಲ್ಲಿ ತಮಗೆ ಮೋಸ ಮಾಡಿದವರ, ನೋವು ಕೊಟ್ಟವರ, ತನ್ನಿಂದ ಸಹಾಯ ಪಡೆದು ಮರೆತಿರುವ ವ್ಯಕ್ತಿಗಳ ನೆನೆದು ನಿಗಿನಿಗಿ ಉರಿಯುತ್ತಲೇ ಇರುತ್ತಾರೆ. ತಮ್ಮ ಮಾತುಗಳ ಕೇಳುವ ಜನರನ್ನು ಹುಡುಕಿಕೊಂಡು ಅಲೆದಾಡುತ್ತಾರೆ. ರೇಜಿಗೆ ಬಂದಿದ್ದರೂ ಸಹಿಸಿಕೊಂಡು ನಾನೊಮ್ಮೆ ಹೇಳಿದೆ.

‘ನೀವು ಹಿಂದಿನದನ್ನು ಯಾಕೆ ಮರೆಯುವುದಿಲ್ಲ? ಕಹಿ ಘಟನೆಗಳು, ನೋವಿನ ಸಂದರ್ಭಗಳು ಎಲ್ಲರ ಜೀವನದಲ್ಲೂ ಘಟಿಸಿ ಹೋಗಿರುತ್ತವೆ. ಅವುಗಳನ್ನು ನೆನಪಿಸಿ, ಕೆದಕಿ, ಕಾಲಕಳೆಯುವುದು ಒಳ್ಳೆಯದಲ್ಲ. ದಯಮಾಡಿ ನಿಮ್ಮ ಶತ್ರುಗಳನ್ನು ಒಮ್ಮೆಗೇ ಮರೆತುಬಿಡಿ. ಸಾಧ್ಯವಾದರೆ ಕ್ಷಮಿಸಿಬಿಡಿ. ನಿಮ್ಮ ಬದುಕಲ್ಲಿ ಸಿಕ್ಕ ಒಳ್ಳೆಯವರ ಬಗ್ಗೆ ಈಗಿನಿಂದಾದರೂ ಮಾತಾಡಲು ಶುರು ಮಾಡಿ. ಅಲ್ಲದೇ ಹೋದರೆ, ಇರುವ ಪರಿಚಯಸ್ತರನ್ನೂ ಕಳೆದುಕೊಳ್ಳುತ್ತೀರಿ’ ಎಂದೆ.

ಅವರು ಬದಲಾಗಲು ತಯಾರಿಲ್ಲ. ಮತ್ತದೇ ಹಳೆಯ ಪ್ಲೇಟು ಅದೇ ಧಾಟಿಯಲ್ಲಿ ಹಚ್ಚಿದರು. ಕೊರಗುವುದು ಮತ್ತು ಕೊರೆಯುವುದು ಅವರಿಗೆ ಜಾಡ್ಯವಾಗಿ ಹೋಗಿದೆ. ಎಷ್ಟೋ ವರ್ಷಗಳ ಹಿಂದೆ ನಡೆದ ಘಟನೆಗಳನ್ನು ತಾಜಾ ಎಂಬಂತೆ ಬಿಂಬಿಸುತ್ತಾರೆ. ಅವರಿಗೆಲ್ಲಾ ನಾನೊಂದು ಗತಿ ಕಾಣಿಸದೆ ಬಿಡುವುದಿಲ್ಲ ಎಂಬ ಪ್ರತಿಜ್ಞೆಯನ್ನೂ ಮರೆಯದೆ ಮಾಡುತ್ತಾರೆ. ನನಗೆ ತಿಳಿದಂತೆ ಈ ಸೇಡು ತೀರಿಸಿಕೊಳ್ಳುವ ಯಾವ ಕೆಲಸವನ್ನೂ ಅವರು ಮಾಡಲಾಗಿಲ್ಲ. ಎಲ್ಲವೂ ಮಾತಲ್ಲೇ ನಡೆದಿವೆ. ಕರಕರ ಹಲ್ಲು ಕಡಿದು, ಕೊತಕೊತ ಕುದಿದು ಸಿಟ್ಟಾಗಿ ಪ್ರಸಂಗ ಮುಗಿಸುತ್ತಾರೆ.

ಹೀಗೆ ದಿನದಿನವೂ ಹಿಂದಿನ ಕಹಿ ಘಟನೆಗಳ ನೆನೆದು ಕೆರಳುವ ಗೀಳಿನವರು ಮುಂದೆ ಚಲಿಸುವುದಿಲ್ಲ. ಎಷ್ಟು ಹಿಡಿದೆಳೆದರೂ ಮತ್ತೆ ಮತ್ತೆ ತಪ್ಪಿಸಿಕೊಂಡು ನೋವು ಕೊಟ್ಟವರ ಮನೆ ಕಡೆಗೆ ಓಡುತ್ತಾರೆ. ಹಳೆಯ ಗಾಯಗಳ ಎಬ್ಬಿಸಿ ಸವರಿ ಸುಖಪಡುವ ಈ ಮನಃಸ್ಥಿತಿಯೇ ಒಂದು ವಿಚಿತ್ರ ಕಾಯಿಲೆ. ಮೂರ್ಖರು ಮಾತ್ರ ತಮ್ಮ ಹಳೆಯ ಗಂಟುಗಳನ್ನು ಕಟ್ಟುತ್ತಾರಂತೆ. ಬುದ್ಧಿವಂತರು ಅವುಗಳನ್ನು ಮೊದಲೇ ಕಳೆದುಕೊಂಡಿರುತ್ತಾರಂತೆ. ಇದೊಂದು ಬಗೆಯ ಕೀಳಿರಿಮೆ. ವ್ಯಕ್ತಿಯ ಮನಸ್ಸಿಗೆ ಸೀಸದ ಪಾದಗಳಂತೆ ಮೆಲ್ಲನೆ ನಡೆದು ಬರುವ ಪುರಾತನ ದಿನಗಳು ನಂತರ ಕಬ್ಬಿಣದ ಕೈಗಳಾಗಿ ಅವರಿಗೇ ಹೊಡೆಯಲು ಶುರುಮಾಡುತ್ತವೆ. ಇಂಥವರ ಮನಸ್ಸು ವೇಗವಾಗಿ ಗಾಯಗೊಳ್ಳುತ್ತದೆ. ಆದರೆ ಎಂದೆಂದಿಗೂ ಗುಣವಾಗುವ ಸೂಚನೆ ತೋರುವುದಿಲ್ಲ. ಮಿದುಳು ಯೋಚಿಸುವುದನ್ನು ನಿಲ್ಲಿಸಿದಾಗ ನಾಲಿಗೆ ಹೆಚ್ಚು ಮಾತನಾಡುತ್ತದೆ ಎನ್ನುವುದು ನಿಜವೇ ಇರಬೇಕು.

ಮನುಷ್ಯ ಕೆಟ್ಟದ್ದನ್ನು ಸಹಿಸಿಕೊಂಡು ಒಳ್ಳೆಯದನ್ನು ನಿರೀಕ್ಷಿಸುವುದೇ ಜೀವನ. ಸ್ವಲ್ಪವೂ ದುಃಖವಿಲ್ಲದೆ ಯಾರ ದಿನವು ಹಾದುಹೋಗುವುದಿಲ್ಲ. ನಡೆದು ಹೋದ ಯಾವುದನ್ನೂ ಸರಿ ಮಾಡಲು ಆಗುವುದಿಲ್ಲ. ಲಭ್ಯವಿರುವ ಬದುಕಿನ ಸಂತಸಗಳೊಟ್ಟಿಗೆ ಬದುಕಬೇಕೆಂದರೆ ಆದ ಕಹಿಗಳನ್ನು ಮರೆಯಲೇಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT