ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಹಕ್ಕಿಯ ಹಾಡಿಗೆ ತಲೆದೂಗುವಾಸೆ

Published 22 ನವೆಂಬರ್ 2023, 0:30 IST
Last Updated 22 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಹಕ್ಕಿಗಳ ಚಿತ್ರ ತೆಗೆಯಲು ದಾಂಡೇಲಿ ಕಾಡಿಗೆ ಹೋಗಿದ್ದಾಗ ವಯಸ್ಸಾದ ದಂಪತಿಯನ್ನು ಕಂಡೆ. ಅವರು ಮುಂಬೈಯಿಂದ ಬಂದಿದ್ದರು. ಇಬ್ಬರ ನಡುವೆ ಅಪರೂಪದ ಹೊಂದಾಣಿಕೆ ಮತ್ತು ಅನ್ಯೋನ್ಯತೆ ಇತ್ತು. ಸಮಾಧಾನ ಚಿತ್ತದ ಪ್ರೌಢ ನಡವಳಿಕೆಗಳಿದ್ದವು. ವಯಸ್ಸಾದಾಗ ಎಲ್ಲರೂ ಹೀಗೆ ಇರಬೇಕು ಎಂಬ ಒಂದು ಮಾದರಿಯಂತೆ ಅವರು ಕಾಣುತ್ತಿದ್ದರು. ಯಾರೊಂದಿಗೂ ಹೆಚ್ಚು ಮಾತಾಡದಿದ್ದರೂ ಅಪರಿಚಿತ ಮುಖಗಳಿಗೂ ಸ್ನೇಹದ ಕಿರು ಮುಗ್ನಳಗೆ ವ್ಯಕ್ತಪಡಿಸುತ್ತಿದ್ದರು.

ಗಂಡ ತಮ್ಮ ಕಾಯಿಲೆಯ ಕಾರಣಕ್ಕೆ ಕೊಂಚ ನಿತ್ರಾಣವಾಗಿದ್ದ ವ್ಯಕ್ತಿ. ಹೆಂಡತಿ ಮಗುವಿನಂತೆ ಅವರನ್ನು ಸಂಭಾಳಿಸುತ್ತಿದ್ದರು. ಇಬ್ಬರೂ ಮೌನವಾಗಿ ಕೂತು ಹಕ್ಕಿಗಳನ್ನು ದುರ್ಬೀನಿನಲ್ಲಿ ಹುಡುಕಿ ನೋಡಿ ಸಂತೋಷ ಪಡುತ್ತಿದ್ದರು. ಪಕ್ಷಿ ಕೂಗನ್ನು ಕಣ್ಣು ಮುಚ್ಚಿ ಆಸ್ವಾದಿಸುತ್ತಿದ್ದರು. ನಾನವರ ಸ್ನೇಹ ಸಂಪಾದಿಸಿ ಮಾತಾಡಿಸಿದೆ. ಅವರು ಮುಂಬೈಯಲ್ಲಿ ಬಹಳ ದೊಡ್ಡ ವ್ಯಾಪಾರ ಹೊಂದಿದ್ದರು. ಗಂಡ ಹಣ ದುಡಿಯುವ ಏಕಮಾತ್ರ ಜಿದ್ದಿಗೆ ಬಿದ್ದು ಆರೋಗ್ಯ, ನೆಮ್ಮದಿ ಕಳೆದುಕೊಂಡರು. ಅವರಿಗೀಗ ಕ್ಯಾನ್ಸರ್ ರೋಗ.‌ ಪಟ್ಟಣದ ಸದ್ದು ಗದ್ದಲ, ಜಗಳ, ಮನಸ್ತಾಪ, ಟೆನ್ಷನ್‌ ಬಿಟ್ಟರೆ ಬೇರೆ ಬದುಕು ಕಂಡವರಲ್ಲ.

ವೈದ್ಯರು ಔಷದೋಪಚಾರ ಮಾಡಿ ಕೊನೆಗೆ ನೀವು ಬದುಕಿರುವುದು ಕೆಲವೇ ತಿಂಗಳು ಬಾಕಿ ಎಂದರು. ಮತ್ತೆ ಅವರೇನೆ ಹಕ್ಕಿಗಳ ದನಿಯನ್ನು ಕೇಳುತ್ತಾ ಕಾಲ ಕಳೆದರೆ, ಕಾಡಿನ ಬದುಕನ್ನು ಸವಿದರೆ ಮನಸ್ಸಿಗೆ ಹಿತವೂ ಆಗುತ್ತದೆ. ಆರೋಗ್ಯವೂ ಕೊಂಚ ಸುಧಾರಿಸಬಹುದು ಪ್ರಯತ್ನಿಸಿ ನೋಡಿ ಎಂದು ಸೂಚಿಸಿದರು. ಡಾಕ್ಟ್ರರ್‌ ಮಾತಿನಂತೆ ಹಕ್ಕಿಗಳ ಬದುಕನ್ನು ಹತ್ತಿರದಿಂದ ನೋಡುವ ಆಸೆ ಹೆಚ್ಚಿಸಿಕೊಂಡು ಅನೇಕ ಪಕ್ಷಿದಾಮಗಳಲ್ಲಿ ಕಾಲ ಕಳೆಯುತ್ತಿದ್ದೇವೆ ಎಂದರು. ಬದುಕಿನ ಲಯ ಹದಗೆಡಿಸಿಕೊಂಡ ಮನುಷ್ಯ ಕೊನೆಗೆ ಪ್ರಕೃತಿಯ ಪುಟಾಣಿ ದೇವತೆಗಳಾದ ಪಕ್ಷಿಗಳ ಬಳಿಗೆ ಬಂದು ತನ್ನ ಮನಶ್ಯಾಂತಿ, ನೆಮ್ಮದಿ, ಮತ್ತು ಆರೋಗ್ಯವನ್ನು ಮರಳಿ ಪಡೆಯುವ ಈ ಪ್ರಯತ್ನ ಭಿಕ್ಷೆಯೇ ಸೋಜಿಗವೆನಿಸಿತು. 

ಅಮೆರಿಕ ದೇಶದ ಪೊಯೆಬ್‌ ಸ್ನೆಟ್‌ ಸಿಂಗರ್‌ ಎಂಬ ಮಹಿಳೆಗೆ ಐವತ್ತನೇ ವಯಸ್ಸಿನಲ್ಲಿ ಕ್ಯಾನ್ಸ್ರರ್‌ ಇರುವುದು ಗೊತ್ತಾಯಿತು. ವೈದ್ಯರು ಇವಳಿಗೂ ಕೊಟ್ಟಿದ್ದು ಕೆಲವೇ ತಿಂಗಳ ಗಡುವು. ಆಕೆಗೆ ವಯಸ್ಸಿಗೆ ಬಂದ ನಾಲ್ಕು ಮಕ್ಕಳಿದ್ದರು. ಹೆದರದ ಈಕೆ ಪತಿ ಡೇವಿಡ್‌ಗೆ ಹೇಳಿ ತನ್ನ ಬದುಕಿನ ಉಳಿದ ಸಮಯವನ್ನು ಹಕ್ಕಿಗಳ ನೋಡುತ್ತಾ ಕಳೆಯುವ ಇರಾದೆ ವ್ಯಕ್ತಪಡಿಸಿದಳು.

ಮನೆಯವರು ಅವಳ ಕೊನೆಯಾಸೆಗೆ ಒಲ್ಲೆ ಎನ್ನಲಿಲ್ಲ. ಜಗತ್ತಿನ ಹಕ್ಕಿಗಳ ಗಾನ ಕೇಳುತ್ತಾ, ಅವುಗಳ ಚಲನವಲನ ಗಮನಿಸುತ್ತಾ ಪೊಯೆಬ್‌ ಮುಂದೆ ಹದಿನೆಂಟು ವರ್ಷ ಬದುಕಿದಳು. ಕೊನೆಗೆ ಮಡ್ಗಾಸ್ಕರ್‌ ದೇಶದಲ್ಲಿ ಆಕೆ ಸತ್ತದ್ದೂ ಕೂಡ ಅಪಘಾತದಿಂದಲೇ ಹೊರತು ಕ್ಯಾನ್ಸ್ರರ್‌ ರೋಗದಿಂದ ಆಗಿರಲಿಲ್ಲ.

ತನ್ನ ಜೀವಿತಾವಧಿಯಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಪಕ್ಷಿಗಳ ಕಂಡು ಅವುಗಳ ಮಾಹಿತಿ ಸಂಗ್ರಹಿಸಿದಳು. ಪ್ರಪಂಚದಲ್ಲಿ ಅತಿ ಹೆಚ್ಚು ಖಗಗಳನ್ನು ನೋಡಿ ಅವುಗಳ ಮೇಲೆ ನಿಖರ ಟಿಪ್ಪಣಿ ತಯಾರಿಸಿದ ಇವಳ ಸಾಧನೆ ಗಿನ್ನೆಸ್‌ ದಾಖಲೆ ಸೇರಿತು. ತನಗೆ ನೋವು ಕೊಡುವ ಕಾಯಿಲೆಗೆ ಆಗಾಗ ಚಿಕಿತ್ಸೆ ಪಡೆಯುತ್ತಲೇ; ಪ್ರಪಂಚ ಸುತ್ತಿದ ಈಕೆ ಪಕ್ಷಿಗಳು ನನ್ನ ಪ್ರಾಣ ಉಳಿಸುತ್ತಿವೆ ಎಂದು ಕರ್ನಾಟಕದ ನೆಲದಲ್ಲೂ ಓಡಾಡುವಾಗ ಸಂತೋಷದಿಂದ ನುಡಿದಿದ್ದಳು. 

ಬದುಕಲ್ಲಿ ಬಂದೇ ಬರುವ ರೋಗ, ಸಾವುಗಳ ತಡೆದು, ಹಿಡಿದು ನಿಲ್ಲಿಸಲಿಕ್ಕೆ ಆಗುವುದಿಲ್ಲ. ಆತ್ಮವಿಸ್ವಾಸದಿಂದ ಹೊಸ ಮಾರ್ಗ ಹುಡುಕಿದರೆ ಬದುಕುವ ಪಥ ಹಿಗ್ಗಿಸಬಹುದು. ಬಾಕಿ ಉಳಿದ ಮುಗುಳು ನಗೆ ಎಲ್ಲರಿಗಾಗಿ ಬಳಸಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT