ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ದೂರ ದೃಷ್ಟಿ- ಭವಿಷ್ಯ ರೂಪಿಸುವ ಅಂತರಂಗದ ಒಳನೋಟ

Published 1 ಅಕ್ಟೋಬರ್ 2023, 23:35 IST
Last Updated 1 ಅಕ್ಟೋಬರ್ 2023, 23:35 IST
ಅಕ್ಷರ ಗಾತ್ರ

ಎಚ್.ಎಸ್.ನವೀನ ಕುಮಾರ್ ಹೊಸದುರ್ಗ

ಎಲ್ಲರಿಗೂ ದೃಷ್ಟಿ ಇರುತ್ತದೆ. ದೃಷ್ಟಿ ಎಂದರೆ   ನಮ್ಮ ಕಣ್ಣುಗಳಿಗೆ ಕಾಣುವ ದೃಶ್ಯಗಳನ್ನು  ಭೌತಿಕವಾಗಿ ನೋಡುವುದು. ಆದರೆ ದೂರದೃಷ್ಟಿ ಎಂಬುದು ಪರಿಣಾಮಕಾರಿ ವ್ಯಕ್ತಿತ್ವದ ಅಂತಃಶಕ್ತಿ. ಇಂದು ನಾವು  ಮಾಡುವ ಕೆಲಸವನ್ನು ಮುಂದಿನ ಪೀಳಿಗೆಯ ಭವಿಷ್ಯದ ಕುರಿತು ಯೋಚಿಸಿ ಮಾಡಿದಾಗ ಅದು ದೂರದೃಷ್ಟಿಯಾಗುತ್ತದೆ. ಅಂತಹ ದೂರದೃಷ್ಟಿತ್ವ ಉಳ್ಳ ವ್ಯಕ್ತಿಗಳನ್ನು ‘ವಿಷನರಿ’ ಅಥವಾ ‘ದಾರ್ಶನಿಕರು’ ಎಂದು ಕರೆಯುತ್ತಾರೆ. 

ಪ್ರಖ್ಯಾತ ಸಮಾಜ ಸೇವಕಿ ಹೆಲನ್ ಕೆಲ್ಲರ್‌ಗೆ ಹುಟ್ಟುವಾಗಲೇ ಕಣ್ಣು ಕಾಣಿಸುತ್ತಿರಲಿಲ್ಲ. ಒಮ್ಮೆ ಆಕೆಯನ್ನು ಸಂದರ್ಶಕರು ‘ಹುಟ್ಟಿನಿಂದಲೇ ದೃಷ್ಟಿಹೀನರಾಗಿ ಹುಟ್ಟುವುದಕ್ಕಿಂತ ದುರದೃಷ್ಟಕರವಾದುದು ಯಾವುದಾದರೂ ಇದೆಯೇ’ ಎಂದು ಪ್ರಶ್ನಿಸಿದರಂತೆ. ಆಕೆ ಆಗ ನೀಡಿದ ಉತ್ತರ ಅತ್ಯಂತ ಮಾರ್ಮಿಕವಾಗಿತ್ತು. ‘ದೂರದೃಷ್ಟಿ ಇಲ್ಲದೆ ಹುಟ್ಟುವುದು ದೃಷ್ಟಿಹೀನರಾಗಿ ಹುಟ್ಟುವುದಕ್ಕಿಂತ ದುರದೃಷ್ಟಕರ...’

ಹೀಗಾಗಿ ಭವಿಷ್ಯದ ಕುರಿತು ಯಾವುದೇ ಚಿಂತನೆ   ಇಲ್ಲದ ಬಹುಪಾಲು ಮಂದಿ ಕಣ್ಣಿದ್ದು ಕುರುಡರೇ ಸರಿ.  ಸರ್ ಎಂ. ವಿಶ್ವೇಶ್ವರಯ್ಯನವರು ವೈಜ್ಞಾನಿಕ ದೂರದೃಷ್ಟಿ ಹೊಂದಿದ್ದ ದಾರ್ಶನಿಕ ವಾಸ್ತುಶಿಲ್ಪಿಗಳಾಗಿದ್ದರು. 1903ರಲ್ಲಿಯೇ  ಪುಣೆಯ ಕಡಕವಾಸ್ಲಾ ಸರೋವರಕ್ಕೆ ಸ್ವಯಂಚಾಲಿತ ಸ್ಲೂಯಿಸ್ ಗೇಟುಗಳನ್ನು  ರೂಪಿಸಿ, ನೀರು ವ್ಯರ್ಥವಾಗದೇ ಸದ್ಬಳಕೆಯಾಗುವಂತೆ ಮಾಡಿದ್ದು ಅವರ  ದೂರದೃಷ್ಟಿಗೆ ದೊಡ್ಡ ಉದಾಹರಣೆ. ಇಂತಹ ಅಭೂತಪೂರ್ವ ಆವಿಷ್ಕಾರಕ್ಕೆ ಪೇಟೆಂಟ್ ಪಡೆದಿದ್ದರೂ ಅದಕ್ಕವರು ಯಾವುದೇ ಹಣವನ್ನು ಪಡೆದಿರಲಿಲ್ಲವಂತೆ. ಕಾರಣ ಸರ್ಕಾರದ ಎಂಜಿನಿಯರ್ ಆಗಿ ನಾನು ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನಷ್ಟೇ ಎಂಬುದು ಅವರ ವಿನಯ ಪೂರ್ವಕ ಅಭಿಪ್ರಾಯವಾಗಿತ್ತು.

ಈ ದೂರದೃಷ್ಟಿತ್ವದಿಂದಲೇ ಅವರಿಗೆ ಪ್ರಪಂಚದ ಹಲವಾರು ನಗರಗಳ ಜಲ ನಿರ್ವಹಣೆಯನ್ನು, ತ್ಯಾಜ್ಯ ವಸ್ತು ನಿರ್ವಹಣೆಯನ್ನು ರೂಪಿಸುವ ಜವಾಬ್ದಾರಿ ಒದಗಿ ಬಂತು. 1908ರಲ್ಲಿ ಹೈದರಾಬಾದ್ ನಗರಕ್ಕೆ ಬಂದೊದಗಿದ ಮೂಸಿ ನದಿಯ ಭಾರಿ ಪ್ರವಾಹದ ವಿಪತ್ತಿನ ನಂತರ, ನಿಜಾಮರ ಆಹ್ವಾನದ ಮೇರೆಗೆ ಅದರ ನಿರ್ವಹಣೆಗೆ ಶಾಶ್ವತ ಪರಿಹಾರವನ್ನು ವಿಶ್ವೇಶ್ವರಯ್ಯನವರು ಸೂಚಿಸಿದರು. ಇದೇ ರೀತಿ ಯೆಮನ್ ದೇಶದ ಏಡನ್ ನಗರದ ಜಲ ನಿರ್ವಹಣೆಯಲ್ಲೂ ವಿಶ್ವೇಶ್ವರಯ್ಯನವರದ್ದೇ ಪ್ರಮುಖಪಾತ್ರ. ಬಿಹಾರದ ಗಂಗಾ ನದಿಯ ಅಡ್ಡಲಾಗಿ ನಿರ್ಮಿಸಿರುವ ಬೃಹತ್ ಮೋಕಂ ಸೇತುವೆ ನಿರ್ಮಾಣದಲ್ಲೂ ಅವರೇ ಮುಖ್ಯ ಸಲಹೆಗಾರರು. ನಮ್ಮ ರಾಜ್ಯದ ತುಂಗಭದ್ರಾ ಜಲಾಶಯ ಕೆ. ಆರ್. ಎಸ್. ಜಲಾಶಯ ಹಾಗೂ ಜೋಗದ ಮಹಾತ್ಮ ಗಾಂಧಿ ಶಕ್ತಿ ಕೇಂದ್ರ ಮುಂತಾದ ಹಲವಾರು ಪ್ರಮುಖ ಜಲಯೋಜನೆಗಳೂ ಸರ್ ಎಂ.ವಿಯವರ ದೂರದೃಷ್ಟಿಯ ಫಲಿತಾಂಶಗಳೇ ಆಗಿವೆ. 

ಅವರ ಮುಂಗಾಣ್ಕೆಯ ಕೊಡುಗೆ ನಮ್ಮ ರಾಜ್ಯದ ಹಲವಾರು ಪ್ರಮುಖ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲೂ ಇದೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್, ಆರ್ಥಿಕ ಸಬಲತೆಯ ಪ್ರತೀಕವಾದ ಮೈಸೂರು ಬ್ಯಾಂಕ್, ಛೇಂಬರ್ ಆಫ್ ಕಾಮರ್ಸ್, ಭದ್ರಾವತಿಯ ಉಕ್ಕಿನ ಕಾರ್ಖಾನೆ, ಬೆಂಗಳೂರು ಪ್ರೆಸ್, ಮೈಸೂರು ವಿಶ್ವವಿದ್ಯಾಲಯ, ಬೆಂಗಳೂರಿನ ಯು.ವಿ. ಇಂಜಿನಿಯರಿಂಗ್ ಕಾಲೇಜು...  ಹೀಗೆ ಇಂದು ಬೃಹತ್ತಾಗಿ ಬೆಳೆದು ನಿಂತಿರುವ ಹತ್ತು ಹಲವು ಪ್ರಮುಖ ಸಂಸ್ಥೆಗಳ ಆರಂಭಕ್ಕೆ ಕಾರಣೀಭೂತರಾಗಿ, ನಾಡಿನ ಪ್ರಗತಿಗೆ ಕಾರಣವಾಗಿದ್ದು ವಿಶ್ವೇಶ್ವರಯ್ಯನವರ ಅದ್ಭುತ ದೂರದೃಷ್ಟಿ ಹಾಗೂ  ದಾರ್ಶನಿಕತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT