ದೀರ್ಘವಾದ ರೈಲು ಯಾತ್ರೆಯಲ್ಲಿ ಸಿಗುವ ಅನೇಕ ನಿಲ್ದಾಣಗಳಲ್ಲಿ ಜನ ಹತ್ತುವುದು, ಇಳಿಯುವುದು ಇದ್ದೇ ಇರುತ್ತದೆ. ಇತ್ತೀಚೆಗೆ ಬರುವಾಗ ರಾತ್ರಿ ನಾಗ್ಪುರ ಸ್ಟೇಷನ್ನಿನಲ್ಲಿ ಒಬ್ಬರು ಹತ್ತಿದ್ದು ತಿಳಿಯಿತು. ಉತ್ತರ ಭಾರತದ ಹಿಂದಿ ಬೆಲ್ಟ್ ದಾಟಿ ಬೆಳಿಗ್ಗೆ ಕಾಚಿಗುಡ ತಲುಪಿದಾಗ ಇಡ್ಲಿ ತಿನ್ನಲು ಕಾದಿರುತ್ತೇವೆ. ಕಾಚಿಗುಡ ಬರುವುದರಲ್ಲಿತ್ತು. ರಾತ್ರಿ ಹತ್ತಿದ ನಮ್ಮ ಸಹಯಾತ್ರಿಯೊಬ್ಬರು ಕಾಚಿಗುಡದಲ್ಲಿ ಇಳಿಯುವ ತಯಾರಿ ನಡೆಸಿದ್ದರು. ಅವರೊಬ್ಬ ಎಂಜಿನಿಯರ್. ಬೆಳಿಗ್ಗಿನ ಮುಗುಳ್ನಗೆಯೊಂದಿಗೆ ಪರಸ್ಪರ ಪರಿಚಯ, ಮಳೆ ಬೆಳೆ ಇತ್ಯಾದಿ ಮಾತುಕತೆ ಮುಗಿದು ಆತ ‘ಇರಿ, ನಿಮಗೆ ಮನೆಯಿಂದ ಇಡ್ಲಿ ತರಿಸುತ್ತೇನೆ’ ಎಂದು ಹೇಳಿ ಬೇಡವೆಂದರೂ ಕೇಳದೇ ಪತ್ನಿಗೆ, ಡ್ರೈವರಿಗೆ ಫೋನಾಯಿಸಿಯೇ ಬಿಟ್ಟರು. ಅವರು ಕಾಚಿಗುಡ ಇಳಿಯುವ ಮುನ್ನ ನಮ್ಮ ಕೈಗೆ ಬಿಸಿ ಬಿಸಿ ಇಡ್ಲಿ ಸಾಂಬಾರ್, ವಡೆ ಇತ್ಯಾದಿಗಳ ಕೈಚೀಲವಿತ್ತು.

‘ಎನಿತು ಜನ್ಮದಲಿ, ಎನಿತು ಜೀವರಿಗೆ ಎನಿತು ನಾವು ಋಣಿಯೋ?

ತಿಳಿದು ನೋಡಿದರೆ ಬಾಳು ಎಂಬುದಿದು

ಋಣದ ರತ್ನದ ಗಣಿಯೋ!’ (ಜಿ.ಎಸ್. ಶಿವರುದ್ರಪ್ಪ)

ಇದ್ಯಾವ ಜನ್ಮದ ಋಣ? ಕೆಲಕ್ಷಣಗಳ ಹಿಂದಷ್ಟೇ ಮಾತಾಡಿದ ವ್ಯಕ್ತಿ ನಮಗೆ ತನ್ನ ಮನೆಯಿಂದ ರುಚಿಯಾದ ತಿಂಡಿ ತರಿಸಿಕೊಟ್ಟಿದ್ದಾನೆ. ಈ ಅನ್ನದ ಋಣವನ್ನು ಹೇಗೆ ತೀರಿಸುವುದು? ಇಂಥವೇ ವಿಚಾರಗಳು ಮನಸ್ಸಿನಲ್ಲಿ ಮಥಿಸುತ್ತಿದ್ದವು. ನಮ್ಮ ಹುಟ್ಟಿನಿಂದ ಸಾಯುವವರೆಗೂ ಈ ರೈಲು ಬೋಗಿಯಂತೆ ಎಷ್ಟೊ ಜನರು ನಮ್ಮ ಬದುಕಿನಲ್ಲಿ ಬರುತ್ತಾರೆ, ಹೋಗುತ್ತಾರೆ. ಒಂದಿಲ್ಲಾ ಒಂದು ಋಣವನ್ನು ತೀರಿಸಿ ಅಥವಾ ಹೊರಿಸಿ ಹೋಗಿರುತ್ತಾರೆ. ಹಾಗೆಯೇ ಆ ಋಣವನ್ನು ಇನ್ಯಾವುದೋ ರೂಪದಲ್ಲಿ ತೀರಿಸಿರುತ್ತೇವೆ. ಸಂಘಜೀವಿಯಾದ ಮನುಷ್ಯನ ಬದುಕು ಒಂದಿಲ್ಲಾ ಒಂದು ಋಣಭಾರದ ಚಕ್ರದಲ್ಲಿ ತಿರುಗುತ್ತಿರುತ್ತದೆ. ತಂದೆ ತಾಯಿ, ಗುರು ಹಿರಿಯರು, ನೆರೆ ಹೊರೆಯವರು, ಸ್ನೇಹಿತರು, ಎಲ್ಲೊ ಒಮ್ಮೆ ಭೇಟಿಯಾದವರು, ಅಪರಿಚಿತರು, ಸುತ್ತಲಿನ ಗಾಳಿ ಬೆಳಕು, ಅನ್ನ ಬೆಳೆಯುವ ರೈತ, ಭೂಮ್ತಾಯಿ ಹೀಗೆ ಎಲ್ಲರ, ಎಲ್ಲದರ ಋಣಭಾರದೊಂದಿಗೆ ಮನುಷ್ಯಜೀವಿ ಬಾಳುತ್ತಾನೆ. ಬದುಕು ಕಟ್ಟಿಕೊಳ್ಳುತ್ತಾನೆ.

ಹೊತ್ತು ಹೆತ್ತು ಬೆಳೆಸಿದ ತಂದೆ ತಾಯಿಗಳನ್ನು ವೃದ್ಧಾಪ್ಯದಲ್ಲಿ ಚೆನ್ನಾಗಿ ನೋಡಿಕೊಳ್ಳುವುದು, ಅವರ ಆಸೆಗಳನ್ನು ಈಡೇರಿಸುವುದು, ಅವರಿಗೆ ಸಮಯ ಕೊಡುವುದು ನಮ್ಮ ಕರ್ತವ್ಯವಾಗಿದೆ. ನನ್ನವ್ವ ತೀರಿಕೊಂಡಾಗ ತಲೆದಿಂಬಿನಡಿ ಕರವಸ್ತ್ರದಲ್ಲಿ ಕಟ್ಟಿಟ್ಟಿದ್ದ ಇಪ್ಪತ್ತು ಸಾವಿರ ರೂಪಾಯಿ ಸಿಕ್ಕಿತು. ಮರಣದಲ್ಲೂ ಯಾರಿಗೂ ತೊಂದರೆಯಾಗಬಾರದು, ಭಾರವಾಗಬಾರದು ಎಂಬ ಕಾಳಜಿ!

ದಿಲ್ಲಿಯಲ್ಲಿ ಉದ್ಯೋಗ ಅರಸುತ್ತಿದ್ದಾಗ ಒಬ್ಬ ಮಲೆಯಾಳಿ ಗೆಳತಿ ತನ್ನ ಆಫೀಸಿಗೆ ಕರೆದುಕೊಂಡುಹೋಗಿ ನನಗೆ ಅಂದಿನ ಕಾಲದ ಎಲೆಕ್ಟ್ರಾನಿಕ್ ಟೈಪ್ ರೈಟರ್, ಟೆಲೆಕ್ಸ್, ಫ್ಯಾಕ್ಸ್ ಹೇಗೆ ಬಳಸೋದು ಹೇಳಿಕೊಟ್ಟಿದ್ದಳು.

ಒಂದು ಕ್ಷಣ ಹಿಂತಿರುಗಿ ನೋಡಿದರೆ ನಮ್ಮ ಬದುಕಿಗೆ ಬಂದು ನೆರಳಿನಂತೆ ಕಾಪಾಡಿದವರೆಷ್ಟೋ ಜನ ನೆನಪಾಗಬಹುದು. ಕೇಡು ಮಾಡಿದವರಿಗಿಂತ ಒಳಿತು ಮಾಡಿದವರನ್ನು ನೆನೆಯಬೇಕು. ‘ಕೆರೆಯ ನೀರನು ಕೆರೆಗೆ ಚೆಲ್ಲುವಂತೆ’ ಈ ಲೋಕದಿಂದ ಗಳಿಸಿದ್ದನ್ನು ಲೋಕಕ್ಕೇ ಸಂದಾಯಮಾಡಬೇಕು. ಪರಿಸರವನ್ನು ಸಂರಕ್ಷಿಸಿ ಪರಿಸರದ ಋಣವನ್ನು ತೀರಿಸಬೇಕು. ಜೊತೆಗೆ ಅತ್ಯಮೂಲ್ಯವಾದ ಈ ಬದುಕನ್ನು ನೀಡಿದ ಆ ದೇವರೆಂಬ ತತ್ವಕ್ಕೂ ಋಣಿಯಾಗಿರಬೇಕು.